




ವಿಟ್ಲ: ಭ್ರಷ್ಟಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸಿ ಹೊರಬಂದಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಗೆ ಗ್ರಾಮಸ್ಥರ ಒಂದು ತಂಡ ವಿರೋಧ ವ್ಯಕ್ತಪಡಿಸಿ, ಅಧ್ಯಕ್ಷರು ರಾಜೀನಾಮೆ ನೀಡುವಂತೆ ಪಟ್ಟು ಹಿಡಿದ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಕೋರಂ ಕೊರತೆಯಿಂದಾಗಿ ಗ್ರಾಮ ಸಭೆಯನ್ನು ಮುಂದೂಡಿದ ಘಟನೆಯೂ ನಡೆಯಿತು.



ಪೆರುವಾಯಿ ಗ್ರಾಮ ಪಂಚಾಯತ್ನಲ್ಲಿ ಡಿ.10ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಸಭೆ ಆರಂಭವಾಗಿತ್ತು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ ಸಾಲ್ಯಾನ್ ರವರು ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ಅಜೆಂಡಾ ಪ್ರಕಾರ ಸಭೆ ನಡೆಯುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದ ಗ್ರಾಮಸ್ಥರ ತಂಡವೊಂದು, ಭ್ರಷ್ಟಾಚಾರದ ಆರೋಪ ಹೊತ್ತು ಲೋಕಾಯುಕ್ತ ಬಲೆಗೆ ಬಿದ್ದಿರುವ ಗ್ರಾ.ಪಂ. ಅಧ್ಯಕ್ಷರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳು ಮಾತುಕತೆ ನಡೆಸಿ ಸಭೆ ಮುಂದುವರಿಸಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಒಪ್ಪದ ಗ್ರಾಮಸ್ಥರ ತಂಡ, ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿಯಿತು. ಬಳಿಕದ ಬೆಳವಣಿಗೆಯಲ್ಲಿ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್, ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್ ಏರ್ಪಡಿಸಿದ್ದರು.













