ಪುತ್ತೂರಿನ 6, ಕಡಬದ 5, ಬಂಟ್ವಾಳದ 7 ಮಂದಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಪುತ್ತೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ನೀಡಲಾಗುವ 2025-26ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುತ್ತೂರು ತಾಲೂಕಿನಿಂದ 6 ಮಂದಿ, ಕಡಬ ತಾಲೂಕಿನ ಐವರು ಹಾಗೂ ಬಂಟ್ವಾಳ ತಾಲೂಕಿನಿಂದ 7 ಮಂದಿ ಸೇರಿದಂತೆ ಜಿಲ್ಲೆಯ 63 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.


ಪುತ್ತೂರು ತಾಲೂಕಿನಿಂದ ಕ್ರೀಡಾ ಕ್ಷೇತ್ರದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ರಂಗಭೂಮಿ ಕಲಾ ಸೇವೆಯಲ್ಲಿ ಸುಂದರ ರೈ ಮಂದಾರ, ಧಾರ್ಮಿಕ ಸೇವೆಯಲ್ಲಿ ಕುಕ್ಕಾಡಿ ಪ್ರೀತಂ ತಂತ್ರಿ, ಸಮಾಜ ಸೇವೆಯಲ್ಲಿ ಮೋಹನ್ ರೈ ‘ನಂದಾದೀಪ’ ಮುಂಡೂರು, ಡಾ|ಹಾಜಿ ಯಸ್.ಅಬೂಬಕ್ಕರ್ ಆರ್ಲಪದವು, ಕಲಾ ಕ್ಷೇತ್ರದಲ್ಲಿ ಯಕ್ಷಗಾನದಲ್ಲಿ ಬೆಟ್ಟಂಪಾಡಿಯ ಚೆಲ್ಯಡ್ಕ ನಿವಾಸಿ,ಮಂಗಳೂರು ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪೂರ್ಣಿಮಾ ಯತೀಶ್ ಶೆಟ್ಟಿ, ಕಡಬ ತಾಲೂಕಿನಿಂದ ಕೃಷಿ ಕ್ಷೇತ್ರದಲ್ಲಿ ವಿಜಯ ಕುಮಾರ್ ಸೊರಕೆ, ಕಂಬಳ ಕ್ರೀಡಾ ಕ್ಷೇತ್ರದಲ್ಲಿ ಸುದರ್ಶನ ನಾಯ್ಕ್ ಕಂಪ ಸವಣೂರು, ಕ್ರೀಡಾ ಕ್ಷೇತ್ರದಲ್ಲಿ ಜಸ್ಮಿತ ಕೊಡೆಂಕಿರಿ, ನೃತ್ಯ ಮಾಡೆಲಿಂಗ್,ಸಂಗೀತ, ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅರ್ಚನಾ ಎಸ್ ಸಂಪ್ಯಾಡಿ ಶಿರಾಡಿ, ಸಂಗೀತ ಕಲಾ ಕ್ಷೇತ್ರದಲ್ಲಿ ವಿಶ್ವನಾಥ ಶೆಟ್ಟಿ ಕೆ ಕುಂಡಡ್ಕ ಕಡಬ, ಬಂಟ್ವಾಳ ತಾಲೂಕಿನಿಂದ ಸಮಾಜ ಸೇವೆಯಲ್ಲಿ ಶೈಲಜಾ ರಾಜೇಶ್ ಬಾಳ್ತಿಲ, ಕಲಾ ಕ್ಷೇತ್ರದಲ್ಲಿ ಶ್ರೀನಿವಾಸ ಶೆಟ್ಟಿ ವಿಟ್ಲ, ಸಾಮಾಜಿಕ ಕ್ಷೇತ್ರದಲ್ಲಿ ಹಾಜಿ ಬಿ.ಹೆಚ್ ಖಾದರ್ ಕೆಳಗಿನಪೇಟೆ ಬಿ ಕಸಬಾ, ಪೀಟರ್ ಜೆರಿ ರೋಡ್ರಿಗಸ್ ಬಿ ಕಸ್ಬ, ಮಾಧ್ಯಮ ಆಡಳಿತ ಕ್ಷೇತ್ರದಲ್ಲಿ ಡಾ.ಮಮತಾ ಪಿ. ಶೆಟ್ಟಿ ಸಾಲೆತ್ತೂರು, ಸ್ಯಾಕ್ಸೋ ಫೋನ್ ವಾದಕ ಬಾಬು ಸಪಲ್ಯ ವಗ್ಗ, ನಾಟಿವೈದ್ಯ ಸೋಮನಾಥ ಪಂಡಿತ ಅನಂತಾಡಿ, ಸಂಘ ಸಂಸ್ಥೆಗಳ ವಿಭಾಗದ ಸಮಾಜ ಸೇವೆಯಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗ ಅರಿಯಡ್ಕ, ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿ ಹಾಗೂ ಸಿದ್ದಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಹಾಗೂ ಡಿ ಗ್ರೂಪ್ ವಿಟ್ಲ ಆಯ್ಕೆಯಾಗಿದೆ.


ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್-ಕ್ರೀಡಾ ಕ್ಷೇತ್ರ:
ಬಹುಮುಖ ಪ್ರತಿಭೆ, ರಾಷ್ಟ್ರೀಯ ಕಬಡ್ಡಿ ತರಬೇತುದಾರ, ಉತ್ತಮ ಕಾರ್ಯಕ್ರಮ ನಿರೂಪಕರಾಗಿರುವ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಹ ಶಿಕ್ಷಕ ಬಾಲಕೃಷ್ಣ ರೈ ಪೋರ್ದಾಲ್ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಬೆಟ್ಟಂಪಾಡಿ ಗ್ರಾಮದ ಪೊರ್ದಾಲ್ ನಿವಾಸಿ ಕಿಟ್ಟಣ್ಣ ರೈ ಪೊರ್ದಾಲ್ ಮತ್ತು ಗುಲಾಬಿ ದಂಪತಿ ಪುತ್ರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯಲ್ಲಿ ಪ್ರೌಢಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯಲ್ಲಿ ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಪದವಿ ಶಿಕ್ಷಣ, ವಿವೇಕಾನಂದ ಟೀಚರ‍್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ತೆಂಕಿಲದಲ್ಲಿ ಡಿ.ಎಡ್., ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪದವಿ ಹಾಗೂ ಎಂ.ಎ ಪದವಿಯನ್ನು ಪಡೆದಿದ್ದಾರೆ. ಇವರು ರಂಗಕಲಾವಿದರಾಗಿ, ನಾಟಕ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. 2009ರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ 17 ವರ್ಷಗಳಿಂದ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಸಹ ಶಿಕ್ಷಕರಾಗಿರುತ್ತಾರೆ. 1000ಕ್ಕಿಂತ ಅಧಿಕ ಕಾರ್ಯಕ್ರಮದ ನಿರೂಪಣೆ, ಸಾಮಾನ್ಯ ಕಾರ್ಯಕ್ರಮದಿಂದ ಹಿಡಿದು ಮುಖ್ಯಮಂತ್ರಿಗಳವರೆಗಿನ ಕಾರ್ಯಕ್ರಮದ ನಿರೂಪಣೆ. ಡ್ರಗ್ಸ್ ಮುಕ್ತ ಯುವ ಸಮಾಜ ಎನ್ನುವ ವಿಷಯದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 250ಕ್ಕಿಂತ ಅಧಿಕ ಶಾಲಾ-ಕಾಲೇಜುಗಳಲ್ಲಿ ಉಚಿತ ತರಬೇತಿ, ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರರಾಗಿ ಇವರ ತರಬೇತಿಯಲ್ಲಿ ಶಾಲೆ 8 ಬಾರಿ ಜಿಲ್ಲಾಮಟ್ಟ, 5 ಬಾರಿ ವಿಭಾಗ ಮಟ್ಟ, 5 ಬಾರಿ ರಾಜ್ಯಮಟ್ಟ, ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸತತ 3 ಬಾರಿ ಕರ್ನಾಟಕ ಕಬಡ್ಡಿ ತಂಡದ ತರಬೇತುದಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, 10ಕ್ಕಿಂತ ಅಧಿಕ ಮಕ್ಕಳು ಅಥ್ಲೆಟಿಕ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆ, ತ್ರೋಬಾಲ್ ಪಂದ್ಯಾಟದಲ್ಲಿ ಸತತ 4 ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ, ದ.ಕ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ಪುತ್ತೂರು ತಾಲೂಕು ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ರೋಟರಿ ಕ್ಲಬ್/ಲಯನ್ಸ್ ಕ್ಲಬ್‌ಗಳಲ್ಲಿ ಸೇವೆ, ಭಾರತ್ ಸೈಟ್ ಗೈಡ್ ಸಂಸ್ಥೆಯಲ್ಲಿ ಉತ್ತಮ ಸೈಟರ್ ಆಗಿ ಸೇವೆ, 50ಕ್ಕಿಂತ ಅಧಿಕ ಸಂಘ-ಸಂಸ್ಥೆಗಳಿಂದ ಸನ್ಮಾನ, ಗೌರವಾದರಗಳಿಗೆ ಭಾಜನರಾಗಿರುತ್ತಾರೆ.


ಡಾ||ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು-ಸಮಾಜ ಸೇವೆ:
ತನ್ನ ಸಂಘಟನೆ ಕ್ರಿಯಾಶೀಲತೆ, ಸಾಮಾಜಿಕ ಕಳಕಳಿ, ನಾಡು ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಪತ್ರಿಕೋದ್ಯಮದ ಬಗ್ಗೆ ಅಪಾರ ಕಳಕಳಿ ಇರುವ, ಗಡಿನಾಡಿನ ಬಗ್ಗೆ ಕಾಳಜಿಯಿಂದ ಕಾರ್ಯನಿರ್ವಹಿಸುವ ಕನ್ನಡದ ಕಟ್ಟಾಳು ಅಬೂಬಕ್ಕರ್ ಆರ್ಲಪದವುರವರು ‘ಗಡಿನಾಡ ಧ್ವನಿ’ ಕನ್ನಡ ಮಾಸ ಪತ್ರಿಕೆಯ ಪ್ರಕಾಶಕ, ಸಂಪಾದಕರೂ ಆಗಿದ್ದಾರೆ. ಗೌರವ ಡಾಕ್ಟರೇಟ್, ಭಾರತ ವಿಕಾಸ ರತ್ನ, ಕರ್ನಾಟಕ ಜ್ಯೋತಿ, ಕರ್ನಾಟಕ ರತ್ನ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಂಘಟನೆಗಳಲ್ಲಿ ಸಮಾಜಮುಖೀ ಚಿಂತನೆಗಳಲ್ಲಿ, ಪರಿಸರ, ಶೈಕ್ಷಣಿಕ, ವೈಜ್ಞಾನಿಕ, ಸಾಹಿತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಡಾ|ಹಾಜಿ ಯಸ್. ಅಬೂಬಕ್ಕರ್ ಆರ್ಲಪದವು ಅವರ ಸಾಧನೆಗೆ ಸುಮಾರು 165ಕ್ಕಿಂತಲೂ ಮಿಕ್ಕಿ ಪ್ರಶಸ್ತಿ, ಬಹುಮಾನ, ಅಭಿನಂದನಾ ಪತ್ರ, ಸನ್ಮಾನಗಳು ದೊರೆತಿದೆ. ಗಡಿನಾಡಿನ ಸೇವೆಗಾಗಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್‌ನ್ನು ಗಡಿನಾಡಿನಲ್ಲಿ ನೋಂದಾವಣೆಗೊಳಿಸಿ, ಗಡಿನಾಡ ಧ್ವನಿ ಪತ್ರಿಕೆಯ ಮೂಲಕ ಕರ್ನಾಟಕ ಗಡಿನಾಡ ಸಮ್ಮೇಳನವನ್ನು ಪ್ರಥಮವಾಗಿ ಕಾಸರಗೋಡಿನಲ್ಲಿ ಆಯೋಜಿಸಿ ದೇಶದ ಮೂಲೆ ಮೂಲೆಗಳಲ್ಲಿರುವ ಸಾಹಿತ್ಯಾಸಕ್ತರನ್ನು, ಹೋರಾಟಗಾರರನ್ನು ಒಟ್ಟುಗೂಡಿಸಿ ಮಹಾಸಮ್ಮೇಳನವನ್ನು ಏರ್ಪಡಿಸಿದ ಹೆಗ್ಗಳಿಕೆ ಇವರದಾಗಿದೆ. ಡಾ||ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ರವರು ಪ್ರತಿಷ್ಟಿತ ಗಾಳಿಮುಖ ಖಲೀಲ್ ಸಲಾಹ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಕಾನೂನು ಸೇವಾ ಪ್ರಾಧಿಕಾರದ ಪ್ಯಾರಾ ಲೀಗಲ್ ವಾಲೆಂಟಿಯರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷರಾಗಿ, ದರ್ಬೆ ಫಿಲೋಮಿನಾ ಕಾಲೇಜು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಪಾಣಾಜೆ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ, ಸುಬೋಧ ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆ ಹಾಗೂ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಸಾಧನೆಗೆ ಪತ್ನಿ ಫಾತಿಮತ್ ಜುಹುರ, ಮಕ್ಕಳಾದ ಆಯಿಷತ್ ಬುಶ್ರಾ, ಫಾತಿಮತ್ ಸಂಶೀರ, ಮುಹಮ್ಮದ್ ಸಿಂಸಾರುಲ್ ಹಖ್, ಖದೀಜತ್ , ಮತ್ತು ಸಹೋದರರು ಸಾಥ್ ನೀಡುತ್ತಾರೆ.


ವಿಜಯ ಕುಮಾರ್ ಸೊರಕೆ-ಕೃಷಿ ಕ್ಷೇತ್ರ:
ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿರುವ ಉದ್ಯಮಿ,ಪ್ರಗತಿಪರ ಕೃಷಿಕರೂ ಆಗಿರುವ ವಿಜಯ ಕುಮಾರ್ ಸೊರಕೆ ಅವರು ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿ,ನರಿಮೊಗರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ,ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ನಿರ್ದೇಶಕರಾಗಿ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇರಿದಂತೆ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.


ಸುದರ್ಶನ್ ನಾಯ್ಕ್ ಕಂಪ-ಕಂಬಳ ಕ್ರೀಡಾ ಕ್ಷೇತ್ರ:
ಪ್ರಸ್ತುತ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಉಪಾಧ್ಯಕ್ಷರಾಗಿ ಸುದರ್ಶನ ನಾಯ್ಕ್ ಕಂಪ ಅವರು ಕಂಬಳ ಕ್ರೀಡಾ ಕ್ಷೇತ್ರದಲ್ಲಿನ ಸೇವೆ,ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಸವಣೂರು ಕಂಪ ನಿವಾಸಿಯಾಗಿರುವ ಇವರು ಸುಮಾರು 40 ವರುಷಗಳಿಂದ ಕಂಬಳ ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದ್ದಾರೆ.ಕಂಬಳದ ಗಂತ್ ಕಾರ್ಯದಲ್ಲಿ ಇವರ ಸೇವೆ ಅನನ್ಯ.ಕಂಬಳ ಉದ್ಘೋಷಕರಾಗಿಯೂ ಇವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.ಪುತ್ತೂರಿನಲ್ಲಿ ದಿ.ಜಯಂತ ರೈ ಅವರ ನೇತೃತ್ವದಲ್ಲಿ ಕಂಬಳ ಆರಂಭಗೊಂಡ ಬಳಿಕ ಕಳೆದ 40 ವರುಷಗಳಿಂದ ಕಂಬಳ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಿರುವ ಇವರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಬೆಂಗಳೂರು ಪ್ರಥಮ ಕಂಬಳದಲ್ಲೂ ಅಹರ್ನಿಶಿ ಸೇವೆ ಸಲ್ಲಿಸಿದ್ದರು.ಪ್ರಗತಿಪರ ಕೃಷಿಕರಾಗಿರುವ ಇವರು, ಹೈನುಗಾರಿಕೆ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ.ರಾಜಕೀಯ, ಸಾಮಾಜಿಕ, ಧಾರ್ಮಿಕ, ಕ್ಷೇತ್ರದಲ್ಲೂ ಇವರು ಸಕ್ರಿಯರಾಗಿದ್ದಾರೆ.


ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ:
ಶ್ರಮ…ಸೇವೆ…ಸಹಾಯ…ಎಂಬ ಧೈಯ ವಾಕ್ಯದೊಂದಿಗೆ ಸ್ಥಾಪನೆಯಾದ ಶ್ರೀ ವಿಷ್ಣು ಫ್ರೆಂಡ್ಸ್ ಮಚ್ಚಾರಡ್ಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಇದೀಗ ‘ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ’ ಎಂಬ ಹೊಸ ನಾಮಧೇಯವನ್ನು ಹೊಂದಿ ನಿರಂತರವಾಗಿ ಸಮಾಜಸೇವೆಯನ್ನು ಮಾಡುತ್ತ ಬಂದಿರುವುದು ಯುವಶಕ್ತಿಯ ನಿರಂತರ ಸ್ಪೂರ್ತಿಗೆ ಒಳಗಾಗಿದೆ. ಸ್ಥಾಪಕಾಧ್ಯಕ್ಷರಾಗಿ ರಾಜೇಶ್ ಕೆ. ಮಯೂರ ಇವರ ನೇತೃತ್ವದಲ್ಲಿ ಆರಂಭವಾದ ಸಂಘಟನೆ ಇದೀಗ 8 ವರ್ಷಕ್ಕೆ ಕಾಲಿಟ್ಟಿದೆ.2018ರಲ್ಲಿ ಆರಂಭಗೊಂಡ ಈ ಸಂಘಟನೆ ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಸಂಘ ಬೆಳವಣಿಗೆಯಾಗುತ್ತ ಹೋದಂತೆ ಸಂಘವು ನೆಹರು ಯುವ ಕೇಂದ್ರ ಮಂಗಳೂರು ಇದರಲ್ಲಿ ನೋಂದಾವಣೆಯನ್ನು ಮಾಡಿಕೊಂಡು ನಿತ್ಯ ನಿರಂತವಾಗಿ ವಿಭಿನ್ನ ಕಾರ್ಯದ ಮೂಲಕ ಯುವಜನತೆಗೆ ಮಾದರಿಯಾಗುತ್ತಿದೆ.ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಚ್ಚಾರಡ್ಕ ಸಂಘಟನೆಯು 26/08/2018 ರಂದು ನಡೆದ ಕೆಸರುಡೊಂಜಿ ಕಾರ್ಯಕ್ರಮದ ಮೂಲಕ ಸ್ಥಾಪನೆಯಾಗಿದ್ದು, ಈ ದಿನವನ್ನು ಸಂಘ ಸ್ಥಾಪನಾ ದಿನವನ್ನಾಗಿ ಆಚರಿಸುತ್ತ ಬಂದಿರುತ್ತದೆ. ಆಧುನಿಕ ಜಗತ್ತಿನಲ್ಲಿ ಮಣ್ಣಿನ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿರುವ ಸಮಯದಲ್ಲಿ ಈ ಸಂಘಟನೆಯು ಕೆಸರುಡೊಂಜಿ ಕಾರ್ಯಕ್ರಮದ ಮೂಲಕ ಮಣ್ಣಿನ ಜೊತೆಗಿನ ಸಂಬಂಧವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಮುಂದಾಗಿದೆ.
ಸಂಘಟನೆ ಈಗಾಗಲೇ ಸಮಾಜಸೇವೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಪ್ರಶಂಸೆಗೆ ಪಾತ್ರವಾಗಿದೆ. ಮಜ್ಜಾರಡ್ಕ ಎಂಬ ಸಣ್ಣ ಊರಿನ ಹೆಸರನ್ನು ಹತ್ತೂರಿಗೆ ಪಸರಿಸುವ ಸಾಧಕ ಸಂಘಟನೆಯಾಗಿದೆ. ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮುಡಿಪಾಗಿರಿಸುವ ಸಂಘಟನೆ ಈಗಾಗಲೇ ಸ್ವಚ್ಛತಾ ಕಾರ್ಯಕ್ರಮ, ಕೌಶಲ್ಯ ತರಬೇತಿ ಕಾರ್ಯಕ್ರಮ, ರಸ್ತೆ ದುರಸ್ತಿ, ಶ್ರಮದಾನ ಕಾರ್ಯಕ್ರಮ, ಅಶಕ್ತರಿಗೆ ಮನೆ ನಿರ್ಮಾಣ,ಬಡತನದಲ್ಲಿರುವ ಕುಟುಂಬಕ್ಕೆ ಸಹಾಯ ಧನ, ರಕ್ತದಾನ, ನಾಯಕತ್ವ ತರಬೇತಿ ಕಾರ್ಯಗಾರ, ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಸ್ವಚ್ಛ ಗ್ರಾಮ -ಹಸಿರು ಗ್ರಾಮ ಕಾರ್ಯಕ್ರಮದಡಿ ವನಮಹೋತ್ಸವ ಕಾರ್ಯಕ್ರಮ, ಅನಾರೋಗ್ಯಕ್ಕೆ ತುತ್ತಾದ ಊರವರಿಗೆ ಸಹಾಯ ಧನ, ಕೋವಿಡ್ ತುರ್ತು ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಿಂದ ರಕ್ತದಾನ, ಕೋರೋನಾ ನಿಯಂತ್ರಣದ ಜಾಗೃತಿ ಅಭಿಯಾನ, ಊರಿನಲ್ಲಿರುವ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸುವ ಕ್ರಮ, ಸಂಘಟನೆಯ ಮೂಲಕ ಸಂಘದ ಸದಸ್ಯರು ಉತ್ತಮ ಕಾರ್ಯಗಳನ್ನು ಮುಂದುವರೆಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ತಮ್ಮ ಸೇವೆಯನ್ನು ನೀಡಲಿದೆ.ಇದೀಗ ಸಂಘಟನೆಯು ಐವತ್ತಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡು ಪಂಚಾಯತ್‌ನಲ್ಲಿ, ತಾಲೂಕಿನಲ್ಲಿ, ಶಾಸಕರಿಂದ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಊರವರ ಹೆಗ್ಗಳಿಕೆಗೆ ಪಾತ್ರವಾಗಿದ್ದು,ಭವಿಷ್ಯದ ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ವರ್ತಮಾನದ ಯುವಶಕ್ತಿಯ ಸದ್ಬಳಕೆಯ ಸದಾಶಯ ಸಂಘಟನೆಯಲ್ಲಿ ಹುದುಗಿದೆ.


ನಾಟಿ ವೈದ್ಯ ಸೋಮನಾಥ ಪಂಡಿತ್ :
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಾಕಿಲ ಮನೆತನದ ಪ್ರಸಿದ್ದ ವಂಶ ಪಾರಂಪರಿಕ ನಾಟಿ ವೈದ್ಯರಾದ ದಿ. ಬೈರ ಪಂಡಿತ್ ಮತ್ತು ದಿ. ಕುಕ್ಕೇದಿ ದಂಪತಿಗಳ ಪುತ್ರರಾಗಿರುವ ಪ್ರಸಿದ್ದ ನಾಟಿವೈದ್ಯರಾಗಿರುವ ಸೋಮನಾಥ ಪಂಡಿತರವರ ತಮ್ಮ ನಾಟಿ ವೈದ್ಯ ಸೇವೆಗಾಗಿ ಈ ಭಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ತಮ್ಮ ಕುಲ ಕಸುಬುಗಳಾದ ಮುಟ್ಟಾಳೆ ಕಟ್ಟುವುದು, ನೇಮ ಕಟ್ಟುವುದು, ಕೃಷಿಯೊಂದಿಗೆ ಹಿರಿಯರ ಗರಡಿಯಲ್ಲಿ ಅಭ್ಯಸಿಸಿ ಅದರಲ್ಲಿ ಯಶಸ್ಸು ಪಡೆದಿದ್ದರು. ನಾಟಿ ಔಷಧ ಮತ್ತು ಮನೆ ಮದ್ದು ತಮಗೆ ದೊರಕಿದ ಪಿತ್ರಾರ್ಜಿತ ಆಸ್ತಿ. ದೈವ ಸಂಕಲ್ಪದಂತೆ ತಮಗೆ ದೊರಕಿದ ಈ ಆಸ್ತಿಯನ್ನು ಸಮಾಜದ ಸರ್ವರ ಆರೋಗ್ಯಕ್ಕಾಗಿ ಉಪಯೋಗಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಕ್ಷವಾತ, ನರವಾತ, ಗಂಟುವಾತ, ಆಮವಾತ, ಅಪಸ್ಮಾರ, ಪೋಲಿಯೋ, ಇನ್ನಿತರ ಕಾಯಿಲೆಗಳಿಗೆ ಮದ್ದು ನೀಡುವುದರ ಮುಖೇನ ತಮ್ಮಲ್ಲಿ ಬಂದ ಜನರ ನೋವನ್ನು ನಿವಾರಿಸುತ್ತಾ ಬಂದಿದ್ದಾರೆ. ಸೋಮನಾಥ ಪಂಡಿತರು ಸುಮಾರು 2 ಲಕ್ಷಗಳಿಗಿಂತಲೂ ಹೆಚ್ಚು ರೋಗಿಗಳಿಗೆ ಔಷಧಿ ಹಾಗೂ ಚಿಕಿತ್ಸೆಯನ್ನು ನೀಡಿ ರೋಗಿಗಳನ್ನು ಗುಣಮುಖಗೊಳಿಸಿದ್ದಾರೆ. ಸುಮಾರು 90 ವರ್ಷದ ವಯೋವೃದ್ಧರಾಗಿರುವ ಸೋಮನಾಥ ಪಂಡಿತರು ಶಾಲೆ, ಆಶ್ರಮ, ಕ್ರೀಡೆ, ದೇವಸ್ಥಾನಗಳಿಗೆ ನಿತ್ಯ ನಿರಂತರವಾಗಿ ಆರ್ಥಿಕ ಸಹಾಯವನ್ನು ನೀಡುತ್ತಾ ಬರುತ್ತಿದ್ದಾರೆ. ತಮ್ಮ ತಂದೆ ವಂಶ ಪಾರಂಪರಿಕ ನಾಟಿ ವೈದ್ಯರಾದ ದಿ. ಬೈರ ಪಂಡಿತ್ ನೆನಪಿಗೋಸ್ಕರ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ಬಂಟ್ರಿಂಜ, ಮಾಡದ ಹತ್ತಿರ ಬೈರ ಪಂಡಿತ್ ನಾಟಿ ವೈದ್ಯಾಲಯವನ್ನು ನಿರ್ಮಿಸಿ ಅನೇಕ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದ್ದಾರೆ.


