ಕಡಬ ಆದಿಮನೆ ಕಳುವಾಜೆಯಲ್ಲಿ ಕುಲದೀಪ ಪುಸ್ತಕ ಬಿಡುಗಡೆ

0

ಕಳುವಾಜೆ ಮನೆತನ ಇಡೀ ಊರಿಗೆ ಮೇಲ್ಪಂಕ್ತಿಯಾಗಿದೆ-ತಿರುಮಲೇಶ್ವರ ಭಟ್

ಪುತ್ತೂರು: ಪ್ರಸ್ತುತ ವಿದ್ಯಾಮಾನದಲ್ಲಿ ಹಿಂದಿನ ಕೂಡು ಕುಟುಂಬಗಳು ಚಿಕ್ಕದಾಗುತ್ತಾ ಹಿರಿಯರು ಆಡಿ ಬೆಳೆಸಿದ ಸಂಸ್ಕೃತಿ, ಆಚಾರ ವಿಚಾರಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕೂಡು ಕುಟುಂಬದಂತಿರುವ ಕಳುವಾಜೆ ಮನೆತನ ಇಡೀ ಊರಿಗೆ ಮೇಲ್ಪಂಕ್ತಿ ಎನಿಸುತ್ತಿದೆ ಎಂದು ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್‌ರವರು ಹೇಳಿದರು.


ಡಿ.8 ರಂದು ಕಡಬ ತಾಲೂಕಿನ ಕಾಮಣ ಗ್ರಾಮದ ಆದಿಮನೆ ಕಳುವಾಜೆ ಇಲ್ಲಿ ಶ್ರೀ ಚಾಮುಂಡಿ ದೈವ ಕಳುವಾಜೆ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕೋತ್ಸವ ಮತ್ತು ನೇಮೋತ್ಸವ ಜೊತೆಗೆ ಕಳುವಾಜೆ ವೆಂಕಟ್ರಮಣ ಗೌಡರ ಸಂಪಾದಕೀಯದಲ್ಲಿ ಮೂಡಿ ಬಂದ ಕಳುವಾಜೆ ಸೋಮಪ್ಪ ಗೌಡರ ಸಾಧನೆಗಳ ಕುರಿತಾದ `ಕುಲದೀಪ’ ಪುಸ್ತಕ ಬಿಡುಗಡೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ಕಾಯಿಲೆಗಳನ್ನು ಗುಣಪಡಿಸುವ ಗುಣ ಹೊಂದಿರುವ ನಾಟಿ ಔಷಧವು ಪ್ರಸ್ತುತ ದಿನಗಳಲ್ಲಿ ಬಹಳ ಹಿಂದಕ್ಕೆ ಹೋಗುತ್ತಿದೆ. ಭಾರತೀಯ ಸಂಸ್ಕೃತಿಯ ಮೇಲೆ ವಿದೇಶಿ ಸಂಸ್ಕೃತಿಯ ಆಕ್ರಮಣದಿಂದ ನಾಟಿ ಔಷಧಕ್ಕೆ ಪೆಟ್ಟು ಬಿದ್ದಿದೆ. ಭೂಮಿಯಲ್ಲಿ ಸಿಗುವ ಎಲ್ಲಾ ಸಸ್ಯ ಸಂಪತ್ತಿಗೆ ಔಷಧೀಯ ಸತ್ವವಿದೆ. ಓರ್ವ ಯೋಗ್ಯವಂತ ವ್ಯಕ್ತಿ ನಾಟಿ ಔಷಧಕ್ಕೆ ಸಿಕ್ಕಿ ಬಿಟ್ಟರೆ ನಾಟಿ ಔಷಧಕ್ಕೆ ಬಹಳ ಬೇಡಿಕೆ ಸಿಗಬಲ್ಲುದು. ಯಾರೂ ಅಯೋಗ್ಯರಲ್ಲ, ಯಾರು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುತ್ತಾರೋ ಅವರು ಸಮಾಜದಲ್ಲಿ ಉತ್ತಮ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುವುದು ಎಂದರು.


ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಪುಸ್ತಕ ಪರಿಚಯ ಮಾಡುತ್ತಾ ಮಾತನಾಡಿ, ಕಳುವಾಜೆ ಸೋಮಪ್ಪ ಗೌಡರವರು ಕೃಷಿ, ನಾಟಿ ಔಷಧಿ, ವಾಸ್ತು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ಅಲ್ಲದೆ ಅವರ ಏಳು ಮಂದಿ ಮಕ್ಕಳೂ ಕೂಡ ತಂದೆಯವರ ಹಾದಿಯನ್ನು ತುಳಿಯುತ್ತಾ ತಂದೆಯವರ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಊರಿನ ಸಂಪ್ರದಾಯ, ನಾಟಿ ಔಷಧದ ಪ್ರಾಮುಖ್ಯತೆ, ಗೌಡ ಸಂಪ್ರದಾಯ, ದೈವ-ದೇವರುಗಳ ಬಗ್ಗೆ ಹೀಗೆ ಹಲವಾರು ವಿಷಯಗಳ ಸಂಗ್ರಹವನ್ನು ಈ ಪುಸ್ತಕ ಹೊಂದಿದ್ದು ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ ಎಂದರು.

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಇತಿಹಾಸ ಓದದವರು ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಿರಿಯರು ಏನು ಮಾಡಿಕೊಂಡಿದ್ರು, ಅವರ ಅಲೋಚನೆಗಳು ಯಾವ ತೆರನಾಗಿದ್ದವು, ಕುಟುಂಬದ ಅಭಿವೃದ್ಧಿಗಾಗಿ ಯೋಜನೆಗಳು ಹೇಗಿತ್ತು, ಕುಟುಂಬದ ಪರಂಪರೆ ಇವನ್ನು ಮುಂದಿನ ಪೀಳಿಗೆಯವರು ಅರಿತುಕೊಳ್ಳಲು ಈ ಕುಲದೀಪ ಪುಸ್ತಕ ಒಂದು ಪ್ರಯತ್ನವಾಗಿದ್ದು, ಇವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.

ಉಪನ್ಯಾಸಕರು ಹಾಗೂ ಜೇಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಬಿ.ಚಂದ್ರಹಾಸ ರೈ ಮಾತನಾಡಿ, ಹಿಂದಿನ ಹಿರಿಯರ ಕುಟುಂಬದ ಹಿನ್ನೆಲೆ, ಕುಟುಂಬದ ಬಾಂಧವ್ಯ ಮುಂತಾದ ಸಂಬಂಧಗಳ ಐತಿಹ್ಯ ಹಾಗೂ ದಂತಕತೆಯನ್ನು ಈ ಕುಲದೀಪ ಪುಸ್ತಕ ಪ್ರಚುರಪಡಿಸುತ್ತದೆ. ಕಳುವಾಜೆ ಕುಟುಂಬದ ಮನೆ ಚಿತ್ರಣವು ಸಾಹಿತ್ಯ, ಸಂಸ್ಕೃತಿಯು ಹೃದಯಕ್ಕೆ ಟಚ್ ಮಾಡುವಂತಿದೆ. ಕುಲದೀಪ ಪುಸ್ತಕವು ಮುಂದಿನ ಪೀಳಿಗೆಗೆ ಬೆಳಕು ಚೆಲ್ಲುವ ದಾರಿದೀಪವಾಗಿದೆ ಜೊತೆಗೆ ಕುಟುಂಬದಲ್ಲಿನ ಪ್ರೀತಿಯು ದ್ವಿಗುಣಗೊಳ್ಳುವಂತೆ ಮಾಡುತ್ತದೆ ಎಂದರು.

