ಮತ್ತೆ ಚರ್ಚೆಗೆ ಬಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ

0

  • ಮುಂದಿನ ಸಲ ನಿನಗೆ ಟಿಕೇಟ್, 8 ವರ್ಷದ ಹಿಂದೆಯೇ ಶಕುಂತಳಾ ಶೆಟ್ಟಿ ಪ್ರಮಾಣ ಮಾಡಿದ್ದರು; ಹೇಮನಾಥ ಶೆಟ್ಟಿ
  • ದೇವರ ಹೆಸರು ಹೇಳಿ ಪ್ರಮಾಣ ಮಾಡುವ ಅಭ್ಯಾಸ ನನಗೆ ಇಲ್ಲ: ಶಕುಂತಳಾ ಶೆಟ್ಟಿ

ಪುತ್ತೂರು: 8 ವರ್ಷದ ಹಿಂದೆ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾವು ಹೇಮನಾಥ ಶೆಟ್ಟಿಯವರಲ್ಲಿ ಈ ಭಾರಿ ನನಗೆ ಅವಕಾಶ ಮಾಡಿಕೊಡಿ, ಮುಂದಿನ ಸಲ ನಿಮಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ ಮತ್ತು ಶಕುಂತಳಾ ಶೆಟ್ಟಿಯವರು ಈ ರೀತಿಯಲ್ಲಿ ಹೇಳಿಯೇ ಇಲ್ಲ ಎಂಬ ಅವರಿಬ್ಬರ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಕುಂತಳಾ ಶೆಟ್ಟಿಯವರು 2004ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಭೇರಿ ಗಳಿಸಿದ್ದರು. 2008ರಲ್ಲಿ ಶಕುಂತಳಾ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಶಕುಂತಳಾ ಶೆಟ್ಟಿಯವರು ಪಕ್ಷದ ಹಿರಿಯ ನಾಯಕರ ಮೇಲೆ ಮುನಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆ ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸೀಟು ಪಡೆದು ಕೊಂಡಿದ್ದರು. ಆ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾವು ಹೇಮನಾಥ ಶೆಟ್ಟಿಯವರು ಕೂಡಾ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿದ್ದರು. ಆದರೆ ಕಾಂಗ್ರೆಸ್ ಶಕುಂತಳಾ ಶೆಟ್ಟಿಯವರಿಗೆ ಟೆಕೇಟ್ ನೀಡಿತ್ತು. ಈ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿಯವರು ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಮತ್ತೆ ಟಿಕೇಟ್ ಕೊಡುವ ವಿಚಾರ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಕುಂತಳಾ ಟಿ. ಶೆಟ್ಟಿಯವರು ಕಾಂಗ್ರೆಸ್‌ನಿಂದ 2ನೇ ಬಾರಿ ಸ್ಪರ್ಧಿಸುವ ಅವಕಾಶ ಪಡೆದಿದ್ದರು. ಇದರ ಬೆನ್ನಿಗೇ ಹೇಮನಾಥ ಶೆಟ್ಟಿ ಹಾಗೂ ಅವರ ಬೆಂಬಲಿಗರು ಪಕ್ಷದ ಪ್ರಮುಖರನ್ನು ಭೇಟಿಯಾಗಿ ಕಾವು ಹೇಮನಾಥ ಶೆಟ್ಟಿಯವರಿಗೆ ಟಿಕೆಟ್ ಕೊಡಬೇಕೆಂದು ಒತ್ತಡ ತರಲಾರಂಬಿಸಿದರು. ಈ ವೇಳೆ ಹೇಮನಾಥ ಶೆಟ್ಟಿ ಮತ್ತು ಅವರ ಬೆಂಬಲಿಗರನ್ನು ಸಮಾಧಾನಿಸುವ ಪ್ರಯತ್ನ ನಡೆಸಲಾಗಿದ್ದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ತಿಳಿಸಲಾಗಿತ್ತು. ಹೇಮನಾಥ ಶೆಟ್ಟಿಯವರು ಕೂಡ ಪಕ್ಷದ ನೀತಿ-ನಿಯಮಗಳಿಗೆ ತಾನು ನಿಷ್ಠಾವಂತನಾಗಿದ್ದೇನೆ, ಪಕ್ಷದ ವಿರೋಧಿಯಾಗಿ ಹೋಗುವ ಪ್ರಶ್ನೆ ಇಲ್ಲ, ಆದರೆ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಈ ಬಾರಿ ಮಾತ್ರ ಶಕುಂತಳಾ ಶೆಟ್ಟಿಯವರಿಗೆ ಅವಕಾಶ. ಮುಂದಿನ ಬಾರಿ ನಿಮಗೇ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ. ಆದ್ದರಿಂದ ನನಗೆ ಅವಕಾಶ ನೀಡಬೇಕು ಎಂದು ಹೇಮನಾಥ ಶೆಟ್ಟಿಯವರು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದರು. ಆದರೆ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರು ಸೂಚನೆ ನೀಡಿರುವುದರಿಂದ ಸದ್ಯಕ್ಕೆ ಏನೂ ಮಾಡುವಂತಿಲ್ಲ, ಪಕ್ಷದಲ್ಲಿ ನಿಮಗೆ ಸರಿಯಾದ ಸ್ಥಾನಮಾನ ನೀಡಲಾಗುವುದು. ಮಾತ್ರವಲ್ಲದೆ ಮುಂದಿನ ಚುನಾವಣೆಯಲ್ಲಿ ತಮಗೆ ಅವಕಾಶ ದೊರೆಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದರಿಂದ ಹೇಮನಾಥ ಶೆಟ್ಟಿಯವರೂ ಮೌನಕ್ಕೆ ಶರಣಾಗಿದ್ದರು. ಆದರೆ ಶಕುಂತಳಾ ಶೆಟ್ಟಿ ಮತ್ತು ಕಾವು ಹೇಮನಾಥ ಶೆಟ್ಟಿಯವರು ಅಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗುತ್ತಿದೆ.

