ಸುದ್ದಿ ಸಮೂಹ ಸಂಸ್ಥೆ, ಒಕ್ಕಲಿಗ ಗೌಡ ಸೇವಾ ಸಂಘ, ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗ
ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳು ಮತ್ತು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗದಲ್ಲಿ `ದ್ವಿತೀಯ ಆವೃತ್ತಿಯ ಗೂಡುದೀಪ ರಚನಾ ಸ್ಪರ್ಧೆ’ಯು ಅ.23ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಅಪರಾಹ್ನ 2.30ಕ್ಕೆ ಆರಂಭಗೊಂಡ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 80ಕ್ಕೂ ಅಧಿಕ ತಂಡಗಳಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.
ಸಂಜೆ 7 ಗಂಟೆಗೆ ಬಹುಮಾನ ವಿತರಣೆ – ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಮಾತನಾಡಿ, ಸುದ್ದಿಯು ಪುತ್ತೂರಿನಲ್ಲಿ ಬಹಳಷ್ಟು ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವ ದೀಪಾವಳಿ ಹಬ್ಬವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಆಶಿಸಿದರು.
ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ, ಉದ್ಯಮಿ ಜಯಂತ ನಡುಬೈಲು ಮಾತನಾಡಿ, ಸುದ್ದಿಯ ಸಂಪಾದಕರಾಗಿರುವ ಡಾ.ಯು.ಪಿ.ಶಿವಾನಂದರು ನಿರಂತರವಾಗಿ ಸಮಾಜದಲ್ಲಿ ಅರಿವು, ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಕಳೆದ ಬಾರಿಯೂ ಉತ್ತಮವಾಗಿ ಕಾರ್ಯಕ್ರಮ ನಡೆದಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.
ಜನ್ಮ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು ಮಾತನಾಡಿ, ಗೂಡುದೀಪದ ಮೂಲಕ ಮನೆಯು ಬೆಳಗಿದಂತೆ ಮನುಷ್ಯನ ಜೀವನವು ಬೆಳಗಬೇಕು ಎನ್ನುವುದು ಬೆಳಕಿನ ಹಬ್ಬದ ತಾತ್ಪರ್ಯ. ಸುದ್ದಿಯು ಯಾವಾಗಲೂ ಭಿನ್ನ-ವಿಭಿನ್ನವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಸುದ್ದಿಗೆ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಮಾರ್ಕ್ ಟೆಲಿಕಾಂನ ಮಾಲಕರಾದ ಶಶಿರಾಜ್ ರೈಯವರು ಮಾತನಾಡಿ, ಸ್ಪರ್ಧೆಯಲ್ಲಿ ಹಲವು ಕಲಾತ್ಮಕ ಗೂಡುದೀಪಗಳು ಮೂಡಿಬಂದಿವೆ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆಗಳಿರುತ್ತವೆ. ಇದು ಪ್ರತಿಭೆಗಳ ಅನ್ವೇಷಣೆಗೆ ಉತ್ತಮವಾದ ವೇದಿಕೆ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ದೀಪಾವಳಿಯ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ವಿವಿಧೆಡೆಗಳಿಂದ ಬಂದು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಮನೆಯ ಸದಸ್ಯರೇ ತಂಡವಾಗಿ ಸೇರಿಕೊಂಡು ಗೂಡುದೀಪ ರಚಿಸಿದ್ದಾರೆ. ಈ ಮೂಲಕ ಇದು ಕುಟುಂಬದ ಕಾರ್ಯಕ್ರಮವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಹೇಳಿದರು. ವೇದಿಕೆಯಲ್ಲಿ ಲಹರಿ ಡ್ರೈಫ್ರುಟ್ಸ್‌ನ ಮಾಲಕ ಕುಸುಮ್‌ರಾಜ್ ಉಪಸ್ಥಿತರಿದ್ದರು.
