- ಪಾಲ್ತಾಡಿ ಗ್ರಾಮದ ಹೋರಾಟಕ್ಕೆ ಕಾರ್ಮಿಕ ಸಂಘಟನೆ ಬೆಂಬಲ – ಬಿ.ಎಮ್ ಭಟ್
- ಚುನಾವಣೆ ಬಹಿಷ್ಕಾರಿಸುವ ಎಚ್ಚರಿಕೆ – ಪಿ.ಎಲ್.ರಘುನಾಥ ರೈ
- ಜಯ ಸಿಗುವ ತನಕ ಹೋರಾಟ ಕೈಬಿಡುವುದಿಲ್ಲ – ವಿಶ್ವನಾಥ ರೈ
ಪುತ್ತೂರು: ಪುತ್ತೂರು ತಾಲೂಕು ವಿಭಾಗವಾಗಿ ಕಡಬ ತಾಲೂಕು ಪ್ರತ್ಯೇಕ ರಚನೆ ಆದಾಗ ಕಡಬಕ್ಕೆ ದೂರದಲ್ಲಿರುವ ಪುತ್ತೂರಿಗೆ ಹತ್ತಿರ ಇರುವ ಪಾಲ್ತಾಡಿ ಗ್ರಾಮವನ್ನು ಕಡಬಕ್ಕೆ ಸೇರ್ಪಡೆ ಮಾಡಿರುವುದನ್ನು ಕೈಬಿಟ್ಟು ಪುತ್ತೂರು ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಿ ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಎದುರಿನ ಮಂಗಲಪಾಂಡೆ ಚೌಕದ ಎದುರು ಪ್ರತಿಭಟನೆ ನಡೆಯಿತು.
ಪಾಲ್ತಾಡಿ ಗ್ರಾಮದ ಹೋರಾಟಕ್ಕೆ ಕಾರ್ಮಿಕ ಸಂಘಟನೆ ಬೆಂಬಲ:
ಕರ್ನಾಟಕ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಅವರು ಮಾತನಾಡಿ ರಾಷ್ಟ್ರಧ್ವಜ ಹಿಡಿದು ನ್ಯಾಯ ಕೇಳುವುದಾದರೆ ಅದು ಅತ್ಯಂತಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ ಎಂದರ್ಥ. ರಾಜಕೀಯ ಪಕ್ಷ, ಧರ್ಮದ ವಿಚಾರದಲ್ಲಿ ಪ್ರತಿಭಟನೆ ಸೀಮಿತವಾಗಿರುತ್ತದೆ. ಆದರೆ ಇಡಿ ಊರಿಗೆ ನ್ಯಾಯ ಸಿಗುವ ಹೋರಾಟ ಸೀಮಿತವಲ್ಲ ಎಂದ ಅವರು ಎಲ್ಲರ ನೋವನ್ನು ಬಲ್ಲವನಾದರೆ ಗೆಲ್ಲುವೆನು ನೀನು ಜಗದಲ್ಲಿ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಎಲ್ಲರಿಗೂ ಸ್ವಾತಂತ್ರ್ಯವಿದೆ. ಇನ್ನೊಬ್ಬರಿಗೆ ತೊಂದರೆ ಕೊಡುವ ಸ್ವಾತಂತ್ರ್ಯವಿಲ್ಲ. ಸಂವಿಧಾನ ಎಲ್ಲಾ ರೀತಿಯ ಹಕ್ಕು ಕೊಟ್ಟಾಗ ನಮ್ಮ ಬದುಕಿನ ನೆಮ್ಮದಿಗಾಗಿ ಗ್ರಾ.ಪಂ ಆಡಳಿತ ಇದೆ. ಇಲ್ಲಿ ಜನರ ಪರವಾಗಿ ಆಡಳಿತ ನಡೆಯಬೇಕು. ಗ್ರಾಮಸ್ಥರು ಗ್ರಾಮದ ಶಾಸಕರಿದ್ದಂತೆ. ಅವರು ನಿರ್ಣಯ ಮಾಡಿರುವುದನ್ನು ವಿರೋಧ ಮಾಡುವ ಕೆಲಸ ಸರಕಾರಕ್ಕೆ ಇಲ್ಲ. ಆದರೆ ಇವತ್ತು ಗ್ರಾಮ ಸಭೆಯಲ್ಲಿ ತೀರ್ಮಾನ ಆದರೂ ಸರಕಾರದಿಂದ ನ್ಯಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲ್ತಾಡಿಯ ಗ್ರಾಮದ ಹೋರಾಟಕ್ಕೆ ಕಾರ್ಮಿಕ ಸಂಘಟನೆ ಬೆಂಬಲವಿದೆ ಎಂದರು.
ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ:
ಪಾಲ್ತಾಡಿ ಗ್ರಾ.ಪಂ ಮಾಜಿ ಚೇಯರ್‌ಮ್ಯಾನ್ ಪಿ.ಎಲ್.ರಘುನಾಥ ರೈ ಅವರು ಮಾತನಾಡಿ ನಮಗೇನಿದ್ದರೂ ವ್ಯವಹಾರ ಮತ್ತು ಇತರ ಕೆಲಸಕ್ಕೆ ಪುತ್ತೂರು ಹತ್ತಿರ. ಇದೀಗ ನಮಗೆ ಸೊಸೈಟಿ ಕೊಳ್ತಿಗೆ. ಅದು ಪುತ್ತೂರು ತಾಲೂಕಿನಲ್ಲಿದೆ. ಎರಡು ತಾಲೂಕಿನಲ್ಲಿ ಬೇರೆ ಬೇರೆ ವ್ಯವಹಾರ ಹಾಗಾಗಿ ಪಾಲ್ತಾಡಿ ಗ್ರಾಮವನ್ನು ಕಡಬಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ನಾವೆಲ್ಲ ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ರಾಜ್ಯ ಸರಕಾರ ಇದಕ್ಕೆ ಸರಿಯಾದ ನ್ಯಾಯಕೊಟ್ಟು ನಮ್ಮ ಗ್ರಾಮವನ್ನು ಪುತ್ತೂರು ತಾಲೂಕಿಗೆ ಸೇರಿಸಬೇಕು. ಒಂದು ವೇಳೆ ಇದನ್ನು ರಾಜ್ಯ ಸರಕಾರ ಮಾಡದಿದ್ದರೆ ಮುಂದಿನ ಚುನಾವಣೆಯನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಯ ಸಿಗುವ ತನಕ ಹೋರಾಟ ಕೈಬಿಡುವುದಿಲ್ಲ:
ಪಾಲ್ತಾಡಿಯ ವಿಶ್ವನಾಥ ರೈ ಪಾಲ್ತಾಡಿ ಅವರು ಮಾತನಾಡಿ ಹೋರಾಟವನ್ನು ಈ ಹಿಂದೆಯೂ ನಾವು ಮಾಡಿದ್ದೆವು. ಆಗ ನಾವು ಕೋರ್ಟ್ ತನಕ ಹೋಗಿದ್ದರೂ ಯಾರೂ ನಮ್ಮ ಕಷ್ಟವನ್ನು ಕೇಳಿಲ್ಲ. ಕೋರ್ಟುನಲ್ಲಿ ನಮಗೆ ಜಯ ಸಿಗಲಿಲ್ಲ. ಶಾಸಕರಿಗೂ ಮಾಹಿತಿ ನೀಡಿದರೂ ಪ್ರಯೋಜವಾಗಿಲ್ಲ. ಕೊಠಡಿಯಲ್ಲಿ ಕೂತು ನಕ್ಷೆಗೆ ಸಹಿ ಹಾಕುವ ಮೂಲಕ ಇದೊಂದು ಅವೈಜ್ಞಾನಿಕ ವ್ಯವಸ್ಥೆ ಅಗಿದೆ. ನಾವು ಕಡಬಕ್ಕೆ ಹೋಗಿ ಬರಬೇಕಾದರೆ ಒಂದು ದಿನ ಪೂರ್ಣ ವ್ಯಯಿಸಬೇಕಾಗುತ್ತದೆ. ಆದರೆ ಈಗ ನಾವು ಜಯ ಸಿಗುವ ತನಕ ಹೋರಾಟ ಮಾಡುವುದೆಂದು ನಿರ್ಧಾರ ಮಾಡಿದ್ದೇವೆ. ನಾವು ಪಡುವ ಕಷ್ಟವನ್ನು ನಮ್ಮ ಮಕ್ಕಳು ಅನುಭವಿಸಬಾರದು ಹಾಗಾಗಿ ನೀವೆಲ್ಲ ಒಕ್ಕೊರಲಿನಿಂದ ನಮಗೆ ಕಡಬ ಬೇಡ ಪುತ್ತೂರು ತಾಲೂಕು ಆಗಬೇಕೆಂದು ಹೋರಾಟ ಮಾಡಬೇಕೆಂದರು.
ಹೋರಾಟ ಸಮಿತಿ ಅಧ್ಯಕ್ಷ ವೆಂಕಟ್ರಮಣ ಗೌಡ ಸ್ವಾಗತಿಸಿದರು. ದಲಿತ ಹಕ್ಕು ರಕ್ಷಣಾ ಸಮಿತಿ ಸಂಚಾಲಕಿ ಈಶ್ವರಿ ವಂದಿಸಿದರು. ಹೋರಾಟ ಸಮಿತಿ ಕಾರ್ಯದರ್ಶಿ ಯಶೋಧಾ, ಪುಷ್ಪ, ದಲಿತ ಮುಖಂಡ ಬಾಬು ಬಿ.ಕೆ ಪಾಲ್ತಾಡಿ, ಗ್ರಾ.ಪಂ ಮಾಜಿ ಸದಸ್ಯ ಜಯರಾಮ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.