ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ!
ಪುತ್ತೂರು: ಭಾರತೀಯ ಜನತಾ ಪಾರ್ಟಿಯ ದ.ಕ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿರುವುದಾಗಿ ಮಾಹಿತಿ ಲಭಿಸಿದೆ.
ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರೂ, ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಅಶೋಕ್ ಕುಮಾರ್ ರೈಯವರು ಬಿಜೆಪಿಗೆ ಗುಡ್ ಬೈ ಹೇಳುವುದು ಬಹುತೇಕ ಖಚಿತವಾಗಿದ್ದು ಅವರು ಕಾಂಗ್ರೆಸ್ ಸೇರುವುದೂ ಖಚಿತವಾಗಿದೆ.
ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ, 34ನೇ ನೆಕ್ಕಿಲಾಡಿಯ ಶಾಂತಿನಗರ ಮಹಾವಿಷ್ಣು ದೇವಸ್ಥಾನ, ಬೆಟ್ಟಂಪಾಡಿಯ ಮಹಾಲಿಂಗೇಶ್ವರ ದೇವಸ್ಥಾನ, ನಿಡ್ಪಳ್ಳಿಯ ಶಾಂತದುರ್ಗಾ ದೇವಸ್ಥಾನ, ಪಾಣಾಜೆಯ ರಣಮಂಗಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ವಿಟ್ಲ ಮಾಮೇಶ್ವರ ದೇವಾಲಯ ಸಹಿತ ಹಲವು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ರೂವಾರಿಯಾಗಿರುವ ಅಶೋಕ್ ಕುಮಾರ್ ರೈಯವರು ಕೆಲವು ಸಮಯಗಳಿಂದ ಬಿಜೆಪಿಯಿಂದ ದೂರವಾಗಿದ್ದಾರೆ. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗುತ್ತಿತ್ತು. ಈ ಮಧ್ಯೆ, ಬಿಜೆಪಿಯ ರಾಜ್ಯಮಟ್ಟದ ಪ್ರಮುಖ ನಾಯಕರು ಅಶೋಕ್ ರೈಯವರನ್ನು ಸಂಪರ್ಕಿಸಿ ಪಕ್ಷ ತೊರೆಯದಂತೆ ಮನವಿ ಮಾಡಿದ್ದರು.
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿಯೂ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ರೈಯವರಿಗೆ ಈ ಬಾರಿಯೂ ಬಿಜೆಪಿಯಿಂದ ಅವಕಾಶ ಸಿಗುವ ಸಾಧ್ಯತೆಗಳಿಲ್ಲ. ಈ ನಿಟ್ಟಿನಲ್ಲಿ ಅವರು ಕಾಂಗ್ರೆಸ್ ಕದ ತಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರೂ ಅಶೋಕ್ ರೈಯವರನ್ನು ಸಂಪರ್ಕಿಸಿದ್ದಾರೆ. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಲ್ಲಿ ಡಿ.ಕೆ.ಶಿವಕುಮಾರ್ ಅವರು ಅಶೋಕ್ ರೈ ಕುರಿತು ಅಭಿಪ್ರಾಯ ಕೇಳಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ.ಯವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾವುದೇ ಷರತ್ತು ವಿಧಿಸದೆ ಸಾಮಾನ್ಯ ಕಾರ್ಯಕರ್ತನಾಗಿ ಅಶೋಕ್ ರೈ ಪಕ್ಷಕ್ಕೆ ಬರುವುದಾದರೆ ನಮ್ಮ ಆಕ್ಷೇಪ ಇಲ್ಲ ಎಂದು ಅವರಿಬ್ಬರು ತಿಳಿಸಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ.
ಅಶೋಕ್ ರೈಯವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಸಮಾಜದ ತಳಮಟ್ಟದ ಸಾಮಾನ್ಯ ಜನರ ಸೇವೆ ಮಾಡಲು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾಂಗ್ರೆಸ್ ಸೇರಲಿರುವುದಾಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅಶೋಕ್ ರೈಯವರು ಕಾಂಗ್ರೆಸ್ ಸೇರಲಿದ್ದಾರೆ ಮತ್ತು ಅವರೇ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಭಾರೀ ಚರ್ಚೆ ನಡೆಯಲಾರಂಭಿಸಿದೆ. ರಾಜಕೀಯ ಸಂಚಲನ ಸೃಷ್ಠಿಯಾಗಿದೆ.