ಶ್ರೀನಿವಾಸ ಶೆಟ್ಟಿ ಕೊಲ್ಯ:
ಪ್ರಬುದ್ಧ ರಂಗಕಲಾವಿದರಾಗಿರುವ ಶ್ರೀನಿವಾಸ ಶೆಟ್ಟಿ ಕೊಲ್ಯರವರು ತನ್ನ ಏಳನೇ ವಯಸ್ಸಿನಿಂದ ಈ ವರೆಗೆ ಸುಮಾರು ೪೦೦ಕ್ಕೂ ಅಽಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿಟ್ಲದಲ್ಲಿ ’ಮಂಜು ಕಲಾ ಸಂಗಮ’ ನಾಟಕ ತಂಡವನ್ನು ಕಟ್ಟಿ ಹಲವಾರು ಪ್ರದರ್ಶನ ನೀಡಿದ್ದರು. ನಾಟಕಗಳನ್ನು ರಚಿಸಿ, ನಿರ್ದೇಶಿರುವ ಅವರು ಹವ್ಯಾಸಿ ನಾಟಕ ಕಲಾವಿಧರಾಗಿದ್ದು, ಇವರ ಕಲಾ ಸೇವೆಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದೆ. ಪ್ರಸ್ತುತ ’ಬೊಳ್ಳಿಬೊಳ್ಪು’ ಮೋಕೆದ ಕಲಾವಿದೆರ್ ನಾಟಕ ತಂಡದ ’ಮದಿಮೆದ ಇಲ್ಲಡ್ ’ ನಾಟಕ ದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಲವಾರು ಚಲನಚಿತ್ರ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಶ್ರೀನಿವಾಸ ಶೆಟ್ಟಿರವರು 3 ಬಾರಿ ವಿಟ್ಲ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಇದೀಗ ವಿಟ್ಲ ಪಟ್ಟಣ ಪಂಚಾಯತ್ ನ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.


ಪೂರ್ಣಿಮಾ ಯತೀಶ್ ರೈ:
ಪೂರ್ಣಿಮಾ ಯತೀಶ್ ರೈಯವರು ಮಂಗಳೂರಿನ ಬಾಳ ಸೇಸಪ್ಪ ಬಿ. ಶೆಟ್ಟಿ ಮತ್ತು ಶಾರದ ಎಸ್. ಶೆಟ್ಟಿಯವರ ಪುತ್ರಿ. ಬೈಕಂಪಾಡಿಯ ಶ್ರೀ ಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಮತ್ತು ಪ್ರಕೃತಿ ಇಎಫ್‌ ಸಿ ಎಲ್‌ಎಲ್‌ಪಿ ಯ ಮ್ಹಾಲಕ, ಉದ್ಯಮಿ ಯತೀಶ್ ರೈ ಚೆಲ್ಯಡ್ಕರವರ ಪತ್ನಿ. ಯಕ್ಷಗಾನ ಸಂಘಟಕರಾದ ಅವರ ಸಹೋದರ ಮಾಧವ ಶೆಟ್ಟಿ ಬಾಳ ಇವರ ಪ್ರೋತ್ಸಾಹದಿಂದ 1988 ರಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಯವರು ಯಕ್ಷಗಾನ ಕಲಾವಿದೆಯಾಗಿ, ಯಕ್ಷಗಾನ ಸಂಘಟಕಿಯಾಗಿ, ಯಕ್ಷಗುರುವಾಗಿ, ಯಕ್ಷಗಾನ ನಿರ್ದೇಶಕಿಯಾಗಿ, ಸಮಾಜ ಸೇವಕಿಯಾಗಿ, ಕ್ರಿಯಾಶೀಲ ವ್ಯಕ್ತಿತ್ವದವರಾಗಿ ಜನಮನ್ನಣೆ ಪಡೆದಿದ್ದಾರೆ. ಇವರು ಯಕ್ಷರಂಗದ ಮಹಿಳಾ ಕಲಾವಿದೆಯರಲ್ಲಿ ದಿಟ್ಟ ಮಹಿಷಾಸುರನ ಪಾತ್ರಧಾರಿಯಾಗಿ ಸುಮಾರು 1000 ಕ್ಕೂ ಹೆಚ್ಚು ಬಾರಿ ರಂಗ ಪ್ರವೇಶಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪುಣ್ಯಕೋಟಿ ಪ್ರಸಂಗದ ಗಂಗೆಯ ಪಾತ್ರ, ದೇವಿ ಮಹಾತ್ಮೆಯ ಶ್ರೀದೇವಿ, ಕೌಶಿಕೆ ಹೀಗೆ ಪಕಡಿ, ಸೀ, ರಾಜವೇಷ, ನಾಟಕೀಯ ವೇಷ, ಹಾಸ್ಯ, ಹಾಗೂ ಬಣ್ಣದ ವೇಷಧಾರಿಯಾಗಿ ನಾನಾವಿಧದ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಕೋಟಿ ಚೆನ್ನಯ, ಧರ್ಮಗದ್ದಿಗೆ ಯಂತಹ ತುಳು ಪ್ರಸಂಗಗಳಲ್ಲೂ ಇವರು ಸಮರ್ಥವಾಗಿ ಪಾತ್ರ ನಿರ್ವಹಿಸಿದವರು. ಯಕ್ಷಗಾನ ಗುರುವಾಗಿ ಸರಿಸುಮಾರು 2000 ಕ್ಕೂ ಸಮರ್ಥ ಶಿಷ್ಯವರ್ಗವನ್ನು ಯಕ್ಷರಂಗಕ್ಕೆ ನೀಡಿದ ಸಮರ್ಥ ಯಕ್ಷಗುರು ಇವರು. ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಸಂಘ, ಬಾಳ ಕಾಟಿಪಳ್ಳದ ನಿರ್ದೇಶಕಿಯಾಗಿ , ತನ್ನ ಶಿಷ್ಯರಿಗೆ ಮಾತ್ರ ವೇದಿಕೆಯನ್ನು ಒದಗಿಸಿದ್ದಲ್ಲದೇ, ಅನೇಕ ಪ್ರತಿಭಾವಂತ ಕಲಾವಿದೆಯರಿಗೂ ವೇದಿಕೆ ಒದಗಿಸಿರುತ್ತಾರೆ. ತಮ್ಮ ತಂಡವನ್ನು ಕಟ್ಟಿಕೊಂಡು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ, ದೆಹಲಿ, ಚೆನ್ನೈ, ಸತತವಾಗಿ ಐದು ವರ್ಷಗಳಿಂದ ಮುಂಬಯಿ ಮುಂತಾದ ಹಲವೆಡೆಗಳಲ್ಲಿ ತಂಡದ ಮೂಲಕ ಪ್ರದರ್ಶನವನ್ನು ನೀಡಿ ಮಹಿಳಾ ತಂಡವನ್ನು ಮುನ್ನಡೆಸಿದ್ದಾರೆ. ದುಬೈ ಯಕ್ಷೋತ್ಸವದಲ್ಲೂ ವೃತ್ತಿಪರ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಸುದೀರ್ಘ ೩೭ ವರ್ಷಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದರಾದ ರಮೇಶ್ ಶೆಟ್ಟಿ ಬಾಯಾರು ಹಾಗೂ ಶಿವರಾಮ ಪಣಂಬೂರು ಇವರ ಯಕ್ಷಗಾನ ಗುರುಗಳಾಗಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸತತ ಹತ್ತು ವರ್ಷಗಳಿಂದ ಮಹಿಳಾ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಇವರ ಕಲಾಸೇವೆಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕಾರ, ಯಕ್ಷಧ್ರುವ, ಯಕ್ಷಪ್ರಮೀಳಾ, ಯಕ್ಷಕಲಾರಾಧಕಿ, ಗುರುದೇವಾನುಗ್ರಹ, ಯಕ್ಷಾನುಗ್ರಹ, ಯಕ್ಷ ರಕ್ಷ ಮೊದಲಾದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರನ್ನರಸಿ ಬಂದಿವೆ. ಪತಿ ಉದ್ಯಮಿ ಶ್ರೀ ಯತೀಶ್ ರೈ ನುಳಿಯಾಲು, ಚೆಲ್ಯಡ್ಕ, ಸಾಕ್ಷಾ ವೈ ರೈ ಮತ್ತು ಸಾತ್ವಿಕ್ ವೈ ರೈ ಜೊತೆ ಸುಖೀ ಸಂಸಾರ ನಡೆಸುತ್ತಿದ್ದಾರೆ.


