ಮಿತ್ರಂಪಾಡಿ ಜಯರಾಮ ರೈ, ಕೃಷ್ಣಪ್ರಸಾದ್ ದೇವಾಡಿಗ, ಗುರುಪ್ರಿಯಾ ನಾಯಕ್,ವಿಲ್ರೆಡ್ ಡಿಸೋಜ, ಫೋಟೋಗ್ರಾಫರ‍್ಸ್ ಎಸೋಸಿಯೇಶನ್, ದ.ಕ.ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಪುತ್ತೂರು:ಅನಿವಾಸಿ ಭಾರತೀಯ ಸಮಾಜ ಸೇವಕ, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ,ಕಲಾವಿದೆ ಗುರುಪ್ರಿಯಾ ನಾಯಕ್ ನರಿಮೊಗ್ರು, ಸ್ಯಾಕ್ಸೋಫೋನ್ ಕಲಾವಿದ ಕೃಷ್ಣಪ್ರಸಾದ್ ದೇವಾಡಿಗ ಉಪ್ಪಿನಂಗಡಿ, ಪತ್ರಕರ್ತ ವಿಲೆಡ್ ಡಿಸೋಜ ಪೆರುವಾಯಿ ಸೇರಿದಂತೆ ಜಿಲ್ಲೆಯ 44 ಮಂದಿ ಸಾಧಕರನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸಂಘ ಸಂಸ್ಥೆಗಳ ಪೈಕಿ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ 20 ಸಂಸ್ಥೆಗಳನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಭಾರ ಜಿಲ್ಲಾಧಿಕಾರಿಗಳೂ ಆಗಿರುವ ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕುಮಾರ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಅನಿವಾಸಿ ಭಾರತೀಯ ಸಮಾಜ ಸೇವಕ ಮಿತ್ರಂಪಾಡಿ ಜಯರಾಮ ರೈ:

ಕೆದಂಬಾಡಿ ಗ್ರಾಮದ ದಿ.ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ಡಿಂಬ್ರಿಗುತ್ತು ಸರಸ್ವತಿ ರೈಯವರ ಪುತ್ರನಾಗಿದ್ದು ಪ್ರಸ್ತುತ ಅಬುಧಾಬಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಮಿತ್ರಂಪಾಡಿ ಜಯರಾಮ ರೈ ಅವರು ಕೊರೋನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡಕುಟುಂಬಗಳಿಗೆ ಅಕ್ಕಿಯನ್ನು ವಿತರಿಸುವುದರ ಜೊತೆಗೆ ಪುತ್ತೂರು ಜಾತ್ರಾ ಸಂದರ್ಭದಲ್ಲಿ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜಾಯಿಂಟ್ ವೀಲ್ ನಡೆಸುವ 60ಕ್ಕೂ ಅಧಿಕ ಸದಸ್ಯರಿರುವ 9 ಕುಟುಂಬಕ್ಕೆ ಸುಮಾರು ಒಂದು ತಿಂಗಳ ಪರ್ಯಂತ ಊಟೋಪಚಾರ ನೀಡಿ ಆಶ್ರಯ ನೀಡಿದ್ದಾರೆ.