ಈಗಾಗಲೇ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೆಪಿಸಿಸಿಗೆ ಪುತ್ತೂರು ಕ್ಷೇತ್ರದಿಂದ ಅರ್ಜಿ ಸಲ್ಲಿಸಿರುವ 13 ಮಂದಿ ಕೂಡ ಮತ್ತೆ ಹೈಕಮಾಂಡ್ ಕದ ತಟ್ಟಿದ್ದಾರೆ. ತಮಗೇ ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಪೈಕಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಅವರ ಬಣದವರು ನೇರವಾಗಿ ಕದನ ಘೋಷಿಸಿದ್ದಾರೆ. ಅಶೋಕ್ ರೈಯವರಿಗೆ ಸ್ಪರ್ಧಿಸಲು ಅವಕಾಶ ನೀಡಲೇಬಾರದು ಎಂದು ಹೇಮನಾಥ ಶೆಟ್ಟಿ ಬಣ ಒತ್ತಾಯಿಸಿದೆ. ಇದೆಲ್ಲದರ ಮಧ್ಯೆ ಅಶೋಕ್ ರೈಯವರ ಅಭಿಮಾನಿಗಳು ಈ ಬಾರಿ ಕಾಂಗ್ರೆಸ್ ಸೇರಲೇಬೇಕು, ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಮ್ಮ ಟ್ರಸ್ಟ್ ಮೂಲಕ ವಿವಿಧ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಅಶೋಕ್ ರೈಯವರು ಚುನಾವಣಾ ಅಖಾಡಕ್ಕೆ ಧುಮಿಕಿದರೆ ಈ ಬಾರಿಯ ವಿಧಾನಸಭಾ ಚುನಾವಣೆ ಮತ್ತಷ್ಟು ರಂಗೇರಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗತೊಡಗಿದೆ. ಅಶೋಕ್ ರೈ ಬಿಜೆಪಿ ತೊರೆಯುವುದಿಲ್ಲ ಎಂದೂ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪುತ್ತೂರಿನ ಮಾಜಿ ಶಾಸಕರೂ, ಮಂಗಳೂರಿನ ಮಾಜಿ ಸಂಸದರೂ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರೂ, ಮಾಜಿ ಮುಖ್ಯಮಂತ್ರಿಗಳೂ, ಕೇಂದ್ರದ ಮಾಜಿ ಸಚಿವರೂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಬಿಜೆಪಿಯ ಪ್ರಭಾವಿ ನಾಯಕ ಡಿ.ವಿ.ಸದಾನಂದ ಗೌಡರವರ ಅತ್ಯಾಪ್ತರಾಗಿರುವ ಅಶೋಕ್ ರೈಯವರು ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಯಾವ ಪಕ್ಷದಲ್ಲಿ ಅವಕಾಶ ಕೊಡುತ್ತಾರೆಯೋ ಅದರಲ್ಲಿ ನಿಲ್ಲುತ್ತೇನೆ ಭ್ರಷ್ಟಾಚಾರ ತಡೆಯಲು ಪ್ರಯತ್ನಿಸುತ್ತೇನೆ-ಅಶೋಕ್ ರೈ
ಯಾವ ಪಕ್ಷ ಅಂತ ಗೊತ್ತಿಲ್ಲ. ಯಾವ ಪಕ್ಷದಲ್ಲಿ ಸೀಟ್ ಕೊಡ್ತಾರೆ ಆ ಪಕ್ಷದಲ್ಲಿ ಈ ಸಲ ಚುನಾವಣೆಗೆ ನಿಲ್ಲುತ್ತೇನೆ ಎಂದು ಉದ್ಯಮಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಪುತ್ತೂರಿನ ಸಾಲ್ಮರದಲ್ಲಿ ನವಭಾರತ್ ಕ್ರಿಕೆಟರ್ಸ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಅಶೋಕ್ ಕುಮಾರ್ ರೈಯವರು ರಾಜಕೀಯಕ್ಕೆ ಬರಬೇಕಾ ಎಂಬ ವಿಷಯ ಬಂದಾಗ ಬರಬೇಕು ಅಂತ ಅನಿಸುತ್ತದೆ. ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಬಡವರಿಗೆ ಎಲ್ಲಿ ಹೋದರೂ ಕೆಲಸ ಆಗುವುದಿಲ್ಲ. ಹಾಗಾಗಿ ಬಡವರ ಸೇವೆ ಇನ್ನಷ್ಟು ಮಾಡಲು ರಾಜಕೀಯ ಬಲ ಬೇಕಾಗಿದೆ ಎಂದರು. ನೀವೆಲ್ಲಾ ಆಶೀರ್ವಾದ ಮಾಡಿದರೆ ಈ ಬಾರಿ ಚುನಾವಣೆಗೆ ನಿಲ್ಲಬೇಕು ಎಂಬ ಆಶಯ ಇದೆ. ಯಾವ ಪಕ್ಷ ಅಂತ ಗೊತ್ತಿಲ್ಲ. ಯಾವ ಪಕ್ಷದಲ್ಲಿ ಸೀಟ್ ಕೊಡ್ತಾರೆ ಆ ಪಕ್ಷದಲ್ಲಿ ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ, ಸುಮಾರು ಜನ ಕರೆ ಮಾಡಿ ನೀವು ಯಾವ ಪಕ್ಷದಿಂದ ಬೇಕಾದರೂ ನಿಲ್ಲಿ, ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಎಲ್ಲಾದರೂ ಅವಕಾಶ ಸಿಕ್ಕಿ ಚುನಾವಣೆಯಲ್ಲಿ ಜಯ ಸಾಧಿಸಿದರೆ ಖಂಡಿತವಾಗಿಯೂ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಭ್ರಷ್ಟಾಚಾರವನ್ನು ಎಷ್ಟರ ಮಟ್ಟಿಗೆ ತಡೆಗಟ್ಟಲು ಸಾಧ್ಯವೋ ಅಷ್ಟರ ಮಟ್ಟಿಗೆ ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತೇನೆ. ಬಡವರಿಗೆ ಅವರ ಹಕ್ಕು ದೊರೆಯಲು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದು ಅಶೋಕ್ ರೈ ಹೇಳಿದರು.
ಷರತ್ತು ರಹಿತವಾಗಿ ಬರುವುದಾದರೆ ನಮ್ಮ ಆಕ್ಷೇಪವಿಲ್ಲ:
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಶೋಕ್ ರೈ ಕುರಿತು ಅಭಿಪ್ರಾಯ ಕೇಳಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ.ಯವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾವುದೇ ಷರತ್ತು ವಿಧಿಸದೆ ಸಾಮಾನ್ಯ ಕಾರ್ಯಕರ್ತನಾಗಿ ಅಶೋಕ್ ರೈ ಪಕ್ಷಕ್ಕೆ ಬರುವುದಾದರೆ ನಮ್ಮ ಆಕ್ಷೇಪ ಇಲ್ಲ ಎಂದು ಅವರಿಬ್ಬರು ತಿಳಿಸಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ.