ಉಪ್ಪಿನಂಗಡಿ: ತಾನು ಕಲಿತ ಸರಕಾರಿ ಶಾಲೆಯ ಉನ್ನತಿಗಾಗಿ ಕೊಡುಗೆ ನೀಡಿದ ಯು.ವಿ. ಭಟ್‌ರಂತಹ ದಾನಿಗಳಿಂದಾಗಿ 187 ವರ್ಷದ ಇತಿಹಾಸವುಳ್ಳ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲೆಗೆ ಇಂದು 1.90 ಕೋಟಿ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಒದಗಿ ಬಂದಿದೆ ಎಂದು ಶಾಸಕ ಸಂಜೀವ ಮಠಂದೂರು ಸಂತಸ ವ್ಯಕ್ತಪಡಿಸಿದರು.
ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ನೂತನ ಕಟ್ಟಡಕ್ಕೆ ಡಿ.15ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಯು.ವಿ. ಭಟ್ ಅವರು ಕೊಡ ಮಾಡಿದ ಲಕ್ಷಾಂತರ ರೂ. ವೆಚ್ಚದ ಶಾಲಾ ಕಟ್ಟಡ ಹಾಗೂ ಸಭಾಂಗಣವು ಹೆದ್ದಾರಿ ಅಗಲೀಕರಣದ ಕಾರಣಕ್ಕೆ ತೆರವುಗೊಳ್ಳಲಿರುವುದರಿಂದ ಪರಿಹಾರದ ಮೊತ್ತವಾಗಿ ದೊರಕಿದ ಹಣದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಸರಕಾರ ಅನುಮತಿಯನ್ನು ನೀಡಿದೆ. ನೆಲ ಅಂತಸ್ತು ಸೇರಿದಂತೆ ಒಟ್ಟು ಮೂರು ಅಂತಸ್ತುಗಳಲ್ಲಿ ನಿರ್ಮಾಣವಾಗುವ ಈ ಹೊಸ ಕಟ್ಟಡವು ಗುಣಮಟ್ಟ ಆಧಾರಿತವಾಗಿ ಮತ್ತು ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಉಪಯೋಗಕ್ಕೆ ದೊರಕುವಂತೆ ನಿರ್ಮಾಣವಾಗಲಿದೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶಾಂತಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ದಾನಿಗಳಾದಇಂದಿರಾ ಯು.ವಿ. ಭಟ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಶಾಲಾ ಮುಖ್ಯ ಗುರು ಹನುಮಂತಪ್ಪ, ಪ್ರಮುಖರಾದ ಸುಂದರ ಗೌಡ, ಜಗದೀಶ್ ಶೆಟ್ಟಿ, ನಾಗೇಶ್ ಪ್ರಭು, ಜಯಂತ ಪೊರೋಳಿ, ಕೈಲಾರ್ ರಾಜಗೋಪಾಲ ಭಟ್, ಯು.ಟಿ. ತೌಸೀಫ್, ಝಕಾರಿಯಾ ಕೊಡಿಪ್ಪಾಡಿ, ಸಿಆರ್‌ಪಿ ಅಶ್ರಫ್, ಜತೀಂದ್ರ ಶೆಟ್ಟಿ, ದೇವಕಿ, ವಿದ್ಯಾಲಕ್ಷ್ಮೀ ಪ್ರಭು, ಶಾಲಾ ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ ವಂದಿಸಿದರು.