ಸುರತ್ಕಲ್ ಟೋಲ್ ಗೇಟ್ ತೆರವಿನ ಹೋರಾಟಕ್ಕೆ ಪುತ್ತೂರಿನಲ್ಲೂ ಬೆಂಬಲ : ಸುರತ್ಕಲ್ ಟೋಲ್ ಗೇಟ್ ಹೋರಾಟ ಬೆಂಬಲ ಸಮಿತಿ ರಚನೆ

0

  • ನ.19ರಿಂದ ಪುತ್ತೂರಿನ 10 ಪ್ರಮುಖ ಸ್ಥಳದಲ್ಲಿ ಜಾಗೃತಿ ರಥ ಸಂಚಾರ
  • ನ.22ಕ್ಕೆ ಪುತ್ತೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ

  • ಜನರ ಒತ್ತಡಕ್ಕೆ ಸರಕಾರ ಮಣಿಯಲೇ ಬೇಕು – ಹೇಮನಾಥ ಶೆಟ್ಟಿ ಕಾವು

ಪುತ್ತೂರು: ಸುರತ್ಕಲ್‌ನ ಎನ್‌ಐಟಿಕೆ ಬಳಿಯ ಅಕ್ರಮ ಎಂದು ಹೇಳಲಾಗುತ್ತಿರುವ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಬೆಂಬಲವಾಗಿ ಪುತ್ತೂರಿನಲ್ಲೂ ಸುರತ್ಕಲ್ ಟೋಲ್ ಗೇಟ್ ಹೋರಾಟ ಬೆಂಬಲ ಸಮಿತಿಯು ನ.12ರಂದು ರಚನೆಗೊಂಡಿದ್ದು, ನ.19ಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಆಯ್ದ 10 ಪ್ರಮುಖ ಸ್ಥಳಗಳಲ್ಲಿ ಜನರನ್ನು ಜಾಗೃತಿಗೊಳಿಸುವ ರಥಯಾತ್ರೆ ನಡೆಯಲಿದ್ದು, ನ.22ಕ್ಕೆ ಪುತ್ತೂರು ಗಾಂಧಿಕಟ್ಟೆಯ ಬಳಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಗುವುದು ಎಂದು ನ.12ರಂದು ನ್ಯಾಯವಾದಿ ಪಿ.ಕೆ.ಸತೀಶನ್ ಅವರ ನೇತೃತ್ವದಲ್ಲಿ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಮಾನಮನಸ್ಕರ ಸಭೆಯಲ್ಲಿ ಹೋರಾಟ ಸಮಿತಿ ನಿರ್ಧಾರ ಕೈಗೊಂಡಿದೆ.
ಹೋರಾಟ ಸಮಿತಿಯಲ್ಲಿ ಸಂಚಾಲಕ, ಸಹ ಸಂಚಾಲಕರನ್ನು ಆಯ್ಕೆ ಮಾಡಿ, ಉಳಿದಂತೆ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಮುಂದೆ ಇನ್ನೊಂದು ಹೋರಾಟಕ್ಕೆ ಸಿದ್ದತಾ ಸಭೆ ನಡೆಸಲಾಗುವುದು. ಪುತ್ತೂರಿನ ಈ ಹೋರಾಟದಿಂದ ಮುಂದೆ ಪ್ರತಿ ಗ್ರಾಮ ತಾಲೂಕುಗಳಲ್ಲೂ ಜನರು ಜಾಗೃತಿಗೊಂಡು ಹೋರಾಟ ನಡೆಸುವಂತಾಗಬೇಕು. ಇದಕ್ಕೆ ಪುತ್ತೂರಿನಿಂದ ಆರಂಭಗೊAಡ ಹೋರಾಟ ಮಾದರಿಯಾಗಬೇಕೆಂದು ಸಭೆಯಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಹೋರಾಟ ಸಮಿತಿ ಸಂಚಾಲಕರಾಗಿ ಕಾವು ಹೇಮನಾಥ ಶೆಟ್ಟಿ, ಸಹಸಂಚಾಲಕರಾಗಿ ಅಶ್ರಫ್ ಕಲ್ಲೇಗ ಮತ್ತು ಬಿ.ಎಮ್ ಭಟ್ ಅವರನ್ನು ಆಯ್ಕೆ ಮಾಡಲಾಯಿತು.
