ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕರಿಗೆ ಸನ್ಮಾನ- ಬೀಳ್ಕೊಡುಗೆ

0

ಪುತ್ತೂರು: ದ.ಕ ಜಿ.ಪಂ ಉ.ಹಿ.ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿನ ಮುಖ್ಯ ಶಿಕ್ಷಕರಾಗಿದ್ದು, ನ. 30 ರಂದು ನಿವೃತ್ತರಾದ ನಾರಾಯಣ ನಾಯ್ಕ ಪಿ. ರವರಿಗೆ ಬೀಳ್ಕೊಡುಗೆ ಹಾಗು ಸನ್ಮಾನ ಕಾರ್ಯಕ್ರಮ ದ. 3 ರಂದು ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ನಾರಾಯಣ ರೈ ಕುದ್ಕಾಡಿ ಅವರು ಮಾತನಾಡಿ ’ನಾರಾಯಣ ನಾಯ್ಕರು ತಮ್ಮ ಶಿಸ್ತಿನ ವ್ಯಕ್ತಿತ್ವದ ಮೂಲಕ ಮಕ್ಕಳಲ್ಲಿ ಪ್ರೀತಿಯನ್ನು ಹಂಚಿದ್ದಾರೆ, ಈ ಶಾಲೆಯು ಇನ್ನಷ್ಟು ಪ್ರಗತಿ ಹೊಂದಬೇಕು ಆ ನಿಟ್ಟಿನಲ್ಲಿ ತನ್ನ ಕೈಯಲ್ಲಾದ ಸಹಕಾರವನ್ನು ಕೊಡುವುದಾಗಿ ಭರವಸೆಯಿತ್ತರು. ಈ ಮೊದಲು ’ಸ್ಮಾರ್ಟ್ ಕ್ಲಾಸ್’ ಗೆ ಹೊಸ ಬಣ್ಣವನ್ನು ಬಳಿಯುವ ಮುಖ್ಯ ಶಿಕ್ಷಕರ ಕನಸಿಗೆ ದಾನಿಗಳಾಗಿ ಸಹಕರಿಸಿದ್ದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಪಿ. ರವರು ’ಈ ಶಾಲೆಯಲ್ಲಿ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ತನ್ನ ಕೈಯಲ್ಲಾದ ಕೆಲಸ ಮಾಡಿದ್ದು, ತನ್ನ ಕಾಲಾವಧಿಯಲ್ಲಿಯೆ ಶಾಲೆಗೆ ಹೊಸ ರೂಪವನ್ನು ಕೊಟ್ಟು ಅತ್ಯುತ್ತಮ ಶಾಲೆಗಳ ಸಾಲಿನಲ್ಲಿ ಕಾಣಬೇಕೆಂಬ ತಮ್ಮ ಕನಸು ಒಂದು ಉಳಿದಿದ್ದು ಮುಂದೆ ಎಲ್ಲರ ಪರಿಶ್ರಮದಿಂದ ಕೈಗೂಡುವ ಭರವಸೆ ಇದೆ ಎಂದರು. ಅವರ ಪತ್ನಿ ಶ್ರೀಮತಿ ಯಶೋಧ ಅವರು ಶಾಲೆ, ಪೋಷಕರು ಹಾಗು ವಿದ್ಯಾರ್ಥಿಗಳ ಪ್ರೀತಿಯ ಅಭಿಮಾನಕ್ಕೆ ತಲೆದೂಗಿದರು.

