ಉಪ್ಪಿನಂಗಡಿ: ಇಲ್ಲಿನ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಹಾಗೂ ಸೆಕ್ಷನ್ ಲೀಡರ್ ದಿನೇಶ್ ಬಿ. ಯವರ ಉತ್ಕೃಷ್ಠ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ನೀಡುವ ಎನ್‌ಡಿಆರ್ ಪ್ರಶಂಸನೀಯ ಪತ್ರ ಹಾಗೂ ಕಂಚಿನ ಪದಕಕ್ಕೆ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯ, ಗೃಹ ರಕ್ಷಕ ದಳ ಮಹಾ ನಿರ್ದೇಶನಾಲಯ, ಅಗ್ನಿ ಶಾಮಕ ಮತ್ತು ನಾಗರಿಕ ರಕ್ಷಣಾ ಇಲಾಖೆ ದೆಹಲಿ ಇವರು ಸಂಕಷ್ಟ ಸಮಯದಲ್ಲಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಸಾಧಕರನ್ನು ಗುರುತಿಸಿ ಪದಕ ಸಹಿತ ಪ್ರಶಂಶನೀಯ ಪತ್ರಕ್ಕೆ ಆಯ್ಕೆ ನಡೆಸಿ ಅಧಿಸೂಚನೆ ಹೊರಡಿಸಿದ್ದಾರೆ. ದೇಶದ ಕೇಂದ್ರಾಡಳಿತ ಪ್ರದೇಶವನ್ನೂ ಒಳಗೊಂಡಂತೆ ಒಟ್ಟು 19 ರಾಜ್ಯಗಳ ಸಾಧಕರನ್ನು ಗುರುತಿಸಲಾಗಿದ್ದು, ಕರ್ನಾಟಕದಲ್ಲಿ ಹಿರಿಯ ಪ್ಲಟೂನ್ ಕಮಾಂಡರ್ ಆಗಿರುವ ಬಿ.ಕೆ. ಬಸವಲಿಂಗ ಹಾಗೂ ಗೃಹ ರಕ್ಷಕ ದಳದ ಸೆಕ್ಷನ್ ಲೀಡರ್ ಆಗಿರುವ ದಿನೇಶ್ ಬಿ. ರವರು ಮಾತ್ರ ಆಯ್ಕೆಗೊಂಡಿರುತ್ತಾರೆ.
ಗೃಹ ರಕ್ಷಕ ದಳದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ದಿನೇಶ್ ಬಿ. ಅವರಿಗೆ 2018 ಹಾಗೂ 2019 ರಲ್ಲಿ ಇಲಾಖೆಯಿಂದ ನಗದು ಹಾಗೂ ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಗಿತ್ತು. ಇದೀಗ ಭಾರತ ಸರಕಾರದಿಂದ ಕೊಡಮಾಡುವ ಕಂಚಿನ ಪದಕ ಹಾಗೂ ಪ್ರಶಂಸನೀಯ ಪತ್ರಕ್ಕೆ ಆಯ್ಕೆಯಾಗುವ ಮೂಲಕ ದಿನೇಶ್ ಅವರು ಪ್ರ್ರಾಮಾಣಿಕ ಸೇವೆಗೆ ಯೋಗ್ಯ ಪುರಸ್ಕಾರವನ್ನು ಪಡೆದಂತಾಗಿದೆ. ಈ ಪುರಸ್ಕಾರಕ್ಕೆ ಇವರ ಹೆಸರನ್ನು ಕೇಂದ್ರ ಕಚೇರಿಗೆ ಗೃಹರಕ್ಷಕದಳದ ದ.ಕ. ಜಿಲ್ಲಾ ಸಮಾದೇಷ್ಟರಾದ ಡಾ. ಮುರಳೀ ಮೋಹನ್ ಚೂಂತಾರುರವರು ಶಿಫಾರಸ್ಸು ಮಾಡಿದ್ದರು.