ಅಡಿಕೆ ಹಳದಿ ರೋಗ ಬಾಧಿತ ಪ್ರದೇಶದಲ್ಲಿ ಪರ್ಯಾಯ ಬೆಳೆ ಸವಾಲಿನ ಕೆಲಸ ಸಂಸದ ಕ್ಯಾ|ಬ್ರಿಜೇಶ್ ಚೌಟ

0


ಪುತ್ತೂರು:ಅಡಿಕೆಗೆ ಹಳದಿ ರೋಗ ಬಾಧಿತ ಪ್ರದೇಶದಲ್ಲಿ ಪರ್ಯಾಯ ಬೆಳೆ ಸವಾಲಿನ ಕೆಲಸ ಎಂದು ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಹೇಳಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶತರುದ್ರ ಸೇವೆಯಲ್ಲಿ ಪಾಲ್ಗೊಂಡ ಅವರು,ದೇವಳದ ಹೊರಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಅಡಿಕೆ ವಿಚಾರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ ಚೌಹಾಣ್ ಅವರು ಉನ್ನತ ಮಟ್ಟದ ಸಭೆಯನ್ನು ಈಗಾಗಲೇ ನಡೆಸಿದ್ದಾರೆ. ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದ ಸಮಸ್ಯೆಯನ್ನೂ ಸಭೆಯಲ್ಲಿ ಉಲ್ಲೇಖಿಸಲಾಗಿದೆ. ರೋಗ ಬಾಧಿತ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆಯುವುದಕ್ಕೆ ಸಮಸ್ಯೆಯಿದ್ದು,ಪರಿಹಾರವಾಗಿ ಒನ್ ಟೈಮ್ ಪ್ಯಾಕೇಜ್ ಘೋಷಿಸಬೇಕು ಮತ್ತು ಪರ್ಯಾಯ ಬೆಳೆಯ ಬಗ್ಗೆ ಪ್ರಯತ್ನ ನಡೆಸಬೇಕೆಂಬ ಬೇಡಿಕೆಗಳಿವೆ. ಸಚಿವರು ಹಳದಿ ರೋಗದ ಪ್ರದೇಶವನ್ನು ಖುದ್ದು ವೀಕ್ಷಿಸುವ ಭರವಸೆಯನ್ನು ನೀಡಿದ್ದಾರೆ. ಇದರ ಪೂರ್ವಭಾವಿ ಸಭೆಗಳು ಈಗಾಗಲೇ ತೋಟಗಾರಿಕಾ ಇಲಾಖೆಯಿಂದ ನಡೆದಿದೆ. ಕಾಫಿ ಬೋರ್ಡ್ ಅಧ್ಯಕ್ಷರನ್ನು ಕರೆಸಿ ಜಿಲ್ಲೆಯ ವಿವಿಧ ಕಡೆಯಲ್ಲಿ ಕಾಫಿ ಬೆಳೆಯುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆಯನ್ನು ಮಾಡಿಸಲು ಸೂಚಿಸಲಾಗಿದೆ. ರೈತರು ಈಗಗಾಲೇ ಕಾಫಿಯನ್ನು ಬೆಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಹಳದಿ ರೋಗ ಬಾಧಿತ ಪ್ರದೇಶದಲ್ಲಿ ಪರ್ಯಾಯ ಬೆಳೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಸಂಸದರು ತಿಳಿಸಿದರು.


ಪ್ರಸಾದಂ ಯೋಜನೆಗೆ ಪ್ರಸ್ತಾವನೆ
ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಸಾದಂ ಯೋಜನೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಸದ್ಯಕ್ಕೆ ಅದರ ಮಾಹಿತಿ ತಿಳಿದಿಲ್ಲ, ಅದನ್ನು ಫಾಲೋ ಅಪ್ ಮಾಡುವ ಕೆಲಸ ಮಾಡಲಾಗುವುದು ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟ ತಿಳಿಸಿದರು.
ಪ್ರಸಾದಂ ಯೋಜನೆ ಬೋಗಸ್ ಯೋಜನೆಯಾಗಿದ್ದರೆ, ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ಕ್ಷೇತ್ರದಲ್ಲಿ ಕೆಲಸಗಳು ನಡೆಯುತ್ತಿರಲಿಲ್ಲ.ಸದ್ಯದ ಮಾರ್ಗಸೂಚಿ, ಅವಧಿ ಹೇಗಿದೆ ಎಂಬುದನ್ನು ನೋಡಬೇಕಾಗಿದೆ ಎಂದರು.


ಹಿಂದು ಸಮಾಜದ ಮೇಲೆ ಗೊಂದಲ ಸೃಷ್ಟಿಸುವ ಪ್ರಯತ್ನ ಕಾಂಗ್ರೆಸ್‌ನದ್ದು
ಕಾಂಗ್ರೆಸ್ ಸರಕಾರ ಹಿಂದು ಕಾರ್ಯಕರ್ತರನ್ನು, ಹಿಂದು ನಾಯಕರನ್ನು ದಮನಿಸುವ ಪ್ರಯತ್ನ ಮಾಡುತ್ತಿದೆ. ಹಿಂದು ಸಮಾಜದ ನಡುವೆ ಗೊಂದಲ ಸೃಷ್ಠಿಸುವ ಪ್ರಯತ್ನ ಮಾಡುತ್ತಿದೆ. ಇದೇನು ಹೊಸ ವಿಚಾರವಲ್ಲ. ಹಿಂದೆ ಅವರ ಸರ್ಕಾರ ಇರುವ ಸಂದರ್ಭ ಇದನ್ನೇ ಮಾಡಿತ್ತು, ಈಗಲೂ ಅದನ್ನೇ ಮಾಡುತ್ತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here