ಪುತ್ತೂರು : ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ ನೇಮಕಾತಿ 2022, ದೈಹಿಕ ಸದೃಢತೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಕಡಬ ತಾಲೂಕಿನ ಪಿಜಕ್ಕಳ ನಿವಾಸಿ ವೇದವ್ಯಾಸ ರೈ, ನವೀನಾ.ವಿ.ರೈ ದಂಪತಿ ಪುತ್ರಿ ಪೌರ್ಶಿ.ವಿ.ರೈರವರು ಉತ್ತೀರ್ಣರಾಗಿ ಭಾರತೀಯ ನೌಕಾ ಸೇನೆಗೆ ಆಯ್ಕೆಯಾಗಿದ್ದಾರೆ. ಈಕೆ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗ್ನಿಪಥ್ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ತರಬೇತಿಯಲ್ಲಿ ಪಾಲ್ಗೊಂಡು ತಯಾರಿ ನಡೆಸಿದ್ದರು. ಅಕ್ಟೋಬರ್ 13 ರಂದು ನೌಕಾನೆಲೆ ಕೊಚ್ಚಿಯಲ್ಲಿ ನಡೆದ ದೈಹಿಕ ಕ್ಷಮತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೆಂಬರ್ 24 ರಂದು INS ಚಿಲ್ಕ, ಒರಿಸ್ಸಾದಲ್ಲಿ ನಡೆಯಲ್ಲಿರುವ ವೈದ್ಯಕೀಯ ಪರೀಕ್ಷೆಯಲ್ಲಿ ಪೌರ್ಶಿ ರೈ ಪಾಲ್ಗೊಳಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಸಂಖ್ಯೆಯು ಬಹಳ ಕಡಿಮೆ ಅನ್ನೋ ಕೂಗಿನ ಮಧ್ಯೆಯೂ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತೀಯ ಸೇನೆ, ಪೋಲೀಸ್ ಇಲಾಖೆ ಸೇರಿದಂತೆ ನಾನಾ ನೇಮಕಾತಿಗಳಲ್ಲಿ ಗಣನೀಯ ಸಾಧನೆ ಮಾಡುತ್ತಿರುವುದಕ್ಕೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ, ವಿದ್ಯಾಮಾತಾ ಸಂಸ್ಥೆಯ ವಿದ್ಯಾರ್ಥಿ, ಕೊಡಗಿನ ವೈಭವ್ ನಾಣಯ್ಯರವರು ಅಗ್ನಿವೀರನಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು.