ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭಗೊಂಡಿರುವ ಗೋ ಶಾಲೆಯಲ್ಲಿ ಸುಮಾರು 20ಕ್ಕೂ ಮಿಕ್ಕಿ ಗೋವುಗಳಿದ್ದು, ಅದರ ಸಾಕಾಣಿಕೆ ವೆಚ್ಚಕ್ಕೆ ಸಂಬಂಧಿಸಿ ಭಕ್ತರು ಮುಂದೆ ಬರುತ್ತಿದ್ದು, ಡಿ.19 ರಂದು ಗೀರ್ ಜಾತಿಯ ಗೋವೊಂದರ ಸಾಕಾಣಿಕೆಗೆ ದತ್ತು ಸ್ವೀಕಾರ ಮಾಡುವ ಮೂಲಕ ಹರಿಪ್ರಸಾದ್ ಹೊಟೇಲ್‌ನ ಮಾಲಕ ಹರಿನಾರಾಯಣ ಹೊಳ್ಳ ಅವರು ದೇಣಿಗೆ ಸಮರ್ಪಣೆ ಮಾಡಿದರು.
ದೇವಳದ ಕಾಮಧೇನು ಗೋಶಾಲೆಯಲ್ಲಿರುವ ಮೂರು ವರ್ಷ ಪ್ರಾಯದ ಆರು ತಿಂಗಳ ಗಬ್ಬದ ಗಿರ್ ಜಾತಿಯ ಐಸಿರಿ ಎಂಬ ಹೆಸರಿನ ಹಸುವನ್ನು ಹರಿನಾರಾಯಣ ಹೊಳ್ಳ ರವರು ಒಂದು ವರ್ಷದ ಸಾಕಾಣಿಕೆ ವೆಚ್ಚದ ಮೊದಲ ಕಂತು ಸಾವಿರ ರೂ. 9 ಸಾವಿರ ನೀಡಿ ದತ್ತು ಸ್ವೀಕರಿಸಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮತ್ತು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮಾದರಿಯ ಸೇವೆಯು ಇತರರಿಗೂ ಪ್ರೇರಣೆಯಾಗಲಿ ಎಂದು ಅವರು ತಿಳಿಸಿದ್ದಾರೆ.
ಆಹಾರದ ವೆಚ್ಚಕ್ಕೆ ದೇಣಿಗೆ ಸಮರ್ಪಣೆ:
ಕಾಮಧೇನು ಗೋ ಶಾಲೆಯಲ್ಲಿರುವ ಗೋವುಗಳ ಆಹಾರದ ವೆಚ್ಚಕ್ಕಾಗಿ ದೇವಳದ ಪ್ರಧಾನ ಅರ್ಚಕರೂ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಅವರು ರೂ. 10ಸಾವಿರ ದೇಣಿಗೆಯನ್ನು ಸಮರ್ಪಣೆ ಮಾಡಿದರು.