ಬಿಜೆಪಿ ಹಿರಿಯ ಕಾರ್ಯಕರ್ತರೊಂದಿಗೆ ದೀಪಾವಳಿ ಸಂಭ್ರಮ – 221 ಬೂತ್‌ಗಳಿಂದ ಸಾವಿರಾರು ಕಾರ್ಯಕರ್ತರಿಗೆ ಗೌರವ

0

  •  ದೇಶದ ಭವಿಷ್ಯಕ್ಕಾಗಿ ಮುಂದಿನ ಚುನಾವಣೆ ನಿರ್ಣಾಯಕ -ಪ್ರತಾಪ್‌ಸಿಂಹ ನಾಯಕ್
  •  ಹಿರಿಯರ ಹೋರಾಟಗಳು ಫಲಕೊಡುವ ಕಾಲಘಟ್ಟದಲ್ಲಿ ಕಾರ್ಯಕ್ರಮ-ಮಠಂದೂರು
  • ಹಿರಿಯರಿಗೆ ತಿಲಕ ಹಚ್ಚಿ ಸಭೆಗೆ ಬರಮಾಡಿಕೊಂಡ ಮಹಿಳಾ ಕಾರ್ಯಕರ್ತರು
  • ಸಹಭೋಜನದಲ್ಲಿ ಹಿರಿಯರಿಗೆ ಊಟ ಬಡಿಸಿದ ಶಾಸಕರು

ಪುತ್ತೂರು: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಅಭಿನಂದಿಸಿ, ಗೌರವಿಸುವ ಮೂಲಕ `ಬಿಜೆಪಿ ಕಾರ್ಯಕರ್ತರೊಂದಿಗೆ ದೀಪಾವಳಿ ಸಂಭ್ರಮ’ ವಿಶೇಷ ಕಾರ್ಯಕ್ರಮ ಪುತ್ತೂರು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಅ.23ರಂದು ನಡೆಯಿತು. ಸಭಾಂಗಣದಲ್ಲಿ ಆಸೀನರಾಗಿದ್ದ ಪಕ್ಷದ ಹಿರಿಯ ಕಾರ್ಯಕರ್ತರ ಬಳಿಗೇ ಹೋಗಿ ಅವರನ್ನು ಗೌರವಿಸಲಾಯಿತು.
ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಾರ್ಟಿಯಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ಕಾರ್ಯಕರ್ತರಾಗಿ ದುಡಿದವರನ್ನು ನೆನೆಯುವ ಮತ್ತು ಈಗಿನ ಯುವ ಪೀಳಿಗೆಗೆ ಅವರ ಶ್ರಮ, ಪರಿಶ್ರಮ ಮತ್ತು ರಾಷ್ಟ್ರಪ್ರೇಮವನ್ನು ಮನನ ಮಾಡಿಸುವ ಉದ್ದೇಶದ  ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಹಿರಿಯರ ಪ್ರಕೋಷ್ಠದ ಸಂಚಾಲಕರಾಗಿರುವ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಅವರು ಪಕ್ಷದ ಹಿರಿಯ ಪ್ರಮುಖರಾದ ನಗರ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ ಮತ್ತು ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರ ಜೊತೆಯಾಗಿ ಉದ್ಘಾಟಿಸಿದರು. ಬಳಿಕ ವೇದಿಕೆಯ ಕೆಳಗಡೆ ಮಹಿಳಾ ಕಾರ್ಯಕರ್ತರು ಹಣತೆಗಳನ್ನು ಹಚ್ಚಿದರು.


