ನೆಲ್ಯಾಡಿ ಪುಚ್ಚೇರಿಗೆ ಕೊನೆಗೂ ಸಿಕ್ತು ರಸ್ತೆ ಸಂಪರ್ಕ..!

0

ಗ್ರಾ.ಪಂ.ಸದಸ್ಯ ಆನಂದ ಗೌಡರ ಮುತುವರ್ಜಿ | ಬಿಜೆಪಿ ಮುಖಂಡರಿಂದ ಕಾಂಕ್ರಿಟೀಕರಣದ ಭರವಸೆ

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಗ್ರಾಮೀಣ ಪ್ರದೇಶದ ಹಳ್ಳಿಯ ಮೂಲೆಯಲ್ಲಿರುವ ಮನೆಗಳಿಗೆ ಇನ್ನೂ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಹಳ್ಳಿಯ ಜನರಿಗೆ ಚುನಾವಣೆ ಸಂದರ್ಭದಲ್ಲಿ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ‍್ಯ ಕಲ್ಪಿಸುವ ಭರವಸೆ ಸಿಕ್ಕಿದರೂ ಈಡೇರುವುದು ಅಷ್ಟಕ್ಕಷ್ಟೆ. ಇದಕ್ಕೆ ನಿದರ್ಶನ ಎಂಬಂತೆ ನೆಲ್ಯಾಡಿ ಗ್ರಾಮದ ಮೂಲೆಯಲ್ಲಿರುವ ತೀರಾ ಹಳ್ಳಿ ಪ್ರದೇಶವಾಗಿರುವ ಪುಚ್ಚೇರಿಯ ಐದಾರು ಕುಟುಂಬಗಳಿಗೆ ಈ ತನಕವೂ ರಸ್ತೆ ಸಂಪರ್ಕವೇ ಇಲ್ಲ. 25 ವರ್ಷಗಳಿಂದ ರಸ್ತೆ ಸಂಪರ್ಕಕ್ಕೆ ಇಲ್ಲಿನ ಗ್ರಾಮಸ್ಥರು ಮನವಿ ಮಾಡುತ್ತಲೇ ಇದ್ದರು. ಈ ನಡುವೆ ತನ್ನ ವಾರ್ಡ್‌ನ ಗ್ರಾಮಸ್ಥರ ಸಂಕಷ್ಟ ಅರಿತ ನೆಲ್ಯಾಡಿ ಗ್ರಾ.ಪಂ.ಸದಸ್ಯ ಪಿಲವೂರು ಆನಂದ ಗೌಡರವರು ಮುತುವರ್ಜಿ ವಹಿಸಿ ಗುಡ್ಡ, ತೋಟದ ಮಧ್ಯೆ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸಾಥ್ ನೀಡಿದ ಬಿಜೆಪಿ ಮುಖಂಡರು ರಸ್ತೆಗೆ ಕಾಂಕ್ರಿಟೀಕರಣಕ್ಕೆ ಅನುದಾನ ತರಿಸುವ ಭರವಸೆ ನೀಡಿದ್ದಾರೆ.

ಬಹುವರ್ಷಗಳ ಬೇಡಿಕೆ: ನೆಲ್ಯಾಡಿ ಗ್ರಾಮದ ಪುಚ್ಚೇರಿ ಲೋಕಯ್ಯ ಗೌಡ, ಕಮಲ ನಾಯ್ಕ ಕೋಡಿಜಾಲು, ಉಮೇಶ ಗೌಡ ಪುಚ್ಚೇರಿ, ಗೋಜ ಮುಗೇರ ಜಾರಂಗೇಲು ಅವರ ಮನೆಗೆ ರಸ್ತೆ ಸಂಪರ್ಕವೇ ಇಲ್ಲ. ಇವರು ಮನೆ ನಿರ್ಮಾಣ ಸಂದರ್ಭದಲ್ಲಿ ಬಹಳಷ್ಟು ತೊಂದರೆ ಅನುಭವಿಸಿದರು. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡೇ ಹೋಗುತ್ತಿದ್ದರು. ಕೃಷಿ ಬೆಳೆಗಳನ್ನು ಪೇಟೆಗೆ ಕೊಂಡೊಯ್ಯಲು, ಮನೆಗೆ ಏನೇ ತರಬೇಕಾದರೂ ತಲೆಯಲ್ಲಿ ಹೊತ್ತುಕೊಂಡೇ ಸಾಗ ಬೇಕಾಗಿತ್ತು. ಈ ಕುಟುಂಬಗಳು ನಮಗೆ ರಸ್ತೆ ಸಂಪರ್ಕ ಮಾಡಿಕೊಡಿ ಎಂದು ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರು, ಸಂಸದರು, ಸಚಿವರ ತನಕವೂ ಮನವಿ ಮಾಡುತ್ತಲೇ ಇದ್ದರು. ಚುನಾವಣೆ ಸಂದರ್ಭದಲ್ಲಿ ಭರವಸೆ ಸಿಕ್ಕಿದರೂ ಈ ತನಕವೂ ಬೇಡಿಕೆ ಈಡೇರಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ರಸ್ತೆ ಸಂಪರ್ಕಕ್ಕೆ ಪ್ರಯತ್ನಿಸಿದ್ದರೂ ಈ ತನಕವೂ ರಸ್ತೆ ಸಂಪರ್ಕ ಆಗಿರಲಿಲ್ಲ.

