ಸುಪ್ತ ಅಂತಃ ಸತ್ವ ಹೊರತರುವುದೇ ಶಿಕ್ಷಣದ ಉದ್ದೇಶವಾಗಬೇಕು-ಕ್ಯಾ| ಗಣೇಶ್ ಕಾರ್ಣಿಕ್
ಪುತ್ತೂರು: ನೃತ್ಯೋಪಾಸನಾ ಕಲಾಕೇಂದ್ರ ಪುತ್ತೂರು ಇದರ ವರ್ಷ ಸಂಭ್ರಮ-18 ಪುತ್ತೂರು ಹಾಗೂ ಉಪ್ಪಿನಂಗಡಿ ಕಲಾ ತಂಡಗಳಿಂದ ನೃತ್ಯೋಪಾಸನಾ ಕಾರ್ಯಕ್ರಮವು ಅ.30ರಂದು ಸಂಜೆ ಜೈನ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಭಾರತೀಯ ಪರಂಪರೆಯನ್ನು ಇನ್ನಷ್ಟು ಸಂರಕ್ಷಣೆಗೊಳಿಸವ ಕಲಾಪ್ರಕಾರಗಳಲ್ಲಿ ಗುರು-ಶಿಷ್ಯ ಪರಂಪರೆಗೆ ಅದ್ಭುತವಾದ ಮೌಲ್ಯವಿದೆ. ಕಲಾ ಕ್ಷೇತ್ರದಲ್ಲಿರುವಷ್ಟು ಆತ್ಮೀಯತೆ ಶ್ರದ್ದೆ, ಶಿಸ್ತು ಗೌರವ ವಿಶ್ವಾಸ ಶಾಲಾ ಶಿಕ್ಷಣದಲ್ಲೂ ಕಾಣಲು ಸಾಧ್ಯವಿಲ್ಲ. ಗುರು ತನ್ನಲ್ಲಿರುವ ಜ್ಞಾನವನ್ನು ಸಂಪೂರ್ಣ ಶಿಷ್ಯನಿಗೆ ಧಾರೆ ಎರೆಯುವುದಲ್ಲದೆ ವಿದ್ಯಾರ್ಥಿಯೂ ಅಷ್ಟೇ ಶ್ರದ್ದೆಯಿಂದ ಕಲಿತುಕೊಳ್ಳುತ್ತಾನೆ. ಬ್ರಿಟೀಷ್ ಆಡಳಿತ ಬಂದ ಬಳಿಕ ಶಿಕ್ಷಣ ಪದ್ದತಿಯಲ್ಲಿ ಜಾರು ಬಂಡಿ ತರವಾಗಿದ್ದು ನಮ್ಮ ತನ, ಪರಂಪರೆಗಳ ಬಗ್ಗೆ ನಿಕೃಷ್ಟ ಭಾವನೆ, ಕೀಳರಿಮೆ ಹುಟ್ಟಲು ಶಿಕ್ಷಣ ವ್ಯವಸ್ಥೆಯೂ ಒಂದು ಕಾರಣವಾಗಿದೆ ಎಂದರು. ಆತ್ಮದ ಅಂಶಗಳಿಗೆ ಭೂಷಣ ಪ್ರಾಯವಾಗಿ ನಮ್ಮ ಬದುಕನ್ನು ನಾವು ಹೇಗೆ ಬೆಳಸಬೇಕು ಎಂದು ಉಪಾಸನೆಯಲ್ಲಿ ನೀಡಲಾಗುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಕೆಲಸವಾಗುತ್ತಿದೆ. ಮೊಬೈಲ್‌ನೊಳಗಿರುವ ಅಪ್ಲಿಕೇಶನ್‌ಗಳಿರುವಂತೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನವಾಗಬೇಕು. ಸುಪ್ತ ಅಂತಃ ಸತ್ವ ಹೊರತರುವುದೇ ಶಿಕ್ಷಣದ ಉದ್ದೇಶವಾಗಬೇಕು. ಭಾರತೀಯ ಪರಂಪರೆಯ ಜೀವಂತವಾಗಿಸಿ, ಮುಂದಿನ ಪೀಳಿಗೆಗೆ ಇನ್ನಷ್ಟು ಸುಂದರವಾಗಿ ಹಸ್ತಾಂತರಿಸುವ ಕೆಲಸವಾಗಬೇಕು ಎಂದು ಹೇಳಿ ಶುಭಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಾಟ್ಯ ನಿಕೇತನ ಕೊಲ್ಯ ಮಂಗಳೂರು ಇದರ ನೃತ್ಯ ಗುರು ‘ಕರ್ನಾಟಕ ಕಲಾಶ್ರೀ’ ಗುರು ರಾಜಶ್ರೀ ಉಳ್ಳಾಲ್ ಮಾತನಾಡಿ, ಭರತನಾಟ್ಯವು ಭಾರತೀಯ ಸಂಸ್ಕೃತಿಯ ಪ್ರತೀಕ. ಭರತನಾಟ್ಯವನ್ನು ಶಾಲಾ ಶಿಕ್ಷಣದ ಜೊತೆಗೆ ಕಲಿತುಕೊಳ್ಳಬಹುದು. ಇದರಿಂದ ಪಠ್ಯ ಶಿಕ್ಷಣಕ್ಕೆ ಯಾವುದೇ ತೊಡಕುಂಟಾಗುವುದಿಲ್ಲ. ಭರತನಾಟ್ಯದ ಅಧ್ಯಯನ ನಿರಂತರವಾಗಿರಲಿ. ಯಾವುದೇ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಳಿಸಬಾರದು. ಒಂದು ಬಾರಿ ಮೊಟಕುಗೊಳಿಸಿದರೆ ಮುಂದುವರಿಸಲು ಸಮಸ್ಯೆ ಉಂಟಾಗುತ್ತದೆ ಎಂದರು. ವಿದುಷಿ ಶಾಲಿನಿ ಆತ್ಮಭೂಷಣ್ ಸಾಧಿಸುವ ಛಲವಿರುವ ಸಾಧಕಿ. ಮಕ್ಕಳ ಪ್ರತಿಭೆಗೆ ತಕ್ಕೆಂತೆ ತರಬೇತಿ ನೀಡಿ ಬೆಳೆಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಮಾತನಾಡಿ, ಭರತನಾಟ್ಯಕ್ಕೆ ಪ್ರೋತ್ಸಾಹ ನೀಡುವ ಅನೇಕ ಶಿಷ್ಯಂದಿರನ್ನು ಬೆಳೆಸಿದವರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಉನ್ನತ ತರಬೇತಿ ಪಡೆದ ಶಾಲಿನಿ ಆತ್ಮಭೂಷಣ್‌ರವರು ಸಂಸ್ಥೆಯನ್ನು ಬೆಳೆಸಿ ಪುತ್ತೂರಿನ ಹಿರಿಮೆಯನ್ನು ಬೆಳೆಸಿದವರು ಎಂದರಲ್ಲದೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಸಮಾಜ ಸೇವಾ ಕಾರ್ಯ ನಡೆಸುತ್ತಿರುವುದನ್ನು ಶ್ಲಾಸಿದರು. ಪುತ್ತೂರು ಎಲ್ಲಾ ಕಲೆಗಳಿಗೆ ಪ್ರೋತ್ಸಾಹ ನೀಡಿದ ಊರು. ಶಾಲಿನಿಯವರಿಗೆ ಇಲ್ಲಿ ಪೋಷಕರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ. ಭರತನಾಟ್ಯದಲ್ಲಿ ಎಲ್ಲಾ ರೀತಿಯ ಕಲಾ ಪ್ರಕಾರಗಳಿದ್ದು ಭರತನಾಟ್ಯ ಪ್ರತಿಭೆಯು ಪಠ್ಯ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದರು.
