ಅ.26: ಕಿಲ್ಲೆ ಮೈದಾನದಲ್ಲಿ ರೈ ಎಸ್ಟೇಟ್ ಎಜುಕೇಶನ್&ಚಾರೀಟೇಬಲ್ ಟ್ರಸ್ಟಿನ ದಶ ಸಂಭ್ರಮ: ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ ಬಡವರಿಗೆ ಸನ್ಮಾನ, ಗೂಡುದೀಪ ಸ್ಪರ್ಧೆ, ವಸ್ತ್ರ ವಿತರಣೆ

0

ಪುತ್ತೂರು: ಕಳೆದ ಹತ್ತು ವರ್ಷಗಳಿಂದ ರೈಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ 15,800 ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದೇವೆ. ಹತ್ತನೇ ವರ್ಷದ ಸಂಭ್ರಮದಲ್ಲಿರುವ ಟ್ರಸ್ಟ್ ನ ಸಂಭ್ರಮವನ್ನು ಎಲ್ಲರೊಂದಿಗೆ ಸೇರಿ ಆಚರಿಸುವ ಉದ್ದೇಶದಿಂದ ಅ.26ರಂದು ಬೆಳಿಗ್ಗೆ 9.30ರಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದಶ ಸಂಭ್ರಮ, ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ ಬಡವರಿಗೆ ಸನ್ಮಾನ, ಗೂಡುದೀಪ ಸ್ಪರ್ಧೆ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರೈ ಎಸ್ಟೇಟ್ ಎಜುಕೇಶನ್&ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.



ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಯಿ ಗಿರಿಜಾ ಎಸ್.ರೈಯವರು ದೀಪ ಪ್ರಜ್ವಲಿಸುವ ಮೂಲಕ ‘ದಶ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮ, ವಸ್ತ್ರ ವಿತರಣೆ, ಗೂಡು ದೀಪ ಸ್ಪರ್ಧೆ ಹಾಗೂ ಭೋಜನದ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು ಸುಮಾರು 30 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ದಶ ಸಂಭ್ರಮ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಸರ್ವ ಧರ್ಮದವರನ್ನು ಒಳಗೊಂಡ ಸಭಾ ಕಾರ್ಯಕ್ರಮ ನಡೆಯಲಿದ್ದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರವರು ಸನ್ಮಾನ ನೆರವೇರಿಸಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಸ್ಮರಣ ಸಂಚಿಕೆ‌ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಮಾಯಿದೆ ದೇವುಸ್ ಚಚ್೯ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮತ್ತು ಧಾರ್ಮಿಕ ಮುಖಂಡ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾಜದಲ್ಲಿ ಸ್ವಾವಲಂಬಿಯಾಗಿ ದುಡಿದು ಸಾಧನೆ ಮಾಡಿದ ಸ್ವಾಭಿಮಾನಿ ಬಡವರಿಗೆ ಸನ್ಮಾನ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈಯವರು
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ವಸ್ತ್ರ ವಿತರಣೆ ಮಾಡಲಾಗುವುದು. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಮಹಿಳೆಯರಿಗೆ ಸೀರೆ, ಪುರುಷರಿಗೆ ಲುಂಗಿ ಮತ್ತು ಶಾಲು ಹಾಗೂ ಮಕ್ಕಳಿಗೆ ಶಾಲು ವಿತರಣೆ ಮಾಡಲಾಗುತ್ತದೆ. 26 ಸಾವಿರ ಜನರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಐದು ಲಕ್ಷ ರೂ ವೆಚ್ಚದಲ್ಲಿ ನರೈನ್ಸ್ ಅವರ ಸಿಹಿತಿಂಡಿ ವಿತರಣೆ ಕಾರ್ಯಕ್ರಮ ದೀಪಾವಳಿಯ ಶುಭದಿನದ ಪ್ರಯುಕ್ತ ನಡೆಯಲಿದೆ ಎಂದು ಹೇಳಿದರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಶ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ. ಗೂಡುದೀಪವನ್ನು ಮನೆಯಲ್ಲೇ ತಯಾರಿಸಿ ಸಭಾಂಗಣದಲ್ಲಿ ಜೋಡಿಸುವ ಅವಕಾಶವಿದ್ದು ವಿಜೇತರಿಗೆ ಪ್ರಥಮ ಬಹುಮಾನ 7005 ರೂ, ದ್ವಿತೀಯ ಬಹುಮಾನ 5000 ರೂ ಹಾಗೂ ತೃತೀಯ 2,500ರೂ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:8496006816 ಅಥವಾ 9901347446ನ್ನು ಸಂಪರ್ಕಿಸಬಹುದು ಎಂದು ಅಶೋಕ್ ರೈ ತಿಳಿಸಿದರು. ಬೆಳಿಗ್ಗೆ 10ರಿಂದ ವಿಠಲ್ ನಾಯಕ್ ಕಲ್ಲಡ್ಕರವರಿಂದ ಗೀತ ಸಾಹಿತ್ಯ ಸಂಭ್ರಮ ಹಾಗೂ ಮಧ್ಯಾಹ್ನ 12 ಗಂಟೆಯಿಂದ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಶೃಂಗೇರಿ ಇದರ ಸದಸ್ಯರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಕಾರ್ಕಳದ ಪ್ರಸಿದ್ಧ ಅಡುಗೆಯವರು ತಯಾರಿಸಿ ಶುಚಿ ರುಚಿಯಾದ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ ಮತ್ತು ಕೋಡಿಂಬಾಡಿ ಗ್ರಾಂ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.

