ಪುತ್ತೂರು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಯಂ ಸಫೀಶಿಯಂಟ್ ಆಗಿರಬೇಕು -ಡಾ.ಎಂ.ಕೆ.ಪ್ರಸಾದ್
ಪ್ರಗತಿ ಆಸ್ಪತ್ರೆ ಉತ್ತಮ ಆಸ್ಪತ್ರೆಯೆಂಬ ಹೆಗ್ಗಳಿಕೆಯಿದೆ-ವಿಕ್ರಮ್ ದತ್ತ
ಪುತ್ತೂರಿಗೊಬ್ಬರು ಪೂರ್ಣಪ್ರಮಾಣದ ಯುರೋಲಾಜಿಸ್ಟ್ ಲಭಿಸಿದ್ದಾರೆ -ಡಾ.ಗೋಪಿನಾಥ್ ಪೈ
ಪ್ರಗತಿಗಾಗಿ ಸೇವೆ, ಸೇವೆಗಾಗಿ ಪ್ರಗತಿ -ಡಾ.ಶ್ರೀಪತಿ ರಾವ್
ಪುತ್ತೂರು:ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸರ್ವ ಸುಸಜ್ಜಿತವಾದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಮೊಡ್ಯುಲರ್ ಓಟಿ ಮತ್ತು ಯು ಬ್ರೀದ್ ಕ್ಲಿನಿಕ್ ಉದ್ಘಾಟನೆ ಹಾಗು ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಡಿ.17ರಂದು ಸಂಜೆ ನಡೆಯಿತು.ಸರ್ವ ಸುಸಜ್ಜಿತವಾದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಮೊಡ್ಯುಲರ್ ಓಟಿಯನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಉದ್ಘಾಟಿಸಿದರು.ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರು ಆಸ್ಪತ್ರೆಯ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು.ಪ್ರೊ|ಡಾ.ಗೋಪಿನಾಥ್ ಪೈ ಅವರು ಯು ಬ್ರೀದ್ ಕ್ಲಿನಿಕ್ ಉದ್ಘಾಟಿಸಿದರು.
ಪುತ್ತೂರು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಯಂ ಸಫೀಶಿಯಂಟ್ ಆಗಿರಬೇಕು: ಆಸ್ಪತ್ರೆಯ ವೆಬ್‌ಸೈಟ್ ಅನಾವರಣಗೊಳಿಸಿದ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ, ಪುತ್ತೂರಿನ ರೋಗಿಗಳನ್ನು ಮಂಗಳೂರಿಗೆ ಕಳುಹಿಸದೆ ಇಲ್ಲಿಯೇ ಚಿಕಿತ್ಸೆ ಕೊಡಿಸುವ ಕೆಲಸ ಆದಾಗ ಪುತ್ತೂರು ಜಿಲ್ಲಾ ಕೇಂದ್ರವಾಗುತ್ತದೆ.ಈ ನಿಟ್ಟಿನಲ್ಲಿ ಮೊದಲು ಪುತ್ತೂರಿನಲ್ಲಿ ಉತ್ತಮ ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳಿರಬೇಕು.ಇದಕ್ಕೆ ಪೂರಕ ಎಂಬಂತೆ ದೂರದೃಷ್ಟಿಯುಳ್ಳ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲಾ ಸೌಲಭ್ಯ ಒದಗಿಸುವಲ್ಲಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಶ್ರೀಪತಿ ರಾವ್ ಬಹಳ ದೂರದೃಷ್ಟಿಯುಳ್ಳ ವ್ಯಕ್ತಿ.ಅವರು ವೈದ್ಯ ಲೋಕಕ್ಕೆ ಬಂದಿದ್ದಾರೆ.ಒಂದು ವೇಳೆ ರಾಜಕೀಯ ವ್ಯವಸ್ಥೆಯಲ್ಲಿ ಮುಂದೆ ಹೋಗುತ್ತಿದ್ದರೆ ಇವತ್ತು ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕುತ್ತಿದ್ದರೋ ಏನೋ.ಯಾಕೆಂದರೆ ಅವರ ವಿಷನ್ ಬಹಳಷ್ಟು ದೊಡ್ಡದಿದೆ.ಮುಂದಿನ ೧೦ ವರ್ಷಕ್ಕೆ ಪುತ್ತೂರಿಗೆ ಏನು ಬೇಕೆಂಬುದನ್ನು ಅವರು ಈಗಲೇ ಚಿಂತನೆ ಮಾಡುತ್ತಾರೆ. ಒಟ್ಟಿನಲ್ಲಿ ಅವರ ದೂರದೃಷ್ಟಿಯಂತೆ ಪುತ್ತೂರು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಯಂ ಸಫೀಶಿಯಂಟ್ ಆಗಿರಬೇಕೆಂದರು.