ಸುದ್ದಿ ಬೆಳ್ತಂಗಡಿ ಸಿಇಒ ಸಿಂಚನಾ ಊರುಬೈಲು, ಸುದ್ದಿ ಮಾರ್ಕೆಟಿಂಗ್ ಅಡ್ವೆರ್ಟೈಸಿಂಗ್ ಮ್ಯಾನೇಜರ್ ಸುರೇಶ್ ಶೆಟ್ಟಿ, ಸುದ್ದಿ ಮಾಹಿತಿ ಟ್ರಸ್ಟ್‌ನ ನಮಿತಾ ದಿಲೀಪ್, ವರದಿಗಾರ ಶಿವಕುಮಾರ್ ಈಶ್ವರಮಂಗಲ, ಸುದ್ದಿ ನಿರೂಪಕ ಶಿವಪ್ರಸಾದ್ ರೈ, ಸಿಬ್ಬಂದಿಗಳಾದ ರೇಷ್ಮಾ ಡಿಸೋಜ, ನಿಶ್ಚಿತಾ, ನಾಗೇಂದ್ರ ರೈ, ಸಮದ್ ಕುರಿಯ, ಸಚಿನ್ ಶೆಟ್ಟಿ, ಧನುಷ್ ಪುತ್ತೂರು, ಕುಶಾಲಪ್ಪ, ದೀಕ್ಷಾ ರೈ ಸಹಕರಿಸಿದರು. ನಿರೂಪಕಿ ದಿವ್ಯಶ್ರೀ ವಜ್ರದುಂಬಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಗೂಡುದೀಪ ರಚನಾ ಸ್ಪರ್ಧೆಯ ಪ್ರಥಮ ಬಹುಮಾನದ ಪ್ರಾಯೋಜಕರಾಗಿ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಾಪ್ರಭಾ ಗೌಡ ಚಿಲ್ತಡ್ಕ, ದ್ವಿತೀಯ ನಗದು ಬಹುಮಾನದ ಪ್ರಾಯೋಜಕರಾಗಿ ಮಾರ್ಕ್ ಟೆಲಿಕಾಮ್‌ನ ಮಾಲಕ ಶಶಿರಾಜ್ ರೈ ಮತ್ತು ತೃತೀಯ ಬಹುಮಾನದ ಪ್ರಾಯೋಜಕರಾಗಿ ಜನ್ಮ ಫೌಂಡೇಷನ್‌ನ ಹರ್ಷಕುಮಾರ್ ರೈಯವರು ಸಹಕಾರ ನೀಡಿದರು. ಕಾರ್ಯಕ್ರಮದ ಸಹಪ್ರಾಯೋಜಕರಾಗಿ ಕೋಕೋಗುರು, ಲಹರಿ ಡ್ರೈಫ್ರುಟ್ಸ್ ಚಾಕೊಲೇಟ್ಸ್, ಎಸ್.ಕೆ. ಕನ್‌ಸ್ಟ್ರಕ್ಷನ್ಸ್, ಶಿವಮ್ ಕಂಪ್ಯೂಟರ್‍ಸ್ ಸೆಕ್ಯೂರಿಟಿ ಸಿಸ್ಟಮ್ಸ್, ಅಕ್ಷಯ ಕಾಲೇಜು, ವಿಸ್ಮಯ, ಫಲಾರ ರೆಸ್ಟೋರೆಂಟ್, ಬೊಳ್ಳಾಡಿ ಡೆಕೋರೇಟರ್‍ಸ್, ಎವಿಜಿ ಅಸೋಸಿಯೇಟ್ಸ್ ಮತ್ತು ಶೇಟ್ ಎಲೆಕ್ಟ್ರಾನಿಕ್ಸ್ ಸಹಯೋಗ ನೀಡಿದರು.
ಸುಮಾರು 80ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದ ಗೂಡುದೀಪ ರಚನಾ ಸ್ಪರ್ಧೆಯಲ್ಲಿ ಸಾಯಿರಾಮ್ ಭಟ್ ಕೋಡಿಕಲ್ ಅವರ ತಂಡವು 9,999 ರೂ.ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿತು. ಸಿಂಧುಲಕ್ಷ್ಮೀ ಮತ್ತು ತಂಡವು 5,555 ರೂ. ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಅಶ್ವಿನ್ ಮತ್ತು ತಂಡ 3,333 ರೂ. ನಗದು ಬಹುಮಾನದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ನಗದು ಬಹುಮಾನದ ಚೆಕ್, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು. ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶೋಭಾ ಶಿವಾನಂದ್, ಮುಳಿಯ ಜ್ಯುವೆಲ್ಸ್‌ನ ಅಶ್ವಿನಿ ಕೃಷ್ಣ ಮುಳಿಯ ಮತ್ತು ಕೊಕೋಗುರು ಸಂಸ್ಥೆಯ ಮಾಲಕರಾದ ಸುಪ್ರಭಾ ಬೋನಂತಾಯ ಸಹಕರಿಸಿದರು.