ದೇಶದ ಭವಿಷ್ಯಕ್ಕಾಗಿ ಮುಂದಿನ ಚುನಾವಣೆ ನಿರ್ಣಾಯಕ:
ಬಿಜೆಪಿ ರಾಜ್ಯ ಹಿರಿಯರ ಪ್ರಕೋಷ್ಠದ ಸಂಚಾಲಕರಾಗಿರುವ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಅವರು ಮಾತನಾಡಿ ಮುಂದೆ ಬರುವ ದಿನ ಅತ್ಯಂತ ನಿರ್ಣಾಯಕ ದಿನ. ಇಲ್ಲಿ ಚುನಾವಣೆ ಒಂದೇ ಅಲ್ಲ ನಮ್ಮ ವಿಚಾರವೂ ನಿರ್ಣಾಯಕ.ಮುಂದಿನ ಎರಡು ಮೂರು ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ಆಗುತ್ತದೆ. ಈ ನೂರು ವರ್ಷದ ಸಂಭ್ರಮದ ಮೊದಲು 2023-24ರ ರಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆ ಬರುತ್ತದೆ. ಇವೆರಡು ದೇಶದ ಭವಿಷ್ಯದ ಕುರಿತು ನಿರ್ಣಾಯಕ ಪಾತ್ರ ವಹಿಸುವ ಚುನಾವಣೆಗಳು.ಹಿಂದುತ್ವದ ವಿಚಾರವನ್ನು ಸೋಲಿಸುವ ದಿಕ್ಕಿನಲ್ಲಿ ಕಾಂಗ್ರೆಸ್ ನೋಡುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಮತಾಂತರ,ಗೋ ಹತ್ಯೆ ನಿಷೇಧ ಕಾಯ್ದೆ ಹಿಂದೆ ಪಡೆಯುತ್ತೇವೆ.370ನೇ ವಿಧಿ ಮತ್ತೆ ತರುತ್ತೇವೆ ಎಂಬ ಕಾಂಗ್ರೆಸ್ ಹುಚ್ಚು ಮಾತುಗಳಿಗೆ ಉತ್ತರ ಕೊಡುವ ಮತ್ತು ಜಗತ್ವಂದ್ಯ ಚಿಂತನೆಯಲ್ಲಿ ನರೇಂದ್ರ ಮೋದಿಯವರು ಹಾಕಿದ ಯೋಜನೆಗೆ ಪೂರ್ಣ ಪ್ರಮಾಣದ ಶಕ್ತಿ ಕೊಡುವ ಚುನಾವಣೆ ಇದಾಗಿದೆ.ಯಾರನ್ನೋ ಒಬ್ಬರನ್ನು ಶಾಸಕ, ಸಂಸದ, ಪ್ರಧಾನಿ ಮಾಡಲು ಈ ಚುನಾವಣೆಯಲ್ಲ.ದೇಶದ ಭವಿಷ್ಯ ನಿರ್ಧಾರ ಮಾಡಲು ಈ ಎರಡು ಚುನಾವಣೆಗಳು ನಿರ್ಣಾಯಕವಾಗಿದೆ. ಗೊಂದಲ ನೋವುಗಳಿದ್ದರೆ ಬದಿಗೊತ್ತಿ.ನನ್ನದೇ ಆದ ರೀತಿಯಲ್ಲಿ ಅಳಿಲ ಸೇವೆ ಮಾಡುತ್ತೇನೆ.ಪುತ್ತೂರಿನಿಂದ ಒಬ್ಬರನ್ನು ವಿಧಾನಸಭೆಗೆ ಕಳುಹಿಸುತ್ತೇನೆ ಎಂಬ ಮನಸ್ಸಿನೊಂದಿಗೆ ನಾವು ಸಿದ್ಧರಾಗಬೇಕು.ಕಾಂಗ್ರೆಸ್ ಭಾರತ್ ಜೋಡೋ ಎಂದು ಹೊರಟರೂ ಅವರಿಗೆ ಕಾಂಗ್ರೆಸ್ ಜೋಡೋ ಮಾಡಲೂ ಆಗುತ್ತಿಲ್ಲ.ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಬೇಕು.ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ಓಡಾಟ ಮಾಡಲು ಸಾಧ್ಯವಿಲ್ಲವಾದರೂ ಕಿರಿಯರಿಗೆ ವಿಶ್ವಾಸವನ್ನು ತುಂಬಿಸುವ ಕರ್ತವ್ಯವನ್ನು ಮಾಡಬೇಕೆಂದರು.