ಪ್ರಗತಿ ಆಸ್ಪತ್ರೆ ಉತ್ತಮ ಆಸ್ಪತ್ರೆಯೆಂಬ ಹೆಗ್ಗಳಿಕೆಯಿದೆ: ಮೋಡ್ಯುಲರ್ ಓಟಿ ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಮಾತನಾಡಿ ರೋಗಿಯ ಆರೋಗ್ಯದಲ್ಲಿ ಏರುಪೇರಾದರೆ ಇಲ್ಲಿ ಆತ ಖಂಡಿತವಾಗಿಯೂ ಪ್ರಗತಿ ಹೊಂದುತ್ತಾನೆ.ಜನರ ಮಾತಿನಲ್ಲೂ ಪ್ರಗತಿ ಆಸ್ಪತ್ರೆಯು ಉತ್ತಮ ಆಸ್ಪತ್ರೆಯೆಂಬ ಹೆಗ್ಗಳಿಗೆ ಮಾತು ಕೇಳಿ ಬಂದಿದೆ.ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ ರೋಗಿ ಗುಣಮುಖಕ್ಕೆ ಪೂರಕವಾಗಿದೆ.ಇವತ್ತು ಪ್ರಗತಿ ಆಸ್ಪತ್ರೆ ಅಭಿವೃದ್ಧಿ ಪಥದಲ್ಲಿದೆ.ಆದರೆ ಒಂದು ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುವುದು ಬಹಳ ಕಷ್ಟ.ಆಸ್ಪತ್ರೆಯಲ್ಲಿ ಒಂದು ಕೇಸ್ ಫೈಲ್ ಆದರೆ ಸಾರ್ವಜನಿಕರ ಮಾತು ಹೇಗಿರುತ್ತದೆ ಎಂಬುದಕ್ಕೆ ಮೊದಲು ಆಸ್ಪತ್ರೆ ನಡೆಸುವುದು ಎಷ್ಟು ಕಷ್ಟವಿದೆ ಎಂಬುದನ್ನು ಕೂಡಾ ಜನರು ಅರಿಯಬೇಕು.ಯಾಕೆಂದರೆ ಡಾ.ಶ್ರೀಪತಿ ರಾವ್ ಅವರು ಸರಕಾರಿ ಮೆಡಿಕಲ್ ಅಧಿಕಾರಿಯಾಗಿ ನಿವೃತ್ತಿ ಬಳಿಕ ಆರಾಮದಲ್ಲಿ ಇರಬಹುದಿತ್ತು.ಇಷ್ಟೊಂದು ದೊಡ್ಡ ಆಸ್ಪತ್ರೆ ಕಟ್ಟಿ ಒತ್ತಡ ತಂದುಕೊಳ್ಳುವ ಅವಕಶ್ಯತೆ ಇರಲಿಲ್ಲ.ಆದರೆ ಅವರ ಮುಂದಿರುವ ಗುರಿ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿದೆ.ರೋಟರಿ ಕ್ಲಬ್‌ನ ೨೦೨೪-೨೫ರ ನಿಯೋಜಿತ ಅಧ್ಯಕ್ಷರಾಗುವ ಮೂಲಕ ಅವರಿಂದ ಸಮಾಜ ಸೇವೆಯು ಉತ್ತಮವಾಗಿ ಸಿಗಲಿದೆ.ಇವತ್ತು ಮಂಗಳೂರು ವ್ಯವಹಾರದಲ್ಲಿ ಕುಗ್ಗುತ್ತಿದ್ದ ಸಂದರ್ಭ ಪುತ್ತೂರು ವೇಗವಾಗಿ ಬೆಳೆಯುತ್ತಿದೆ.ಇಂತಹ ಸಂದರ್ಭದಲ್ಲಿ ಇಂತಹ ಉತ್ತಮ ಸೌಲಭ್ಯದ ಆಸ್ಪತ್ರೆಗೆ ಅಗತ್ಯತೆಯು ಹೆಚ್ಚಾಗಲಿದೆ ಎಂದರು.
