ಪುತ್ತೂರು; ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ರೋಟರಿ ವಲಯ 4ರ ವ್ಯಾಪ್ತಿಗೊಳಪಟ್ಟ ರೋಟರಿ ಕ್ಲಬ್ ಗಳ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ‘ಉನ್ನತಿ’ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವು ಅ.9 ರಂದು ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರಗಿತು.
ಸುದಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಸಂಸ್ಥೆಯು ಮಿತೃತ್ವ ಹಾಗೂ ಒಡನಾಟಕ್ಕೆ ಪ್ರಸಿದ್ಧಿ ಹೊಂದಿದೆ. ಮಿತೃತ್ವ ಹಾಗೂ ಒಡನಾಟವಿದ್ದಾಗ ನಮ್ಮಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ. ಶಟಲ್ ಆಟವನ್ನು ಆಡುವುದರಿಂದ ದೇಹದಲ್ಲಿನ ದೈಹಿಕ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ಹಾಗೂ ರೋಟರಿ ಸ್ಫೂರ್ತಿಯಿಂದ ಆಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮೇಜರ್ ಎಂ.ವಿ ಭಟ್ ಮಾತನಾಡಿ, ರೋಟರಿ ಸಿಟಿಯು ವಲಯ ಮಟ್ಟದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಢತೆ ವೃದ್ಧಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ, ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಇಲ್ಲಿ ಆಯೋಜಿಸಿರುವುದರ ಮೂಲಕ ರೋಟರಿ ಕುಟುಂಬದ ಸದಸ್ಯರ ಬಾಂಧವ್ಯ ಮತ್ತಷ್ಟು ವೃದ್ಧಿಸುವಂತೆ ಮಾಡುತ್ತದೆ. ಪ್ರತಿಯೋರ್ವರೂ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಆರೋಗ್ಯದ ದೃಢತೆಗೆ ಹೆಚ್ಚು ಒತ್ತು ನೀಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸುದಾನ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಈಶ್ವರ್ ಬೆಡೇಕರ್, ರೋಟರಿ ಕ್ಲಬ್ ಪುತ್ತೂರು ಸಿಟಿ ಕೋಶಾಧಿಕಾರಿ ಕಿರಣ್ ಬಿ.ವಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಮಾಜಿ ಅಧ್ಯಕ್ಷರಾದ ಎಂ.ಆರ್ ಜಯಕುಮಾರ್ ರೈ, ಜೆರೋಮಿಯಸ್ ಪಾಯಿಸ್ ರವರು ಅತಿಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಶ್ರೀಲತಾ ಶೆಣೈ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಗತಿಸಿ, ವಂದಿಸಿದರು.