ಜನರ ಒತ್ತಡಕ್ಕೆ ಸರಕಾರ ಮಣಿಯಲೇ ಬೇಕು:
ಸುರತ್ಕಲ್ ಟೋಲ್ ಗೇಟ್ ಹೋರಾಟ ಬೆಂಬಲ ಸಮಿತಿ ಸಂಚಾಲಕ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮತನಾಡಿ ಟೋಲ್ ಗೇಟ್ ಹೋರಾಟ ನಡೆಯುತ್ತಿದ್ದರೂ ಸರಕಾರ ಯಾವುದೇ ನಿರ್ಣಯ ಕೈಗೊಳ್ಳದಿರುವುದು ದುರಂತ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನರು ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಪ್ರಥಮವಾಗಿ ಸದಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪುತ್ತೂರು ತಾಲೂಕಿನಲ್ಲಿ ಸಮಾನ ಮನಸ್ಕರು ಬೆಂಬಲ ಕೊಡುವಂತ ಕೆಲಸ ಆಗಬೇಕಾಗಿದೆ. ಈಗಾಗಲೇ ನಾವು ಸುರತ್ಕಲ್ ಹೋರಾಟದಲ್ಲಿ ಭಾಗವಹಿಸಿದ್ದೇವೆ. ಮುಂದೆ ಇನ್ನೊಮ್ಮೆ ಅಲ್ಲಿ ಭಾಗವಹಿಸಲು ಪುತ್ತೂರಿನ ಜನರನ್ನು ಜಾಗೃತಿಗೊಳಿಸುವ ಕೆಲಸ ಆಗಬೇಕಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಕಡೆ ಹೋಗಿ ಟೋಲ್‌ಗೇಟ್‌ನಿಂದ ಜನರಿಗಾಗುವ ಸಮಸ್ಯೆಯ ಕುರಿತು ಮಾಹಿತಿ ನೀಡಿ ಜಾಗೃತಿಗೊಳಿಸಿ ಹೋರಾಟವನ್ನು ಗಟ್ಟಿಗೊಳಿಸಬೇಕು. ಹೋರಾಟ ಸಮಿತಿ ಯಾರೆಲ್ಲಾ ಸಮಾನಮನಸ್ಕರು ಇದ್ದಾರೋ ಅವರನ್ನೆಲ್ಲ ಸೇರಿಸಿಕೊಂಡು ಜಾಗೃತಿ ರಥ ಜಾಥ ನಡೆಯಲಿದೆ. ಹೊಸ ರೀತಿಯಲ್ಲಿ ನಡೆಯುವ ಹೋರಾಟ ದೊಡ್ಡ ಶಕ್ತಿ ಸಿಗಬೇಕು. ನಾವು ಹೋರಾಟಕ್ಕೆ ಇಳಿದ ಮಾತ್ರಕ್ಕೆ ಟೋಲ್ ಗೇಟ್ ತೆರವಾಗುವ ಸಾಧ್ಯತೆ ಇದೆ. ಜನರ ಒತ್ತಡಕ್ಕೆ ಸರಕಾರ ಮಣಿಯಲೇ ಬೇಕು. ವಿನೂತನವಾದ ಪ್ರತಿಭಟನೆಯು ಈ ಆಡಳಿತ ಪಕ್ಷದ ವಿರುದ್ಧವಾಗಿ ಜನ ಎಚ್ಚೆತುಕೊಳ್ಳಬೇಕು.