ಧರ್ಮ ಸ್ಥಾಪನೆಗೆ ಮೋದಿಯವರು `ಸಂಭವಾಮಿ ಯುಗೇ ಯುಗೇ’:
ಧರ್ಮಕ್ಕೆ ಚ್ಯುತಿ ಬಂದಂತಹ ಸಂದರ್ಭದಲ್ಲೆಲ್ಲ ನಾನು ಮತ್ತೆ ಮತ್ತೆ ಅವತರಿಸಿ ಬರುತ್ತೇನೆ ಎಂದು ಶ್ರೀಕೃಷ್ಣ ಹೇಳಿರುವಂತೆ ನಮ್ಮ ಕಲ್ಪನೆಯಂತೆ ನರೇಂದ್ರ ಮೋದಿಯವರು ದೇಶದ ಭವಿಷ್ಯ ಕಾಪಾಡುವ ಉದ್ದೇಶದೊಂದಿಗೆ ಬಂದಿದ್ದಾರೆ.ಭ್ರಷ್ಟಾಚಾರ, ದೇಶದ ಅಸ್ಮಿತೆಯ ಬಗ್ಗೆ ಅವಹೇಳನ ಮಾಡುವ ಮೂಲಕ ಗುಲಾಮಗಿರಿ ಮನಸ್ಸಿನ ಆಡಳಿತದ ವಿರುದ್ಧವಾಗಿ ಜನರ ಕನಸ್ಸಿನ ಕಲ್ಪನೆಯಂತೆ ಬಂದಿರುವ ಮೋದಿಯವರು ಕಳೆದ 9 ವರ್ಷದಲ್ಲಿ ಮಾತನಾಡದೆ ಯಾವುದನ್ನು ಎಲ್ಲಿ ಮಾಡಬೇಕೋ ಅದು ಮಾಡುತ್ತಾ ಹೋಗಿದ್ದಾರೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.


ಹಿರಿಯರ ಹೋರಾಟಗಳು ಫಲಕೊಡುವ ಕಾಲಘಟ್ಟದಲ್ಲಿ ಈ ಕಾರ್ಯಕ್ರಮ:
ಶಾಸಕ ಸಂಜೀವ ಮಠಂದೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ರಾಷ್ಟ್ರಮಟ್ಟದಲ್ಲಿ ಅಧಿಕಾರ ನಡೆಸುತ್ತಿದೆ. ಒಂದಷ್ಟು ಕಾರ್ಯಕರ್ತರು ಹಲವಾರು ವರ್ಷದಿಂದ ಸಮರ್ಪಣಾ ಮನೋಭಾವದಿಂದ ದುಡಿದು ಸಂಘಟನೆಯನ್ನು ಇವತ್ತು ರಾಷ್ಟ್ರಮಟ್ಟದ ತನಕ ಬೆಳೆಸುವ ಸಂಗತಿ ಮಾಡಿದ್ದಾರೆ. ಇದರಿಂದಾಗಿ ದೇಶದಲ್ಲೇ ಅತಿ ದೊಡ್ಡ ಪಾರ್ಟಿಯಾಗಿ ಹಿರಿಯರ ಅಪೇಕ್ಷೆಯಂತೆ ಬಿಜೆಪಿ ಮೂಡಿ ಬಂದಿದೆ.ಭಾರತದ ಆತ್ಮನಿರ್ಭರ ಕಲ್ಪನೆಯಲ್ಲಿ ಹಲವು ಕಾರ್ಯಕ್ರಮಗಳು ಸಾಮಾನ್ಯ ಜನರಿಗೆ ತಲುಪುವಲ್ಲಿ ಹಿರಿಯರು ಮತ್ತೆ ಮತ್ತೆ ನೇತೃತ್ವ ವಹಿಸುವ ಮೂಲಕ ಕಿರಿಯರಿಗೆ ಪ್ರೇರಣೆ ಕೊಡುವ ಕೆಲಸ ಆಗಬೇಕೆಂದರು.ಈ ಕಾರ್ಯಕ್ರಮ ಭಾವನಾತ್ಮಕ ಕಾರ್ಯಕ್ರಮ. ನಿಮ್ಮ ಹೋರಾಟಗಳು ಫಲಕೊಡುವ ಕಾಲಘಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ನಿಮಗೆ ಇನ್ನಷ್ಟು ಆರೋಗ್ಯವನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಮಠಂದೂರು ಹೇಳಿದರು.

