ಬೆಂಗಳೂರು: ಕೃಷಿ ಮೇಳಕ್ಕೆ ರಾಜ್ಯಪಾಲ ಚಾಲನೆ

0

ಕೃಷಿಯಲ್ಲಿ ನವೋದ್ಯಮ ಈ ಬಾರಿಯ ಧ್ಯೇಯ | ಮೇಳದಲ್ಲಿ ಪುತ್ತೂರಿನ ಮಳಿಗೆಗಳೂ ಭಾಗಿ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ’ಕೃಷಿಯಲ್ಲಿ ನವೋದ್ಯಮ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜನೆಗೊಂಡ ಕೃಷಿ ಮೇಳ 2022-23ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಮ್ಮ ಆಲೋಚನೆಗಳಿಗೆ ತಕ್ಕಂತೆ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿವೆ. ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ಪಾದನೆ ಹಾಗೂ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದ ಅವರು, ಈ ಕೃಷಿ ಮೇಳ ದೇಶದ ಸ್ಟಾರ್ಟಪ್ ಉದ್ಯಮಗಳಿಗೆ ಒತ್ತು ನೀಡಿದಂತಾಗುತ್ತದೆ. ಕೃಷಿಯಲ್ಲಿ ಹೈನುಗಾರಿಕೆ, ತೋಟಗಾರಿಕೆ, ಹತ್ತು ಹಲವು ರೈತ ಉಪಯೋಗಿ ವಸ್ತುಗಳ ಪ್ರಯೋಜನಗಳನ್ನು ರೈತರು ಪಡೆದುಕೊಂಡು ಉತ್ತಮ ಆದಾಯದ ನಿರೀಕ್ಷಿತ ಮಟ್ಟಕ್ಕೆ ತಲುಪಲು ಸಹಾಯ ಮಾಡುವುದರ ಜೊತೆಗೆ ಮತ್ತೊಬ್ಬರಿಗೆ ಪ್ರೇರಣೆ ಆಗಲಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.

ಕೃಷಿಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಎಂದರೆ ಎಲ್ಲರೂ ಇಸ್ರೇಲ್ ಮಾದರಿ ಎನ್ನುತ್ತಾರೆ. ನಮ್ಮ ಕೋಲಾರ ಮಾದರಿ ಕೃಷಿಯನ್ನು ರಾಜ್ಯಾದ್ಯಂತ ಅಳವಡಿಸಿಕೊಂಡರೆ ಉತ್ಪಾದನೆ ದ್ವಿಗುಣ ಗೊಳಿಸಬಹುದು ಎಂದ ಅವರು, ಆಧುನಿಕ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಅಗ್ರಿಕಲ್ಚರ್ 7 ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಆರಂಭಿಸಲಾಗುವುದು. ರೈತರ ಮಕ್ಕಳು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ರೈತ ನಿಧಿ ಮೂಲಕ 2ರಿಂದ 11 ಸಾವಿರ ರೂ. ಗಳನ್ನು ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮೇಳದ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಮೇಳದಲ್ಲಿ…: ಕೃಷಿ, ಡ್ರೋಣ್‌ಗಳ ಬಳಕೆ, ಸ್ವಯಂಚಾಲಿತ ಯಂತ್ರೋಪಕರಣಗಳು, ವಿವಿಧ ತಳಿಗಳ ನಾಟಿಕೋಳಿ ಪ್ರದರ್ಶನ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳ ಪ್ರದರ್ಶನ, ಕೃಷಿ, ತೋಟಗಾರಿಕೆ, ಪಶುಸಂಗೋಪನೆಗಳ ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಕೃಷಿ ಮೇಳದಲ್ಲಿ ವೀಕ್ಷಣೆಗೆ ಇಡಲಾಗಿತ್ತು.

ಪ್ರಶಸ್ತಿ ಪ್ರದಾನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಗೋಪಾಲ ಗೌಡ, .ಎಚ್.ಎಂ.ಮರಿಗೌಡ ಪ್ರಶಸ್ತಿಯನ್ನು ನವಿಕ್ರಮ್, ಕೆನರಾ ಬ್ಯಾಂಕ್ ಪ್ರಾಯೋಜಿತ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಸಿ.ಪಿ.ಕೃಷ್ಣ, ಅತ್ಯುತ್ತಮ ರೈತಮಹಿಳೆ ಪ್ರಶಸ್ತಿಯನ್ನು ಎಂ.ಕವಿತಾ, ಡಾ.ಆರ್.ದ್ವಾರಕೀನಾಥ್ ಪ್ರಶಸ್ತಿಯನ್ನು ಎಂ.ಟಿ.ಮುನೇಗೌಡ, ಡಾ.ಆರ್.ದ್ವಾರಕೀನಾಥ್ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯನ್ನು ರಾಜೇಗೌಡ ಅವರಿಗೆ ಪ್ರದಾನ ಮಾಡಲಾಯಿತು.