ಕೊರೋನಾ ತುರ್ತು ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅನೇಕ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ.ದಕ್ಷಿಣಕನ್ನಡ ಜಿಲ್ಲೆಯ ಸುಮಾರು ನೂರಕ್ಕೂ ಅಧಿಕ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ಅನಾರೋಗ್ಯಕ್ಕೆ ಸಿಲುಕಿದ ಸುಮಾರು 25ಕ್ಕೂ ಅಧಿಕ ಮಂದಿಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಸುಮಾರು 20ಕ್ಕೂ ಅಧಿಕ ಬಡಕುಟುಂಬಗಳ ಮನೆ ದುರಸ್ತಿ ಕಾರ್ಯಗಳಿಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ.ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಅಷ್ಟ ಕ್ಷೇತ್ರ ಗಾನ ವೈಭವ’ ಎಂಬ ಕನ್ನಡ ಭಕ್ತಿಗೀತೆಯನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಅದನ್ನು ಅರಬ್ ರಾಷ್ಟ್ರಗಳಲ್ಲಿ ಡಾ|ಬಿ.ಆರ್.ಶೆಟ್ಟಿ ಅವರಿಂದ ಬಿಡುಗಡೆಗೊಳಿಸಿ ಅರಬ್ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದಾರೆ.ಪುತ್ತೂರು ತಾಲೂಕಿನ ಪ್ರಮುಖ ಜನನಿಭಿಡ ಪ್ರದೇಶಗಳಲ್ಲಿ ಕನ್ನಡದ ಪುಟ್ಟ ಗ್ರಂಥಾಲಯ ನಿರ್ಮಾಣಕ್ಕೂ ಮಹಾ ಪೋಷಕರಾಗಿದ್ದಾರೆ.ಇದೀಗ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ನಡೆಸಲ್ಪಡುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಕಾರ್ಯಕ್ರಮದ ಮಹಾಪೋಷಕರಾಗಿರುತ್ತಾರೆ.ಅರಬ್ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಕನ್ನಡದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕಳೆದ ಇಪ್ಪತ್ತು ವರ್ಷಗಳಿಂದ ರೈಯವರು ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 5ಕ್ಕೂ ಅಧಿಕ ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ ಮಹತ್ತರ ಕಾರ್ಯವನ್ನು ಮಾಡಿದ್ದಾರೆ.ವಿಶ್ವದಲ್ಲೇ ಅತೀ ದೊಡ್ಡ ಅನಿವಾಸಿ ಭಾರತೀ ಸಂಸ್ಥೆ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ಇಂಡಿಯಾ ಸೋಷಿಯಲ್ ಆಂಡ್ ಕಲ್ಚರಲ್ ಸೆಂಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಕಳೆದ 24 ವರ್ಷಗಳಿಂದ ಸಮಾಜಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ, ಶೈಕ್ಷಣಿಕ ಕ್ಷೇತ್ರಕ್ಕೆ ಇವರು ಮಾಡುತ್ತಿರುವ ಸಮಾಜಸೇವೆ ಹಾಗೂ ಕನ್ನಡಪರ ಸೇವೆಯನ್ನು ಗುರುತಿಸಿ 2022ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೃಷ್ಣಪ್ರಸಾದ್ ದೇವಾಡಿಗ ಉಪ್ಪಿನಂಗಡಿ: ಸ್ಯಾಕ್ಸೋಫೋನ್ ಕಲಾವಿದ ಡಾ|ಕೆ.ಕೃಷ್ಣಪ್ರಸಾದ್ ದೇವಾಡಿಗ ಅವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದಲ್ಲಿ ಕಳೆದ 25 ವರ್ಷಗಳಿಂದ ಸ್ಯಾಕ್ಸೋಫೋನ್ ವಾದಕರಾಗಿ ಉದ್ಯೋಗ ಮಾಡುತ್ತಿದ್ದಾರೆ.ಇವರು ಖ್ಯಾತ ನಾಗಸ್ವರ ಮತ್ತು ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಎಸ್.ಕೆ.ದೇವದಾಸ್‌ರವರ ಬಳಿ ಶಿಷ್ಯತ್ವ,ಚೆನ್ನೈ ಬಾಲಮುರುಗನ್‌ರವರ ಶಿಷ್ಯರೊಂದಿಗೆ ಸ್ಯಾಕ್ಸೋಫೋನ್ ವಾದನದಲ್ಲಿ ವಿದ್ವತ್ ಪಡೆದಿರುತ್ತಾರೆ.ಶ್ರೀ ಸಹಸ್ರಲಿಂಗೇಶ್ವರ ದೇವಳದ ಆಡಳಿತ ಮಂಡಳಿಯಿಂದ ಕೌಸ್ತುಭ ಪ್ರಶಸ್ತಿ, ಕಾಳಿಕಾಂಬಾ ಭಜನಾ ಮಂಡಳಿಯಿಂದ ನಾದ ವಿಶಾರದ ಪ್ರಶಸ್ತಿ, ಇಂಟರ್ ನ್ಯಾಷನಲ್ ವರ್ಚುಲ್ ಪೀಸ್ ಯೂನಿವರ್ಸಿಟಿ ಭಾರತೀಯ ವಿದ್ಯಾಭವನ ಬೆಂಗಳೂರು ಇವರಿಂದ ಕಲಾ ಸಾಧನೆಗಾಗಿ ಗೌರವ ಡಾಕ್ಟರೇಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನ ‘ಮಾನದಿಗೆದ ಓಲೆ’ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳು ಇವರಿಗೆ ಲಭಿಸಿದೆ.ಶ್ರೀಲಂಕಾ ದೇಶ ಸೇರಿದಂತೆ ಇವರು ಈಗಾಗಲೇ ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಶೀನಪ್ಪ ದೇವಾಡಿಗ-ಇಂದಿರಾ ದಂಪತಿಯ ಮಗನಾಗಿರುವ ಇವರು ಪತ್ನಿ ಪ್ರಮೀಳಾ, ಮಕ್ಕಳಾದ ಪ್ರಕೃತಿ, ಪ್ರತೀಕ್ಷಾ ಮತ್ತು ಪ್ರತಿಜ್ಞಾ ಅವರೊಂದಿಗೆ ನೆಲೆಸಿದ್ದಾರೆ.

