ರಾಮಕುಂಜ: ಪ್ರಸಿದ್ಧ ದೈವನರ್ತಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆನೇರೆಂಕಿ ಸಮೀಪದ ಮೇಲೂರು ದರ್ಖಾಸು ನಿವಾಸಿ ಕುಟ್ಟಿ ಪರವ(70ವ.)ರವರು ಅಸೌಖ್ಯದಿಂದ ನ.22 ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕುಟ್ಟಿ ಪರವ ಅವರು ಕೆಲ ಸಮಯಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಕಳೆದ 1 ತಿಂಗಳಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನ.22ರಂದು ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕುಟ್ಟಿ ಪರವ ಅವರು ತನ್ನ 15ನೇ ವರ್ಷದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ವೇಳೆ ನರ್ತನ ಸೇವೆ ಆರಂಭಿಸಿದ್ದರು. ಸುಮಾರು 54 ವರ್ಷ ದಕ್ಷಿಣ ಕನ್ನಡ ಹಾಗೂ ಅಸುಪಾಸಿನ ಜಿಲ್ಲೆಗಳಲ್ಲಿ ನರ್ತನ ಸೇವೆ ಮಾಡುವ ಮೂಲಕ ಇವರು ಚಿರಪರಿಚಿತರಾಗಿದ್ದರು. ಕೆಲಂಬೀರಿ, ಕೈಪಂಗಳ, ನೇರೆಂಕಿಗುತ್ತು, ಪುಣಚ, ಪಂಜ ಏಣ್ಮೂರು, ಮಡಿಕೇರಿ ಮೊಕಂದೂರು ಗರಡಿಗಳಲ್ಲಿ ನರ್ತನ ಸೇವೆ ನೀಡುತ್ತಿದ್ದರು.
ರಾಮಕುಂಜ, ಪಟ್ರಮೆ, ಕೊಕ್ಕಡ, ಆತೂರು, ಹಿರೇಬಂಡಾಡಿ, ಕೊಣಾಲು ಕಡೆಂಬಿಲತ್ತಾಯಗುಡ್ಡೆ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳ ವಾರ್ಷಿಕ ಜಾತ್ರೆ ಸಂದರ್ಭ, ದೈವಸ್ಥಾನಗಳಲ್ಲಿ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ನರ್ತನ ಸೇವೆ ನೀಡುತ್ತಿದ್ದರು. ಇವರು ಬೈದರ್ಕಳ, ಕೊಡಮಣಿತ್ತಾಯಿ, ಪಂಜುರ್ಲಿ, ಸತ್ಯದೇವತೆ, ರಕ್ತೇಶ್ವರಿ, ದೈವೊಂಕ್ಲು, ಜುಮಾದಿ, ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ ದೈವಗಳ ನರ್ತನ ಸೇವೆ ಮಾಡುತ್ತಿದ್ದರು. ಕುಟ್ಟಿಪರವ ಅವರು ಕಂಬಳದ ಓಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಊರಿನ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಿಗೂ ಹಲವು ರೀತಿಯ ಕೊಡುಗೆ ನೀಡಿದ್ದಾರೆ. ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ಇವರಿಗೆ 2014ನೇ ಸಾಲಿನಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿತ್ತು. ಅಲ್ಲದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು. ಹಲವು ಕಡೆಗಳಲ್ಲಿ ಚಿನ್ನದ ಉಂಗರು, ಚಿನ್ನದ ಕೈಬಳೆ, ಚಿನ್ನದ ಕೈ ಸರಪಳಿ ನೀಡಿ ಗೌರವಿಸಲಾಗಿದೆ. ಮೃತರು ಪತ್ನಿ ತುಂಗಮ್ಮ, ಪುತ್ರರಾದ ಓಬಯ್ಯ, ವೆಂಕಪ್ಪ, ಗಣೇಶ, ಯಾದವ, ಪುತ್ರಿ ವಸಂತಿ, ಅಳಿಯ ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ, ಒಡ್ಯಮೆಗುತ್ತು ನಾರಾಯಣ ರೈ, ಸತೀಶ್ ರೈ ಕೊಣಾಲುಗುತ್ತು, ಪಟ್ಟೆಗುತ್ತು ವೀರೇಂದ್ರ ಜೈನ್ ಮೇಲೂರು, ಪಟ್ಟೆಗುತ್ತು ರಂಜಿತ್ ಜೈನ್, ಬಜತ್ತೂರು ಗ್ರಾ.ಪಂ.ಸದಸ್ಯ ಗಂಗಾಧರ ಕೆ.ಎಸ್., ಮಾಜಿ ಸದಸ್ಯ ಆನಂದ ಕೆ.ಎಸ್., ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ಶೇಖರ ಗೌಡ ಕಟ್ಟಪುಣಿ, ರುಕ್ಮಿಣಿ ಶಿವತ್ತಮಠ, ಬಾಳಪ್ಪ ಡೆಂಬಲೆ, ಹಳೆನೇರೆಂಕಿ ಬ್ರಹ್ಮಬೈದರ್ಕಳ ಗರಡಿಯ ಕಿರಣ್ ಪಾದೆ, ಶ್ಯಾಮ್ ಭಟ್ ಮಾಸ್ಟರ್ ಪ್ಲಾನರಿ, ಕೈಪಂಗಳ ಬಾರಿಕೆ ಬ್ರಹ್ಮಬೈದರ್ಕಳ ಗರಡಿಯ ಮೋನಪ್ಪ, ಶುಭಾಕರ, ಕೆಲಂಬೀರಿ ಬ್ರಹ್ಮಬೈದರ್ಕಳ ಗರಡಿ ಮುಖ್ಯಸ್ಥರು, ಓಣಿತ್ತಾರು ದೇವಸ್ಥಾನದ ಮುಖ್ಯಸ್ಥರು, ಸದಸ್ಯರು, ಪುಣಚ ಬ್ರಹ್ಮಬೈದರ್ಕಳ ಗರಡಿಯ ಕುಟ್ಟಿ ಪೂಜಾರಿ, ಸೀತಾರಾಮ, ನಾರಾಯಣ, ಜನಾರ್ದನ ಕದ್ರ, ಹಳೆನೇರೆಂಕಿ ಶಾಲೆ ಮುಖ್ಯಶಿಕ್ಷಕ ಸಾಂತಪ್ಪ ವೈ, ಭಾಸ್ಕರ ಗೌಡ ಹಿರಿಂಜ, ಶೇಖರ ಹಿರಿಂಜ, ದೇವಕಿ ಹಿರಿಂಜ, ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ ಗೌಡ ಡೆಂಬಲೆ, ಜಾನಕಿ ಕೊಳಂಬೆ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ. ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.