ಮರೆಯಾದ (ನಿಧನರಾದ) ಊರಿನ ಸಾಧಕರನ್ನು ನೆನಪಿಸೋಣ, ಊರಿನ ಉದ್ಧಾರಕ್ಕೆ ಅವರ ಸಾಧನೆ ದಾರಿದೀಪವಾಗಲಿ

0

ಸುದ್ದಿ ಬಿಡುಗಡೆ ಪುತ್ತೂರು 38ನೇ ವರ್ಷಕ್ಕೆ ಕಾಲಿರಿಸಿದೆ. ಸುದ್ದಿ ವೆಬ್‌ಸೈಟ್, ಸುದ್ದಿ ಚಾನೆಲ್ ಜಗತ್ತಿನಲ್ಲಿರುವ ಪುತ್ತೂರಿನವರನ್ನು ತಲುಪುತ್ತಿದೆ. ಸುದ್ದಿ ತಾಲೂಕಿನ ಅಭಿವೃದ್ಧಿಯಲ್ಲಿ ಜನರನ್ನು ಗುರುತಿಸುವಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದೀಗ ಪ್ರತೀ ಗ್ರಾಮಗಳನ್ನು ನಮ್ಮೂರಿನ ಹೆಮ್ಮೆಯ ಗ್ರಾಮಗಳನ್ನಾಗಿ ಮಾಡುವ ಮೂಲಕ ಪುತ್ತೂರು ತಾಲೂಕನ್ನು ಹೆಮ್ಮೆಯ ತಾಲೂಕು ಮಾಡುವ ಯೋಜನೆ ಆಯೋಜಿಸಿದ್ದೇವೆ. ಪ್ರತಿಯೊಂದು ಊರಿನಲ್ಲಿ ಮರೆಯಾದ (ನಿಧನ) ಸಾಧಕರಿದ್ದಾರೆ. ಅವರ ಹಿಂದಿನ ಕೆಲಸಗಳು ಊರಿನ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ಕೊಟ್ಟಿದೆ. ಅಂಥವರನ್ನು ನಾವು ಮರೆಯಬಾರದು. ಹಿಸ್ಟರಿ ಗೊತ್ತಿಲ್ಲದವರು ಹಿಸ್ಟರಿ ಮಾಡಲಾರರು ಎಂಬ ಮಾತಿದೆ. ಅದಕ್ಕಾಗಿ ಅವರು ಮಾಡಿದ ಕೆಲಸಗಳನ್ನು ಗುರುತಿಸಬೇಕು, ದಾಖಲಿಸಬೇಕು. ಈಗಿನ ಸಮುದಾಯಕ್ಕೆ ಅವರ ಸಾಧನೆ ಮಾರ್ಗದರ್ಶನ ನೀಡುವಂತಾಗಬೇಕು. ಈಗ ಊರಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವವರಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿ, ಊರಿನ ಅಭಿವೃದ್ಧಿಗೆ ಕಾರಣರಾಗಬೇಕು. ಕಾರಣಾಂತರಗಳಿಂದ ಊರನ್ನು ಬಿಟ್ಟು ಪರವೂರಿನಲ್ಲಿ ದೇಶ, ವಿದೇಶದಲ್ಲಿ ನೆಲೆಸಿದವರು ಕೆಲಸ ಮಾಡುತ್ತಿರುವವರು ಇದ್ದಾರೆ. ಅವರ ಸಾಧನೆಯನ್ನೂ ಗುರುತಿಸಿ ಅವರನ್ನು ಊರಿಗೆ ಕನೆಕ್ಟ್ ಮಾಡಬೇಕು. ಅವರ ಸಂಪರ್ಕ ಊರಿಗೆ ಪ್ರಯೋಜನವಾಗುವಂತೆ ಮಾಡಬೇಕು.


ಅದರೊಂದಿಗೆ ಊರಿನ ಸಮಗ್ರ ಚಿತ್ರಣ ಕಸುಬುದಾರರ, ಸೇವೆಗಳ, ಉದ್ಯಮಗಳ, ಕೃಷಿ ಕ್ಷೇತ್ರದ ಮತ್ತು ಊರಿನಲ್ಲಿರುವ ಪ್ರಮುಖ ಕ್ಷೇತ್ರಗಳ, ಸಂಘ ಸಂಸ್ಥೆಗಳ ಪರಿಚಯವನ್ನು ಚಿತ್ರೀಕರಣ ಮತ್ತು ಡಿಜಿಟಲೀಕರಣ ಮಾಡುವುದರೊಂದಿಗೆ ನಮ್ಮೂರಿನ ಹೆಸರು ಎಲ್ಲೆಡೆ ಪಸರಿಸುವಂತೆ ಮಾಡಬೇಕು. ಊರಿನ ಸಮಸ್ಯೆಗಳನ್ನು ಪರಿಹರಿಸಿ ಗ್ರಾಮಾಭಿವೃದ್ಧಿ ಬಗ್ಗೆ ಜನತೆ ತೊಡಗಿಸಿಕೊಳ್ಳುವಂತೆ ಆಗಬೇಕು. ನಮ್ಮ ಊರು ಡಿಜಿಟಲ್ ಗ್ರಾಮವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟು ಅಭಿವೃದ್ಧಿಯತ್ತ ಸಾಗಬೇಕು. ರಾಜಕೀಯ ರಹಿತವಾಗಿ ಗಾಂಧಿ ಚಿಂತನೆಯ ಗ್ರಾಮ ಸ್ವರಾಜ್ಯ ಎಂಬ ಆಶಯದೊಂದಿಗೆ ಸುದ್ದಿ 38ನೇ ವರ್ಷದ ಕಾರ್ಯಕ್ರಮವನ್ನು ಪ್ರತೀ ಗ್ರಾಮದಲ್ಲಿ ಹಮ್ಮಿಕೊಳ್ಳಲಿದ್ದೇವೆ. ಆ ಮೂಲಕ ಇಡೀ ಪುತ್ತೂರು ತಾಲೂಕನ್ನು ಹೆಮ್ಮೆಯ ತಾಲೂಕನ್ನಾಗಿ ಮಾಡುವ ಯೋಚನೆ ಯೋಜನೆಗೆ ಜನತೆಯ ಸಹಕಾರ ಮತ್ತು ಬೆಂಬಲವನ್ನು ಕೇಳುತ್ತಿದ್ದೇನೆ. – ಡಾ. ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here