ಡಾ|ರವಿ ಶೆಟ್ಟಿ ಮೂಡಂಬೈಲು,ಸರಪಾಡಿ ಅಶೋಕ ಶೆಟ್ಟಿ, ಯುವವಾಹಿನಿ ಸಂಸ್ಥೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು:ರಾಜ್ಯ ಸರಕಾರ ನೀಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಆಯ್ಕೆಯಾದ 67 ಮಂದಿ ಸಾಧಕರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು ಪುತ್ತೂರಿನಿಂದ ಅನಿವಾಸಿ ಉದ್ಯಮಿ ಡಾ|ರವಿ ಶೆಟ್ಟಿ ಮೂಡಂಬೈಲು ಅವರನ್ನು ಸಮಾಜ ಸೇವಾ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಉಳಿದಂತೆ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಹಾಗೂ ಸಂಘ ಸಂಸ್ಥೆಗಳ ಪೈಕಿ ಯುವ ವಾಹಿನಿ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಿದ್ದರು.ಅ.30ರಂದು ಸಂಜೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.5 ಲಕ್ಷ ನಗದು, 25 ಗ್ರಾಂ.ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.ನ.1ರಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಡಾ|ರವಿ ಶೆಟ್ಟಿ ಮೂಡಂಬೈಲುರವರ ಸಮಾಜ ಸೇವೆಗೆ ಸಂದ ಗೌರವ:

ಡಾ.ರವಿ ಶೆಟ್ಟಿ ಮೂಡಂಬೈಲುರವರು ಎಟಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದು. ಕರ್ನಾಟಕ ಸಂಘ ಕತಾರ್‌ನ ಉಪಾಧ್ಯಕ್ಷರಾಗಿ, ತುಳುಕೂಟ ಕತಾರ್‌ನ ಮಹಾಪೋಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಲ್ಲದೇ ಬಂಟ್ಸ್ ಕತಾರ್‌ನ ಸ್ಥಾಪಕಾಧ್ಯಕ್ಷರಾಗಿ, ಮೂರು ಬಾರಿ ತುಳು ಕೂಟದ ಕತಾರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಂಡೂರಿನ ನೇಸರ ಮನೆಯಲ್ಲಿ ವಾಸವಾಗಿರುವ ಇವರು ಮೂಡಂಬೈಲ್ ಶ್ರೀ ಗೋಪಾಲಕೃಷ್ಣ ಶಾಸಿ ಸಾಂಸ್ಕೃತಿಕ ಪ್ರತಿಷ್ಠಾನದ ಮಹಾಪೋಷಕರಲ್ಲಿ ಓರ್ವರಾಗಿದ್ದು ಗುರುಪುರ ಮುಂಡಿತಾಯ ದೈವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

1997ರಲ್ಲಿ ಕತಾರ್‌ಗೆ ತೆರಳುವ ಮೊದಲು ಟಾಟಾ ಪ್ರೋಜೆಕ್ಟ್‌ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಎರಡು ಎ ದರ್ಜೆಯ ವೆಜ್ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಿದ್ದರು. ಟಾಟಾ ಸ್ಪೋರ್ಟ್ಸ್ ಮತ್ತು ಮನರಂಜನಾ ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಡಾ|ರವಿ ಶೆಟ್ಟಿಯವರ ಸಮಾಜ ಸೇವೆ ಹಾಗೂ ಉದ್ಯಮಶೀಲತೆಯನ್ನು ಪರಿಗಣಿಸಿ ಕೆಲವು ಸಮಯಗಳ ಹಿಂದೆ ಅಮೆರಿಕದ ಕಿಂಗ್ಸ್ ಯುನಿವರ್ಸಿಟಿ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕೊರೋನಾ ಸಂದರ್ಭದಲ್ಲಿ ಕತಾರ್‌ನಲ್ಲಿ ಮತ್ತು ತಾಯ್ನಾಡಿನಲ್ಲಿ ಆಹಾರ ಕಿಟ್ ವಿತರಿಸಿರುವ ಇವರು ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ, ಮೆಡಿಕಲ್ ಕಿಟ್ ಹಾಗೂ ಕಲಾವಿದರಿಗೆ ನೆರವು ನೀಡಿದ್ದರು. ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈಯಕ್ತಿಕ ನೆಲೆಯಲ್ಲಿ ರೂ.5 ಲಕ್ಷ ದೇಣಿಗೆ ನೀಡಿದ್ದರು.

