ಶಿಕ್ಷಣ, ಆರೋಗ್ಯಕ್ಕೆ ಪ್ರಾಮುಖ್ಯ ನೀಡಿದಾಗ ದೇಶೋದ್ಧಾರ: ಪ್ರೊ. ಬಿ.ಎ. ವಿವೇಕ ರೈ

0

ಉಪ್ಪಿನಂಗಡಿ: ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರೆ ದೇಶ ಎಲ್ಲಾ ರಂಗದಲ್ಲೂ ಉದ್ಧಾರವಾಗುವುದು. ಉಳಿದೆಲ್ಲಾ ಸವಲತ್ತಿಗಿಂತ ಸರಕಾರಿ ಶಾಲೆಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಪ್ರತಿಪಾದಿಸಿದರು.

ಉಪ್ಪಿನಂಗಡಿಯ ಪಂಜಳದಲ್ಲಿನ ವಸುಧಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಹೇಮಂತ ಹಬ್ಬದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಹಿರಿಯ ಜೀವಗಳಿಗೆ ಮಾಡುವ ಸನ್ಮಾನ ಗೌರವಾದಿಗಳು ಜೀವನೋತ್ಸಾಹವನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ರವರು ಮಾತನಾಡಿ, ಕಾಡುವ ನೆನಪುಗಳು, ಜೀವನಾನುಭವದ ನೆನಪುಗಳು ವ್ಯಕ್ತಿಯ ಬದುಕಿನ ಮೌಲ್ಯಗಳನ್ನು ಜೀವಂತವಾಗಿರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗತಿಸಿದ ಮೇರು ವ್ಯಕ್ತಿತ್ವದ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಎಂ. ರಾಮಚಂದ್ರ, ಕಜೆ ಈಶ್ವರ ಭಟ್ ಹಾಗೂ ಇಂದಿರಾ ಕಜೆ, ಸುರೇಂದ್ರ ರಾಯರು, ಶ್ರೀಧರ್ ಭಟ್‌ರವರ ಬಗ್ಗೆ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ ನೆನಪು ಮತ್ತು ಮೆಲುಕು ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಾಹಿತ್ಯ ಕ್ಷೇತ್ರದ ಸಾಧಕ ಡಾ. ಎಚ್.ಜಿ. ಶ್ರೀಧರ್, ಸಾಹಿತ್ಯ ಪರಿಚಾರಿಕೆಯಲ್ಲಿನ ಡಾ. ಎಂ.ಪಿ. ಶ್ರೀನಾಥ್, ವೈದ್ಯ ಸೇವೆಯಲ್ಲಿ ಡಾ. ಸುಲೇಖಾ ವರದರಾಜ್, ಸಮಾಜ ಸೇವೆಯಲ್ಲಿ ಪ್ರಸನ್ನ ಎನ್. ಭಟ್, ರಂಗ ಕೌಶಲ ಕ್ಷೇತ್ರದ ಸಾಧಕರಾದ ಎಂ.ಕೆ. ಮಠರವರಿಗೆ ವಿಶ್ರಾಂತ ಪ್ರಾಂಶುಪಾಲ ಡಾ. ಎಂ. ಮಾಧವ ಭಟ್‌ರವರ ಅಭಿನಂದನಾ ನುಡಿಗಳೊಂದಿಗೆ ಹೇಮಂತ ಗೌರವ ಸಮರ್ಪಿಸಲಾಯಿತು.

ವಸುಧಾ ಪ್ರತಿಷ್ಠಾನದ ತಾಳ್ತಜೆ ವಸಂತ ಕುಮಾರರವರು ಮಾತನಾಡಿ, ತಮ್ಮ ಮಡದಿ ಡಾ. ಮಣಿಮಾಲಿನಿರವರ ನೆನಪಿಗಾಗಿ ನಡೆಸುತ್ತಿರುವ 12 ನೇ ವರ್ಷದ ಹೇಮಂತ ಹಬ್ಬ – 12 ಕಾರ್ಯಕ್ರಮದ ಬಗ್ಗೆ ಹಾಗೂ ಪ್ರತಿಷ್ಠಾನದ ಸಮಾಜಮುಖಿ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಬ್ರಹಾಂ ವರ್ಗೀಸ್, ಡಾ. ಸುರೇಶ್ ಕೂಡೂರು, ಕರುಣಾಕರ ಸುವರ್ಣ, ಯು.ಜಿ. ರಾಧಾ, ಬಿ. ಐತ್ತಪ್ಪ ನಾಯ್ಕ್, ಉಮೇಶ್ ಶೆಣೈ, ಎನ್. ಗೋಪಾಲ ಹೆಗ್ಡೆ, ಸವಿತಾ ಪಿ.ಜಿ. ಭಟ್, ಕೃಷ್ಣ ಭಟ್ ಕೊಕ್ಕಡ, ಕೆ.ವಿ. ಪ್ರಸಾದ್, ಶಶಿಧರ್ ಹೆಗ್ಡೆ, ಪುಷ್ಪರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

ಡಾ. ಎಂ ಗೋವಿಂದ ಪ್ರಸಾದ್ ಕಜೆ ರವರು ಸ್ವಾಗತಿಸಿದರು. ರಾ. ವೇದವ್ಯಾಸರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here