ಪುತ್ತೂರಿಗೊಬ್ಬರು ಪೂರ್ಣಪ್ರಮಾಣದ ಯುರೋಲಾಜಿಸ್ಟ್ ಲಭಿಸಿದ್ದಾರೆ: ಯು ಬ್ರೀದ್ ಕ್ಲಿನಿಕ್ ಉದ್ಘಾಟಿಸಿದ ಪ್ರೊ|ಡಾ.ಗೋಪಿನಾಥ್ ಪೈ ಅವರು ಮಾತನಾಡಿ ಇವತ್ತು ಪುತ್ತೂರಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ದಿನ.ಯಾಕೆಂದರೆ ಪ್ರಪ್ರಥಮವಾಗಿ ಪುತ್ತೂರಿಗೆ ಪೂರ್ಣಪ್ರಮಾಣದಲ್ಲಿ ಯುರೋಲಾಜಿಸ್ಟ್ ಡಾ.ಅಭೀಷ್ ಲಭ್ಯರಾಗಿದ್ದಾರೆ.ಮುಂದಿನ ದಿನ ಮಂಗಳೂರಿನಿಂದ ಬರುವ ವೈದ್ಯರನ್ನು ಕಾಯಬೇಕಾಗಿಲ್ಲ.ಡಾ.ಅಭೀಷ್ ಅವರನ್ನು ಕರೆಸಿ ಶಸ್ತ್ರಚಿಕಿತ್ಸೆ ಮಾಡಬಹುದು.೩೦ ವರ್ಷ ಮೊದಲು ಡಾ.ಎಂ.ಕೆ.ಪ್ರಸಾದ್, ಡಾ.ಎ.ಕೆ.ರೈ ಅವರು ಪುತ್ತೂರಿನಲ್ಲಿ ಮಾಡದ ಶಸ್ತ್ರಚಿಕಿತ್ಸೆ ಇಲ್ಲ.ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ನಾನು ಕೂಡಾ ಮಂಗಳೂರಿಗೆ ಹೋಗಲು ಅಶಕ್ತರಿಗೆ ಬಹಳಷ್ಟು ಶಸ್ತ್ರಚಿಕಿತ್ಸೆ ಮಾಡಿದ್ದೆನೆ.ಆದರೆ ಇವತ್ತು ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರದ ಕಲ್ಲು ತೆಗೆಯುವ ಕ್ರಿಯೆ ನಡೆಸಲಾಗುತ್ತಿದೆ.ಇಂತಹ ಶಸ್ತ್ರಚಿಕಿತ್ಸೆಯಲ್ಲಿ ಡಾ.ಅಭೀಷ್ ಉತ್ತಮ ಕಾರ್ಯ ನಿರ್ವಹಿಸಲಿದ್ದಾರೆ.ಪುತ್ತೂರಿನ ಮಟ್ಟಿಗೆ ವೈದ್ಯಕೀಯ ವಿಷಯದಲ್ಲಿ ಹಲವು ಆಧುನಿಕತೆಯನ್ನು ತರುವ ಮೂಲಕ ಡಾ.ಶ್ರೀಪತಿ ರಾವ್ ಅವರು ಅಗ್ರೇಸರರಾಗಿದ್ದಾರೆ ಎಂದರು.
