ದ.08: ಕೂರೇಲು ಶ್ರೀ ಮಲರಾಯ ದೈವಗಳ ಅದ್ದೂರಿ ನೇಮೋತ್ಸವ

0

ಪುತ್ತೂರು: ವಿಶೇಷ ಕಾರಣಿಕತೆಯನ್ನು ಹೊಂದಿರುವ ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಿರುವ ಶ್ರೀ ಮಲರಾಯ ದೈವಸ್ಥಾನದ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಹಿಶಾಂತಯ ದೈವಗಳ ನೇಮೋತ್ಸವವು ದ.08 ರಂದು ನಡೆಯಲಿದೆ. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ಕೊಡ್ಲಾರುರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಹೋಮ, ನಾಗತಂಬಿಲ, ಹರಿಸೇವೆ, ಧರ್ಮದೈವಗಳ ಕಲಶಾಭಿಷೇಕ ಮತ್ತು ತಂಬಿಲ ಸೇವೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 9 ರಿಂದ ಕಳಲ್ತಾ ಗುಳಿಗ ನೇಮೋತ್ಸವ, ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ, ಬಡಿಸುವುದು ಕಾರ್ಯಕ್ರಮ ನಡೆದು ಬಳಿಕ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಜಿಶಾಂತಯ ದೈವಗಳ ನೇಮೋತ್ಸವ ಅದ್ಧೂರಿಯಾಗಿ ನಡೆಯಲಿದೆ. ನೇಮೋತ್ಸವದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದು ದ.9 ರಂದು ಸಂಜೆ 7 ರಿಂದ ಇತರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಕೂರೇಲು ಕುಟುಂಬಸ್ಥರು, ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸುವಂತೆ ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಕೆ.ಸಂಜೀವ ಪೂಜಾರಿ ಕೂರೇಲುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

200 ವರ್ಷಗಳ ದೀರ್ಘ ಇತಿಹಾಸ

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸೇರಿದಂತೆ ಬೆಳ್ತಂಗಡಿ, ಗುರುವಾಯನಕೆರೆ, ಮಂಗಳೂರು, ಅಡ್ಕಾರು, ಬಂಟ್ವಾಳ, ಪುಂಜಾಲಕಟ್ಟೆ, ಬಳ್ಳಮಂಜ, ಪಣಕಜೆ, ಗೇರುಕಟ್ಟೆ, ಮಾಣೂರು, ಮಾಣಿ, ಕಣಿಯಾರು, ಮಾಡಾವು, ಮಡಿಕೇರಿ, ಸುಳ್ಯ, ಚೊಕ್ಕಾಡಿ ಇತ್ಯಾದಿ ಕಡೆಗಳಲ್ಲಿ ಕೂರೇಲು ಕುಟುಂಬದ ಸದಸ್ಯರಿದ್ದಾರೆ. ಸುಮಾರು 50ಕ್ಕಿಂತಲೂ ಅಧಿಕ ಮನೆಗಳಿದ್ದು 500 ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಸುಮಾರು 200 ವರ್ಷಗಳ ದೀರ್ಘ ಇತಿಹಾಸವಿರುವ ಮಲರಾಯ, ಮಲರಾಯ ಬಂಟ ಮಹಿಶಾಂತಾಯ, ಕಳ್ತಾಲ್ತ ಗುಳಿಗ, ವರ್ಣರ ಪಂಜುರ್ಲಿ,ಕುಪ್ಪೆ ಪಂಜುರ್ಲಿ, ಕೊರತ್ತಿ, ಕೊರಗಜ್ಜ,ಕಲ್ಲುರ್ಟಿ ಮತ್ತು ಮುಡಿಪು ಲಕ್ಷ್ಮೀಕೋಣೆ ಇವುಗಳು ಕೂರೇಲು ಕುಟುಂಬದ ದೈವಗಳಾಗಿ ವರ್ಷಂಪ್ರತಿ ಆರಾಧನೆ ಪಡೆಯುತ್ತಿವೆ. ಈ ದೈವಗಳಿಗೆ 2007 ರಲ್ಲಿ ದೈವಸ್ಥಾನ ನಿರ್ಮಿಸಿ ಬ್ರಹ್ಮಕಲಶ ನಡೆಸಲಾಯಿತು. ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಶ್ರೀ ಮಲರಾಯ ದೈವದ ಅಪಾರ ಕಾರಣಿಕತೆಯನ್ನು ಹೊಂದಿರುವ ದೈವವಾಗಿದೆ. ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆಗೆ ಪುಷ್ಠಿ ಕೊಡುವ ಹಲವು ನಿದರ್ಶನಗಳು ನಡೆದಿದೆ. ಕೃಷಿ, ಉದ್ಯೋಗ, ವ್ಯಾಪಾರ, ಮದುವೆ, ಸಂತಾನ ಭಾಗ್ಯ ಹೀಗೆ ಭಕ್ತನ ಬೇಡಿಕೆಗೆ ಕೂರೇಲು ದೈವಗಳ ಅನುಗ್ರಹ ಸದಾ ಇದೆ ಎಂಬುದಕ್ಕೆ ಇಲ್ಲಿ ಬಂದು ಸೇರುವ ಚಿನ್ನ, ಬೆಳ್ಳಿಯ ಆಭರಣಗಳೇ ಸಾಕ್ಷಿ. ಶ್ರೀ ದೈವಸ್ಥಾನದಲ್ಲಿ ಪ್ರತಿ ಸಂಕ್ರಮಣ ಸೇವೆಯೊಂದಿಗೆ ಹರಕೆ ರೂಪದ ಸೇವೆಗಳು ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9448153055 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here