ಎಸ್ಸಿ, ಎಸ್ಟಿಯವರಿಗೆ 10  ಸೆಂಟ್ಸ್ ಜಾಗ ಭೂ ಪರಿವರ್ತನೆಗೆ ಅವಕಾಶ ಸಿಕ್ಕಿರುವುದು ಕಾಂಗ್ರೆಸ್ ಹೋರಾಟಕ್ಕೆ ಸಂದ ಜಯ – ಎಸ್ಸಿ,ಎಸ್ಟಿ ಘಟಕದ ಪತ್ರಿಕಾಗೋಷ್ಠಿ

0

ಪುತ್ತೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರಕಾರದಿಂದ ಮಂಜೂರಾದ ಭೂಮಿ ಮತ್ತು ಪಟ್ಟಾ ಭೂಮಿಯಲ್ಲಿ 10 ಸೆಂಟ್ಸ್ ಭೂಪರಿವರ್ತನೆ ಮಾಡಲು ಸರಕಾರ ಅವಕಾಶ ನೀಡಿರುವುದು ಕಾಂಗ್ರೆಸ್ ಹೋರಾಟಕ್ಕೆ ಸಂದ ಜಯವಾಗಿದೆ. 2021ರ ಲ್ಲಿ ಬಿಜೆಪಿ ಸರಕಾರವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸ್ಥಳವನ್ನು ಭೂ ಪರಿವರ್ತನೆ ಮಾಡಲು ಸರಕಾರದ ಪೂರ್ವಾನುಮತಿ ಪಡೆಯಬೇಕಾಗಿತ್ತು. ಆದರೆ ನಮ್ಮ ಹೋರಾಟಕ್ಕೆ ಸರಕಾರ ಭೂ ಪರಿವರ್ತನೆಯನ್ನು ಸರಳೀಕರಣ ಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಅವರು ಹೇಳುವ ಮೂಲಕ ಬಿಜೆಪಿ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸ್ಥಳ ಭೂ ಪರಿವರ್ತನೆ ಆಗಬೇಕಿದ್ದರೆ ಸರಕಾರದಿಂದ ಪೂರ್ವಾನುಮತಿ ಪಡೆಯಬೇಕೆಂದು ಆದೇಶ ಮಾಡಿದ್ದರು. ಇದು ನಮ್ಮ ಸಮುದಾಯಕ್ಕೆ ಮಾರಕವಾಗಿತ್ತು. ಈ ಕುರಿತು ಜೂ.27ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ನೇತೃತ್ವದಲ್ಲಿ ಎಲ್ಲಾ ಘಟಕಗಳ ಸಹಕಾರದೊಂದಿಗೆ ಪ್ರತಿಭಟನೆ ಮಾಡಿ ಸರಕಾರಕ್ಕೆ ಸಹಾಯಕ ಕಮೀಷನರ್ ಮೂಲಕ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜು.20ಕ್ಕೆ ನಮಗೆ ಪತ್ರ ಬರೆದಿದ್ದು, ನಿಮ್ಮ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರಕಾರದ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರುರವರಿಗೆ ಕಳುಹಿಸಲಾಗಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಅವರಿಂದ ಮಾಹಿತಿಯನ್ನು ಪಡೆಯುವಂತೆ ತಿಳಿಸಿದ್ದರು. ಮುಖ್ಯಮಂತ್ರಿಯವರ ಪತ್ರವನ್ನು ಹಿಡಿದುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾದಾಗ ಈಗಾಗಲೇ ಕಡತವನ್ನು ಚಾಲ್ತಿಗೆ ತಂದಿದ್ದೇವೆ. ನಿಮಗೆ ಆದಷ್ಟು ಬೇಗ ನ್ಯಾಯ ಒದಗಿಸುವ ಭರವಸೆಯನ್ನು ಸಂಬಂಧಿಸಿದ ಮುಖ್ಯ ಕಾರ್ಯದರ್ಶಿ ನೀಡಿದರು. ಅದೇ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 10 ಸೆಂಟ್ಸ್ ಜಾಗವನ್ನು ಭೂ ಪರಿವರ್ತನೆ ಮಾಡಲು ಅವಕಾಶವನ್ನು ಸರಕಾರ ಸುತ್ತೋಲೆ ಮೂಲಕ ಹೊರಡಿಸಿದ್ದು, ಇದರ ಅಧಿಕಾರವನ್ನು ಜಿಲ್ಲಾಧಿಕಾರಿಯವರಿಗೆ ನೀಡಿದೆ. ಇಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ,ಎಸ್ಟಿ ಘಟಕದ ಹೋರಾಟಕ್ಕೆ ಸಂದ ಜಯ ಎಂದರು. ಈ ಜಯದ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಎಲ್ಲಾ ಘಟಕಗಳ ಅಧ್ಯಕ್ಷರು, ವಲಯಗಳ ಅಧ್ಯಕ್ಷರ ಸಹಕಾರವಿತ್ತು ಎಂದರು. ಮುಂದಿನ ದಿನ ಇನ್ನಷ್ಟು ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕ ಪ್ರತಿಭಟನೆ ನಡೆಸಲಿದೆ ಎಂದರು.