ಬಿಜೆಪಿಯ ರಾಜಕೀಯ ದುರುದ್ದೇಶ ಜನರಿಗೆ ಗೊತ್ತಾಬೇಕು:
ಕಾರ್ಮಿಕ ಸಂಘಟನೆಯ ಮುಖಂಡ ನ್ಯಾಯವಾದಿ ಬಿ.ಎಎಮ್.ಭಟ್ ಅವರು ಮಾತನಾಡಿ ಟೋಲ್‌ಗೇಟ್ ಬಿಜೆಪಿಯ ರಾಜಕೀಯ ಆಗಿದೆ. ಅವರ ದುರುದ್ದೇಶ ಏನು ಎಂದು ಜನಸಾಮಾನ್ಯರಿಗೆ ಗೊತ್ತಾಗೇಕು. ಅದು ವ್ಯಾಪಕವಾಗಿ ಪ್ರಚಾರ ಆಗಬೇಕು. ಎಲ್ಲರದಲ್ಲೂ ತೆರಿಗೆ ಸಂಗ್ರಹಸಿದ ಬಳಿಕ ಟೊಲ್ ಯಾಕೆ ಪ್ರಶ್ನೆ ಜನರಲ್ಲಿ ಮೂಡಬೇಕು. ನಮ್ಮ ಹೋರಾಟ ಯಶಸ್ವಿಯಾಗಿ ನಡೆಯಬೇಕೆಂದರು.
ಬಿಜೆಪಿಯನ್ನು ಬಿಟ್ಟು ಹೋರಾಟ:
ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಮಾತನಾಡಿ ಬಿಜೆಪಿಯವರಿಂದ ದೊಡ್ಡ ದೊಂಬರಾಟ ನಡೆಯುತ್ತಿದೆ. ಟೋಲ್ ಗೇಟ್‌ನಿಂದ ಅವರಿಗೆ ದೊಡ್ಡ ಇನ್‌ಕಮ್ ಇದೆ. ಹಾಗಾಗಿ ಅವರು ಅದಕ್ಕೆ ವಿರೋಧಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರಾಗಿ ನಾವು ಹೊರಾಟ ಕೈಗೊಳ್ಳಬೇಕು. ಸಮಾನಮನಸ್ಕರಾಗಿ ನಾವು ಸೇರಿದ್ದೇವೆ. ಆದರೆ ಬಿಜೆಪಿಯವರನ್ನು ಬಿಟ್ಟು ನಾವು ಹೋರಾಟ ಮಾಡಬೇಕು. ಇವತ್ತು ಬಿಜೆಪಿ ಜನರಿಗೆ ಅಗತ್ಯದ ವಿಚಾರಗಳನ್ನು ಕೈ ಬಿಟ್ಟು ಜಾತಿ ಸಮುದಾಯವನ್ನು ಓಲೈಸವ ನಿಟ್ಟಿನಲ್ಲಿ ಪ್ರತಿಮೆಗಳನ್ನು ಮಾಡುವಲ್ಲಿ ಮಗ್ನರಾಗಿದ್ದಾರೆ, ರಾತ್ರಿ ಬೆಳಗಾವುದರೊಳಗೆ ವಿಮಾನನಿಲ್ದಾಣ, ಸರಕಾರಿ ಆಸ್ಪತ್ರೆಗಳು ಖಾಸಗಿಗಳಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಅನಧಿಕೃತ ಟೋಲ್ ತೆರವು ಮಾಡಬೇಕು:
ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಮಾತನಾಡಿ ಟೋಲ್‌ಗೇಟ್ ಅನಧಿಕೃತ ಎಂದು ಗಡ್ಕರಿಯೇ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ ಸುರತ್ಕಲ್ ಮಾತ್ರವಲ್ಲ ಬ್ರಹ್ಮರಕೂಡ್ಲುವಿನ ಟೋಲ್‌ಗೇಟ ಅನ್ನು ಕೂಡಾ ತೆರವು ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ನ್ಯಾಯವಾದಿ ಕೆ.ಎಮ್.ಸಿದ್ದಿಕ್ ಧ್ವನಿಗೂಡಿಸಿದರು.
ಟೋಲ್‌ಗೇಟ್‌ನಿಂದ ಹಣ ಮಾಡುವ ಉದ್ದೇಶ:
ಕಾಂಗ್ರೆಸ್ ಹಿರಿಯ ಮುಖಂಡ ಕಿಟ್ಟಣ್ಣ ಗೌಡ ಅವರು ಮಾತನಾಡಿ ಬಿಜೆಪಿಯವರು ಹಣ ಮಾಡುವ ಉದ್ದೇಶದಿಂದ ಟೋಲ್‌ಗೇಟ್ ಇಟ್ಟು ಕೊಂಡಿದ್ದಾರೆ. ಒಟ್ಟಿನಲ್ಲಿ ಟೋಲ್‌ಗೇಟ್‌ನಿಂದ ಜನಸಾಮಾನ್ಯರಿಗೆ ಅನ್ಯಾಯ ಆಗುತ್ತಿದೆ ಎಂದರು.
