ನೆ.ಮುಡ್ನೂರು ಕೋರಿಗದ್ದೆಯಲ್ಲಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದಿಂದ ಅಮೃತ ನರ್ಸರಿ ಉದ್ಘಾಟನೆ, ಗಿಡಗಳ ಮಾರಾಟಕ್ಕೆ ಶಾಸಕರಿಂದ ಚಾಲನೆ

0

 ಸಂಜೀವಿನಿ ಒಕ್ಕೂಟದ ಮೂಲಕ ಮಹಿಳಾ ಸಶಕ್ತೀಕರಣ:ಸಂಜೀವ ಮಠಂದೂರು
ನರ್ಸರಿಯಲ್ಲಿ ಬೆಳೆಸಿದ ಗಿಡಗಳ ಮಾರಾಟ:ನವೀನ್ ಕುಮಾರ್ ಭಂಡಾರಿ
ತೋಟಗಾರಿಕೆ ಇಲಾಖೆಯಿಂದ ತರಬೇತಿ:ರೇಖಾ
ಎನ್‌ಆರ್‌ಎಲ್‌ಎಂನ ಮೊದಲ ಯೋಜನೆ:ಶೈಲಜಾ ಭಟ್
ನರ್ಸರಿಯಿಂದ ಜೀವನ ಬದಲಾಗಲಿ:ರಮೇಶ್ ರೈ ಸಾಂತ್ಯ

ಪುತ್ತೂರು:ಸರಕಾರ ಮಹಿಳೆಯರನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳೆಯರು ಸ್ವ-ಸಹಾಯ ಸಂಘದ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.ಇದರ ಸದ್ಬಳಕೆಯನ್ನು ಮಾಡಿಕೊಂಡು ಮಹಿಳೆಯರು ಸಶಕ್ತರಾಗಲು ಪ್ರಯತ್ನಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸಹಯೋಗದಲ್ಲಿ ಕೋರಿಗದ್ದೆ ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಗ್ರಾ.ಪಂ.ಅನುದಾನಗಳ ಒಗ್ಗೂಡಿಸುವಿಕೆಯೊಂದಿಗೆ ಪಂಚಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನಡೆಸುವ ಅಮೃತ ನರ್ಸರಿಯ ಉದ್ಘಾಟನೆಯನ್ನು ಹಾಗೂ ನರ್ಸರಿಯಲ್ಲಿ ಬೆಳೆಸಲಾದ ಗಿಡಗಳ ಮಾರಾಟಕ್ಕೆ ನ.7ರಂದು ಚಾಲನೆಯನ್ನು ನೀಡಿ ಅವರು ಮಾತನಾಡಿದರು.ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಆರ್ಥಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಈ ನರ್ಸರಿಯಲ್ಲಿ ದುಡಿಯುವ ಮೂಲಕ ಹಾಗೂ ಇದರ ನಿರ್ವಹಣೆ ಮತ್ತು ವ್ಯವಹಾರವನ್ನು ನಡೆಸುವ ಮೂಲಕ ಉದ್ಯೋಗ ಸೃಷ್ಟಿ ನಡೆದಿದೆ. ಈ ನರ್ಸರಿಯಲ್ಲಿ ಹಲವು ರೀತಿಯ ಗಿಡಗಳನ್ನು ಬೆಳೆಸಲಾಗಿದೆ. ಮುಖ್ಯವಾಗಿ ವಾಣಿಜ್ಯ ಕೃಷಿ ಗಿಡಗಳ ಬದಲಾಗಿ ಸ್ಥಳೀಯವಾಗಿ ಬೇಡಿಕೆ ಇರುವ ರಂಬೂಟನ್ ಹಾಗೂ ಇನ್ನಿತರ ಹಣ್ಣಿನ ಗಿಡಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ವಿವಿಧ ಜಾತಿ ಅರಣ್ಯ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವ ಮೂಲಕ ಮಾದರಿ ನರ್ಸರಿಯನ್ನು ನಡೆಸುವ ಹೆಗ್ಗಳಿಕೆ ಸಂಜೀವಿನಿ ಒಕ್ಕೂಟಕ್ಕೆ ಲಭಿಸಲಿ ಎಂದು ಹಾರೈಸಿದರು.


ನರ್ಸರಿಯಲ್ಲಿ ಬೆಳೆಸಿದ ಗಿಡಗಳ ಮಾರಾಟ:
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಮಾತನಾಡಿ, ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ನರೇಗಾ ಯೋಜನೆ ಮೂಲಕ ನರ್ಸರಿ ನಿರ್ಮಿಸಲು ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರ ಪೂರ್ಣ ಸಹಕಾರದಿಂದ ಒಕ್ಕೂಟದ ಮಹಿಳೆಯರ ಶ್ರಮದ ಫಲವಾಗಿ ಈ ಸುಂದರ ಗಿಡಗಳನ್ನು ಬೆಳೆಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪಂಚಮಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಶ್ರಮದ ಫಲವಾಗಿ ಯಶಸ್ವಿಯಾಗಿ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.


ತೋಟಗಾರಿಕೆ ಇಲಾಖೆಯಿಂದ ತರಬೇತಿ:
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದ ಪಂಚಮಿ ಸಂಜೀವಿನಿ ಒಕ್ಕೂಟ ನಡೆಸುವ ಈ ನರ್ಸರಿಯಲ್ಲಿ ವಾರ್ಷಿಕ 10 ಸಾವಿರ ಗಿಡಗಳನ್ನು ತೋಟಗಾರಿಕಾ ಇಲಾಖೆಯ ದರದಲ್ಲಿ ಮಾರಾಟ ಮಾಡಬೇಕಿದೆ.ಇದಕ್ಕೆ ಸಂಬಂಧಿಸಿದಂತೆ ಪೂರಕ ತರಬೇತಿಯನ್ನು ನೀಡಲು ತೋಟಗಾರಿಕೆ ಇಲಾಖೆ ಸಿದ್ಧ ಇದೆ ಎಂದು ಹೇಳಿದರು.


ಎನ್‌ಆರ್‌ಎಲ್‌ಎಂನ ಮೊದಲ ಯೋಜನೆ:
ತಾ.ಪಂ. ಸಹಾಯಕ ನಿರ್ದೇಶಕರಾದ ಶೈಲಜಾ ಭಟ್ ಮಾತನಾಡಿ, ನರೇಗಾ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆ ಒಗ್ಗೂಡಿಸುವಿಕೆ ಮೂಲಕ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಇದರ ಮೊದಲ ಯೋಜನೆಯಾಗಿ ಈ ಅಮೃತ ನರ್ಸರಿ ಈಡೇರಿದೆ.ಮುಂದುವರಿದು ಪ್ರತಿ ಗ್ರಾ.ಪಂ.ಗೆ ಒಂದರಂತೆ 101 ಕೃಷಿ ಪೌಷ್ಠಿಕ ತೋಟ ರಚನೆಯ ಗುರಿಯನ್ನು ಹೊಂದಲಾಗಿದ್ದು ಇದಕ್ಕೆ ಬೇಕಾದ ಗಿಡಗಳನ್ನು ಈಗಾಗಲೇ ಈ ನರ್ಸರಿಯಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ಬೆಳೆಸಿದ್ದಾರೆ.ಮುಂದಕ್ಕೆ ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸಲಿದ್ದಾರೆ.ಇದರ ಅಭಿವೃದ್ಧಿಗೆ ಸಹಕರಿಸಿದ ಗ್ರಾ.ಪಂ.ಆಡಳಿತ ಮಂಡಳಿಗೆ, ನರೇಗಾ ತಂಡಕ್ಕೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಅಭಿನಂದಿಸಿದರು.


