ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ವರ್ಗಾವಣೆ ಆದೇಶ ರದ್ದುಗೊಳಿಸಿದ ಕೆಎಟಿ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ.ರವರನ್ನು ವರ್ಗಾವಣೆಗೊಳಿಸಿದ ಆದೇಶವನ್ನು ರದ್ದುಪಡಿಸಿ, ಒಂದು ತಿಂಗಳೊಲಗೆ ಮತ್ತೆ ಆರ್ಯಾಪು ಗ್ರಾ.ಪಂಗೆ ವರ್ಗಾವಣೆಗೊಳಿಸುವಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಆದೇಶ ನೀಡಿದೆ.


ಪಿಡಿಓ ನಾಗೇಶ್ ರವರರನ್ನು ಇತ್ತೀಚಿಗೆ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿತ್ತು. ತನ್ನನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ನಾಗೇಶ್ ರವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ನಾಗೇಶ್ ರವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವರ್ಗಾವಣೆಯ ಆದೇಶವನ್ನು ರದ್ದುಪಡಿಸಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತ ಸದಸ್ಯ ಡಾ.ಎಸ್.ಕೆ ಪಟ್ಟಾ ನಾಯಕ್ ಈ ಆದೇಶ ನೀಡಿದ್ದಾರೆ. ಪಿಡಿಓ ನಾಗೇಶ್ ಪರ ಹಿರಿಯ ವಕೀಲ ಪಿ.ಪಿ ಹೆಗ್ಡೆ ವಾದಿಸಿದ್ದರು.

ಅಕಾಲಿಕ ವರ್ಗಾವಣೆಯಿಂದಾಗಿ ಪಿಡಿಓ ನಾಗೇಶ್ ತೊಂದರೆಗೆ ಒಳಗಾಗಿದ್ದಾರೆ. ಇವರ ವರ್ಗಾವಣೆಯು ವರ್ಗಾವಣಾ ಮಾರ್ಗ ಸೂಚಿಗಳ ಷರತ್ತಿಗೆ ವಿರುದ್ಧವಾಗಿದೆ. ಪಿಡಿಓ ಅವರ ವೃತ್ತಿ ಜೀವನಕ್ಕೆ ಈ ಆದೇಶ ತೊಂದರೆ ಉಂಟು ಮಾಡಿದೆ. ಅಲ್ಲದೆ ಅವರ ವೃತ್ತಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಹಿಂದೆ ನ್ಯಾಯಾಲಯಗಳು ನೀಡಿದ್ದ ಆದೇಶವನ್ನು ಉಲ್ಲಂಘಿಸಿ ಪಿಡಿಓರವರನ್ನು ವರ್ಗಾಯಿಸಲಾಗಿದೆ. ಅಲ್ಲದೆ ಪಿಡಿಓ ವರ್ಗಾವಣೆಗೆ ಯಾವುದೇ ಕಾರಣ ನಿಗದಿ ಪಡಿಸಿಲ್ಲ ಎಂದು ಪಿ.ಪಿ ಹೆಗ್ಡೆ ವಾದ ಮಂಡಿಸಿದ್ದರು. ಇವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ವರ್ಗಾವಣೆ ಆದೇಶವನ್ನು ರದ್ದಗೊಳಿಸಿ ಒಂದು ತಿಂಗಳೊಲಗೆ ಆರ್ಯಾಪು ಗ್ರಾ.ಪಂಗೆ ಮತ್ತೆ ವರ್ಗಾವಣೆಗೊಳಿಸುವಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಆದೇಶ ನೀಡಿದೆ.

