ಎಸಿಬಿ ಅಧಿಕಾರಿ, ಸಿಬ್ಬಂದಿ ಹಂಚಿಕೆ: 40 ಠಾಣೆಗಳು ಮೇಲ್ದರ್ಜೆಗೆ

0

ಬೆಳ್ತಂಗಡಿ ಸಹಿತ ಒಂಬತ್ತು ಪೊಲೀಸ್ ಉಪ ವಿಭಾಗ ರಚನೆ

ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ಗೃಹ ಇಲಾಖೆಗೆ ಹಂಚಿಕೆಯಾಗಿದ್ದ 221 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಬಳಸಿಕೊಂಡು ಬೆಳ್ತಂಗಡಿ ಸೇರಿದಂತೆ ರಾಜ್ಯದಲ್ಲಿ ಒಂಬತ್ತು ಹೊಸ ಪೊಲೀಸ್ ಉಪ ವಿಭಾಗ ಹಾಗೂ ಬೆಂಗಳೂರಿನಲ್ಲಿ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಆರಂಭಿಸಲು ಅನುಮತಿ ನೀಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಐದು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ನಗರ ಪೊಲೀಸ್ ಕಮಿಷನರೇಟ್‌ಗಳ ಸಿಸಿಬಿ ಘಟಕಗಳಿಗೆ ತಲಾ ಒಂದು ಡಿವೈಎಸ್‌ಪಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಎಸಿಬಿಯಲ್ಲಿರುವವರಲ್ಲಿ ಬಾಕಿ ಉಳಿಯುವ 33 ಹಾಗೂ ಇಲಾಖೆಯಲ್ಲಿ ಹೆಚ್ಚುವರಿಯಾಗಿರುವ ಏಳು ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಬಳಸಿಕೊಂಡು 15 ಜಿಲ್ಲೆಗಳ 40 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ.

ಒಂಬತ್ತು ಉಪ ವಿಭಾಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಉಪವಿಭಾಗ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 9 ಪೊಲೀಸ್ ಉಪವಿಭಾಗಗಳನ್ನು ಸೃಜಿಸಲಾಗಿದೆ. ವೃತ್ತ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿದ್ದ 40 ಠಾಣೆಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

4 ತಿಂಗಳಿಂದ ಕೆಲಸವಿಲ್ಲದೆ ಕಾಲಹರಣ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿ ಲೋಕಾಯುಕ್ತ ಬಲಪಡಿಸಿ ಹೈಕೋರ್ಟ್ ವಿಭಾಗೀಯ ಪೀಠ ಆಗಸ್ಟ್ 11ರಂದು ತೀರ್ಪು ನೀಡಿತ್ತು. ಅಂದಿನಿಂದಲೇ ಎಸಿಬಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದರು. ಎಸಿಬಿಯಲ್ಲಿದ್ದ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಒಟ್ಟು 445 ಅಧಿಕಾರಿಗಳು ಮತ್ತು ಸಿಬ್ಬಂದಿ ಎಸಿಬಿಯಲ್ಲೇ ಉಳಿದಿದ್ದರು. ಲೋಕಾಯುಕ್ತ ಮತ್ತು ಗೃಹ ಇಲಾಖೆಗೆ ಶೇಕಡ 50ರಷ್ಟು ಹುದ್ದೆಗಳನ್ನು ಹಂಚಿಕೆ ಮಾಡಿ ನವೆಂಬರ್ 19ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈ ಹುದ್ದೆಗಳಿಗೆ ಮಂಜೂರಾತಿ ಇಲ್ಲದ ಕಾರಣದಿಂದ ತಿಂಗಳು ಕಳೆದರೂ ಸ್ಥಳನಿಯುಕ್ತಿ ಸಾಧ್ಯವಾಗಿರಲಿಲ್ಲ.

LEAVE A REPLY

Please enter your comment!
Please enter your name here