ಧರ್ಮಾತ್ಮ… ಕೃತಿ ಬಿಡುಗಡೆ
ಅಶೋಕ್ ಕುಮಾರ್ ರೈಯವರ ಕುರಿತಾಗಿ ರಚಿಸಲಾಗಿರುವ ‘ಧರ್ಮಾತ್ಮ….ಬಡವರ ಬೆಳಕು’ ಕೃತಿ ಬಿಡುಗಡೆ ದಶಸಂಭ್ರಮ ಕಾರ್ಯಕ್ರಮದಲ್ಲಿ ನಡೆಯಲಿದೆ. ಅಶೋಕ್ ರೈಯವರ ಬಾಲ್ಯ, ವಿದ್ಯಾಭ್ಯಾಸ, ಉದ್ಯಮ, ಸೇವಾ ಕಾರ್ಯ, ಟ್ರಸ್ಟ್ ಮೂಲಕ‌ ನಡೆದ ಸಮಾಜ ಸೇವೆ, ಸಾಧನೆ ಮುಂತಾದ ವಿವರವನ್ನು ಒಳಗೊಂಡ ಕೃತಿಯಲ್ಲಿ ವಿವಿಧ ಧರ್ಮದ ಧರ್ಮಗುರುಗಳ ಸಹಿತ ಹಲವು ಪ್ರಮುಖರ ಶುಭ ಸಂದೇಶ, ಅಶೋಕ್ ರೈಯವರ ಮನೆ‌ ಮಂದಿಯ ಶುಭ ಹಾರೈಕೆ, ಅಶೋಕ್ ರೈಯವರ ನೇತೃತ್ವದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನಡೆದ ದೇವಸ್ಥಾನಗಳ ಪ್ರಮುಖರ ಅನಿಸಿಕೆ, ಟ್ರಸ್ಟ್ ಫಲಾನುಭವಿಗಳ‌ ಕೃತಜ್ಞತಾ ನುಡಿ ಸಹಿತ ಹಲವು ವಿವರಗಳು ಇರಲಿದೆ. ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ‘ಧರ್ಮಾತ್ಮ…ಬಡವರ ಬೆಳಕು’ ಕೃತಿಯ ಸಂಪಾದಕೀಯ ಬಳಗದಲ್ಲಿ ಅಮ್ಮುಂಜೆಗುತ್ತು ಅಲಿಮಾರ ಜತೀಂದ್ರ ಶೆಟ್ಟಿ, ಜಯಪ್ರಕಾಶ್ ಬದಿನಾರು‌ ಮತ್ತು ಸುಮ ಅಶೋಕ್ ರೈ ಕಾರ್ಯ ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here