ಪಿಡಿಓ ನಾಗೇಶ್ ರವರ ವರ್ಗಾವಣೆಯಿಂದ ಪಂಚಾಯತ್ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿದ್ದು ಅವರ ವರ್ಗಾವಣೆಯ ಆದೇಶವನ್ನು ಹಿಂಪಡೆಯುವಂತೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನು ಮತದಿಂದ ನಿರ್ಣಯ ಕೈಗೊಂಡು ಶಾಸಕರು, ಗ್ರಾಮೀಣಾಭಿವೃದ್ಧಿ ಸಚಿವರು, ಜಿ.ಪಂ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಅಲ್ಲದೆ ಡಾ.ಎಂ.ಕೆ ಪ್ರಸಾದ್ ರವರ ನೇತೃತ್ವದ ಗ್ರಾ.ಪಂ ಸದಸ್ಯರ ನಿಯೋಗ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಹಾಗಿದ್ದರೂ ಪಿಡಿಓ ನಾಗೇಶ್‌ರವರನ್ನು ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾ.ಪಂಗೆ ವರ್ಗಾವಣೆ ಮಾಡಲಾಗಿತ್ತು. ಪಿಡಿಓರವರ ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರಕಾರದಿಂದ ಯಾವುದೇ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯರಾದ ವಸಂತ ಶ್ರೀ ದುರ್ಗಾರವರು ರಾಜಿನಾಮೆ ಸಲ್ಲಿಸಿದ್ದರು. ಸಾಮಾನ್ಯ ಸಭೆಯ ನಿರ್ಣಯಕ್ಕೆ ಬೆಲೆ ನೀಡಿ ಮತ್ತೆ ಅವರನ್ನು ಇದೇ ಪಂಚಾಯತ್‌ಗೆ ನೇಮಕಗೊಳಿಸಿದರೆ ಮಾತ್ರ ರಾಜಿನಾಮೆ ಹಿಂಪಡೆಯುವುದಾಗಿ ವಸಂತರವರು ತಿಳಿಸಿದ್ದರು. ಈಗ ನ್ಯಾಯಾಲಯ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ.

ಸದಸ್ಯ ವಸಂತರಿಂದ ರಾಜೀನಾಮೆ:

ಪಿಡಿಓರವರ ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರಕಾರದಿಂದ ಯಾವುದೇ ಬೆಲೆ ದೊರೆಯಲಿಲ್ಲವೆಂದು ಗ್ರಾ.ಪಂ.ಮಾಜಿ ಉಪಾಧ್ಯಕ್ಷರೂ ಆಗಿರುವ ಹಾಲಿ ಸದಸ್ಯ ವಸಂತ `ಶ್ರೀ ದುರ್ಗಾ’ರವರು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದರು.ಸಾಮಾನ್ಯ ಸಭೆಯ ನಿರ್ಣಯಕ್ಕೆ ಬೆಲೆ ನೀಡಿ ಪಿಡಿಒ ನಾಗೇಶ್ ಅವರನ್ನು ಮತ್ತೆ ಆರ್ಯಾಪು ಗ್ರಾಮ ಪಂಚಾಯತ್‌ಗೆ ನೇಮಕಗೊಳಿಸಿದರೆ ಮಾತ್ರ ರಾಜೀನಾಮೆ ಹಿಂಪಡೆಯುವುದಾಗಿ ವಸಂತರವರು ತಿಳಿಸಿದ್ದರು.ದಿನಗಳ ಹಿಂದೆ ನಡೆದ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿಯೂ ವಿಚಾರ ಪ್ರಸ್ತಾಪವಾಗಿ, ವಸಂತ ಅವರು ರಾಜೀನಾಮೆ ಹಿಂಪಡೆದುಕೊಳ್ಳುವಂತೆ ಅಧ್ಯಕ್ಷರ ಸಹಿತ ಎಲ್ಲರೂ ಮನವೊಲಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.ಇದೀಗ, ಪಿಡಿಒ ವರ್ಗಾವಣೆ ಆದೇಶವನ್ನು ಕೆಎಟಿ ರದ್ದುಪಡಿಸಿದೆ.

LEAVE A REPLY

Please enter your comment!
Please enter your name here