ಜಿಲ್ಲಾ ಹಿರಿಯರ ಪ್ರಕೋಷ್ಠದ ಸಂಚಾಲಕ ನಾರಾಯಣ ಗಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ ಅತಿಥಿಗಳನ್ನು ಗೌರವಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು.ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ನಿಧನರಾದವರಿಗೆ ಶ್ರದ್ಧಾಂಜಲಿ: ಸಭೆಯ ಆರಂಭದಲ್ಲಿ, ಅ.22ರಂದು ನಿಧನರಾದ ವಿಧಾನ ಸಭಾ ಉಪಸಭಾಪತಿ ಅನಂದ್ ಮಾಮನಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರ ತಂದೆ ರಮೇಶ್ ಮತ್ತು ನಿಧನರಾದ ಇತರ ಹಿರಿಯ ಕಾರ್ಯಕರ್ತರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

ಹಿರಿಯರಿದ್ದಲ್ಲಿಗೇ ತೆರಳಿ ಗೌರವ
ಸಭೆಯಲ್ಲಿ ಆಸೀನರಾಗಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಅವರು ಕುಳಿತಲ್ಲಿಗೇ ತೆರಳಿದ ಶಾಸಕರು ಹಾಗೂ ಇತರ ಪ್ರಮುಖರು ಗೌರವ ಸಮರ್ಪಣೆ ಮಾಡಿದರು.ಶಾಲು, ಹಾರ, ಸಿಹಿ ತಿಂಡಿ ಪೊಟ್ಟಣ ನೀಡಿ ದೀಪಾವಳಿ ಶುಭಾಶಯ ಕೋರಿ ಹಿರಿಯರಿಂದ ಆಶೀರ್ವಾದ ಪಡೆದರು.ಮಧ್ಯಾಹ್ನ ಸಹಭೋಜನದಲ್ಲಿ ಶಾಸಕ ಸಂಜೀವ ಮಠಂದೂರು ಅವರೇ ಹಿರಿಯರಿಗೆ ಅನ್ನವನ್ನು ಬಡಿಸಿದರು.ಬಿಜೆಪಿ ಪ್ರಮುಖರು ಸಹಕರಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತರು ಹಿರಿಯ ಕಾರ್ಯಕರ್ತರಿಗೆ ತಿಲಕ ಹಚ್ಚಿ ಬರಮಾಡಿಕೊಂಡರು.ಕೆದಿಲದ 90 ವರ್ಷ ಪ್ರಾಯದ ಜಾನಕಿ ಅವರು ಮನೆಯವರ ಸಹಾಯದೊಂದಿಗೆ ಸಭೆಗೆ ಆಗಮಿಸಿ ಎಲ್ಲರ ಗಮನ ಸೆಳೆದರು.

ಬಿಜೆಪಿ ಹಿರಿಯ ಕಾರ್ಯಕರ್ತರ ಜೊತೆಯಲ್ಲಿ ನಡೆದ ದೀಪಾವಳಿ ಸಂಭ್ರಮ ಕಾರ್ಯಕ್ರಮ ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿತ್ತು.ಸಭಾಂಗಣದಲ್ಲಿ ಸುದ್ದಿಯಿಂದ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

LEAVE A REPLY

Please enter your comment!
Please enter your name here