ಕುಟುಂಬದ ಹಿರಿಯರಾದ ಜಿನ್ನಪ್ಪ ಗೌಡ ಕಳುವಾಜೆರವರು ಅಧ್ಯಕ್ಷತೆ ವಹಿಸಿದ್ದರು. ಸುಂದರ ಗೌಡ ಕಳುವಾಜೆ ಕಾರ್ಯಕ್ರಮ ನಿರೂಪಿಸಿದರು. ಕಳುವಾಜೆ ಕುಟುಂಬದ ಸದಸ್ಯರು ಸಹಕರಿಸಿದರು. ರೋಟರಿ ಕ್ಲಬ್ ಸ್ವರ್ಣದ ಸದಸ್ಯರು, ಕಳುವಾಜೆ ಕುಟುಂಬದ ಸದಸ್ಯರು, ಊರಿನ ಸದಸ್ಯರು ಹೀಗೆ ಸುಮಾರು 500 ಕ್ಕೂ ಮಿಕ್ಕಿ ಜನರು ಭಾಗವಹಿಸಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಕುಲದೀಪ ಪುಸ್ತಕದ ಪ್ರತಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಯಿತು.

`ಕುಲದೀಪ’ ಪುಸ್ತಕ ಹೆತ್ತವರಿಗೆ ಅರ್ಪಣೆ…
ಮಾತಾ-ಪಿತರು ಕಣ್ಣಿಗೆ ಕಾಣುವ ದೇವರು. ಅವರು ದೈವಾಧೀನರಾದ ಮೇಲೂ ನಿತ್ಯ ಪಿತೃ ಶ್ರಾದ್ಧ ಮಾಡಬೇಕು. ಇದೇ ಲಕ್ಷ್ಮೀನಾರಾಯಣ ದೇವರ ಪೂಜೆ. ನನ್ನ ಮಾತಾ ಪಿತರ ನೆನಪಿಗಾಗಿ ಈ ಕುಲದೀಪ ಕೃತಿಯ ರಚನೆ ಮಾಡಿ ತಂದೆ-ತಾಯಿಗೆ ಅರ್ಪಣೆ ಮಾಡುತ್ತಿದ್ದೇನೆ. ಈ ಕಿರು ಹೊತ್ತಗೆಯನ್ನು ಬರೆಯುವ ಸಂದರ್ಭದಲ್ಲಿ ಬಹಳಷ್ಟು ಮಂದಿ ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ನಮ್ಮ ಪೂರ್ವಜರು ಹೇಗೆ ಬದುಕಿದ್ದರು, ಅವರ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಇತ್ಯಾದಿಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈ ಕುಲದೀಪ ಪುಸ್ತಕವು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂಬುದು ನನ್ನ ಭಾವನೆಯಾಗಿದೆ.
-ವೆಂಕಟ್ರಮಣ ಗೌಡ ಕಳುವಾಜೆ, ಕುಲದೀಪ ಪುಸ್ತಕದ ಲೇಖಕರು

ಸನ್ಮಾನ

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕುಶಾಲಪ್ಪ ಗೌಡ, ವಿಶ್ವನಾಥ ಬದಿಕಾನ, ಪದ್ಮಯ್ಯ ಗೌಡ ತುಂಬ್ಯ, ಡೊಂಬ ಅಜಿಲರವರನ್ನು ಗುರುತಿಸಿ ಸನ್ಮಾನಿಸಲಾಯಿತು.

 

ಪರಿವಾರ ದೈವಗಳ ಪುನಃಪ್ರತಿಷ್ಠಾ
ಕಲಶಾಭಿಷೇಕೋತ್ಸವ, ನೇಮೋತ್ಸವ…
ಡಿ.7ರಂದು ಸಂಜೆ ತಂತ್ರಿಗಳ ಆಗಮನ ಹಾಗೂ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಘೋರಹೋಮ, ಪ್ರೇತಾವಾಹನೆ, ಉಚ್ಛಾಟನೆ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ದುರ್ಗಾ ನಮಸ್ಕಾರ ಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು. ಡಿ.8 ರಂದು ಬೆಳಿಗ್ಗೆ 12ತೆಂಗಿನಕಾಯಿ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಶ್ರೀ ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ, ಕಲಶಭಿಷೇಕ ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ ಶ್ರೀ ಚಾಮುಂಡಿ ದೈವದ ಭಂಡಾರ ಹಿಡಿದು ನೇಮೋತ್ಸವವು ಜರಗಿತು. ಈ ಧಾರ್ಮಿಕ ಕಾರ್ಯಕ್ರಮವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here