ತಾ|ಸರಕಾರಿ ನೌಕರರ ಸಂಘದ ಕೋಶಾಧಿಕಾರಿ, ಕಂದಾಯ ಇಲಾಖೆಯ ನಾಗೇಶ್ ಕೆ.ರವರಿಗೆ ನಿವೃತ್ತ ಸನ್ಮಾನ

0

ಪುತ್ತೂರು: ಕಂದಾಯ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಹಾಗೂ ಕೋರ್ಟ್‌ರಸ್ತೆ ಮಿನಿವಿಧಾನ ಸೌಧದ ಬಳಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ತಾಲೂಕು ಶಾಖೆಯ ಕೋಶಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್ ಕೆ.ರವರನ್ನು ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ನಿವೃತ್ತ ಸನ್ಮಾನವು ಡಿ.5 ರಂದು ಸಂಘದ ಸರಕಾರಿ ನೌಕರರ ಸಭಾಭವನದಲ್ಲಿ ಜರಗಿತು.


ನಾಗೇಶ್‌ರವರ ಸೇವೆಗಿದೋ ಪ್ರೀತಿಯ ಸನ್ಮಾನ-ಡಾ|ವೀರಯ್ಯ ಹಿರೇಮಠ್:
ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ|ವೀರಯ್ಯ ಹಿರೇಮಠ್‌ರವರು ನಿವೃತ್ತಗೊಂಡ ನಾಗೇಶ್ ಕೆ.ರವರನ್ನು ಸನ್ಮಾನಿಸಿ ಮಾತನಾಡಿ, ನಿವೃತ್ತಿಗೊಂಡ ನಾಗೇಶ್‌ರವರ ಬಗ್ಗೆ ನಾನು ಹೆಚ್ಚೇನು ತಿಳಿದಿಲ್ಲ. ಆದರೆ ಅವರನ್ನು ಸರಕಾರಿ ನೌಕರರ ಸಂಘ ಬಹಳ ಪ್ರೀತಿಯಿಂದ ಸನ್ಮಾನಿಸಿರೋದು ನೋಡಿದಾಗ ಅವರು ಎಷ್ಟರಮಟ್ಟಿಗೆ ಸೇವೆ ನೀಡಿದ್ದಾರೆ ಎಂಬುದು ಪ್ರಸ್ತುತಪಡಿಸುತ್ತದೆ. ನಾಗೇಶ್‌ರವರು ನಿವೃತ್ತಿ ನಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅವರ ನಿವೃತ್ತಿ ಬದುಕು ಉಜ್ವಲವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಸೇವಾ ಅವಧಿಯ ಉತ್ತಮ ಕೆಲಸವೇ ಅಚ್ಚಳಿಯದೆ ಉಳಿಯುವಂತಹುದು-ಲೋಕೇಶ್ ಎಸ್.ಆರ್:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಸರಕಾರಿ ಸೇವೆಗೆ ಸೇರುವಾಗ ಆಗುವ ಖುಷಿ ಹಾಗೂ ನಿವೃತ್ತಿ ಸಂದರ್ಭದಲ್ಲೂ ಅದೇ ಖುಷಿ ಇದ್ದಾಗ ಅದು ನಮ್ಮ ಸೇವೆಯು ಉತ್ತಮ ರೀತಿಯಲ್ಲಿ ನಿರ್ವಹಿಸಿರುವಿರಿ ಎಂದು ತಿಳಿಸುತ್ತದೆ. ಸೇವಾ ಅವಧಿಯಲ್ಲಿ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದಾಗ ಅದು ನಿವೃತ್ತಿ ನಂತರವೂ ನಮ್ಮ ಹೆಸರು ಅಚ್ಚಳಿಯದೆ ಉಳಿಸುತ್ತದೆ ಮಾತ್ರವಲ್ಲ ನಮ್ಮ ಆಯಸ್ಸು ಕೂಡ ಹೆಚ್ಚಿಸುತ್ತದೆ ಎಂದು ಹೇಳಿ ನಿವೃತ್ತರಾದ ನಾಗೇಶ್‌ರವರ ಮುಂದಿನ ಜೀವನಕ್ಕೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ನಾಗೇಶ್‌ರವರ ಸೇವೆ-ನವೀನ್ ಭಂಡಾರಿ:
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ನಾಗೇಶ್‌ರವರು ಸರಕಾರಿ ನೌಕರರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಬಹಳ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ. ಚುನಾವಣೆ ಅಥವಾ ಇತರ ಯಾವುದೇ ಸಂದರ್ಭದಲ್ಲಿ ನಾಗೇಶ್‌ರವರ ಕಾರ್ಯ ಶ್ಲಾಘನೀಯ ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಯಾವುದೇ ಕಪ್ಪುಚುಕ್ಕೆಯಿಲ್ಲದೆ ಕೆಲಸ ನಿರ್ವಹಿಸಿ ಮನೆ ಮಾತಾಗಿದ್ದಾರೆ-ಕಿರಣ್ ಬಿ.ಎಂ:
ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಮಾತನಾಡಿ, ಈ ದಿನ ಅರಣ್ಯ ಇಲಾಖೆಯಲ್ಲೂ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ನಾಗೇಶ್‌ರವರ ಬಗ್ಗೆ ನನಗೆ ಅಷ್ಟೇನು ತಿಳಿದಿಲ್ಲವಾದರೂ, ಸರಕಾರಿ ನೌಕರರ ಅಧ್ಯಕ್ಷ ಶಿವಾನಂದ್ ಹಾಗೂ ಇತರ ನನ್ನ ಹಿತೈಷಿಗಳು ನಾಗೇಶ್‌ರವರೋರ್ವ ಉತ್ತಮ ಅಧಿಕಾರಿ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಧನಾತ್ಮಕವಾಗಿ ಹೇಳಿದ್ದರಿಂದ ನಾವು ನಮ್ನ ಕಾರ್ಯಕ್ರಮವನ್ನು ಮುಂದೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಅಕ್ರಮ ಸಕ್ರಮ ಹಾಗೂ ಚುನಾವಣಾ ಶಾಖೆ ಇವೆರಡೂ ಬಹಳ ಕ್ಲಿಷ್ಟಕರ ಇಲಾಖೆಗಳಾಗಿದ್ದು, ನಾಗೇಶ್‌ರವರು ತಮ್ಮ ಕರ್ತವ್ಯ ನಿಷ್ಠೆಯಿಂದ ಯಾವುದೇ ಕಪ್ಪುಚುಕ್ಜೆಯಿಲ್ಲದೆ ಕೆಲಸ ನಿರ್ವಹಿಸಿ ಮನೆ ಮಾತಾಗಿದ್ದಾರೆ ಎಂದು ಹೇಳಿ ನಾಗೇಶ್‌ರವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಭ್ರಷ್ಟಾಚಾರರಹಿತ ಸೇವೆಗೆ ಜನ ಮೆಚ್ಚಿದ ಅಧಿಕಾರಿ ಪ್ರಶಸ್ತಿ-ಮೌರಿಸ್ ಮಸ್ಕರೇನ್ಹಸ್:
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿ ಸಾಧನೆಯ ಮುಖಾಂತರ ಬೇರೆ ಬೇರೆ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ನಿರ್ವಹಿಸುತ್ತಾ ಹೊಗಳಿಕೆಗೆ ಪಾತ್ರರಾದವರು ನಾಗೇಶ್‌ರವರು. ಕಂದಾಯ ಇಲಾಖೆಯಲ್ಲಿನ ಅಕ್ರಮ ಸಕ್ರಮ, ಭೂ ನ್ಯಾಯ ಮಂಡಳಿಯ ಕಡತಗಳನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ಶೀಘ್ರ ವಿಲೇವಾರಿಯನ್ನು ನಾಗೇಶ್‌ರವರು ಮಾಡಿರುತ್ತಾರೆ. ನಾಗೇಶ್‌ರವರೋರ್ವ ಲಂಚಕ್ಕೆ ವಿರೋಧಿ, ಭ್ರಷ್ಟಾಚಾರರಹಿತ ಅಧಿಕಾರಿಯಾಗಿದ್ದು ಅವರ ಸೇವೆಯನ್ನು ಗುರುತಿಸಿ `ಸುದ್ಧಿ’ ಪತ್ರಿಕೆಯು ನಡೆಸಿದ ಅಭಿಯಾನದಲ್ಲಿ ಅವರನ್ನು `ಜನ ಮೆಚ್ಚಿದ ಅಧಿಕಾರಿ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘದ ನೂತನ ಕಟ್ಟಡದ ಆರಂಭದಲ್ಲಿ ಕಟ್ಟಡಕ್ಕೆ ಬೇಕಾದ ಪತ್ರ ವ್ಯವಹಾರ, ಬ್ಯಾಂಕ್ ಸಾಲಗಳಿಗೆ ಆಡಿಟ್ ರಿಪೋರ್ಟ್ ತಯಾರಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತಿದ್ದು, ನಾಗೇಶ್‌ರವರ ಮುಂದಿನ ನಿವೃತ್ತ ಜೀವನವು ಸುಖಕರವಾಗಿರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ನಾಗೇಶ್‌ರವರು ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಜ್ಞಾನವುಳ್ಳವರು-ಕೆ.ಕೃಷ್ಣಪ್ಪ:
ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪರವರು ಮಾತನಾಡಿ, ನಿವೃತ್ತರಾದ ನಾಗೇಶ್‌ರವರು ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಜ್ಞಾನವುಳ್ಳವರು. ಸರಕಾರಿ ಇಲಾಖೆಯ ಸವಲತ್ತುಗಳನ್ನು ಸೂಕ್ತ ಸಮಯದಲ್ಲಿ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಾಗೇಶ್‌ರವರು ಮಾಡಿರುತ್ತಾರೆ. ತನ್ನ ಕರ್ತವ್ಯದ ಸಮಯದಲ್ಲಿ ಯಾವುದೇ ಚ್ಯುತಿ ಬಾರದಂತೆ ಅವರ ನಿರ್ವಹಣೆ ಮೆಚ್ಚತಕ್ಕದ್ದು. ರೂ.೩.೫೦ ಕೋಟಿಯ ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಂಘದ ಕೋಶಾಧಿಕಾರಿಯಾಗಿರುವ ನಾಗೇಶ್‌ರವರು ಬಹಳ ಅಚ್ಚುಕಟ್ಟಾಗಿ ಲೆಕ್ಕದ ನಿರ್ವಹಣೆಯನ್ನು ನಿಭಾಯಿಸುತ್ತಾ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು ಮುಂದಿನ ಅವರ ನಿವೃತ್ತ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

ಅಧ್ಯಕ್ಷತೆ ವಹಿಸಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ನಿವೃತ್ತಿಗೊಂಡ ನಾಗೇಶ್‌ರವರು ಬಹಳ ಅಪರೂಪದ ವ್ಯಕ್ತಿ. ಅವರಲ್ಲಿನ ವಿನಯತೆ, ಕರ್ತವ್ಯ ನಿಷ್ಠೆ, ಅವಿರತ ಸೇವೆಯು ಇಲಾಖೆಯಲ್ಲಿ ಹಾಗೂ ನಮ್ಮ ಸಂಘದ ಬೆಳವಣಿಗೆಯಲ್ಲಿ ಉತ್ತಮ ಹೆಸರು ಗಳಿಸುವಂತಾಗಿದೆ. ಸಂಘದ ಕಟ್ಟಡದ ನಿರ್ಮಾಣ ಸಂದರ್ಭದಲ್ಲಿ ನಾಗೇಶ್‌ರವರ ಸೇವೆಯು ಯಾವಾಗಲೂ ಸ್ಮರಿಸುವಂತಹುದು. ಸಂಘದ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗಿರುವ ನಾಗೇಶ್‌ರವರ ಹುದ್ದೆಯನ್ನು ಹೊಸಬರು ಯಾವ ರೀತಿ ನಿಭಾಯಿಸುತ್ತಾರೋ ತಿಳಿಯದು ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ, ಗೌರವಾಧ್ಯಕ್ಷ ರಾಮಚಂದ್ರ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಚೆನ್ನಪ್ಪ ಗೌಡ, ತನುಜಾ, ರವಿಚಂದ್ರ, ಸುಲೋಚನಾ, ಸೀತಾರಾಮ ಗೌಡ, ಸ್ಮಿತಾಶ್ರೀ, ಕವಿತಾ, ವಿಜಯಕುಮಾರ್, ಸರಕಾರಿ ವಾಹನ ಚಾಲಕರ ಸಂಘದ ನಿವೃತ್ತ ಚಾಲಕ ಸೀತಾರಾಮರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಕಾರ್ಯಕಾರಿ ಸಮಿತಿ ಸದಸ್ಯೆ ಕವಿತಾ ಓದಿದರು. ಸಂಘದ ಕ್ರೀಡಾ ಕಾರ್ಯದರ್ಶಿ ಕೆ.