ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಜಿ ಶ್ರೀಧರ ಅವರಿಗೆ ಚಡಗ ಕಾದಂಬರಿ ಪ್ರಶಸ್ತಿ

0

ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ ಶ್ರೀಧರ ಮುಂಡಿಗೆಹಳ್ಳ ಅವರ ‘ಪ್ರಸ್ಥಾನ’ ಎನ್ನುವ ಕಾದಂಬರಿಗೆ ಈ ಬಾರಿಯ “ಚಡಗ ಕಾದಂಬರಿ ಪ್ರಶಸ್ತಿ” ಲಭಿಸಿದೆ.

ಕೋಟೇಶ್ವರದ ಎನ್.ಆರ್.ಎ.ಎಂ ಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗ ರವರ ನೆನಪಿನಲ್ಲಿ ನೀಡಲಾಗುವ ಹದಿಮೂರನೆಯ ವರ್ಷದ ‘ಚಡಗ ಕಾದಂಬರಿ‌ ಪ್ರಶಸ್ತಿ’ಗೆ ಪ್ರಸ್ತುತ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ ಮುಂಡಿಗೆಹಳ್ಳ ರವರ “ಪ್ರಸ್ಥಾನ” ಕಾದಂಬರಿ ಆಯ್ಕೆಯಾಗಿದೆ.

ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ನಗದು ಬಹುಮಾನವನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.

ಡಾ.ಎಚ್.ಜಿ.ಶ್ರೀಧರ ಮುಂಡಿಗೆಹಳ್ಳ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೆಹಳ್ಳದವರಾಗಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಪ್ರಾಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನುಗೈದಿದ್ದಾರೆ. ಹಲವಾರು ನಾಟಕ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರಿಗೆ ‘ಮಲ್ಲೇಪುರಂ ಪ್ರಶಸ್ತಿ’, ‘ಸಹೃದಯ ಪ್ರಾಧ್ಯಾಪಕʼ ಪ್ರಶಸ್ತಿಯೂ ಲಭಿಸಿದೆ. ಈ ಸಾಲಿನ ಹೆಸರಾಂತ ಚಡಗ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಬಳಗ ಶುಭಾಶಯ ಕೋರಿದ್ದಾರೆ.

LEAVE A REPLY

Please enter your comment!
Please enter your name here