ಮಂಗಳೂರು: ಹೊಸ ಪಿಂಚಣಿ ಯೋಜನೆ(ಎನ್ಪಿಎಸ್)ರದ್ದುಪಡಿಸಿ, ತಮ್ಮನ್ನು ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ದ.19ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲು ರಾಜ್ಯ ಸರ್ಕಾರಿ ನೌಕರರು ತೀರ್ಮಾನಿಸಿದ್ದಾರೆ. ಈ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಎಂ.ಹೇಳಿದ್ದಾರೆ. ಧರಣಿಯಲ್ಲಿ ಜಿಲ್ಲೆಯ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು, ಅವರ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಹಳೆ ಪಿಂಚಣಿ ಯೋಜನೆ ಪ್ರಕಾರ ಅವರಿಗೆ ಕೊನೆಯ ತಿಂಗಳ ವೇತನದ ಅರ್ಧದಷ್ಟು ಪಿಂಚಣಿ ಸಿಗುತ್ತಿತ್ತು. ಆದರೆ, ಜಿಲ್ಲೆಯ ನಿವೃತ್ತ ನೌಕರರೊಬ್ಬರಿಗೆ ಎನ್ಪಿಎಸ್ ಅಡಿ ತಿಂಗಳಿಗೆ ಕೇವಲ ರೂ. 590 ಪಿಂಚಣಿ ಸಿಕ್ಕಿದೆ.ಇಷ್ಟು ಕಡಿಮೆ ಮೊತ್ತದಲ್ಲಿ ನಿವೃತ್ತ ಜೀವನ ನಡೆಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ನಿವೃತ್ತಿ ಬಳಿಕ ಕೋಟಿ ರೂಪಾಯಿಗೂ ಅಧಿಕ ಮೊತ್ತ ಪಡೆಯಬಹುದು ಎಂದು ನಂಬಿಸಿ ರಾಜ್ಯದಲ್ಲಿ 2006ರಿಂದ ಎನ್ಪಿಎಸ್ ಜಾರಿಗೊಳಿಸಲಾಗಿದೆ. ಇದೆಲ್ಲ ಸುಳ್ಳು ಎಂಬುದು ಈಗ ಮನದಟ್ಟಾಗಿದೆ. ಸರ್ಕಾರದ ದುಡ್ಡು ಹಾಗೂ ನೌಕರರ ದುಡ್ಡನ್ನು ಖಾಸಗಿಯವರಿಗೆ ನೀಡುವ ಎನ್ಪಿಎಸ್ ನೌಕರರ ನಿವೃತ್ತ ಬದುಕನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದೆ. ಅನಿಶ್ಚಿತವಾಗಿರುವ ಈ ವ್ಯವಸ್ಥೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಹೊಸ ಪಿಂಚಣಿ ಯೋಜನೆಯನ್ನೇ ರದ್ದುಪಡಿಸಿ, ಹಳೆ ಯೋಜನೆಯಂತೆಯೇ ನಿಶ್ಚಿತ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ರಾಜಸ್ಥಾನ, ಛತ್ತೀಸ್ಗಢ, ಜಾರ್ಖಂಡ್ ರಾಜ್ಯಗಳಲ್ಲಿ ಎನ್ಪಿಎಸ್ ಯೋಜನೆಯನ್ನು ರದ್ದುಪಡಿಸಲಾಗಿದೆ. ಪಶ್ಚಿಮ ಬಂಗಾಳವು ಎನ್ಪಿಎಸ್ ಅನ್ನು ಜಾರಿಯೇ ಗೊಳಿಸಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆದರ್ಶ ಕಟ್ಟಿನಮಕ್ಕಿ, ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರನಾಥ ಎಂ., ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಇದ್ದರು.