ಬಿಡುಗಡೆ: 9 ಹೊಸ ತಳಿಗಳು ಸೇರಿದಂತೆ 38 ತಂತ್ರಜ್ಞಾನಗಳನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಮೇಳ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಸಾಧಕರಿಗೆ ಸನ್ಮಾನ: ಮಧ್ಯಾಹ್ನ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ರಾಜ್ಯ ಸರಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಡಿಕೇರಿಯ ಪೊನ್ನಂಪೇಟೆ ನಿವಾಸಿ, ಪ್ರಗತಿಪರ ಕೃಷಿಕ ಗಣೇಶ್ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಬಳಿಕ ಚಂದ್ರಕಲಾ, ವೆಂಕಮ್ಮ, ಕವಿತಾ, ಮಹೇಶ್, ಕೆ.ಆರ್. ರಮೇಶ್, ಕೇಶವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ತಾಲೂಕುವಾರು ಯುವ ರೈತ ಪ್ರಶಸ್ತಿಯನ್ನು ತಾಲೂಕಿನ ಸಾಧಕ ಕೃಷಿಕರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಕೃಷಿ ವಿವಿ ಉಪಕುಲಪತಿ ಡಾ. ಹನುಮಂತಪ್ಪ, ಧಾರವಾಡ ವಿವಿ ಉಪಕುಲಪತಿ ಡಾ| ಬಿ.ಸಿ. ಪಾಟೀಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| ಎಸ್. ಶ್ರೀವಾತ್ಸವ್, ನಿವೃತ್ತ ಉಪಕುಲಪತಿಗಳಾದ ಡಾ| ರಾಜೇಂದ್ರ ಪ್ರಸಾದ್, ಡಾ| ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.

ಮೇಳದಲ್ಲಿ ಸುದ್ದಿ ಸ್ಟಾಲ್

ಜಿಕೆವಿಕೆಯ ಕೃಷಿ ಮೇಳದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ, ವೆಬ್ ಸೈಟ್ ಹಾಗೂ ಸುದ್ದಿ ಮಾಧ್ಯಮದ ಸ್ಟಾಲ್ ಹಾಕಲಾಗಿದೆ. ಇಲ್ಲಿ ಸುದ್ದಿ ಕೃಷಿ ಕೇಂದ್ರದ ಮಾಹಿತಿಯನ್ನು ಹಾಕಲಾಗಿದೆ. ಜ್ಯಾಕ್ ಅನಿಲ್ ಅವರ ಮಳಿಗೆ ಸೇರಿದಂತೆ ಜಿಲ್ಲೆಯ ಕೆಲ ಮಳಿಗೆಗಳೂ ಮೇಳದಲ್ಲಿ ಪಾಲ್ಗೊಂಡು, ಗಮನ ಸೆಳೆಯಿತು.

ಮೇಳದಲ್ಲಿ ಪಂಜುರ್ಲಿ ದೈವದ ಮೂರ್ತಿ

ಕಾಂತಾರ ಸಿನಿಮಾದ ಬಳಿಕ ಪಂಜುರ್ಲಿ ದೈವ ಇನ್ನಿಲ್ಲದ ಪ್ರಚಾರ ಪಡೆದುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಕೃಷಿ ಮೇಳದಲ್ಲಿ ಪಂಜುರ್ಲಿ ದೈವದ ಮೂರ್ತಿಯೊಂದು ಗಮನ ಸೆಳೆಯುತ್ತಿದೆ. ಕೃಷಿ ವಿಶ್ವವಿದ್ಯಾಲಯದ ರೇಷ್ಮೆ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳು ರೂಪು ನೀಡಿದ್ದಾರೆ. ರೇಷ್ಮೆ ಗೂಡುಗಳನ್ನು ಬಳಸಿಕೊಂಡು ಅದಕ್ಕೆ ಒಂದಷ್ಟು ತೆಂಗಿನ ಗರಿಯನ್ನು ಪೋಣಿಸಿ, ದೈವದ ರೂಪ ನೀಡಲಾಗಿದೆ. ವಿಶಿಷ್ಟ ಎಂದರೆ, ದೈವದ ದೇಹ, ಮುಖವನ್ನು ಕೂಡ ರೇಷ್ಮೆ ಗೈಡುಗಳಿಂದಲೇ ತಯಾರಿಸಿರುವುದು.

ಕೃಷಿಯಲ್ಲಿ ನವೋದ್ಯಮ ಎಂಬ ಧ್ಯೇಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಲಾಗಿದೆ. 3 ದಿನ ನಡೆಯುವ ಕೃಷಿ ಮೇಳದಲ್ಲಿ ಕೃಷಿಕರಿಗೆ ಉಪಯುಕ್ತ ಆಗಬೇಕು ಎಂಬ ನಿಟ್ಟಿನಲ್ಲಿ ಚರ್ಚಾಗೋಷ್ಟಿಯನ್ನು ಏರ್ಪಡಿಸಲಾಗಿದೆ. ಕೃಷಿಕರು ಪಾಲ್ಗೊಂಡು, ನೇರವಾಗಿ ತಮ್ಮ ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಸುದ್ದಿ ಪತ್ರಿಕೆ, ಚಾನೆಲ್ ಮೂಲಕ ಕೃಷಿ ಮೇಳದ ಸುದ್ದಿ ಪ್ರಸಾರಗೊಳ್ಳುತ್ತಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ದ.ಕ.ದ ರೈತರು ಭಾಗವಹಿಸಿ.

ಡಾ| ಎಸ್.ವಿ. ಸುರೇಶ್, ಉಪಕುಲಪತಿ, ಬೆಂಗಳೂರು ಕೃಷಿ ವಿವಿ

ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಕೃಷಿ ಮೇಳವನ್ನು ಜಿಕೆವಿಕೆ ಕ್ಯಾಂಪಸಿನಲ್ಲಿ ಏರ್ಪಡಿಸಲಾಗಿದೆ. ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೃಷಿ ಎಂದರೆ ಒಂದು ಬ್ರಹ್ಮಾಂಡದಂತೆ. ಇಲ್ಲಿ ರೈತರ ಸಂದೇಹಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತದೆ.
 

– ಡಾ| ಕೆ. ನಾರಾಯಣ ಗೌಡ, ವಿಸ್ತರಣಾ ನಿರ್ದೇಶಕ, ಬೆಂಗಳೂರು ಕೃಷಿ ವಿವಿ

LEAVE A REPLY

Please enter your comment!
Please enter your name here