




ಉಪ್ಪಿನಂಗಡಿ: ವಿವಾಹಿತ ಮಹಿಳೆಯೋರ್ವರ ಮೇಲೆ ಕಳೆದ 18 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.





34ನೇ ನೆಕ್ಕಿಲಾಡಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಯ ನಿವಾಸಿ ಧರ್ಮಣ್ಣ ಎಂಬವರ ಪುತ್ರ ಗಿರೀಶ್ ಎಂಬಾತ ತನ್ನ ಸ್ನೇಹಿತ, 34 ನೆಕ್ಕಿಲಾಡಿಯ ಬೀತಲಪ್ಪು ನಿವಾಸಿಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಹಿತೇಶ್ ಎಂಬಾತನೊಂದಿಗೆ ಕೂಡಿಕೊಂಡು 29.8.2004ರಂದು ಕರಾಯ ಮೂಲದ ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಆಕೆಯ ಪತಿ ಹಾಗೂ ಮಕ್ಕಳ ಎದುರಿನಲ್ಲೇ ಈಕೆಯನ್ನು ಅಮಾನುಷವಾಗಿ ಅತ್ಯಾಚಾರ ನಡೆಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಆರೋಪಿ ಗಿರೀಶ್ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದನು. ಇದೀಗ ಆತ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯಾಗಿದ್ದುಕೊಂಡು ತಲೆಮರೆಸಿಕೊಂಡಿದ್ದ ಹಿತೇಶ್ ಎಂಬಾತನನ್ನು 2018ರ ಮಾರ್ಚ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆತನ ವಿಚಾರಣೆಯ ಬಳಿಕ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಈ ಪ್ರಕರಣದಿಂದ ಆತನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಸರಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದಿನ್ನೂ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಈ ಪ್ರಕರಣದ ಮತ್ತೋರ್ವ ಆರೋಪಿ ಗಿರೀಶ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.