ಪ್ರಗತಿಗಾಗಿ ಸೇವೆ, ಸೇವೆಗಾಗಿ ಪ್ರಗತಿ ಅನ್ನುವ ಧ್ಯೇಯದಿಂದ ಆಸ್ಪತ್ರೆ ಆರಂಭ: ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅವರು ಮಾತನಾಡಿ ೧೯೯೭ರಲ್ಲಿ ಕೇವಲ ೨೫ ಬೆಡ್‌ನ ಆಸ್ಪತ್ರೆಯಿಂದ ಆರಂಭಗೊಂಡ ಪ್ರಗತಿ ಆಸ್ಪತ್ರೆ ಮುಂದೆ ೨೦೦೪ರಲ್ಲಿ ಉತ್ತಮ ಕ್ವಾಲಿಟಿ ಚಿಕಿತ್ಸೆಯ ಮೂಲಕ ಸ್ವಂತ ಕಟ್ಟಡದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಂಡಿತ್ತು.ಪ್ರಗತಿಗಾಗಿ ಸೇವೆ ಮತ್ತು ಸೇವಾಗಿ ಪ್ರಗತಿ ಅನ್ನುವಂತಹ ಧ್ಯೇಯವನ್ನು ಇಟ್ಟುಕೊಂಡು ನಮ್ಮ ಆಸ್ಪತ್ರೆಯನ್ನು ಪ್ರಾರಂಭ ಮಾಡಿದ್ದೆವು.೨೦೧೧ರಲ್ಲಿ ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್, ೨೦೧೩ರಲ್ಲಿ ಪ್ರಗತಿ ಪ್ಯಾರಾ ಮೆಡಿಕಲ್ ಆಸ್ಪತ್ರೆ, ಮುಂದೆ ಹಂತಹಂತವಾಗಿ ರಾಜೀವಗಾಂಧಿ ಯುನಿವರ್ಸಿಟಿಯ ಅಡಿಯಲ್ಲಿ ಬಿಎಸ್ಸಿ ಓಟಿ ಟೆಕ್ನಾಲಜಿ ಆರಂಭಿಸಿದ್ದು, ಇವತ್ತು ಸುಮಾರು ೩೫೦ ಮಂದಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.೨೦೧೬ರಲ್ಲಿ ಆಸ್ಪತ್ರೆಗೆ ಎನ್‌ಬಿಹೆಚ್ ಕ್ವಾಲಿಟಿ ಪ್ರಮಾಣ ಪತ್ರ ಲಭಿಸಿತು.ಸಾಕಷ್ಟು ಬೆಳವಣಿಗೆಯಲ್ಲಿ ಮುಂದುರಿದ ಭಾಗದಲ್ಲಿ ೨೦೨೦ರಲ್ಲಿ ಎಮರ್ಜೆನ್ಸಿ ಮೆಡಿಕಲ್ ಓಟಿಯನ್ನು ಪ್ರಾರಂಭ ಮಾಡಿದ್ದೆವು.ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಮಂಗಳೂರಿಗೆ ಕಳುಹಿಸುವಾಗ ದಾರಿ ಮಧ್ಯೆ ಅಸುನೀಗುವುದನ್ನು ತಪ್ಪಿಸಲು ಪ್ರತಿಷ್ಟಿತ ಕೆಎಮ್‌ಸಿ ಮೆಡಿಕಲ್ ಆಸ್ಪತ್ರೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ೪ ಬೆಡ್‌ನ ತುರ್ತು ಘಟಕ ಆರಂಭಿಸಿದ್ದೆವು.ಇದರಿಂದಾಗಿ ತುರ್ತು ಸಂದರ್ಭದಲ್ಲಿ ಐಸಿಯು ಆಂಬುಲೆನ್ಸ್ ಕೂಡಾ ಸಿಗುತ್ತದೆ.೨೦೨೧ರಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ನನ್ನ ಪುತ್ರಿ ಡಾ.ಸ್ಮಿತಾ ಎಸ್ ರಾವ್ ಅವರ ಸೇವೆ ಆರಂಭಗೊಂಡಿತ್ತು.೨೦೨೨ರಲ್ಲಿ ಬಿಎಸ್ಸಿ ಓಟಿ ಮತ್ತು ಅರಿವಳಿಕಾ ಟೆಕ್ನಾಲಜ್ನಿ ತರಬೇತಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ.ಪ್ರಸ್ತುತ ೨೦ ವಿದ್ಯಾರ್ಥಿಗಳು ಕೋರ್ಸ್ ಮಾಡುತ್ತಿದ್ದಾರೆ.೨೦೨೨ರ ಡಿಸೆಂಬರ್‌ನಲ್ಲಿ ನನ್ನ ಅಳಿಯ ಯುರೋಲಜಿಸ್ಟ್ ಡಾ.