ನೃತ್ಯ ಗುರು ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಗ್ರಾಮೀಣ ವಿದ್ಯಾರ್ಥಿಗಳೇ ಅಧಿಕವಾಗಿದ್ದು ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಿರುವುದಲ್ಲದೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಗಿದೆ. ಗೋಕರ್ಣ, ಮೈಸೂರು ದಸರಾ ಸೇರಿದಂತೆ ಕಳೆದ ಜೂನ್ ನಂತರ ಹಲವು ಕಾರ್ಯಕ್ರಮಗಳನ್ನು ನೀಡಿದ್ದು ಇದೀಗ ಮಂಗಳೂರುನಲ್ಲಿ ಸಂಸ್ಥೆಯ ಶಾಖೆ ಪ್ರಾರಂಭಿಸಿ ನೃತ್ಯ ತರಗತಿ ನೀಡಲಾಗುತ್ತಿದೆ ಎಂದರು.
ನೃತ್ಯೋಪಾಸನಾ ಗೌರವಾರ್ಪಣೆ: ಮೂಡಬಿದರೆ ವೋಲ್ಟ್ ಆಂಪ್ ಸೌಂಡ್ಸ್ ಲೈಟಿಂಗ್ಸ್ ಮ್ಹಾಲಕ ಮುಚ್ಚೂರು ರಾಮಚಂದ್ರ ಭಟ್‌ರವರಿಗೆ ನೃತ್ಯೋಪಾಸನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದುಷಿ ಶಾಲಿನಿ ಆತ್ಮಭೂಷಣ್‌ರವರ ನೃತ್ಯ ಗುರು ಕರ್ನಾಟಕ ಕಲಾಶ್ರೀ ಗುರು ರಾಜ ಶ್ರೀ ಉಳ್ಳಾಲ್ ರವರನ್ನು ಗೌರವಿಸಲಾಯಿತು.
ದತ್ತು ಸ್ವೀಕಾರ; ಸಂಸ್ಥೆಯ ನೃತ್ಯ ಪೋಷಣಾ ಕಾರ್ಯಕ್ರಮದ ಉಚಿತ ಶಿಕ್ಷಣ ಯೋಜನೆಯಲ್ಲಿ ಪ್ರಜ್ಞಾ ಬಲ್ನಾಡುರವರನ್ನು ದತ್ತು ಸ್ವೀಕಾರ ನಡೆಸಲಾಯಿತು.
ಪ್ರತಿಭಾ ಪುರಸ್ಕಾರ; ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಗಳಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪೋಷಕ ಸುಧೀರ್ ಪಡ್ಡಿಲ್ಲಾಯ ಸ್ವಾಗತಿಸಿದರು. ವಿವೇಕಾನಂದ ಸ್ನಾತಕೋತ್ತರ ವಿಭಾಗದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಪೋಷಕ ಶಮಂತ್ ಬಿ.ಸಿ ರೋಡ್ ವಂದಿಸಿದರು. ನೃತ್ಯೋಪಾಸನಾ ಕಲಾಕೇಂದ್ರದ ಅಧ್ಯಕ್ಷ ಮಂಜುನಾಥ ಪಿ.ಎಸ್., ಅನಿತಾ ಮಯ್ಯ, ಕೃಷ್ಣ ಕುಮಾರ್, ಮಂಜುನಾಥ, ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಪತಿ, ಪತ್ರಕರ್ತ ಆತ್ಮಭೂಷಣ್, ನಯನಾ ಮನೋಹರ್, ಹರೀಶ್ ಶೆಟ್ಟಿ ಉಪ್ಪಿನಂಗಡಿ, ಕೃಷ್ಣ ಕುಮಾರ್ ಉಪ್ಪಿನಂಗಡಿ, ಸಂಧ್ಯಾ ಕೆ.ಎನ್ ಬಲ್ನಾಡು, ಸಂಜೀವ ರಂಜನ್ ಹಾಗೂ ಜಯಮಾಲ ವಿ.ಎನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಗೂ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ನಡೆಯಿತು. ನಟುವಾಂಗದಲ್ಲಿ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಸಂತ ಕುಮಾರ್ ಗೋಸಾಡ, ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ಗೀತೇಶ್ ನೀಲೇಶ್ವರ, ಕೊಳಲುನಲ್ಲಿ ರಾಜ್ ಗೋಪಾಲ್ ಕಾಞಂಗಾಡ್, ಪ್ರಸಾದನದಲ್ಲಿ ವಿಘ್ನೇಶ್ ವಿಶ್ವಕರ್ಮ ಸಹಕರಿಸಿದರು.