ಗ್ರಾ.ಪಂ.ಸದಸ್ಯ ಆನಂದ ಗೌಡರ ಮುತುವರ್ಜಿ: ರಸ್ತೆ ಸಂಪರ್ಕದಿಂದ ವಂಚಿತ ತನ್ನ ವಾರ್ಡ್‌ನ ಪುಚ್ಚೇರಿಯ ಈ ಕುಟುಂಬಗಳ ಸಂಕಷ್ಟ ಅರಿತ ನೆಲ್ಯಾಡಿ ಗ್ರಾ.ಪಂ.ಸದಸ್ಯ ಪಿಲವೂರು ಆನಂದ ಗೌಡರವರು ಪುಚ್ಚೇರಿ ನಿವಾಸಿ ಶ್ರೀಮತಿ ವಿಮಲ ಕೊರಗಪ್ಪ ಗೌಡ, ಅವರ ಪುತ್ರರಾದ ದಾಮೋದರ ಗೌಡ, ಬಾಲಕೃಷ್ಣ ಗೌಡರ ಜೊತೆಗೆ ಮಾತುಕತೆ ನಡೆಸಿ ನೆಲ್ಯಾಡಿ-ಆಲಂಕಾರು ರಸ್ತೆಯ ಜಾರಂಗೇಲು ಎಂಬಲ್ಲಿಂದ ಶ್ರೀಮತಿ ವಿಮಲ ಕೊರಗಪ್ಪ ಗೌಡರವರ ಮನೆಗೆ ಹೋಗುವ ಖಾಸಗಿ ರಸ್ತೆ ಬಳಸಿಕೊಂಡು ಬಳಿಕ ಅವರದ್ದೇ ಗುಡ್ಡ ಜಾಗದ ಮೂಲಕ ಹೊಸದಾಗಿ ರಸ್ತೆ ನಿರ್ಮಾಣ ಮಾಡುವ ಕುರಿತು ಮಾತುಕತೆ ನಡೆಸಿದರು. ಇದಕ್ಕೆ ಆ ಮನೆಯವರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನ.೫ರಂದು ಜೆಸಿಬಿ ಮೂಲಕ ಹೊಸದಾಗಿ ರಸ್ತೆ ನಿರ್ಮಾಣ ಮಾಡಲಾಯಿತು. ಶ್ರೀಮತಿ ವಿಮಲ ಕೊರಗಪ್ಪ ಗೌಡರವರ ಜಾಗದ ಬಳಿಕ ಮುಂದೆ ಉಮೇಶ ಗೌಡ, ಗೋಜಮುಗೇರ, ಕಮಲ ಕೋಡಿಜಾಲು ಅವರ ತೋಟದ ಮೂಲಕ ರಸ್ತೆ ನಿರ್ಮಾಣ ಮಾಡಲಾಯಿತು. ಅಂದಾಜು 1 ಕಿ.ಮೀ. ಉದ್ದದ ಹೊಸ ರಸ್ತೆ ಮಾಡಲಾಯಿತು. ಈ ಮೂಲಕ ರಸ್ತೆ ಸಂಪರ್ಕವೇ ಇಲ್ಲದ ಪುಚ್ಚೇರಿ ಭಾಗದ ಮನೆಗಳಿಗೆ ಕೊನೆಗೂ ರಸ್ತೆ ಸಂಪರ್ಕ ಕಲ್ಪಿಸಲಾಯಿತು.