ಡಾ|ರವಿ ಶೆಟ್ಟಿಯವರ ಸಾಮಾಜಿಕ ಸೇವೆಯನ್ನು ಗುರುತಿಸಿ 2016ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ, ಕತಾರ್ ಎಂಸಿಸಿಯಿಂದ ಮದರ್ ಥೆರೇಸಾ ಸೋಶಿಯಲ್ ಹಾರ್ಮೋನಿ ಪ್ರಶಸ್ತಿ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಕದಂಬ ಪ್ರಶಸ್ತಿ, ಪತಂಜಲಿ ಯೋಗ ಸಮಿತಿಯಿಂದ ಕಡಲಾಚೆಯ ಕಣ್ಮಣಿ ಪ್ರಶಸ್ತಿ, ಕೈರಳಿ ಟಿವಿ ಪ್ರಶಸ್ತಿ, ಗ್ಲೋಬಲ್ ಮೀಡಿಯಾ ಪ್ರಶಸ್ತಿ, ನೆಲ್ಸನ್ ಮಂಡೇಲಾ ಅವಾರ್ಡ್ -ರ್ ಹ್ಯುಮಾನಿಟಿ ಪ್ರಶಸ್ತಿ, ರಾಷ್ಟ್ರ ಪ್ರೇರಣ ಪ್ರಶಸ್ತಿ, ಅಭಿಯಂತರಶ್ರೀ ಪ್ರಶಸ್ತಿ, ಗೋಲ್ಡನ್ ಅಚೀವ್‌ಮೆಂಟ್ ಪ್ರಶಸ್ತಿ, ತೌಳವ ಸಿರಿ ಪ್ರಶಸ್ತಿ, ಸೃಷ್ಠಿ ಕಲಾಭೂಮಿಯವರ ತುಳುನಾಡ ಬೊಳ್ಳಿ ಪ್ರಶಸ್ತಿ, ಕರ್ನಾಟಕ ಸಂಘ ಕತಾರ್‌ನಿಂದ ಅಭಿಯಂತರರ ಕಲಾ ಸಂಪದ ಮುಂಬೈಯಿಂದ ರಜತರಂಗ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದೆ.

ಮುಂಬೈ ವಿಶ್ವ ವಿದ್ಯಾನಿಲಯ ಕನ್ನಡ ವಿಭಾಗವು ಡಾ|ರವಿ ಶೆಟ್ಟಿಯವರ ಜೀವನದ ಯಶೋಗಾಥೆ ಆಧರಿಸಿದ ‘ರವಿತೇಜ’ ಕೃತಿಯನ್ನು ಹೊರತಂದಿದ್ದು ಅದು ಇತ್ತೀಚೆಗೆ ಬಿಡುಗಡೆಗೊಂಡಿತ್ತು.

ಸಮಾಜದ ನಾನಾ ಸ್ತರಗಳಲ್ಲಿ ತನ್ನ ಕೊಡುಗೆ ನೀಡುತ್ತಾ ಬಂದಿರುವ ಡಾ|ರವಿ ಶೆಟ್ಟಿಯವರು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನೂರಾರು ಪ್ರಶಸ್ತಿ, ಸನ್ಮಾನ, ಗೌರವಗಳನ್ನು ಪಡೆದುಕೊಂಡಿದ್ದಾರೆ.

ಮೂಡಂಬೈಲು ತಿಮ್ಮಪ್ಪ ಶೆಟ್ಟಿ ಮತ್ತು ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರರಾಗಿರುವ ಡಾ.ರವಿ ಶೆಟ್ಟಿಯವರು ಪತ್ನಿ ಜ್ಯೋತಿ, ಪುತ್ರ ರೋಶನ್ ಹಾಗೂ ಪುತ್ರಿ ರಚನಾರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

ಯುವವಾಹಿನಿ ಸಂಸ್ಥೆ: ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಮಾಜದಲ್ಲಿ ತೀರಾ ಹಿಂದುಳಿದಿರುವ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ಸಾವಿರಕ್ಕೂ ಅಧಿಕ ಮಕ್ಕಳ ದತ್ತು ಸ್ವೀಕಾರ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ವೃತ್ತಿ ಮಾರ್ಗದರ್ಶನ ಶಿಬಿರ, ಆಶಕ್ತರಿಗೆ ಆರೋಗ್ಯ ನೆರವು, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಹೀಗೆ ಸಾವಿರಾರು ಕಾರ್ಯಕ್ರಮಗಳನ್ನು ಯುವವಾಹಿನಿಯು ನಡೆಸುತ್ತಾ ಬಂದಿದೆ. ರಾಜ್ಯಾದ್ಯಂತ 33 ಘಟಕಗಳ ಮೂರು ಸಾವಿರಕ್ಕೂ ಅಧಿಕ ಸದಸ್ಯರು ಕಳೆದ 35 ವರುಷಗಳಿಂದ ಸೇವೆಯನ್ನು ನೀಡುತ್ತಾ ಬರುತ್ತಿರುವ ಯುವವಾಹಿನಿ ಸಾಹಿತ್ಯಿಕ ಸೇವೆಯನ್ನು ನಡೆಸುತ್ತಿದ್ದು ಹಿರಿಯ ಸಾಹಿತಿ ದಿವಂಗತ ವಿಶುಕುಮಾರ್ ಅವರ ಹೆಸರಿನಲ್ಲಿ ವಿಶುಕುಮಾರ್ ಪ್ರಶಸ್ತಿಯನ್ನೂ ನೀಡುತ್ತಾ ಬರುತ್ತಿದೆ.

ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ: ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿರವರು ಈ ಬಾರಿ ರಾಜ್ಯ ಸರಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿ 1961ರಲ್ಲಿ ಜನಿಸಿರುವ ಅಶೋಕ್ ಶೆಟ್ಟಿಯವರು ನಾಟ್ಯಗುರು, ಸಮರ್ಥ ಪಾತ್ರಧಾರಿ, ಯಕ್ಷ ಪ್ರಸಂಗಗಳ ರಚನಾಕಾರರಾಗಿ, ಯಕ್ಷನಿರ್ದೇಶಕರಾಗಿ ಪ್ರಸಿದ್ಧರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ, ಉತ್ತಮ ನೃತ್ಯಪಟು, ಅರ್ಜುನ, ದೇವೇಂದ್ರ, ರಕ್ತಬೀಜ, ಕೌಂಡ್ಲಿಕ, ಶತ್ರುಘ್ನ, ಇಂದ್ರಜಿತು ಮುಂತಾದವು ಅವರ ಜನಪ್ರಿಯ ಪಾತ್ರಗಳು.ಕಟೀಲು, ಅಳದಂಗಡಿ, ಕದ್ರಿ, ಬಪ್ಪನಾಡು, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ನಡೆಸಿದ ಅವರು, ಮೇಳಗಳಲ್ಲಿ ಕಲಾವಿದರಾಗಿ, ಸಂಚಾಲಕರಾಗಿ ಕಲಾಸೇವೆ ಮಾಡಿದ್ದಾರೆ.ಉಚಿತ ನಾಟ್ಯ ತರಬೇತಿ, ಸಾವಯವ ಕೃಷಿ ವಿಜಯ ಕುರಿತು ಆರು ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ ಮಾಡಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಲ್ಲದೆ ಹಲವು ಸಂಘ, ಸಂಸ್ಥೆಗಳಲ್ಲಿ ದುಡಿದಿರುವ ಅವರು ಹಲವು ಸನ್ಮಾನಗಳು,ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅವರ ‘ಸರಪಾಡಿದ ಸರ್ಪೆ’ ಯಕ್ಷಗಾನ ಅತ್ಯಂತ ಜನಪ್ರಿಯವಾಗಿದೆ.ಪತ್ನಿ ಮೀನ ಮಕ್ಕಳಾದ ವಿಕ್ರಮ, ರಮ್ಯರವರೊಂದಿಗೆ ವಾಸವಾಗಿದ್ದಾರೆ.ಇವರ ಪುತ್ರಿ ರಮ್ಯ ಶೆಟ್ಟಿಯವರನ್ನು ಒಳಮೊಗ್ರು ಗ್ರಾಮದ ಕೈಕಾರ ಪುಂಡಿಕಾಯಿ ನಿವಾಸಿಯಾಗಿರುವ ಉದ್ಯಮಿ ಮನೋಜ್ ಶೆಟ್ಟಿಯವರಿಗೆ ಮದುವೆ ಮಾಡಿಕೊಡಲಾಗಿದೆ.

2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿರುವ ಡಾ.ರವಿ ಶೆಟ್ಟಿ ಮೂಡಂಬೈಲು ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here