ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ಡಿ.4ರ ತನಕ ನಡೆಯಲಿರುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದ ಅಂಗವಾಗಿ ನಡೆಯಲಿರುವ ಶ್ರೀ ಮದ್ಭಾಗವತ ಪಾರಾಯಣ ನ.28ರಂದು ಬೆಳಿಗ್ಗೆ ಆರಂಭಗೊಂಡಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ ವಾಚನ, ದೇವನಾಂದಿ, ರುತ್ವಿಗ್ವರಣೆ, ಕಲಶ ಪ್ರತಿಷ್ಠೆ, ಕಲಶಾರಾಧನೆ ಆಗಿ ಶ್ರೀ ಮದ್ಭಾಗವತ ಪಾರಾಯಣ ಆರಂಭ, ಮನುಕರ್ದಮ ಸಂವಾದ ಪರ್ಯಂತ ನಡೆಯಿತು. ಬೆಳಿಗ್ಗೆ ಶ್ರೀ ದತ್ತಾತ್ರೇಯ ಹವನ ಆರಂಭಗೊಂಡು ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಶ್ರೀ ಜ್ಯೋತಿರ್ವೈದ್ಯ ಸಂಗೀತ ಸಂಗಮ ಅಂಜರ ಇವರಿಂದ ಸಂಗೀತ ಸೇವೆ ನಡೆಯಿತು. ಸಂಜೆ ಶ್ರೀ ಮದ್ಭಾಗವತ ಪ್ರವಚನ, ಮಹಾಪೂಜೆ, ಪ್ರಸಾದ ವಿತರಣೆ ಮಾಡಲಾಯಿತು. ವೇದಮೂರ್ತಿ ವಿದ್ವಾನ್ ಕೆ.ಕೃಷ್ಣಮೂರ್ತಿ ಕಾರಂತ ಪೆರ್ನೆ ಇವರ ಆಚಾರ್ಯತ್ವದಲ್ಲಿ ವಿದ್ವಾನ್ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ, ಮುರಳಿಕೃಷ್ಣ ಭಟ್ ನಂದಗೋಕುಲ ಆಲಂತಾಯ ಹಾಗೂ ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಕಾಟುಕುಕ್ಕೆರವರು ಪ್ರವಚನ ನೀಡಿದರು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರೆಮೇಲು, ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶ್ರೀ ಮದ್ಭಾಗವತ ಸಪ್ತಾಹದ 2ನೇ ದಿನವಾದ ನ.29ರಂದು ಬೆಳಿಗ್ಗೆ ಶ್ರೀ ಮದ್ಭಾಗವತ ಪಾರಾಯಣ, ಶ್ರೀ ದ್ವಾದಶಾಕ್ಷರೀ ಹವನ, ಮಧ್ಯಾಹ್ನ ಭಜನೆ, ಸಂಜೆ ಶ್ರೀ ಮದ್ಭಾಗವತ ಪ್ರವಚನ ನಡೆಯಲಿದೆ.