ಗುರುಪ್ರಿಯ ನಾಯಕ್: ಗುರುಪ್ರಿಯ ನಾಯಕ್‌ರವರು ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿಯಾಗಿದ್ದು, 2007ರಲ್ಲಿ ನರಿಮೊಗರುವಿನಲ್ಲಿ ಪ್ರಖ್ಯಾತಿ ಯುವತಿ ಮಂಡಲವನ್ನು ಸ್ಥಾಪನೆ ಮಾಡಿ ಕಳೆದ 15 ವರ್ಷದಿಂದಲೂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಪ್ರಖ್ಯಾತಿ ಯುವತಿ ಮಂಡಲವು ಯುವಜನ ಮೇಳದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ವರ್ಷ ತಾಲೂಕಿನ ಸಮಗ್ರ ಪ್ರಶಸ್ತಿ ಗಳಿಸಿದೆ, ಗುರುಪ್ರಿಯಾ ನಾಯಕ್‌ರವರು ಏಕಪಾತ್ರಾಭಿನಯ, ಭಾವಗೀತೆ, ಲಾವಣಿಯಲ್ಲಿ ರಾಜ್ಯಮಟ್ಟದ ಯುವಜನ ಮೇಳದಲ್ಲಿ ೬ ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ, ಅಲ್ಲದೇ ಗುಂಪು ಸ್ಪರ್ಧೆಗಳಾದ ಗೀಗೀಪದ, ರಾಗಿ ಬೀಸುವ ಪದ, ಜನಪದ ಗೀತೆಯಲ್ಲೂ ರಾಜ್ಯ ಮಟ್ಟವನ್ನು ಪ್ರತಿನಿಽಸಿದ್ದಾರೆ. ಪ್ರಸ್ತುತ ಪತಿ ಶಿವಾನಂದ ಕಾಮತ್‌ರವರೊಂದಿಗೆ ಮೆಲ್ಕಾರ್‌ನಲ್ಲಿ ನೆಲೆಸಿದ್ದು,ಪುರುಷರಕಟ್ಟೆ ಹಾಗೂ ಮೆಲ್ಕಾರ್‌ನಲ್ಲಿ ಗುರುಕುಲ ಕಲಾ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ತರಬೇತಿ ನೀಡುತ್ತಿದ್ದಾರೆ.

ಗುರುಪ್ರಿಯಾ ಅವರಿಗೆ ಜಿಲ್ಲಾ ಯುವ ಪ್ರಶಸ್ತಿ, ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.

ಪತ್ರಕರ್ತ ವಿಲ್ಫ್ರೆಡ್ ಡಿಸೋಜ: ವಿಟ್ಲ ಸಮೀಪದ ಪೆರುವಾಯಿ ನಿವಾಸಿಯಾಗಿರುವ ಟಿವಿ೯ ಕ್ಯಾಮರಾಮ್ಯಾನ್ ವಿಲ್ಫ್ರೆಡ್ ಡಿಸೋಜರವರು 1997-98ರಲ್ಲಿ ಮಾಧ್ಯಮ ರಂಗಕ್ಕೆ ಪ್ರವೇಶ ಮಾಡಿದ್ದರು.ಆ ಬಳಿಕ ನ್ಯೂ ಮ್ಯಾಂಗಳೂರು ಚಾನ್‌ಲ್‌ನಲ್ಲಿ 3 ವರ್ಷ ಸೇವೆ ಸಲ್ಲಿಸಿ ಬಳಿಕ ಮಂಗೂರಿನಲ್ಲಿ ಸಿಟಿ ಕೇಬಲ್‌ನಲ್ಲಿ 3 ವರ್ಷ, ಬಳಿಕ ಉದಯ ಟಿವಿಯಲ್ಲಿ 2 ವರ್ಷ,ದೂರದರ್ಶನದಲ್ಲಿ 1 ವರ್ಷ ಸೇವೆ ಸಲ್ಲಿಸಿ 2006ರಿಂದ ಟಿವಿ9 ಕ್ಯಾಮರಾಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಇವರಿಗೆ ಅತ್ಯುತ್ತಮ ವೀಡಿಯೋ ಚಿತ್ರೀಕರಣಕ್ಕಾಗಿ ಕಲ್ಕುರ ಪ್ರತಿಷ್ಠಾನದಿಂದ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿತ್ತು.25 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿನ ಇವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here