ಕಾಂಕ್ರಿಟೀಕರಣದ ಭರವಸೆ: ಹೊಸದಾಗಿ ರಸ್ತೆ ಸಂಪರ್ಕ ಕಲ್ಪಿಸುವ ಆನಂದ ಗೌಡರವರ ಪ್ರಯತ್ನಕ್ಕೆ ಸಾಥ್ ನೀಡಿದವರು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿಯವರು. ಇವರು ಸ್ಥಳಕ್ಕೆ ಭೇಟಿ ನೀಡಿ ಶ್ರೀಮತಿ ವಿಮಲ ಕೊರಗಪ್ಪ ಗೌಡರವರ ಕುಟುಂಬಸ್ಥರೊಂದಿಗೆ ಹಾಗೂ ರಸ್ತೆ ಸಂಪರ್ಕ ವಂಚಿತ ಮನೆಯವರೊಂದಿಗೆ ಮಾತುಕತೆ ನಡೆಸಿದ್ದರು. ಈ ಮನೆಗಳಿಗೆ ನೆಲ್ಯಾಡಿ-ಆಲಂಕಾರು ರಸ್ತೆಯ ಮಾದೇರಿ ಸಮೀಪದ ಜಾರಂಗೇಲು ಎಂಬಲ್ಲಿಂದ ಪುಚ್ಚೇರಿ ಶ್ರೀಮತಿ ವಿಮಲ ಕೊರಗಪ್ಪ ಗೌಡರವರ ಮನೆಗೆ ತೆರಳುವ ರಸ್ತೆಯ ಕಾಂಕ್ರಿಟೀಕರಣ ಹಾಗೂ ಹೊಸದಾಗಿ ನಿರ್ಮಾಣಗೊಂಡ ರಸ್ತೆಗೆ ಎಪಿಎಂಸಿ ಅನುದಾನದಲ್ಲಿ ಮೋರಿ ಅಳವಡಿಕೆಯ ಭರವಸೆಯನ್ನು ಬಿಜೆಪಿ ಮುಖಂಡರು ನೀಡಿದ್ದಾರೆ. ಒಟ್ಟಿನಲ್ಲಿ ರಸ್ತೆ ಸಂಪರ್ಕಕ್ಕೆ ಕಾಯುತ್ತಿದ್ದ ಪುಚ್ಚೇರಿಯ ಗ್ರಾಮಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕೊನೆಗೂ ಮನೆ ತನಕ ರಸ್ತೆ ಸಂಪರ್ಕ ಸಿಕ್ಕಿರುವುದು ಈ ಕುಟುಂಬಕ್ಕೆ ಸಂತಸ ತಂದಿದೆ

25 ವರ್ಷಗಳ ಬೇಡಿಕೆ ಈಡೇರಿದೆ

25 ವರ್ಷದಿಂದ ರಸ್ತೆ ವ್ಯವಸ್ಥೆ ಇರಲಿಲ್ಲ. ಈಗ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರುರವರು ಮಾತುಕತೆ ನಡೆಸಿ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ನಮ್ಮ ಬೇಡಿಕೆಯೊಂದು ಈಡೇರಿದೆ.

-ಪ್ರವೀಣ್ ಪುಚ್ಚೇರಿ, ಗ್ರಾಮಸ್ಥ

ರಸ್ತೆ ಇಲ್ಲದೆ ತೊಂದರೆಯಾಗಿತ್ತು

ಪುಚ್ಚೇರಿ, ಕೋಡಿಜಾಲುನ ಐದಾರು ಮನೆಯವರು ರಸ್ತೆ ಸಂಪರ್ಕ ಇರದೇ ಸಮಸ್ಯೆ ಅನುಭವಿಸುತ್ತಿದ್ದರು. ಇವರು ರಸ್ತೆ ಆಗಬೇಕೆಂಬ ಬೇಡಿಕೆ ಯಾವಾಗಲೂ ಸಲ್ಲಿಸುತ್ತಿದ್ದರು. ಈ ನಿಟ್ಟಿನಲ್ಲಿ ಪುಚ್ಚೇರಿಯ ಶ್ರೀಮತಿ ವಿಮಲಕೊರಗಪ್ಪ ಗೌಡ ಹಾಗೂ ಅವರ ಪುತ್ರರೊಂದಿಗೆ ಮಾತುಕತೆ ನಡೆಸಿದ್ದು ನಮ್ಮ ಮನವಿ ಮೇರೆಗೆ ಅವರು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪಕ್ಷದ ಮುಖಂಡರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ, ಭಾಸ್ಕರ ಗೌಡ, ಬಾಲಕೃಷ್ಣ ಬಾಣಜಾಲು, ರವಿಪ್ರಸಾದ್ ಶೆಟ್ಟಿಯವರು ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ತರಿಸುವ ಭರವಸೆ ನೀಡಿದ್ದಾರೆ. ಇವರೆಲ್ಲರಿಗೂ ಗ್ರಾ.ಪಂ.ಸದಸ್ಯನ ನೆಲೆಯಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ.

-ಆನಂದ ಗೌಡ ಪಿಲವೂರು
ಸದಸ್ಯರು, ಗ್ರಾ.ಪಂ.ನೆಲ್ಯಾಡಿ

LEAVE A REPLY

Please enter your comment!
Please enter your name here