ಪುತ್ತೂರು: ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಶಿವಮೊಗ್ಗ ಹಾಗೂ ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಶಿವಮೊಗ್ಗ ಇದರ ವತಿಯಿಂದ ಯಕ್ಷಗಾನ ಕಲಾವಿದರಾದ ಪುತ್ತೂರಿನ ಪ್ರೇಮಾ ಕಿಶೋರ್ರವರಿಗೆ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಧೆಯ ಬೆಳ್ಳಿ ಹಬ್ಬದ ಸಂಭ್ರಮ, ಶ್ರೀ ಕನಕದಾಸರ ೫೩೫ನೇ ಜಯಂತಿ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರದಲ್ಲಿ ಸಮಾಜಸೇವೆ ಹಾಗು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಕಲಾವಿದರಿಗೆ ರಾಜ್ಯ ಮಟ್ಟದ ಕನಕಶ್ರೀ ಚೇತನ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಪ್ರೇಮಾ ಕಿಶೋರ್ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂದಾಪುರ ತಾಲೂಕಿನ ಶಂಕರನಾರಾಯಣದ ಉಲ್ಲೂರು ನಿವಾಸಿಗಳಾದ ಸಣ್ಣಯ್ಯ ಮತ್ತು ಗಿರಿಜಾ ದಂಪತಿಯ ಪುತ್ರಿಯಾಗಿ 1977ರ ಜುಲೈ 7 ರಂದು ಜನಿಸಿದ ಪ್ರೇಮಾರವರು ಶಿವಮೊಗ್ಗದ ವಾಸುದೇವ ಮತ್ತು ಮಣಿಮಾಲ ದಂಪತಿಯ ಪುತ್ರ ಟಿ.ವಿ. ಕಿಶೋರ್ ಕುಮಾರ್ರವರನ್ನು ವಿವಾಹವಾಗಿದ್ದು ಪ್ರಸ್ತುತ ಪತಿ ಮತ್ತು ಪುತ್ರ ಸಾಗರ್ ಕೆ.ಟಿ ಹಾಗೂ ಪುತ್ರಿ ವರ್ಷಾರವರೊಂದಿಗೆ ಮುಕ್ರಂಪಾಡಿಯಲ್ಲಿ ವಾಸವಾಗಿದ್ದಾರೆ. ಶಾಲಾ ಶಿಕ್ಷಣದ ಅವಧಿಯಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಪ್ರೇಮಾರವರು ಹಂತಹಂತವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.