ನರ್ಸರಿಯಿಂದ ಜೀವನ ಬದಲಾಗಲಿ:
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೆಟ್ಟಣಿಗೆ ಮುಡ್ನೂರು ಗ್ರಾಮದ ಸಂಜೀವಿನಿ ಒಕ್ಕೂಟದ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುತ್ತಿರುವ ನಿದರ್ಶನವಾಗಿ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಈಗ ಅಮೃತ ನರ್ಸರಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ನರ್ಸರಿಯಲ್ಲಿ ಹಲವು ಗಿಡಗಳನ್ನು ಬೆಳೆಸಿದ್ದಾರೆ ಮುಂದಕ್ಕೆ ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸಿ ಈ ನರ್ಸರಿಯಿಂದ ಜೀವನ ಬದಲಾಗುವಂತಾಗಲಿ ಎಂದು ಹರಸಿದರು.ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ, ಪಂಚಮಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಭಾಸ್ಕರ ರಾವ್ ವೇದಿಕೆಯಲ್ಲಿದ್ದರು.ಈ ಸಂದರ್ಭ ನರ್ಸರಿಯಲ್ಲಿ ಬೆಳೆಸಲಾದ ಗಿಡಗಳನ್ನು ಶಾಸಕರು ಅರಿಯಡ್ಕ, ಒಳಮೊಗ್ರು, ಬಡಗನ್ನೂರು, ಕೊಳ್ತಿಗೆ ಗ್ರಾ.ಪಂ ಗಳ ಸಂಜೀವಿನಿ ಒಕ್ಕೂಟಗಳಿಗೆ ನೀಡುವ ಮೂಲಕ ಮಾರಾಟಕ್ಕೆ ಚಾಲನೆಯನ್ನು ನೀಡಿದರು.ನರ್ಸರಿ ಅಭಿವೃದ್ಧಿಗೆ ಸಹಕರಿಸಿದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ, ಪಂಚಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ, ನರೇಗಾ ತಾಂತ್ರಿಕ ಸಂಯೋಜಕರಾದ ಪ್ರಶಾಂತಿ, ನರೇಗಾ ತಾಂತ್ರಿಕ ಸಹಾಯಕರಾದ ಆಕಾಂಕ್ಷ, ಐ.ಇ.ಸಿ. ಸಂಯೋಜಕ ಭರತ್ ರಾಜ್ ಅವರಿಗೆ ತಾಲೂಕು ಪಂಚಾಯತ್ ಪರವಾಗಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸೀತಾಫಲ ಗಿಡವನ್ನು ನೀಡುವ ಮೂಲಕ ಗೌರವಿಸಲಾಯಿತು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿರ್ಮಾಣವಾದ ನರ್ಸರಿಗೆ ಅಮೃತ ನರ್ಸರಿ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ವಂದಿಸಿದರು.ತಾಲೂಕು ಮಾಹಿತಿ,ಶಿಕ್ಷಣ ಸಂವಹನ ಸಂಯೋಜಕ ಭರತ್‌ರಾಜ್, ಎನ್‌ಆರ್‌ಎಲ್‌ಎಂ ಮೇಲ್ವಿಚಾರಕಿ ನಮಿತಾ ನಿರೂಪಿಸಿದರು.ಎನ್‌ಆರ್‌ಎಲ್‌ಎಂ ಸಂಪನ್ಮೂಲ ವ್ಯಕ್ತಿ ಅಂಕಿತಾ ಸಹಕರಿಸಿದರು.ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸದಸ್ಯರಾದ ಶ್ರೀರಾಮ್ ಪಕ್ಕಳ, ರಾಮ ಮೇನಾಲ, ಲಲಿತಾ ಶೆಟ್ಟಿ, ಲಲಿತಾ ಮೇನಾಲ, ಪ್ರಪುಲ್ಲಾ ರೈ, ವೆಂಕಪ್ಪ ನಾಯ್ಕ, ಪಂಚಮಿ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಸೇವಂತಿ, ಎಂಬಿಕೆ ಸವಿತಾ, ಕಾರ್ಯದರ್ಶಿ ಶ್ರೀಮತಿ, ನರ್ಸರಿ ನಡೆಸುತ್ತಿರುವ ರಮ್ಯಾ, ಸಾವಿತ್ರಿ, ರಾಜೇಶ್ವರಿ, ಸ್ವಚ್ಛ ಸಂಕೀರ್ಣವನ್ನು ನಡೆಸುತ್ತಿರುವ ನಳಿನಿ ಕುದ್ರೋಳಿ, ಶೈಲಜಾ, ನಳಿನಿ ಕೊಂಬೆಟ್ಟು, ಗ್ರಾ.ಪಂ. ಸಿಬ್ಬಂದಿಗಳಾದ ಶೀನಪ್ಪ, ಚಂದ್ರಶೇಖರ, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here