ಸನ್ಮಾನ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಕ ವೃಂದದಿಂದ ಚಿನ್ನದುಂಗುರ, ಸನ್ಮಾನ ಪತ್ರ, ಹಾರ ಫಲಪುಷ್ಪ ಹಾಗು ಸೀರೆಯೊಂದಿಗೆ ಸಪತ್ನಿ ಸಹಿತ ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಹಾಗು ಪೋಷಕರು ಕಾಲು ದೀಪ, ಫಲ ಪುಷ್ಪವನ್ನಿತ್ತು ಸನ್ಮಾನಿಸಿದರು. ವಿದ್ಯಾರ್ಥಿಗಳು 5,6,7,8 ನೆ ತರಗತಿವಾರು ಪ್ರತ್ಯೇಕ ಕೊಡುಗೆಗಳ ಮೂಲಕ ತಮ್ಮ ಶಿಕ್ಷಕರ ಮೇಲಿನ ಅಭಿಮಾನವನ್ನು ತೋರಿದರು. ಉಳಿದ ವಿದ್ಯಾರ್ಥಿಗಳು ವೈಯಕ್ತಿಕ ಕಾಣಿಕೆಗಳ ಮೂಲಕ ಹಾಗು ತಮ್ಮ ಮುಖ್ಯಗುರುಗಳ ಕುರಿತಾಗಿ ತಾವೇ ರಚಿಸಿದ ಹಾಡುಗಳ ಮೂಲಕ ತಮ್ಮ ಪ್ರೀತಿಯನ್ನು ತೋರಿದರು. ಇತ್ತೀಚೆಗಷ್ಟೇ ಸಹ ಶಿಕ್ಷಕರಾಗಿ ನಿವೃತ್ತರಾದ ಶ್ರೀಧರ ಬೋಳಿಲ್ಲಾಯರು ನೆನಪಿನ ಕಾಣಿಕೆಯನ್ನಿತ್ತರು ಹಾಗು ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಆಳ್ವ ಗೌರವ ಸಲ್ಲಿಸಿದರು. ನಾರಾಯಣ ನಾಯ್ಕ್ ರವರ ಮಗ, ಸೊಸೆ ಹಾಗು ಕುಟುಂಬಿಕರು ಹಾಜರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ತಾಲೂಕಿಗೆ ಹೊಸದಾಗಿ ಆಗಮಿಸಿ ಶಿಕ್ಷಕರು, ವಿದ್ಯಾರ್ಥಿಗಳು, ಹಾಗು ಶಾಲೆಯ ಬಗ್ಗೆ ವಿಶೇಷ ಕಾಳಜಿಯುಳ್ಳವರಾಗಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್ ಇವರಿಗೆ ಗೌರವ ಸಮರ್ಪಿಸಲಾಯಿತು.

ಕೊಡುಗೆ: ನಿವೃತ್ತರಾದ ನಾರಾಯಣ ಪಿ. ಯವರು ಶಾಲೆಗೆ ಪಂಪ್ ಸೆಟ್ ಹಾಗು ಮಿಕ್ಸಿಯನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಮಿಕ್ಕಿದ ವಿದ್ಯಾಭಿಮಾನಿಗಳು ಹಾಜರಿದ್ದು ಶುಭಹಾರೈಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮೂಲ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಡಗನ್ನೂರು ಗ್ರಾ. ಪಂ. ಉಪಾಧ್ಯಕ್ಷರಾದ ಸಂತೋಷ್ ಆಳ್ವ, ಯುವ ಉದ್ಯಮಿ ಜನಾರ್ದನ ಪೂಜಾರಿ ಪಡುಮಲೆ, ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ, ಪ್ರಾ.ಶಾ.ಶಿಕ್ಷಕ ಸಂಘದ ತಾಲೂಕು ಘಟಕದ ಅಧ್ಯಕ್ಷ ನವೀನ್ ರೈ, ದ.ಕ.ಜಿ.ನೌ. ಸಂಘದ ಸಂಘಟನಾ ಕಾರ್ಯದರ್ಶಿ ರಾಮಣ್ಣ ರೈ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹಾಲಿಂಗ ಪಾಟಾಳಿ ಹಾಗು ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷ ಹರೀಶ್ ಶುಭ ಹಾರೈಸಿದರು. ನಿವೃತ್ತ ಸಹ ಶಿಕ್ಷಕರಾದ ಶ್ರೀಧರ ಬೋಳಿಲ್ಲಾಯ, ನಿವೃತ್ತ ಮುಖ್ಯ ಶಿಕ್ಷಕರಾದ ಉದಯ ಕುಮಾರ್, ಶಿಕ್ಷಕ ಗಿರೀಶ್, ಶಿಕ್ಷಕಿ ಫಿಲೋಮಿನಾ ಪೌಲ್, ಕೃಷ್ಣಗಿರಿ ಶಾಲಾ ಶಿಕ್ಷಕಿ ವರದಾಕ್ಷಿ ಇವರು ಉಪಸ್ಥಿತರಿದ್ದರು.

ಪ್ರಭಾರ ಮುಖ್ಯಗುರು ಹರಿಣಾಕ್ಷಿ ಎ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ಪಿ.ಟಿ ವಿಜಯಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ಜಿ.ಪಿ.ಟಿ ಜನಾರ್ದನ ದುರ್ಗ ನಿರೂಪಿಸಿ ವಂದಿಸಿದರು. ಪ್ರಶಿಕ್ಷಣಾರ್ಥಿ ಮಿಶ್ರಿಯ ಹಾಗೂ ಗೌರವ ಶಿಕ್ಷಕಿ ಲಿಖಿತ ಸಹಕರಿಸಿದರು.

LEAVE A REPLY

Please enter your comment!
Please enter your name here