ಬಹುಮುಖ ಪ್ರತಿಭೆ ಶಿರಾಡಿಯ ಅರ್ಚನಾ ಎಸ್.: ನೆಲ್ಯಾಡಿ:
ನೃತ್ಯ, ಮಾಡೆಲಿಂಗ್, ಸಂಗೀತ, ಯೋಗ ಹಾಗೂ ಕ್ರೀಡೆಯಲ್ಲಿ ಮಾಡಿರುವ ಸಾಧನೆಗಾಗಿ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಎಸ್., ಅವರು 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಡಬ ತಾಲೂಕು ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಸುದರ್ಶನ್ ಕುಮಾರ್ ಹಾಗೂ ರಮ್ಯಾ ದಂಪತಿ ಪುತ್ರಿಯಾದ ಅರ್ಚನಾ ಎಸ್. ತನ್ನ ಎರಡೂವರೆ ವಯಸ್ಸಿನಲ್ಲೇ ಶ್ರೀಕೃಷ್ಣ ವೇಷಧಾರಿಯಾಗಿ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. ಮುಂದಕ್ಕೆ ಭರತನಾಟ್ಯ ತರಬೇತಿ ಪಡೆದು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. 8ನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ವಿಶೇಷ ಶೈಲಿಯ ನೃತ್ಯವಾದ ತಲೆಯಲ್ಲಿ ದೀಪ, ಮೊಳೆಸ್ಟಾಂಡ್, ಮಡಕೆ, ಗಾಜಿನ ಲೋಟದ ಮೇಲೆ ನಿಂತು ನೃತ್ಯ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಯೋಗಾಸನದಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಯೋಗಾಸನದೊಂದಿಗೆ ದೀಪದ ನೃತ್ಯ ಮಾಡುತ್ತಾರೆ. ಸಂಗೀತ, ಯೋಗ, ನೃತ್ಯಗಳ ಬಗ್ಗೆ ಒಲವುಳ್ಳ ಅಪೂರ್ವ ಸಾಧಕಿಯಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ತನಕ ಸುಮಾರು 700ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ, ಯೋಗನೃತ್ಯ, ವೆಸ್ಟರ್ನ್‌ನೃತ್ಯ, ಅರೆಶಾಸೀಯ, ಜಾನಪದ, ಯಕ್ಷನಾಟ್ಯ, ಕಥಕ್‌ಶೈಲಿಯ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದು ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನ ಪಡೆದ ಗ್ರಾಮೀಣ ಪ್ರದೇಶದ ಬಾಲಪ್ರತಿಭೆಯಾಗಿದ್ದಾರೆ. ಎಲ್‌ಕೆಜಿಯಿಂದ ೭ನೇ ತರಗತಿ ತನಕ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದ ಅರ್ಚನಾ ಈಗ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ೯ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.


ಡಿ’ ಗ್ರೂಪ್(ರಿ) ವಿಟ್ಲ :
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆಯಲ್ಲಿ 2009ರ ಫೆ.10ರಂದು ಸಾಮಾಜಿಕವಾಗಿ ನಮ್ಮ ನಾಡಿಗೆ ಸೇವೆಯನ್ನು ಮಾಡಬೇಕು ಎಂಬ ಉದ್ದೇಶದಿಂದ 5-6 ಯುವಕರು ಸೇರಿ ಡಿ’ ಗ್ರೂಪ್ ವಿಟ್ಲ ಎನ್ನುವ ಒಂದು ಬಳಗವನ್ನು ಹುಟ್ಟುಹಾಕಿದ್ದರು. ಈ ಬಳಗದ ಮೂಲಕ ಹಲವಾರು ವರುಷಗಳ ಕಾಲ ಬಡವರಿಗೆ, ನಿರ್ಗತಿಕರಿಗೆ, ಆಹಾರ ಕಿಟ್ ವಿತರಣೆ, ತುರ್ತು ಸಂದರ್ಭದಲ್ಲಿ ಆರ್ಥಿಕ ಸಹಾಯ ಮುಂತಾದ ಸೇವೆಗಳನ್ನು ಮಾಡುತ್ತಾ ಬಂದಿದೆ.
ತದನಂತರಗಳ ದಿನಗಳಲ್ಲಿ ಈ ಸೇವೆ ಇನ್ನಷ್ಟು ಉತ್ತಮ ರೀತಿಯಲ್ಲಿ ಮಾಡುವ ಉದ್ದೇಶದಿಂದ ಈ ಸಂಸ್ಥೆಗೆ ಸಮಾನ ಮನಸ್ಕರಾದ ಊರಿನಲ್ಲಿರುವ ಮತ್ತು ವಿದೇಶದಲ್ಲಿ ಉದ್ಯೋಗದಲ್ಲಿರುವ ಊರಿನ ಯುವಕರನ್ನು ಸೇರಿಸಿಕೊಂಡು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಆ ಮೂಲಕ ಇನ್ನಷ್ಟು ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ, ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಸಾಧ್ಯವಾಗದ ಅಶಕ್ತರಿಗೆ ಆರ್ಥಿಕ ಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಧನಸಹಾಯ ವಿತರಣೆ, ಶಿಕ್ಷಣ ಆರ್ಧದಲ್ಲಿ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ, ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ಈ ರೀತಿಯ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ವಿಟ್ಲ ಪರಿಸರ. ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಒಂದು ಸಮಾಜಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.


ಸಿದ್ದಿವಿನಾಯಕ ಯುವಕಮಂಡಲ ಧರ್ಮನಗರ – ಕಂಬಳಬೆಟ್ಟು:
ಸಿದ್ದಿವಿನಾಯಕ ಯುವಕಮಂಡಲ ಧರ್ಮನಗರ – ಕಂಬಳಬೆಟ್ಟು ಇದನ್ನು 2021ರ ಎ.10ರಂದು 13 ಜನ ಸಮಾನ ಮನಸ್ಕರು ಸೇರಿಸಿಕೊಂಡು ಆರಂಭಿಸಿದರು. ಬಳಿಕದ ದಿನಗಳಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ಮುಂದುವರಿದ ಯುವಕ ಮಂಡಲ ಅತೀ ಕಡಿಮೆ ಅವಽಯಲ್ಲಿ ಬಹಳಷ್ಟು ಬಲಿಷ್ಟವಾಗಿ ಬೆಳೆದುನಿಂತಿತು ಮಾತ್ರವಲ್ಲದೆ ಜನಮನ್ನಣೆಗಳಿಸುವಲ್ಲಿ ಯಶಸ್ವಿಯಾಯಿತು. ಪ್ರಸ್ತುತ ಯುವಕ ಮಂಡಲದಲ್ಲಿ 184 ಮಂದಿ ಸದಸ್ಯರಿದ್ದಾರೆ.
ಯುವಕ ಮಂಡಲದ ಸ್ಥಾಪನೆಯ ಉದ್ದೇಶವೇ ಸಾಮಾಜಿಕ ಚಟುವಟಿಕೆಯಲ್ಲಿ ಯುವಕರನ್ನು ತೊಡಗಿಸುವಂಥದ್ದು, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಹಾಗೂ ದೇಶಭಕ್ತಿಯನ್ನು ಜಾಗೃತಿ ಮಾಡುವಂಥಹದ್ದು ಆಗಿತ್ತು. ಈ ನಿಟ್ಟಿನಲ್ಲಿ ಪ್ರತೀ ತಿಂಗಳು ಯುವಕನ್ಮು ಸೇರೆಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ಹಮ್ಕಿಕೊಳ್ಳುತ್ತಾ ಬಂದಿದೆ. ಹೀಗೆ ಹಲವಾರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಸಂಘದ ಸಮಾಜ ಸೇವೆಯನ್ನು ಪರಿಗಣಿಸಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.


ನೆಲ್ಯಾಡಿಯ ವಿಶ್ವನಾಥ ಶೆಟ್ಟಿ:
ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ, ನೆಲ್ಯಾಡಿ ಕುಂಡಡ್ಕ ನಿವಾಸಿ, ಬಹುಮುಖ ಪ್ರತಿಭೆ ವಿಶ್ವನಾಥ ಶೆಟ್ಟಿ ಅವರು ಸಂಗೀತ ಕಲಾಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇದರ ನಿರ್ದೇಶಕರಾಗಿರುವ ವಿಶ್ವನಾಥ ಶೆಟ್ಟಿಯವರು ತಮ್ಮ ಕಲಾಕೇಂದ್ರದ ಮೂಲಕ ಸಂಗೀತಾಸಕ್ತ ಮಕ್ಕಳಿಗೆ ಕೀಬೋರ್ಡ್, ಸುಗಮ ಸಂಗೀತ ತರಬೇತಿ ನೀಡುತ್ತಿದ್ದಾರೆ. ಇವರು ಉತ್ತಮ ಗಾಯಕರಾಗಿದ್ದು ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ತುಳು ನಾಟಕ ಸಂಗೀತ ನಿರ್ದೇಶಕರಾಗಿ ಕುವೈಟ್ ಮತ್ತು ದುಬೈ ಮುಂತಾದ ಕಡೆಗಳಲ್ಲಿ ತುಳು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅತ್ಯುತ್ತಮ ಕೀಬೋರ್ಡ್ ವಾದಕರು, ಉತ್ತಮ ಹಾಡುಗಾರರು. ನಾಟಕ ರಚನೆ,ನಿರ್ದೇಶನ, ಯಕ್ಷಗಾನ ಕಲಾವಿದರೂ ಆಗಿದ್ದಾರೆ. ಕೇಪುದ ಬೆಡಿ, ಮಾತೃದೇವೋಭವ, ಭೂತ ಉಂಡುಗೆ, ತೂದು ಕಲ್ಪೊಡು, ಕೊಲೆಗಾರೆ ಏರ್? ಇವರು ರಚಿಸಿದ ತುಳು ನಾಟಕ ಕೃತಿಗಳಾಗಿವೆ. ಅಲ್ಲದೇ ಅನೇಕ ತುಳು ನಾಟಕಗಳಿಗೆ ಹಾಡುಗಳ ರಚನೆ, ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ಆಕಾಶವಾಣಿ ಯುವವಾಣಿ ವಿಭಾಗದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕನ್ನಡ ಸಂಘ ದೆಹಲಿ, ಮುಂಬೈಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅಶಕ್ತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ನೆರವು, ಕೋವಿಡ್ ಸಂದರ್ಭದಲ್ಲಿ ನೆರವು ನೀಡಿದ್ದಾರೆ.
ನೆಲ್ಯಾಡಿ ಜೆಸಿಐ ಅಧ್ಯಕ್ಷರಾಗಿ, ಆಲಂಕಾರು ಲಯನ್ಸ್ ಕ್ಲಬ್ ಸದಸ್ಯರಾಗಿ, ನೆಲ್ಯಾಡಿ ಸೀನಿಯರ್ ಚೇಂಬರ್ ಸದಸ್ಯರಾಗಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಇವರ ಬಹುಮುಖ ಕಲಾಪ್ರತಿಭೆಗೆ ೨೦೨೩ರಲ್ಲಿ ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರಿಂದ ಕಲಾಪ್ರತಿಭೋತ್ಸವ-೨೦೦೮ ನಾಟಕ ನಿರ್ದೇಶನ ಪ್ರಶಸ್ತಿ, ಜೆಸಿಐ ಕಲಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.


ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ:
ಆರ್ಯಾಪು ಗ್ರಾಮದ ಸಂಪ್ಯ ‘ಪ್ರೀತಿ ನಿಲಯ’ದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿರಿಯ ಬ್ರಹ್ಮವಾಹಕರಾಗಿದ್ದ ಶ್ರೀನಿವಾಸ ಪುತ್ತೂರಾಯ ಅವರ ಮೊಮ್ಮಗ.ಪ್ರೀತಂ ಪುತ್ತೂರಾಯ ಅವರ ತಂದೆ ದಿ.ರಾಧಾಕೃಷ್ಣ ಪುತ್ತೂರಾಯ, ತಾಯಿ ಸತ್ಯಭಾಮ ಪುತ್ತೂರಾಯ.ಎಳೆ ವಯಸ್ಸಿನಲ್ಲೇ ಸಾಮಾಜಿಕ ಚಟುವಟಿಕೆಯಲ್ಲಿ ತನನ್ನು ತೊಡಗಿಸಿಕೊಂಡ ಪ್ರೀತಂ ಪುತ್ತೂರಾಯ ಅವರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಮುಗಿಸಿ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಮತ್ತು ತಂತ್ರಾಗಮ ವೃತ್ತಿಗೆ ಸೇರಿಕೊಂಡಿದ್ದರು. ಬಳಿಕ ತನ್ನ ಅಜ್ಜ ಶ್ರೀನಿವಾಸ ಪುತ್ತೂರಾಯರಂತೆ ಬ್ರಹ್ಮವಾಹಕರಾಗಿದ್ದು ಏಪ್ರಿಲ್ ಜಾತ್ರೆಯ ಸಂದರ್ಭ 9 ದಿನವೂ ಬಿಡದೆ ಉತ್ಸವ ನಡೆಸಿದ ಹಿರಿಮೆಗೆ ಪಾತ್ರರಾಗಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ಸೇವೆ ಅಪಾರವಾಗಿದ್ದು, ವಿವೇಕಾನಂದ ಕಾಲೇಜಿನಲ್ಲಿ 7 ಅಡಿ ಎತ್ತರದ ವಿವೇಕಾನಂದ ಮೂರ್ತಿ ಸ್ಥಾಪನೆ, ಲಿಯೋಇಂಟರ್ ನ್ಯಾಷನಲ್ ಕ್ಲಬ್ಬಿನಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಸೇವೆ.‘ರಾಗಸುಧಾ’ ಸಂಸ್ಥೆಯ ಮೂಲಕ ಪುತ್ತೂರಿನ ಸಂಗೀತ- ಭರತನಾಟ್ಯ ಶಾಲೆಗಳಿಂದ ನಿರಂತರ 12 ವರ್ಷಗಳ ಕಾಲ 600ಕ್ಕೂ ಮಿಕ್ಕಿದ ಕಾರ್ಯಕ್ರಮಗಳ ಸಂಯೋಜನೆ. ದ.ಕ.ಜಿಲ್ಲೆಯಾದ್ಯಂತ ವಿವಿಧ ವೇದಿಕೆಗಳಲ್ಲಿ ಸಾಮಾನ್ಯರಾಗಿದ್ದು, 100 ಮಂದಿ ಗಣ್ಯರಿಗೆ ‘ಶತಕವೀರ ಪುರಸ್ಕಾರ’ ಎಂಬ ಹೆಸರಿನಲ್ಲಿ ವಿಶೇಷ ಗೌರವ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 20 ಅಡಿ ಎತ್ತರದ ಧ್ಯಾನಾರೂಢ ಶಿವನ ವಿಗ್ರಹದ ಸ್ಥಾಪನೆಯ ನೇತೃತ್ವ ವಹಿಸಿ, ನಿರ್ಮಾಣಗೊಳಿಸಿ ದೇವಾಲಯಕ್ಕೆ ಸಮರ್ಪಣೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂಬದಿಯ ಸ್ವಾಗತ ಗೋಪುರದ ನಿರ್ಮಾಣದ ನೇತೃತ್ವ ವಹಿಸಿ, ದೇವಾಲಯಕ್ಕೆ ಸಮರ್ಪಣೆ. ಲೋಕಕಲ್ಯಾಣಾರ್ಥವಾಗಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ನಾಗಮಂಡಲ ಸೇವೆ,ಲಕ್ಷ ತ್ರಿಮಧುರಪೂರಿತ ನಾಳೀಕೇರಯಾಗ,ಅತೀರುದ್ರಮಹಾಯಾಗ ನಡೆಸಿರುವುದು, ತುಳುನಾಡ ಚರಿತ್ರೆಯಲ್ಲಿ 800 ವರ್ಷಗಳ ಬಳಿಕ ರಕ್ತೇಶ್ವರಿ ನಡಾವಳಿಯನ್ನು ನಡೆಸಿರುವುದು.ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಇವುಗಳನ್ನು ವಿಶೇಷ ಮುತುವರ್ಜಿವಹಿಸಿ, ಜೀರ್ಣೋದ್ಧಾರ ಮಾಡಿಸಿ ಬ್ರಹ್ಮಕಲಶೋತ್ಸವ ನೆರವೇರಿಸಿರುವುದು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ನಿರ್ಮಾಣಗೊಳಿಸಿ, ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರ, ನಿರಂತರವಾಗಿ ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ದೈವ ದೇವಸ್ಥಾನಗಳ ತಂತ್ರ ಮತ್ತು ಧರ್ಮ ಕಾರ್ಯದ ನೇತೃತ್ವವನ್ನು ಇವರು ವಹಿಸಿದ್ದರು.ದೇವಯ್ಯ ಕಾರ್ವಿ ಪ್ರತಿಷ್ಠಾನ ಬೆಂಗಳೂರು ಇವರಿಂದ ಪುರಸ್ಕಾರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ -ಸಾರ್ವಜನಿಕ ಸನ್ಮಾನ ಇವರಿಗೆ ಲಭಿಸಿದೆ.ಶಿಕ್ಷಕಿಯಾಗಿರುವ ಪತ್ನಿ ಪೂರ್ಣಿಮಾ ಪುತ್ತೂರಾಯ, ಪುತ್ರಿ ಪ್ರಣಮ್ಯ ಪುತ್ತೂರಾಯ, ಪುತ್ರ ಪ್ರಣವ ಪುತ್ತೂರಾಯ ಅವರೊಂದಿಗೆ ಇವರು ಸುಖೀ ಸಂಸಾರ ನಡೆಸುತ್ತಿದ್ದಾರೆ.