ಎಸ್ ವಿನೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಡಬ ತಾಲೂಕಿನ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಾಮಚ್ಚನ್ ಎಂ, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿ, ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಳ್ಮೆಯೇ ನನ್ನ ಕರ್ತವ್ಯಕ್ಕೆ ಮುನ್ನುಡಿ…
34 ವರುಷ ತಾನು ಕಂದಾಯ ಇಲಾಖೆಯಲ್ಲಿ ರಾತ್ರಿ-ಹಗಲು ಎಂಬಂತೆ ಕರ್ತವ್ಯ ನಿರ್ವಹಿಸಿದ್ದೇನೆ ಮಾತ್ರವಲ್ಲದೆ ಇಲಾಖೆಯಲ್ಲಿ ಕಾನೂನಿನ ಚೌಕಟ್ಟಿನಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಗ್ಗೆ ಆತ್ಮತೃಪ್ತಿಯಿದೆ. ಕಂದಾಯ ಇಲಾಖೆಯ ಜೊತೆಗೆ ಸರಕಾರಿ ನೌಕರರ ಸಂಘದಲ್ಲಿ ಕೋಶಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿ ಸಂಘದ ಏಳಿಗೆಗೆ ದುಡಿದಿರುತ್ತೇನೆ. ಪೊಲೀಸ್ ಇಲಾಖೆ ಎಂದರೆ ನನಗೆ ಬಹಳ ಹತ್ತಿರ. ಈ ನನ್ನ ನಿವೃತ್ತಿ ಸನ್ಮಾನಕ್ಕೆ ಪೊಲೀಸ್ ಉಪಾಧೀಕ್ಷಕರು ಆಗಮಿಸಿರುವುದು ಖುಶಿ ತಂದಿದೆ. ಸಂಘಕ್ಕೆ ಬಂದ ಮೇಲೆ ನೂತನ ಕಟ್ಟಡದ ರೂವಾರಿ ಮೌರಿಸ್ ಮಸ್ಕರೇನ್ಹಸ್‌ರವರು ನನ್ನನ್ನು `ಫಾಲೋ ಮಿ’ ಎಂಬಂತೆ ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿರುತ್ತೇನೆ. ನನ್ನಲ್ಲಿ ಸಂಯಮ ಹಾಗೂ ತಾಳ್ಮೆ ಮೈಗೂಡಿಸಿಕೊಂಡಿದ್ದಕ್ಕೆ ಇಲಾಖೆಯಲ್ಲಿನ ಹಾಗೂ ಸರಕಾರಿ ನೌಕರರ ಸಂಘದಲ್ಲಿನ ಕರ್ತವ್ಯಕ್ಕೆ ಮುನ್ನುಡಿಯಾಗಿದೆ ಎಂದು ಹೇಳಲು ಖುಶಿಯಾಗುತ್ತದೆ.
-ನಾಗೇಶ್ ಕೆ, ನಿವೃತ್ತ ಉದ್ಯೋಗಿ, ಕಂದಾಯ ಇಲಾಖೆ ಹಾಗೂ ಕೋಶಾಧಿಕಾರಿ, ತಾ|ಸರಕಾರಿ ನೌಕರರ ಸಂಘ

ಕಾರ್ಯಾಗಾರ..
ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರಿಗೆ ಸರ್ಕಾರಿ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಈ ಮಾಹಿತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಥಮ ದರ್ಜೆ ಸಹಾಯಕರಾದ ಪ್ರವೀಣ್ ಕುಮಾರ್‌ರವರು ನಡೆಸಿಕೊಟ್ಟರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ಪ್ರವೀಣ್ ಕುಮಾರ್‌ರವರಿಗೆ ಸ್ಮರಣಿಕೆ ಕಾಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here