ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 94ನೇ ವರ್ಷದ ಮಕ್ಕಳ ಹಬ್ಬ `ಚಿಣ್ಣರ ಆಯನ’ ಕಾರ್ಯಕ್ರಮಗಳಿಗೆ ಡಿ.20ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿಗಳನ್ನು ಆಕರ್ಷಕ ಪಥ ಸಂಚಲನದ ಮೂಲಕ ಶಾಲಾ ಕಚೇರಿ ಬಳಿಯಿಂದ ಮೈದಾನದ ಧ್ವಜಸ್ಥಂಭದ ಬಳಿಗೆ ಕರೆತರಲಾಯಿತು. ಶಾಲಾ ನಾಯಕ ಅಭಿನ್ ಎಸ್. ರೈ ಹಾಗೂ ಭಾರವಿ ಭಟ್ ಧ್ವಜವಂಧನೆ ಸಲ್ಲಿಸಿದರು. ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್ ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.
ನಂತರ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ನ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ಶಾಲೆಯಲ್ಲಿ ಪಠ್ಯ ಶಿಕ್ಷಣದ ಜೊತೆಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವರ್ಷದ ಸುಂದರ ನೆನಪು ಅಮರವಾಗಿ ಉಳಿಯುತ್ತದೆ. ವಾರ್ಷಿಕೋತ್ಸವದಲ್ಲಿರುವಂತ ಸಂಭ್ರಮ, ಸಂತೋಷ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿರಂತರವಾಗಿರಲಿ ಎಂದರು.
ಬಹುಮಾನ ವಿತರಿಸಿದ ಹಿರಿಯ ವಿದ್ಯಾರ್ಥಿಯಾಗಿರುವ ಸಂಪ್ಯ ಆನಂದ ಆಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈ ಮಾತನಾಡಿ, ನಾನು ಕಲಿತ ಶಾಲೆ, ಈ ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ. ಬಹಳಷ್ಟು ಸಂತೋಷದಿಂದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಹಿರಿಯ ವಿದ್ಯಾರ್ಥಿ, ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಯಧುರಾಜ್ ಮಾತನಾಡಿ, ಕಲಿತ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗುವ ಮೂಲಕ ಹಳೆಯ ನೆನಪುಗಳು ಮೆಲುಕು ಹಾಕಲು ಸಹಕಾರಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವಷ್ಟು ಸಂತೋಷ ಮತ್ತೆ ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದ ನೆನಪುಗಳು ಅಚ್ಚಲಿಯದಂತೆ ಉಳಿಯುತ್ತದೆ ಎಂದು ಹೇಳಿದರು.
ನಗರ ಕ್ಲಷ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ, ಸ್ಪರ್ಧೆ ಮುಖ್ಯ, ಸೊಲು ಗೆಲುವು ಎರಡನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಆತ್ಮ ವಿಶ್ವಾಸ, ಸಕಾರಾತ್ಮಕ ಗುಣಗಳನ್ನು ಬೆಳೆಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಹಿರಿಯ ವಿದ್ಯಾರ್ಥಿ, ಮಂಗಳೂರು ಬಜಾಜ್ ಫೈನಾನ್ಸ್ನ ಪ್ರಬಂಧಕ ಪ್ರದೀಪ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಶಾಲಾ ಅಭಿವೃದ್ಧಿಯಲ್ಲಿ ಸಹಕರಿಸಲಾಗುವುದು. ಇಪ್ಪತ್ತೈದು ವರ್ಷದ ಬಳಿಕ ಮತ್ತೆ ಒಟ್ಟು ಸೇರಲು ಅವಕಾಶ ಕಲ್ಪಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಶಾಲಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್. ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದ ೯೪ನೇ ವಾರ್ಷಿಕೋತ್ಸವ ಯಶಸ್ವಿಯಾಗಿ ಮೂಡಿಬರುತ್ತಿದೆ. ಮುಂದಿನ ಆರು ವರ್ಷದಲ್ಲಿ ಶಾಲೆಯು ಶತಮಾನೋತ್ಸವವನ್ನು ಆಚರಿಸಲಿದ್ದು ಅದರ ಯಶಸ್ಸಿಗೂ ಸಹಕರಿಸುವಂತೆ ಅವರು ಮನವಿ ಮಾಡಿದರು.
ಬ್ಯಾಂಕ್ ಆಫ್ ಬರೋಡಾದ ಹಿರಿಯ ಶಾಖಾ ಪ್ರಬಂಧಕಿ ಮಮತಾ, ಹಿರಿಯ ವಿದ್ಯಾರ್ಥಿ ದೆಹಲಿ ಟಾಟಾ ಕನ್ಸಲ್ಟೆನ್ಸಿಯ ಪ್ರಾಜೆಕ್ಟ್ ಮ್ಯಾನೇಜರ್ ಮಧು, ಹಿರಿಯ ವಿದ್ಯಾರ್ಥಿ ಸಿಸ್ಕೋ ಸಿಸ್ಟಮ್ ಟೆಕ್ನಿಕಲ್ ಪ್ರಾಜೆಕ್ಟ್ ಇಂಜಿನಿಯರ್ ಸುಮ, ಉದ್ಯಮಿ ನಸೀಮ ಮೊಹಮ್ಮದ್ ಮಾತನಾಡಿ, ಶುಭಹಾರೈಸಿದರು.
ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಉಜ್ವಲ್ ಪ್ರಭು, ಹಿರಿಯ ವಿದ್ಯಾರ್ಥಿ, ನ್ಯಾಯವಾದಿ ಕವನ್ ನಾಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಡೆನ್ನೀಸ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಿಯ ಪುಷ್ಪ ಪ್ರಶಸ್ತಿ ಪ್ರದಾನ, ಸನ್ಮಾನ:
ಹಿರಿಯ ವಿದ್ಯಾರ್ಥಿಯಾಗಿರುವ ಸಂಪ್ಯ ಆನಂದ ಆಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈಯವರಿಗೆ ಕಿರಿಯ ಪುಷ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ನಿವೃತ್ತ ಶಿಕ್ಷಕಿಯರಾದ ಮೇರಿ ಡಿ’ ಸಿಲ್ವಾ, ಡೋರತಿ ಮೇರಿ ಡಿ’ ಸೋಜ, ಐರಿನ್ ವೇಗಸ್, ಶೈಲಜಾತೆ, ಸಬೀನಾ ಲಸ್ರಾದೋ, ಪ್ರೆಸ್ಸಿ ಲೋಬೋ, ಸಿಸಿಲಿಯಾ ರೆಬೆಲ್ಲೋ, ಐರಿಸ್ ರೋಡ್ರಿಗಸ್, ರೋಸ್ಲಿನ್ ಡಿಸಿಲ್ವಾ, ಲೀಡಿಯ ಮರಿಯ ರಸ್ಕಿನ, ಸರೋಜ, ಜೋಸೆಫ್ ಕೆ.ಪಿ., ಶಾಲಾ ವಾರ್ಷಿಕೋತ್ಸವದ ಯಶಸ್ಸಿನಲ್ಲಿ ಸಹಕರಿಸಿದ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ ಹಾಗೂ ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ರವರನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ:
ಶಾಲಾ ವಾರ್ಷಿಕೋತ್ಸವ `ಚಿನ್ನರ ಆಯನ’ದ ಅಂಗನವಾಗಿ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಶಾಲಾ 800 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ, 600 ಮಂದಿ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು. ಶಾಲಾ ಹಿರಿಯ ವಿದ್ಯಾರ್ಥಿ, ಅಮೇರಿಕಾದಲ್ಲಿ ಉದ್ಯೋಗಿಯಾಗಿಯಾಗಿರುವ ಹಾರೂನ್ ರಶೀದ್ರವರು ಈ ಎಲ್ಲಾ ಬಹುಮಾನಗಳ ಪ್ರಾಯೋಜಕತ್ವವನ್ನು ನೀಡಿರುತ್ತಾರೆ.
ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ನಳಿನಾಕ್ಷಿ ವಂದಿಸಿದರು. ಶಿಕ್ಷಕಿಯರಾದ ಭವ್ಯ, ಮಮತ, ಅಭಿನಯ, ಜಯಲಕ್ಷ್ಮಿ, ಕಾವ್ಯ, ಪವಿತ್ರ, ವಿನಿತಾ ಪಿರೇರಾ, ಲವಿನಾ, ರೇಷ್ಮಾ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು.
ಡಿ.21 ಚಿನ್ನರ ಆಯನ,
ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ:
ಶಾಲಾ 94ನೇ ವರ್ಷದ ವಾರ್ಷಿಕೋತ್ಸವದಲ್ಲಿ ಡಿ.21ರಂದು ಸಂಜೆ 5.30ಕ್ಕೆ ಚಿನ್ನರ ಆಯನ ಕಾರ್ಯಕ್ರಮ ಹಾಗೂ ಶೈಕ್ಷಣಿಕ, ಕ್ರೀಡೆ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13ಮಂದಿ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ಪುಷ್ಪ ಪ್ರಶಸ್ತಿ ಪುರಸ್ಕಾರಗಳು ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಗಳು ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