ನ್ಯಾಯವಾದಿ ಪಿ.ಕೆ.ಸತೀಶನ್ ಅವರು ಮಾತನಾಡಿ ಹೋರಾಟ ಸಮಿತಿ ಪುತ್ತೂರಿನಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ಜನರನ್ನು ಜಾಗೃತಿಗೊಳಿಸುವ ಕೆಲಸ ಆಗಬೇಕು. ಈ ನಿಟ್ಟಿನ ಜಾಗೃತಿ ರಥ ಜರನ್ನು ಸಂಪರ್ಕಿಸಬೇಕು ಮತ್ತು ಕೊನೆಯ ದಿನ ಪುತ್ತೂರಿನಲ್ಲಿ ದೊಡ್ಡ ಪ್ರತಿಭಟನೆ ನಡೆಯಬೇಕೆಂದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಹನೀಫ್ ಬಗ್ಗುಮೂಲೆ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಹಿರಿಯ ನ್ಯಾಯವಾದಿ ಎಂ.ಪಿ.ಅಬೂಬಕ್ಕರ್ ಸಹಿತ ಹಲವಾರು ಮಂದಿ ವಿವಿಧ ಸಲಹೆ ಸೂಚನೆ ನೀಡಿದರು. ಸಮಿತಿ ಸದಸ್ಯರಾದ ರಕ್ಷಿತ್, ಮಹಮ್ಮದ್ ಬೊಳುವಾರು, ಸುಂದರಿ, ರವಿಪ್ರಸಾದ್ ಶೆಟ್ಟಿ, ಕೆ.ಸಿ. ಅಶೋಕ್ ಶೆಟ್ಟಿ, ಅಮರನಾಥ ಗೌಡ, ಪದ್ಮ ಮಣಿಯಾನ್, ನಝೀರ್ ಮಠ, ನಗರಸಭೆ ಮಾಜಿ ಅಧ್ಯಕ್ಷೆ ವಾಣಿಶ್ರೀಧರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸುರತ್ಕಲ್ ಟೋಲ್‌ಗೇಟ್ ಹೋರಾಟ ಬೆಂಬಲ ಸಮಿತಿಯ ಪುತ್ತೂರಿನಲ್ಲಿ ನ.19ಕ್ಕೆ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಕಬದಲ್ಲಿ ಜಾಗೃತಿ ರಥ ಉದ್ಘಾಟನೆಗೊಂಡು ಬಳಿಕ ವಿಟ್ಲ, ಪುಣಚ, ಪಾಣಾಜೆ, ಈಶ್ವಮಂಗಲದಲ್ಲಿ ನಿಲ್ಲಿಸಿ, ನ.20ಕ್ಕೆ ಉಪ್ಪಿನಂಗಡಿ, ಪುರುಷರಕಟ್ಟೆ, ಪೆರ್ಲಂಪಾಡಿ, ಮಾಡಾವು, ಕುಂಬ್ರದಲ್ಲಿ ಜಾಗೃತಿ ರಥ ತೆರಳಲಿದೆ. ನ.23ಕ್ಕೆ ಪುತ್ತೂರು ಗಾಂಧಿಕಟ್ಟೆಯ ಬಳಿ ಬೃಹತ್ ಪ್ರತಿಭಟನೆ ರಸ್ತೆ ತಡೆ ನಡೆಯಲಿದೆ.
ಕಾವು ಹೇಮನಾಥ ಶೆಟ್ಟಿ, ಸಂಚಾಲಕರು
ಸುರತ್ಕಲ್ ಟೋಲ್‌ಗೇಟ್ ತೆರವು ಹೋರಾಟ ಬೆಂಬಲ ಸಮಿತಿ

LEAVE A REPLY

Please enter your comment!
Please enter your name here