





ಉಗ್ರ ಹೋರಾಟದ ಎಚ್ಚರಿಕೆ


ಪುತ್ತೂರು: ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಯವರ ವಿರುದ್ಧದ ಮಾನಹಾನಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯಿಂದ ಮನವಿ ಸಲ್ಲಿಸಲಾಗಿದೆ.





ಪುತ್ತೂರು ಡಿವೈಎಸ್ಪಿ ಕಛೇರಿ ಮೂಲಕ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದ್ದು ‘ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸುರತ್ಕಲ್ನ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿಯವರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದ ವೀಡಿಯೋ ಫೋಟೋಗಳ ಮಾಧ್ಯಮ ತುಣಕುಗಳನ್ನು ಫೇಸ್ಬುಕ್ನಲ್ಲಿ ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ ಭಟ್ ಎಂಬವರು ಲೈಂಗಿಕ ಸಂಜ್ಞೆಗಳ ಭಾಷೆಯನ್ನು ಬಳಸಿ ಪ್ರತಿಭಾ ಕುಳಾಯಿಯವರನ್ನು ನಿಂದಿಸಲಾಗಿದೆ. ಲೈಂಗಿಕ ಕಿರುಕುಳಕ್ಕೆ ಸಮಾನವಾಗಿರುವ ಈ ರೀತಿಯ ಬಹಿರಂಗ ದಾಳಿ ಮಹಿಳಾ ಸಮುದಾಯಕ್ಕೆ ಮಾಡಿದ ದ್ರೋಹವಾಗಿರುತ್ತದೆ. ಸಮಾಜದಲ್ಲಿ ಅಭಿಪ್ರಾಯ ಭೇದಗಳಿರುವುದು ಸರ್ವೇ ಸಾಮಾನ್ಯ. ನಮ್ಮದು ಪ್ರಜಾಪ್ರಭುತ್ವ ದೇಶ. ಆದರೆ ಒಬ್ಬ ಮಹಿಳೆಯ ವಿರುದ್ಧ ಮಾನಹಾನಿಕರ ಭಾಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ನಮ್ಮ ಸಮುದಾಯದ ಪ್ರಬಲ ಹೋರಾಟಗಾರ್ತಿ ಪ್ರತಿಭಾ ಕುಳಾಯಿಯವರ ತೇಜೋವಧೆ ಮಾಡುವುದನ್ನು ನಮ್ಮ ಸಮುದಾಯ ಸಹಿಸುವುದಿಲ್ಲ. ಈ ವಿಚಾರದಲ್ಲಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಈ ರೀತಿಯ ಅನಾಗರಿಕ ನಡವಳಿಕೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ತಪ್ಪಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಿದ್ದೇವೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಸಂಚಾಲಕಿ ವಿಶಾಲಾಕ್ಷಿ ಬನ್ನೂರು, ಮಾಜಿ ಕೋಶಾಧಿಕಾರಿ ಸುಜಾತಾ, ಕಾರ್ಯದರ್ಶಿ ಚಿದಾನಂದ ಸುವರ್ಣ, ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಮತ್ತು ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಮನವಿ ನೀಡುವ ವೇಳೆ ಉಪಸ್ಥಿತರಿದ್ದರು.