 


ಮಹಾಲಿಂಗೇಶ್ವರನ ಆಣೆ ಹಾಕಿದ್ದಾರೆ:
ಶಕುಂತಳಾ ಶೆಟ್ಟಿಯವರು 2013ರಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಪಡೆದು ಬಂದಾಗ ಇಲ್ಲಿರುವ ಗೊಂದಲ ನೋಡಿ ಅವರು ಈ ಭಾರಿ ಬಿಜೆಪಿಯನ್ನು ಸೋಲಿಸಿ ಅವರ ವಿರುದ್ಧ ಎದ್ದು ನಿಲ್ಲಬೇಕಾದರೆ ನಾನು ಗೆಲ್ಲಬೇಕು. ಹಾಗಾಗಿ ಈ ಭಾರಿ ನನಗೆ ಅವಕಾಶ ನೀಡಿ, ನನ್ನನ್ನು ಗೆಲ್ಲಿಸಿಕೊಡಿ. ಮುಂದಿನ ಭಾರಿ ಮಹಾಲಿಂಗೇಶ್ವರ ದೇವರಾಣೆ ನಿನಗೆ ಅವಕಾಶ ಎಂದು ಹೇಳಿದ್ದರು. ಈ ವಿಚಾರ ದೇವಸ್ಥಾನದ ಎದುರು ಹೇಳಿದಲ್ಲ. ಚುನಾವಣೆ ಸಂದರ್ಭ ಪುತ್ತೂರು ಸಿಟಿ ಸೆಂಟರ್‌ನಲ್ಲಿದ್ದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಹೇಳಿದ ಮಾತು. ಆದರೆ ಅವರು ಗೆದ್ದ ಬಳಿಕ ನಮ್ಮನ್ನು ತುಳಿಯುವ ಕೆಲಸ ಮಾಡಿದ್ದಾರೆ. ಮುಂದೆ 2018ರಲ್ಲಿ ದೇವರೇ ಅವರನ್ನು ತುಳಿದಿದ್ದಾರೆ. ಅವರು ಮುಂದಿನ ಬಾರಿ ನನಗೆ ಅವಕಾಶ ನೀಡುತ್ತೇನೆಂದು ಹೇಳಿಲ್ಲ ಎಂದಾದರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೋಗಿ ಹೇಳಬೇಕು.
ಹೇಮನಾಥ ಶೆಟ್ಟಿ ಕಾವು
ಮಾಜಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪುತ್ತೂರು


ಸುಳ್ಳು ಹೇಳುವ ಅಭ್ಯಾಸ ನನಗಿಲ್ಲ:
ನಾನು ಕಾಂಗ್ರೆಸ್ ಸೇರಿ ಒಂಬತ್ತೂವರೇ ವರ್ಷ ಆಗಿದೆ. ಹೇಮನಾಥ ಶೆಟ್ಟಿ ಮತ್ತು ಶಕುಂತಳಾ ಶೆಟ್ಟಿಯವರು ಹೇಗಿದ್ದಾರೆ ಎಂಬುದು ಜನರಿಗೆ ಗೊತ್ತು. ನಮ್ಮ ನಡುವೆ ಯಾವುದೇ ವ್ಯವಹಾರ ಇಲ್ಲ. ಜತೆಗೆ ಹೋಗುವುದೂ ಬರುವುದೂ ಇಲ್ಲ. ಮತ್ತೆ ಹೇಗೆ ನಾನು ಅವರಿಗೆ ಪ್ರಮಾಣ ಮಾಡಿ ಹೇಳೊದು ? ಒಂಬತ್ತುವರೇ ವರ್ಷದಲ್ಲಿ ಅವರು ನನ್ನನ್ನು ಬೈಯುತ್ತಾ ಇದ್ದಾರೆ. ನಾನು ಪ್ರಮಾಣ ಮಾಡಿದ್ದೇ ಆದರೆ ಪ್ರಮಾಣ ಮಾಡಿದ್ದು ಯಾವಾಗ ? ದೇವಸ್ಥಾನ ಯಾವುದು ? ಅರ್ಚಕರು ಯಾರು ? ಇದು ಕೂಡ ಹೇಳಬೇಕಲ್ಲ ? ಯಾವ ವಿಷಯಕ್ಕೂ ದೇವರ ಹೆಸರು ಹೇಳಿ ಪ್ರಮಾಣ ಮಾಡುವ ಅಭ್ಯಾಸ ನನಗೆ ಇಲ್ಲ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲ. ಚುನಾವಣೆ ಮುಗಿಯುವವರೆಗೂ ಇಂತಹ ಫೇಕ್ ನ್ಯೂಸ್‌ಗಳು ಬರುತ್ತಿರಬಹುದು. ಹೆಚ್ಚು ಏನನ್ನೂ ಹೇಳುವುದಿಲ್ಲ. ಸುಳ್ಳು ಹೇಳಿ ಅಭ್ಯಾಸ ನನಗಿಲ್ಲ. ನೋ ಕಮೆಂಟ್ಸ್…
ಶಕುಂತಳಾ ಶೆಟ್ಟಿ
ಮಾಜಿ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here