ಅಭೀಷ್ ಅವರಿಂದ ಇನ್ನೊಂದು ಸೂಪರ್ ಸ್ಪೆಷಾಲಿಟಿ ವಿಭಾಗವನ್ನು ತೆರೆಯಲಾಗಿದೆ.ಇವರ ಸೇವೆ ಪುತ್ತೂರಿನ ವೈದ್ಯರಿಗೂ ಮತ್ತು ರೋಗಿಗಳಿಗೂ ಸಿಗುವಂತಾಗಲಿ ಎಂದರು.ಡಾ.ಅಭೀಷ್ ಹೆಗ್ಡೆ ಅವರು ಸ್ವಾಗತಿಸಿ, ಡಾ.ಸ್ಮಿತಾ ರಾವ್ ವಂದಿಸಿದರು.ಡಾ.ಸುಧಾ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಸಿಬ್ಬಂದಿ ಪ್ರಾರ್ಥಿಸಿದರು.ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕುಮಾರ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ., ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಶೇಖರ್ ನಾರಾವಿ, ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಡಾ.ನರಸಿಂಹ ಕಾನಾವು, ಡಾ.ರಘು ಬೆಳ್ಳಿಪ್ಪಾಡಿ, ಡಾ.ಅಶೋಕ್ ಪಡಿವಾಳ್, ಡಾ.ಜೆ.ಸಿ.ಅಡಿಗ, ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಡಾ.ಅಜೇಯ್, ಡಾ.ಸುರೇಶ್ ಪುತ್ತೂರಾಯ, ಡಾ.ಎ.ಕೆ.ರೈ, ಡಾ.ಅಜಿತ್,ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ್, ಡಾ.ಪ್ರಕಾಶ್ ಪೈ, ಡಾ.ಅನಿಲ್ ಬೈಪಡಿತ್ತಾಯ, ಸ್ನೇಹಾ ಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್, ಜಿ.ಎಲ್.ಗ್ರೂಪ್ಸ್‌ನ ಅಧ್ಯಕ್ಷ ಬಲರಾಮ ಆಚಾರ್ಯ,ರೋಟರಿ ಕ್ಲಬ್‌ನ ಅಧ್ಯಕ್ಷ ಉಮಾನಾಥ್, ಎ.ಜೆ.ರೈ, ನಯನಾ ಹೆಗ್ಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ರಂಗನಾಥ್ ರಾವ್, ಪ್ರೊ. ದತ್ತಾತ್ರೇಯ, ಪ್ರೊ. ಎ.ವಿ.ನಾರಾಯಣ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿಗಿಂತ ಸ್ಪೆಷಾಲಿಟಿ ಅಗತ್ಯ
ಪುತ್ತೂರಿಗೆ ಮೆಡಿಕಲ್ ಕಾಲೇಜು ಅಗತ್ಯವಿಲ್ಲ.ಎಲ್ಲಾ ರೀತಿಯ ಸ್ಪೆಷಾಲಿಟಿ ಸಿಗುವಲ್ಲಿ ನಮ್ಮ ಪ್ರಯತ್ನ ಇರಬೇಕು.ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದಾರೆ.ಪುತ್ತೂರಿನಲ್ಲಿ ಮೆಡಿಕಲ್ ಕ್ಷೇತ್ರ ಸುಧಾರಿಸಿದೆ.ಆದರೆ ಇನ್ನೂ ಸುಧಾರಿಸಲು ಬಹಳಷ್ಟಿದೆ.ಇವತ್ತು ಡಾ. ಶ್ರೀಪತಿ ರಾವ್ ಅವರು ಮೆಡಿಕಲ್‌ನಲ್ಲಿ ಸಾಧನೆ ಮಾಡಿದ್ದಾರೆ.
ಡಾ.ಎಂ.ಕೆ.ಪ್ರಸಾದ್, ಆದರ್ಶ ಆಸ್ಪತ್ರೆ ಪುತ್ತೂರು