ರಾಜ್ಯದಲ್ಲೇ ಪುತ್ತೂರಿನಲ್ಲಿ ಪ್ರಥಮ ಹೋರಾಟ:

ನಗರಸಭೆ ಮಾಜಿ ಸದಸ್ಯ ಎಸ್ಸಿ ಘಟಕದ ಮುಖಂಡ ಮುಖೇಶ್ ಕೆಮ್ಮಿಂಜೆ ಅವರು ಮಾತನಾಡಿ ನನ್ನ ಸ್ವಂತ ಜಮೀನಿಗೆ ಕನ್ವರ್ಷನ್ ಸಮಸ್ಯೆ ಆಗಿತ್ತು. ಈ ಸಮಸ್ಯೆಗೆ ಬೇರೆ ಪರಿಹಾರ ಏನು ಎಂಬುದನ್ನು ನಾನು ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲೂ ಪ್ರಸ್ತಾಪಿಸಿದ್ದೆ. ಆದರೆ ಅಧಿಕಾರಿಗಳು ಇದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ನಾವು ಎಸ್ಸಿ ಎಸ್ಟಿ ಸಮುದಾಯ ಸ್ಥಳ ಭೂಪರಿವರ್ತನೆಗೆ ಅವಕಾಶ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯದಲ್ಲೇ ಪ್ರಥಮ ಹೋರಾಟ ಪುತ್ತೂರಿನಿಂದ ಆರಂಭಗೊಂಡಿತ್ತು. ಈ ಹೋರಾಟದ ಫಲವಾಗಿ ನಮಗೆ ನ್ಯಾಯ ಸಿಕ್ಕಿದೆ. ಮುಂದೆ ಎಸ್ಸಿ ಎಸ್ಟಿ ಸಮುದಾಯದವರು ತಮ್ಮ ಅಗತ್ಯಕ್ಕಾಗಿ ಆದಷ್ಟು ಬೇಗ 10 ಸೆಂಟ್ಸ್ ಜಮೀನನ್ನು ಕನ್ವರ್ಷನ್ ಮಾಡಿ ಇಟ್ಟುಕೊಳ್ಳಿ. ಮುಂದೆ ಪ್ರಯೋಜನಕ್ಕೆ ಬರಬಹುದು ಎಂದರು.

ಸವಲತ್ತಲ್ಲೂ ಕಡಿತ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮನೆ ನಿರ್ಮಾಣಕ್ಕೆ ಈ ಹಿಂದೆ ನಗರಸಭೆಯಲ್ಲಿ ರೂ. 3.30 ಲಕ್ಷ ಅನುದಾನ ನೀಡಲಾಗುತ್ತಿತ್ತು. ಇದೀಗ ಕಡಿತ ಗೊಳಿಸಿ ರೂ. 2 ರಿಂದ 3 ಲಕ್ಷದ ಒಳಗೆ ಮಾತ್ರ ಅನುದಾನ ನೀಡುತ್ತಾರೆ. ದೇಶ ಪ್ರಗತಿಯಲ್ಲಿ ಹಿನ್ನಡೆಯಾಗಿದೆಯೋ ಎಂಬ ಸಂಶಯ ಬಂದಿದೆ. ಎಲ್ಲಾ ವಿಚಾರವಾಗಿ ಡಬಲ್ ಟ್ಯಾಕ್ಸ್ ಪಡೆಯುತ್ತಿರುವ ಸರಕಾರ ಸವಲತ್ತು ಕೊಡುವಾಗ ಮಾತ್ರ ಕಡಿತ ಮಾಡುತ್ತಿದ್ದಾರೆ ಎಂದು ಮುಖೇಶ್ ಕೆಮ್ಮಿಂಜೆ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ತಮ್ಮಣ್ಣ ನಾಯ್ಕ ಮತ್ತು ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಉಪಸ್ಥಿತರಿದ್ದರು.

ಪುತ್ತೂರು ಶಾಸಕರ ಹೇಳಿಗೆ ಅರ್ಥವಿಲ್ಲ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ಥಳ ಭೂಪರಿವರ್ತನೆಗೆ ಹಿಂದೆ ಕಾಂಗ್ರೆಸ್ ಸರಕಾರ ಅವಕಾಶವನ್ನು ನೀಡಿತ್ತು. ಆದರೆ 2021ರಲ್ಲಿ ಬಿಜೆಪಿ ಸರಕಾರ ರದ್ದು ಪಡಿಸಿ ನಮ್ಮ ಸಮುದಾಯಕ್ಕೆ ತೊಂದರೆ ಕೊಟ್ಟಿತ್ತು. ಇವತ್ತು ನಾವು ಕಾಂಗ್ರೆಸ್ ಎಸ್ಸಿ,ಎಸ್ಟಿ ಘಟಕದ ಪ್ರತಿಭಟನೆಯ ಮೂಲಕ ಮತ್ತೆ ಭೂಪರಿವರ್ತನೆ ಅವಕಾಶ ಪಡೆದು ಕೊಂಡಾಗ ತನ್ನ ಒತ್ತಡಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಪುತ್ತೂರಿನ ಶಾಸಕರು ಹೇಳುವುದಕ್ಕೆ ಅರ್ಥವಿಲ್ಲ.

ಮಹಾಲಿಂಗ ನಾಯ್ಕ, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕ

LEAVE A REPLY

Please enter your comment!
Please enter your name here