ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ನ 2022-23 ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಕುಂಬ್ರ ರೈತ ಸಭಾ ಭವನದಲ್ಲಿ ದ.6 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪತ್ರಕರ್ತ ಮೌನೇಶ್ ವಿಶ್ವಕರ್ಮರವರು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಪಂಚಾಯತ್, ಶಿಕ್ಷಕರ, ಹೆತ್ತವರ ಕರ್ತವ್ಯ ಮಾತ್ರವಲ್ಲದೆ ಸಾರ್ವಜನಿಕರು ಕೂಡ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಜಾಗೃತಿ ವಹಿಸಬೇಕು. ಮಕ್ಕಳ ಹಕ್ಕುಗಳಿಗೆ ತೊಂದರೆಯಾದಲ್ಲಿ ಸಹಾಯವಾಣಿ 1098 ಕ್ಕೆ ಕರೆ ಮಾಡಿ ವಿಷಯ ತಿಳಿಸಬಹುದು ಎಂದರು.
ಮಕ್ಕಳ ಗ್ರಾಮಸಭೆ ಕೇವಲ ಶಾಲೆಯಲ್ಲಿರುವ ಸಮಸ್ಯೆ, ತೊಂದರೆಗಳನ್ನು ಮಾತ್ರ ತಿಳಿಸುವ ಸಭೆಯಾಗದೆ ಮಕ್ಕಳಿಗೆ ತಮ್ಮ ಇನ್ನಿತರ ಸಮಸ್ಯೆಗಳನ್ನು ಕೂಡ ಹೇಳಿಕೊಳ್ಳಲು ಅವಕಾಶ ಇದೆ. ಮಕ್ಕಳಿಗೆ ಯಾವುದೇ ಸಮಸ್ಯೆಗಳಿದ್ದರೂ ಗ್ರಾಮಸಭೆ ತನಕ ಕಾಯದೆ ಆ ಕೂಡಲೇ ತಮ್ಮ ಹೆತ್ತವರಲ್ಲಿ, ಶಿಕ್ಷಕರಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದು ಹೇಳಿದರು.
ಸಿಆರ್ಪಿ ಶಶಿಕಲಾರವರು ಸಂದರ್ಭೋಚಿತವಾಗಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಶೌಚಾಲಯದ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿರುವ ಒಳಮೊಗ್ರು ಗ್ರಾಪಂಗೆ ಧನ್ಯವಾದಗಳನ್ನು ಅರ್ಪಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಶಾಲಾ ಸಮಸ್ಯೆಗಳಿಗೆ ಗ್ರಾಪಂ ಶೀಘ್ರ ಸ್ಪಂದನೆ ನೀಡುತ್ತಿದ್ದು ಶಾಲಾ ಸಮಸ್ಯೆಗಳ ಬಗ್ಗೆ ಗ್ರಾಪಂನ ವಾರ್ಡ್ ಸದಸ್ಯರಿಗೆ ತಿಳಿಸುವಂತೆ ಕೇಳಿಕೊಂಡರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಕುಂಬ್ರ ಕೆಪಿಎಸ್ ಶಾಲಾ ನಾಯಕಿ ಧರಿತ್ರಿ ಭಟ್, ದರ್ಬೆತ್ತಡ್ಕ ಶಾಲಾ ನಾಯಕ ಪುಷ್ಪರಾಜ್ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಸ್ವಾಗತಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಪಂಚಾಯತ್ನ ಕರ್ತವ್ಯದ ಬಗ್ಗೆ ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಗ್ರಾಪಂ ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ , ಗ್ರಂಥಪಾಲಕಿ ಸಿರಿನಾ ಸಹಕರಿಸಿದ್ದರು. ಕಾರ್ಯದರ್ಶಿ ಜಯಂತಿ ಸಹಕರಿಸಿದ್ದರು. ಪಂಚಾಯತ್ ಸದಸ್ಯರುಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ವ್ಯಾಪ್ತಿಯ ಕುಂಬ್ರ ಕೆಪಿಎಸ್, ದರ್ಬೆತ್ತಡ್ಕ, ಏಕತ್ತಡ್ಕ, ಪರ್ಪುಂಜ, ಕೈಕಾರ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಹೇಳಿದ ಸಮಸ್ಯೆಗಳು
ಬಹುತೇಕ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಮುಖ್ಯವಾಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು. ಪರ್ಪುಂಜ ಶಾಲಾ ಅಡುಗೆ ಕೊಠಡಿಯ ಮೇಲ್ಛಾವಣಿಗೆ ಹಾನಿಯುಂಟಾಗಿದ್ದು ಸರಿಪಡಿಸಿಕೊಡಿ, ಪ್ಲಾಸ್ಟಿಕ್ ವಿಲೇವಾರಿ ಮಾಡಲು ಕಷ್ಟವಾಗುತ್ತಿದೆ, ಪಂಚಾಯತ್ ಸ್ವಚ್ಛವಾಹಿನಿ ಬರಲಿ ಎಂದು ಏಕತ್ತಡ್ಕ ಶಾಲಾ ವಿದ್ಯಾರ್ಥಿ ಹೇಳಿದರು. ಪರ್ಪುಂಜ ಶಾಲೆಗೆ ಸುಣ್ಣಬಣ್ಣ ಬಳಿದು ಸುಂದರಗೊಳಿಸಬೇಕು ಅಲ್ಲದೆ ಶಾಲೆಗೆ ಆವರಣ ಗೋಡೆ ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿಗಳು ಕೇಳಿಕೊಂಡರು. ಕಳೆದ 2ವರ್ಷಗಳಿಂದ ಸೈಕಲ್ ವಿತರಣೆಯಾಗಿಲ್ಲ ಎಂಬ ಬಗ್ಗೆ ವಿದ್ಯಾರ್ಥಿಗಳು ಸಭೆಯ ಗಮನ ಸೆಳೆದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಪಂಚಾಯತ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಸಭೆಯ ಬಳಿಕ ಉಜಿರೆ ಎಸ್ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಬೀದಿ ನಾಟಕ ಕುಂಬ್ರ ಕಟ್ಟೆಯ ಬಳಿ ನಡೆಯಿತು.