ಮೋಹನ ರೈ ನರಿಮೊಗರು:
ಸಮಾಜ ಸೇವೆ ಕ್ಷೇತ್ರದಲ್ಲಿ ನರಿಮೊಗರು ‘ನಂದಾದೀಪ’ ಮೋಹನ ರೈ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ತಾಲೂಕು ಪಂಚಾಯತ್ ಸದಸ್ಯರಾಗಿ,ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದ ಇವರು ನರಿಮೊಗರು ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಸ್ಥಾಪಕ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.


ಸುಂದರ ರೈ ‘ಮಂದಾರ’:
ರಂಗಭೂಮಿ ಕಲಾವಿದ ‘ರಂಗದ ರಾಜೆ’ಸುಂದರ ರೈ ಮಂದಾರ ಅವರು ದಿ|ನಾರಾಯಣ ರೈ ಮತ್ತು ಲಲತಾ ರೈ ದಂಪತಿ ಪುತ್ರ.ಪತ್ನಿ ಮಲ್ಲಿಕಾ ಎಸ್ ರೈ, ಪುತ್ರರು ಅಭೀಷ್ ರೈ ಮಂದಾರ ಮತ್ತು ಆಯುಷ ರೈ ಮಂದಾರ.ಕುಂಬ್ರ ವರ್ತಕರ ಸಂಘದ ಅಧ್ಯಕ್ಷರಾಗಿ, ಶ್ರೀರಾಮ ಭಜನಾ ಮಂಡಳಿ ಕುಂಬ್ರ ಇದರ ಅಧ್ಯಕ್ಷರಾಗಿ, ವಿಶ್ವ ಯುವಕ ಮಂಡಲದ ಅಧ್ಯಕ್ಷರಾಗಿ,ಪುತ್ತೂರು ತಾಲೂಕು ಯುವಜನ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸುವರ್ಣ ವಾಹಿನಿಯ ‘ಗೊತ್ತಾನಗ ಪೊರ್ತಾಂಡ್’, ‘ನಮ್ಮ ತೆಲಿಪುಗ’, ಬಲೇ ತೆಲಿಪುಗ, ಅಂಡೆ ದುರ್ಸುಲು, ಚಂದನ ವಾಹಿನಿಯ ‘ಪ್ರೀತಿಯೆಂಬ ಮಾಯೆ’(ಕನ್ನಡ), ಚಂದನ ವಾಹಿನಿಯ ‘ಅಂಬರ ಮರ್ಲೆರ್’, ಸುದ್ದಿ ವಾಹಿನಿಯ ‘ಅಂಬರ ಮರ್ಲೆರ್ (2)’, ನಮ್ಮ ಕುಡ್ಲದ ‘ಪೊರ್ತಾನಗ ಗೊತ್ತಾಂಡ್’ ನಮ್ಮ ಕುಡ್ಲದ ‘ಯಕ್ಷತೆಲಿಕೆ, ಬಲೆ ತೆಲಿಪುಗ, ಕುಡ ತೆಲಿಪುಗ,ತೆಲಿಕೆ ಬಂಜಿ ನಿಲಿಕೆ,ಬಾಬಣ್ಣೆ ಬೂಬಣ್ಣೆ ಧಾರಾವಾಹಿಗಳಲ್ಲಿ ನಟಿಸಿರುವ ಇವರು ‘ಧರ್ಮದೈವ’, ‘ಆಕೆ ಮೋಹಿನಿ’,‘ಅಂಬರಪ್ಪು ಫ್ಯಾಮಿಲಿ’,‘ ಮರ್ಲ್ ಗುದ್ದೂಲಿ, ‘ಜೋಕ್ಲಾಟಿಕೆ’ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ್ದ ‘ಬಿರ್ಸೆ’ತುಳು ಚಲನಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ಲಭಿಸಿದೆ. ‘ಗಗ್ಗರ’ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಧನಿಕ್ಷೆನ ಜೋಕುಲು, ಚಾಲಿಪೋಲಿಲು,ಎಕ್ಕಸಕ್ಕ,ಒರಿಯನ್ ತೂಂಡ ಒರಿಯಗಾಪುಜಿ, ಏರೆಗ್ಲಾ ಪನೋಡ್ಚಿ,ದಬಕ್‌ಬಾ ಐಸಾ, ಧರ್ಮಚಾವಡಿ, ಪಿಲಿಪಂಜ, ಕಂಬುಳ, ಪಿಚ್ಚರ್, ಮಗನೇ ಮಹಿಷಾ, ಪತ್ತನಾಜೆ, ಪನೋಡಾ ಬೊಡ್ಚಾ, ಏರೆಗಾವುಯೆ ಕಿರಿಕಿರಿ, ಬರ್ಸ, ಅಂಬರ್ ಕ್ಯಾಟರರ್ಸ್, ಗಂಟ್‌ಕಲ್ವೆರ್ ತುಳು ಚಲನಚಿತ್ರಗಳಲ್ಲಿ ನಟನೆ ಮಾಡಿರುವ ಇವರು ಚೆಲ್ಲಾಪಿಲ್ಲಿ, ರಂಗಸ್ಥಳ, ಅಪರಾಧಿ ನಾನಲ್ಲ ಕನ್ನಡ ಚಲನಚಿತ್ರದಲ್ಲೂ ನಟಿಸಿದ್ದಾರೆ. ರೋಮಾಂಚನ ವಾರಿಯ ಕೊಲ್ಲಂ-4 ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ. ಹಲವಾರು ನಾಟಕಗಳಲ್ಲಿಯೂ ಅದ್ಭುತ ನಟನೆ ಮಾಡಿರುವ ಸುಂದರ ರೈಯವರು ವಿಶ್ವಭಾರತಿ ಕಲಾವಿದರು ಕುಂಬ್ರ (10 ವರ್ಷ), ಲಕುಮಿ ತಂಡ (ರಿ) ಮಂಗಳೂರು (೧೮ ವರ್ಷ), ಐಸಿರಿ ಕಲಾವಿದೆರ್ (ರಿ) ಮಂಜೇಶ್ವರ (4 ವರ್ಷ) ಹಾಗೂ ಪ್ರಸ್ತುತ ಅಮ್ಮ ಕಲಾವಿದೆರ್ (ರಿ) ಕುಡ್ಲದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.


ಅಭಿನಯಿಸಿದ ನಾಟಕಗಳು : ಕಾಕಜಿ ಬತ್ತ್ಂಡ್, ಅಜ್ಜಿಗ್ ಏರ‍್ಲಾ ಇಜ್ಜಿ, ಕಾವೇರಿ, ಮಾಲೆಗಾವಂದಿ ಮಲ್ಲಿಗೆ, ಅಪ್ಪೆನ ಕನನೀರ್, ಅಮೃತಬಿಂದು,ಉಲಾಯಿಡುಲ್ಲೆರ್, ಪವಿತ್ರ ಪ್ರೇಮ , ಮುಂಡಾಸ್ ಮುಂಡಪ್ಪೆ, ಮುಗುರು ತೆಲಿಕೆ,ಮಾಯೆದ ತುಡರ್, ಕುಸೇಲ್ದ ಕುಸಲ್, ಏರೆಂದ್ ಏರೆಗೊತ್ತು,ನಮ ಒಯಿಕ್ಲಾ ಸೈ, ಗಂಗುನ ಗಮ್ಮತ್, ಆಪಿನ ಆವೊಡೆ, ಪೊರ್ಲುದಾಯೆ, ಅಂಚಿಲತ್ ಇಂಚಿಲತ್, ನಂಬುನೆನೆ ನಂಬೊಡು,ಎದುರುಡೊಂಜಿ ಪಿರವುಡೊಂಜಿ,ಬೆನ್ನಿನೊರಿ ತಿನ್ಪಿನೊರಿ,ದಾದ ಮಲ್ಪೆರಾಪುಂಡು,ಒಯಿಕ್ಕಲಾ ಯೋಗ ಬೋಡು,ನಂಕ್ ಮಾತೆಲ್ಲಾ ಬೋಡು,ದಾನೆ ಆಪುಂಡು ತೂಕ,ದುಂಬೋರಿ ಪಂತೆಗೆ,ರಡ್ಡೆಟ್ ಏರೆಡೆ,ಬುಡಿಬುಡಿ ಗಡಿಬಿಡಿ,ಅಂಚೆಗೆ ಇಂಚಗೆ, ನೆನಪುದೀಲೆ, ಬಂಜಿಗ್ ಹಾಕೊಡ್ಡಿ, ಗಿರಿಗಿಟ್ ಗಿರಿಧರೆ,ಮದಿಮೆದ ದುಂಬುನಾನಿ, ಪರಕೆ ಪೂವಕ್ಕೆ, ಅಲೇ ಬುಡಿಯೆರ್‌ಗೆ, ಅಮ್ಮೆರ್,ಜಗತ್ತೇ ಶೂನ್ಯ ಸ್ವಾಮಿ,ಆನ್‌ಮಗೆ, ಬಯಮಲ್ಲಿಗೆ, ಗಾಳಿಗ್ ಲೆಕ್ಕಿನ ತುಡರ್, ಸರಸ್ವತಿ. 32 ವರ್ಷಗಳಲ್ಲಿ ಇವರು 10 ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ.

ಪ್ರಶಸ್ತಿ,ಸನ್ಮಾನ: ಒಟ್ಟು 32 ವರ್ಷಗಳ ರಂಗ ಪಯಣದಲ್ಲಿ ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ರಂಗ್‌ದ ರಾಜೆ,ಮಂದಾರ ಮಾಣಿಕ್ಯ,ನಟ ಪ್ರವೀಣ, ತುಳುವೆರೆ ಬೊಳ್ಳಿ ಸಹಿತ ಹಲವು ಬಿರುದುಗಳು ಇವರಿಗೆ ಲಭಿಸಿದೆ.ಕನ್ನಡ ಸಾಹಿತ್ಯ ರಾಜ್ಯೋತ್ಸವ ಪ್ರಶಸ್ತಿ,ಕಲಾಪ್ರಕಾಶನ ಪ್ರತಿಷ್ಟಾನ ಮುಂಬೈ ಪ್ರಶಸ್ತಿ,ಶ್ರಿ ಶಾಸ್ತಾನುಗ್ರಹ ಪ್ರಶಸ್ತಿ, ಸುವರ್ಣ ರಂಗ ಪ್ರತಿಷ್ಟಾನ ಪ್ರಶಸ್ತಿ ಬೆಳ್ತಂಗಡಿ, ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಪ್ರಶಸ್ತಿ, ಶ್ರೀ ದುರ್ಗಾಆದಿಶಕ್ತಿ ಅನುಗ್ರಹ ತುಳುನಾಡ ಕುರಲ್ ಪ್ರಶಸ್ತಿ,೯ನೇ ದಕ್ಷಿಣಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪ್ರಶಸ್ತಿ, ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ, ವಿಧಾತ್ರಿ ಪ್ರಶಸ್ತಿ ಲಭಿಸಿದೆ.ಕುಂಬ್ರ ದುರ್ಗಾಪ್ರಸಾದ್ ರೈ ನವೀನ್ ಡಿ ಪಡೀಲ್, ವಸಂತ ವಿ ಅಮೀನ್ ಇವರು ಸುಂದರ ರೈ ಅವರ ರಂಗಗುರುಗಳು.

ಅರ್ಚನಾ ಎಸ್:
ನೃತ್ಯ, ಮಾಡೆಲಿಂಗ್, ಸಂಗೀತ, ಯೋಗ ಹಾಗೂ ಕ್ರೀಡೆಯಲ್ಲಿ ಮಾಡಿರುವ ಸಾಧನೆಗಾಗಿ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಎಸ್., ಅವರು 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಡಬ ತಾಲೂಕು ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಸುದರ್ಶನ್ ಕುಮಾರ್ ಹಾಗೂ ರಮ್ಯಾ ದಂಪತಿ ಪುತ್ರಿಯಾದ ಅರ್ಚನಾ ಎಸ್. ತನ್ನ ಎರಡೂವರೇ ವಯಸ್ಸಿನಲ್ಲೇ ಶ್ರೀಕೃಷ್ಣ ವೇಷಧಾರಿಯಾಗಿ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. ಮುಂದಕ್ಕೆ ಭರತನಾಟ್ಯ ತರಬೇತಿ ಪಡೆದು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. 8ನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ವಿಶೇಷ ಶೈಲಿಯ ನೃತ್ಯವಾದ ತಲೆಯಲ್ಲಿ ದೀಪ, ಮೊಳೆಸ್ಟಾಂಡ್, ಮಡಕೆ, ಗಾಜಿನ ಲೋಟದ ಮೇಲೆ ನಿಂತು ನೃತ್ಯ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಯೋಗಾಸನದಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಯೋಗಾಸನದೊಂದಿಗೆ ದೀಪದ ನೃತ್ಯ ಮಾಡುತ್ತಾರೆ. ಸಂಗೀತ, ಯೋಗ, ನೃತ್ಯಗಳ ಬಗ್ಗೆ ಒಲವುಳ್ಳ ಅಪೂರ್ವ ಸಾಧಕಿಯಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ತನಕ ಸುಮಾರು 700ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ, ಯೋಗನೃತ್ಯ, ವೆಸ್ಟರ್ನ್‌ನೃತ್ಯ, ಅರೆಶಾಸ್ತ್ರೀಯ, ಜಾನಪದ, ಯಕ್ಷನಾಟ್ಯ, ಕಥಕ್‌ಶೈಲಿಯ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದು, ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನ ಪಡೆದ ಗ್ರಾಮೀಣ ಪ್ರದೇಶದ ಬಾಲಪ್ರತಿಭೆಯಾಗಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿ ತನಕ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದ ಅರ್ಚನಾ ಈಗ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಉಬಾರ್ ಸ್ಪೋರ್ಟಿಂಗ್ ಕ್ಲಬ್‌
ಗ್ರಾಮಾಂತರ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಕ್ರೀಡೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸಮಾನಮನಸ್ಕ ಯುವಕರಿಂದ ಆರಂಭಗೊಂಡ ಉಬಾರ್ ಸ್ಪೋರ್ಟ್ಸಿಂಗ್ ಕ್ಲಬ್ ಮತ್ತು ಉಬಾರ್ ಡೋನಾರ‍್ಸ್‌ಗೆ ಈ ಬಾರಿಯ ದ.ಕ. ಜಿಲ್ಲಾ ರಾಜ್ಯ ಪ್ರಶಸ್ತಿಯು ಒಲಿದು ಬಂದಿದೆ. ಉಪ್ಪಿನಂಗಡಿಯ ಉದ್ಯಮಿ ಶಬೀರ್ ಕೆಂಪಿಯವರ ಅಧ್ಯಕ್ಷತೆಯಲ್ಲಿ 2015ರಲ್ಲಿ ಉಬಾರ್ ಡೋನಾರ‍್ಸ್ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ಜಾತಿ- ಮತಗಳ ಬೇಧವಿಲ್ಲದೆ ಬಡವರಿಗೆ ಚಿಕಿತ್ಸೆಯ ವೆಚ್ಚ, ಬಟ್ಟೆಗಳ ದಾನ, ಆಹಾರ ಸಾಮಗ್ರಿಗಳ ದಾನ ಸೇರಿದಂತೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ೨೦೧೭ರಲ್ಲಿ ಕ್ರೀಡೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸಮಾನಮನಸ್ಕ ಯವಕರನ್ನು ಒಗ್ಗೂಡಿಸಿಕೊಂಡು ಉಬಾರ್ ಸ್ಪೋರ್ಟಿಂಗ್ ಕ್ಲಬ್ ಅನ್ನು ಸ್ಥಾಪಿಸಿ ಅದನ್ನು ಅಧಿಕೃತವಾಗಿ ನೋಂದಾಯಿಸಿ ಇದರಲ್ಲಿ ಉಬಾರ್ ಡೋನಾರ‍್ಸ್ ಸಂಸ್ಥೆಯನ್ನು ವಿಲೀನಗೊಳಿಸಲಾಯಿತು. ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಮೂಲಕ ಕ್ರೀಡೆಗಳ ಆಯೋಜನೆ, ಕ್ರೀಡೆಗಳಿಗೆ ಉತ್ತೇಜನ, ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಹೀಗೆ ಕ್ರೀಡೆಗೆ ಸಂಬಂಧಿಸಿದ ಹತ್ತು ಹಲವು ಚಟುವಟಿಕೆಗಳು ನಡೆಸಲಾಗುತ್ತಿದ್ದರೆ, ಉಬಾರ್ ಡೋನಾರ‍್ಸ್‌ನ ಮೂಲಕ ರಕ್ತದಾನ ಶಿಬಿರ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಶಬೀರ್ ಕೆಂಪಿಯವರು, ನಮ್ಮ ಸಂಸ್ಥೆಯಲ್ಲಿ ಎಲ್ಲಾ ಧರ್ಮಗಳ ಸಮಾನಮನಸ್ಕ ಸದಸ್ಯರಿದ್ದೂ, ಅನಿವಾಸಿ ಭಾರತೀಯರೂ ಇದರಲ್ಲಿ ಇದ್ದಾರೆ. ಇದರಲ್ಲಿರುವ ಯುವಕರ ತಂಡವೂ ಸಂಸ್ಥೆಯ ಮೂಲಕ ಮಾಡುವ ಪ್ರತಿಯೊಂದು ಕಾರ್ಯಕ್ಕೂ ಕೈ ಜೋಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಥೆಗೆ ಈ ಪ್ರಶಸ್ತಿ ಬರಲು ಸಾಧ್ಯವಾಯಿತು. ಇದು ನಮಗೆ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಲಿದೆ ಎಂದರು.

LEAVE A REPLY

Please enter your comment!
Please enter your name here