ಪುತ್ತೂರು: ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ನಿಗದಿತ ಸಮಯಕ್ಕೆ ಸಂಬಳ ನೀಡದೇ ವಿಳಂಬ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಪುತ್ತೂರು ಕಾರ್ಮಿಕ ಇಲಾಖಾ ಅಧಿಕಾರಿಗೆ ಮನವಿ ನೀಡಲಾಯಿತು.
ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ಇಂದಿರಾ ಕ್ಯಾಂಟೀನ್‌ನ ಉಪಯೋಗವನ್ನು ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಬಡ ಕೂಲಿ ಕಾರ್ಮಿಕರು, ಆಟೋ ಚಾಲಕರು ಪಡೆಯುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಸಂಬಳ ನೀಡದೇ ಇರುವ ಕಾರಣ ಸರಿಯಾಗಿ ಕೆಲಸಗಳನ್ನು ನಿರ್ವಹಿಸಲು ಸಿಬಂದಿಗಳಿಗೆ ಅಸಾಧ್ಯವಾಗುತ್ತಿದೆ. ಬಡ ವಿದ್ಯಾರ್ಥಿಗಳ, ಕೂಲಿ ಕಾರ್ಮಿಕರ ಹಿತ ಕಾಪಾಡುವ ದೃಷ್ಟಿಯಿಂದ ಸಂಬಳ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಂಡು ಇಂದಿರಾ ಕ್ಯಾಂಟೀನ್‌ನ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಂತೆ ಮಾಡಬೇಕು. ವಿಳಂಬ ಸಂಬಳ ನೀತಿ ಮುಂದುವರಿದರೆ ಕಾರ್ಮಿಕ ಇಲಾಖೆಯ ಮತ್ತು ಇಂದಿರಾ ಕ್ಯಾಂಟಿನ್ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರ, ಜಿಲ್ಲಾ ಕಾಂಗ್ರೆಸ್ ಸೇವದಳದ ಅಧ್ಯಕ್ಷ ಜೋಕಿಮ್ ಡಿಸೋಜ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತಾರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಅಧ್ಯಕ್ಷ ಸನತ್ ರೈ ಎಳ್ನಾಡ್‌ಗುತ್ತು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪುತ್ತೂರು ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೇಶವ್ ಪಡೀಲ್ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.