





ಪುತ್ತೂರು: ಯುವತಿಯ ಮೊಬೈಲ್ ಫೊನ್ಗೆ ಕರೆ ಮಾಡಿ ಕಿರುಕುಳ ನೀಡಿದ್ದಲ್ಲದೆ ರಸ್ತೆಯಲ್ಲಿ ತಡೆದು ನಿಲ್ಲಿಸಿ ರೇಪ್ ಮಾಡುವುದಾಗಿ ಬೆದರಿಸಿದ ಪ್ರಕರಣದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


ಘಟನೆಯ ವಿವರ:





ವಿದೀಪ್ ಕುಮಾರ್ ಎಂಬಾತ ತನ್ನ ಮೊಬೈಲ್ ಫೋನ್ನಿಂದ ಯುವತಿಯೋರ್ವಳ ಮೊಬೈಲ್ ಫೋನ್ಗೆ ಕರೆ ಮಾಡಿ ಪೀಡಿಸುತ್ತಿದ್ದ. ಮಧ್ಯರಾತ್ರಿಯಲ್ಲಿಯೂ ಕರೆ ಮಾಡಿ ನನಗೆ ನಿನ್ನ ವಾಯ್ಸ್ ಕೇಳಬೇಕು. ನೀನು ಯಾವಾಗಲೂ ನನ್ನ ಜೊತೆಯಲ್ಲಿಯೇ ಇರಬೇಕು ಎಂದು ಅನಿಸುತ್ತಿದೆ. ನಿನ್ನನ್ನು ಸಾಯಿಸೋಕೂ ನನಗೆ ಗೊತ್ತಿದೆ. ಯಾರಿಗೂ ಸುಳಿವು ಸಿಗದಂತೆ ನಿನ್ನ ಸಂಬಂಧಿಕರನ್ನೂ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. 16-07-2022ರಂದು ಸಂಜೆ 6.10 ಗಂಟೆಗೆ ಯುವತಿ ತಿಂಗಳಾಡಿಯಿಂದ ತನ್ನ ಮನೆಯಾದ ಸೊರಕೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ ಸೈಕಲಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸಂಜೆ ಸುಮಾರು 6.15 ಗಂಟೆಗೆ ಕೆದಂಬಾಡಿ ಗ್ರಾಮದ ತಿಂಗಳಾಡಿ ದರ್ಬೆ ಎಂಬಲ್ಲಿ ಮೋಟಾರ್ ಸೈಕಲಿನಿಂದ ಇಳಿದು ಯುವತಿಯ ಬಳಿಗೆ ಬಂದು ಮುಂದಕ್ಕೆ ನಡೆದುಕೊಂಡು ಹೋಗದಂತೆ ತಡೆದು ನಿಲ್ಲಿಸಿ ನನಗೆ ನೀನು ಬೇಕು. ನಾನು ನಿನಗೋಸ್ಕರ ಯಾರನ್ನು ಬೇಕಾದರೂ ಬಿಟ್ಟು ಬಿಡುತ್ತೇನೆ. ನೀನು ನನ್ನ ಜೊತೆ ಬರಬೇಕು. ಇಲ್ಲದಿದ್ದರೆ ಈ ರಸ್ತೆಯಲ್ಲಿಯೇ ನಿನ್ನನ್ನು ರೇಪ್ ಮಾಡಿ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಕಲಂ 506, 354(D) 341 ಐ.ಪಿ.ಸಿಯಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್.ರವರು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿ ವಿದೀಪ ಕುಮಾರ್ನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರ ವಕೀಲರಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದ್ದರು.









