ಗಾಂಧಿಕಟ್ಟೆ ಪಕ್ಕದ ಆಶ್ವತ್ಥ ಮರದಲ್ಲಿ ರಾತ್ರಿ ಹೊಳೆಯುವ ಮುತ್ತಿನ ಕೊಕ್ಕರೆಗಳು
ಪುತ್ತೂರು:ನಿಸರ್ಗದ ಸೌಂದರ್ಯವೇ ಹಾಗೆ ಕಂಡಷ್ಟು ಕಣ್ತುಂಬಿಕೊಳ್ಳಬೇಕು, ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಅನ್ನೋ ಬಯಕೆ ಮೂಡಿಸುತ್ತೆ. ಹೀಗೆ ಮನಕ್ಕೆ ಮುದ ನೀಡುವ ಪ್ರಕೃತಿ ಸೌಂದರ್ಯಕ್ಕೆ ಚಳಿಗಾಲ ಮತ್ತಷ್ಟು ಮೆರುಗು ನೀಡುತ್ತಾ ಬಂದಿದೆ.ಪುತ್ತೂರಿನ ಐತಿಹಾಸಿಕ ಗಾಂಧಿಕಟ್ಟೆಯ ಬಳಿಯ ಅಶ್ವತ್ಥ ಮರದಲ್ಲಿ ಆಶ್ರಯ ಪಡೆದುಕೊಂಡಿರುವ ಅನೇಕ ಆಫ್ರಿಕನ್ ಕೊಕ್ಕರೆಗಳು ರಾತ್ರಿ ಹೊತ್ತು ಮರವನ್ನು ಮುತ್ತಿನಿಂದ ಪೋಣಿಸಿದ ರೀತಿಯಲ್ಲಿ ಕಾಣುತ್ತಿವೆ.ಮರ ತನ್ನ ಹಳೆಯ ಎಲೆಗಳನ್ನು ಕಳಚಿದಾಗ ಈ ರೀತಿಯ ಮುತ್ತಿನ ಸೌಂದರ್ಯ ಕಾಣುತ್ತಿದ್ದು ಇದನ್ನು ನೋಡಲು ಹಲವು ಮಂದಿ ಪಕ್ಷಿ ಪ್ರಿಯರು ಬರುತ್ತಿದ್ದಾರೆ.
ಪ್ರತಿ ವರ್ಷ ಪುತ್ತೂರಿನಲ್ಲಿರುವ ಗಾಂಧಿಕಟ್ಟೆಯ ಬಳಿ ವಂಶೋತ್ಪತ್ತಿಗಾಗಿ ರೀಪ್ ಎಗ್ರೆಟ್ ಮತ್ತು ಎಗ್ರೆಟಾ ಗುಲಾರಿಸ್ ಎಂಬ ಹೆಸರಿನ ಆಫ್ರಿಕಾ ಮೂಲದ ಕೊಕ್ಕರೆಗಳು ಕಳೆದ ಹಲವು ದಶಕಗಳಿಂದ ಪ್ರತೀ ವರ್ಷ ಮಳೆಗಾಲದಲ್ಲಿ ಪುತ್ತೂರಿಗೆ ವಲಸೆ ಬಂದು ಇಲ್ಲಿನ ಬೃಹತ್ ಮರಗಳಲ್ಲಿ ಆಸರೆ ಪಡೆಯುತ್ತವೆ. ಇಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿ, ಚಳಿಗಾಲದ ಹೊತ್ತಿಗೆ ಇಲ್ಲಿಂದ ಮತ್ತೆ ವಲಸೆ ಹೋಗುತ್ತವೆ. ಗಾಂಧಿಕಟ್ಟೆ, ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಪೂಜಾ ಕಟ್ಟೆ ಮತ್ತು ಅಶ್ವತ್ಥ ಮರದ ಕಟ್ಟೆ ಎಲ್ಲವೂ ಒಂದೇ ಕಡೆ ಇದ್ದು, ಎಲ್ಲದಕ್ಕೂ ಮರವೇ ಆಸರೆಯಾಗಿದೆ.ಈ ಮರದ ಮೇಲೆ ನೂರಾರು ಕೊಕ್ಕರೆಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿವೆ. ನೀರು ಕಾಗೆ ಮತ್ತು ಕೊಕ್ಕರೆ ಇದರಲ್ಲಿ ಸಮಪ್ರಮಾಣದಲ್ಲಿವೆ. ನೀರು ಕಾಗೆ ಕಪ್ಪು ಬಣ್ಣದಾಗಿದ್ದರಿಂದ ಹಗಲು ಹೊತ್ತು ನೀರು ಕಾಗೆಗಳು ಕಂಡರೆ ರಾತ್ರಿ ಹೊತ್ತು ಬಿಳಿ ಕೊಕ್ಕರೆಗಳು ಕಾಣುತ್ತವೆ. ರಾತ್ರಿ ಹೊತ್ತಿನ ಬಿಳಿ ಬಣ್ಣದ ಕೊಕ್ಕರೆಗಳು ಮರವನ್ನು ಪೂರ್ಣ ರೀತಿಯಲ್ಲಿ ಮುತ್ತಿನಿಂದ ಪೋಣಿಸಿದಂತೆ ಕಾಣುತ್ತಿವೆ.