ವರದಿಗಾರರು ಘಟನೆ ಪರಿಶೀಲಿಸಿ ವರದಿ ಮಾಡಬೇಕು-ಪ್ರೊ.ವಿ.ಬಿ.ಅರ್ತಿಕಜೆ
ಪುತ್ತೂರು: ವರದಿಗಾರರಲ್ಲಿ ಪ್ರಾಮಾಣಿಕತೆ ಇರಬೇಕು. ವರದಿಗಾರರು ಒಬ್ಬ ವ್ಯಕ್ತಿ ಹೇಳಿದ ಘಟನೆಯನ್ನಾಧರಿಸಿ ವರದಿ ಮಾಡದೆ ಘಟನೆಯ ಬಗ್ಗೆ ಪರಿಶೀಲನೆ ಮಾಡಿ ವರದಿ ಮಾಡಬೇಕು ಎಂದು ಹಿರಿಯ ಸಾಹಿತಿ, ಅಂಕಣಕಾರ ಪ್ರೊ.ವಿ.ಬಿ ಅರ್ತಿಕಜೆ ಹೇಳಿದರು. ನೆಲ್ಲಿಕಟ್ಟೆ ಮಾತೃಛಾಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯೂಸ್ ಎಂಬ ಇಂಗ್ಲಿಷ್ ಶಬ್ದದಲ್ಲಿ ನಾರ್ತ್, ಈಸ್ಟ್, ವೆಸ್ಟ್ ಹಾಗೂ ಸೌತ್ ಎಂಬ ಪದಗಳು ಬಂದಿದ್ದು ಈ ದಿಕ್ಕುಗಳ ವ್ಯಾಪ್ತಿ ವರದಿಯಲ್ಲಿ ಬರುತ್ತದೆ ಎಂದು ಹೇಳಿ ತಾನು ವರದಿಗಾರನಾಗಿದ್ದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದರವರು ಮಾತನಾಡಿ ಪತ್ರಿಕಾ ಮಾಧ್ಯಮ ಕಠಿಣ ಮತ್ತು ಸವಾಲುಗಳಿಂದ ತುಂಬಿದ ಕ್ಷೇತ್ರವಾಗಿದ್ದು ಪತ್ರಿಕೆಗಳಲ್ಲಿ ಕೆಲಸ ಮಾಡುವವರು ವಸ್ತು ನಿಷ್ಠವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ತಮ್ಮ ಕಾರ್ಯವನ್ನು ಮಾಡಿ ಮುಗಿಸುವುದು ಅಗತ್ಯವಾಗಿದೆ. ಕರ್ನಾಟಕ ಪತ್ರಕರ್ತರ ಸಂಘವು ಕೇವಲ ವರದಿಗಾರರಿಗೆ ಮಾತ್ರ ಅವಕಾಶ ನೀಡದೇ ಪತ್ರಿಕೆಯ ಇತರ ವಿಭಾಗಗಳಲ್ಲಿ ಕೆಲಸ ಮಾಡುವವರಿಗೂ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘ ದ.ಕ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ ಪತ್ರಕರ್ತರು ಸಮಾಜದಲ್ಲಿ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವವರಾಗಿದ್ದು ಸಮಾಜದಲ್ಲಿ ಸಂಭವಿಸುವ ತಪ್ಪು ಒಪ್ಪುಗಳನ್ನು ತಿದ್ದಿ ಸುಸ್ಥಿರ ಸಮಾಜ ನಿರ್ಮಾಣ ಮಾಡುವ ಶಕ್ತಿ ಪತ್ರಕರ್ತರಲ್ಲಿದೆ ಎಂದು ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘವು ಪತ್ರಿಕೆ ಮತ್ತು ದೃಶ್ಯ ಮಾಧ್ಯಮದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವವರಿಗೂ ಸದಸ್ಯತ್ವದ ಅವಕಾಶ ನೀಡುತ್ತಿದೆ. ಪತ್ರಕರ್ತರ ಒಟ್ಟು ಶ್ರೇಯೋಭಿವೃದ್ಧಿ ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ನಮ್ಮ ಸಂಘವು ಈಗಾಗಲೇ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಗುರುತಿನ ಚೀಟಿ ವಿತರಣೆ: ಸಂಘದಲ್ಲಿ ನೋಂದಾಯಿತ 33 ಸದಸ್ಯರಿಗೆ ಮುಖ್ಯ ಅತಿಥಿ ಶೋಭಾ ಶಿವಾನಂದರವರು ಗುರುತಿನ ಚೀಟಿ ವಿತರಿಸಿದರು. 2022-23ನೇ ಸಾಲಿನಲ್ಲಿ ಸಂಘದ ಸದಸ್ಯರಾಗಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಹೂ ನೀಡಿ ಸ್ವಾಗತಿಸಲಾಯಿತು.
ರಕ್ತದಾನಿ ಉಮೇಶ್ ಮಿತ್ತಡ್ಕರಿಗೆ ಗೌರವಾರ್ಪಣೆ: 40 ಬಾರಿ ರಕ್ತದಾನ ಮಾಡಿ ಜೀವದಾನಿಯಾಗಿರುವ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಪಾರ, ಜೊತೆ ಕಾರ್ಯದರ್ಶಿ ಪ್ರಜ್ವಲ್ ಉಪಸ್ಥಿತರಿದ್ದರು. ಕೋಶಾಧಿಕಾರಿ ರಕ್ಷಿತಾ ಮತ್ತು ಸದಸ್ಯೆ ಚಿತ್ರಾಂಗಿಣಿ ಪ್ರಾರ್ಥಿಸಿ ಮಾಜಿ ಅಧ್ಯಕ್ಷ ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೈ ಕೋಡಂಬು ವಂದಿಸಿ ಶೈಲಜಾ ಸುದೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪದಗ್ರಹಣ
ಸಂಘದ 2022-23ನೇ ಸಾಲಿನ ನೂತನ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೈ ಕೋಡಂಬು, ಕೋಶಾಧಿಕಾರಿ ರಕ್ಷಿತಾ ಎಚ್. ನಾಯ್ಕ್, ಉಪಾಧ್ಯಕ್ಷ ಶರತ್ ಕುಮಾರ್ ಪಾರ ಹಾಗೂ ಜತೆ ಕಾರ್ಯದರ್ಶಿ ಪ್ರಜ್ವಲ್ ಪುತ್ತೂರುರವರಿಗೆ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್‌ರವರು ಹೂ ನೀಡಿ ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಿದರು.