ಮಾಯಿದೆ ದೇವುಸ್ ಚರ್ಚ್‌ನ ಕ್ರಿಶ್ಚಿಯನ್ ಒಕ್ಕೂಟದ ಆಯೋಗ, ಅಂತರ್ ಧರ್ಮೀಯ ಸಂವಾದದ ಆಯೋಗದಿಂದ ಬಂಧುತ್ವ ಕ್ರಿಸ್ಮಸ್ ಆಚರಣೆ

0

ಮನಸ್ಸುಗಳು ಸರಿಯಾದರೆ ಜಗತ್ತನ್ನೇ ಸರಿ ಮಾಡಬಹುದು-ನರೇಂದ್ರ ರೈ ದೇರ್ಲ
ಸಾವಿರಾರು ಹೃದಯಗಳು ಶಾಂತಿಯ ಸಾಧನವಾಗಬೇಕಿದೆ-ರೆ|ವಿಜಯ ಹಾರ್ವಿನ್
ಸೌಹಾರ್ದತೆ, ಆರೋಗ್ಯಕರ ಬದುಕನ್ನು ಕಟ್ಟಲು ಶ್ರಮಿಸೋಣ-ಇಕ್ಬಾಲ್ ಬಾಳಿಲ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿನ ಸಾರ ಒಂದೇ, ನಾವು ಬದಲಾಗಬೇಕು. ನಮ್ಮ ನಡುವೆ ಇರುವ ಬೇಲಿ, ಕಂದಕ, ಗೋಡೆಯನ್ನು ಒಡೆದು ಹಾಕಬೇಕು. ಜಗತ್ತಿನ ಯುದ್ಧ ಆರಂಭವಾಗುವುದು ಮನಸ್ಸಿನೊಳಗೆ. ಆದ್ದರಿಂದ ನಮ್ಮಲ್ಲಿನ ಮನಸ್ಸುಗಳನ್ನು ಸರಿ ಮಾಡಿದರೆ ಇಡೀ ಜಗತ್ತನ್ನೇ ಸರಿ ಮಾಡಬಹುದು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್‌ನ ಕ್ರಿಶ್ಚಿಯನ್ ಒಕ್ಕೂಟದ ಆಯೋಗ, ಅಂತರ್ ಧರ್ಮೀಯ ಸಂವಾದದ ಆಯೋಗದ ಸಹಯೋಗದಿಂದ ದ.20 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಿದ ಬಂಧುತ್ವ ಕ್ರಿಸ್ಮಸ್ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಕದಲ್ಲಿ ನಿಂತ ಮನುಷ್ಯ ಯಾವ ಜಾತಿ, ಯಾವ ಧರ್ಮ, ಯಾವ ಮತ ಎಂದು ಭಾವಿಸದೆ ಆ ಮನುಷ್ಯನನ್ನು ನಮ್ಮ ಅಂತರಂಗದೊಳಗೆ ಇಟ್ಟು ಪ್ರೀತಿಸುವವರಾಗಬೇಕು. ನಮ್ಮ ಕರಾವಳಿಯನ್ನು ಎಲ್ಲರೂ ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತೇವೆ. ನಮ್ಮ ಕರಾವಳಿಯಲ್ಲಿ ಅದೆಷ್ಟೋ ಆಸ್ಪತ್ರೆಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು, ಇಂಜಿನಿಯರ್‌ಗಳು, ವೈದ್ಯರುಗಳು, ರ‍್ಯಾಂಕ್‌ಗಳನ್ನು ಪಡೆದ ಪ್ರತಿಭಾವಂತರಿದ್ದರೂ ನಮ್ಮ ಕರಾವಳಿಯು ಮತೀಯ ಗಲಭೆಗೆ ಹೆಚ್ಚು ಕಾರಣವಾಗಿರುವುದು ಬೇಸರದ ಸಂಗತಿಯಾಗಿದೆ. ಯಾವುದೇ ರ‍್ಯಾಂಕ್‌ಗಳು, ಪ್ರತಿಭೆಗಳು ಮನುಷ್ಯನನ್ನು ಜೋಡಿಸಲಿಲ್ಲ. ಮನುಷ್ಯ ಸಮುದಾಯವನ್ನು ಒಂದು ಮಾಡದ ಧರ್ಮ ನಮಗೆ ಯಾಕೆ ಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದ ಅವರು ಹಲವು ವರ್ಷಗಳ ಹಿಂದೆ ಹಿಂದು, ಮುಸ್ಲಿಂ, ಕ್ರೈಸ್ತ ಜನರ ಸಂಭ್ರಮ ಸಡಗರದಲ್ಲಿ ಜನರು ಜಾತಿ-ಧರ್ಮ ಮರೆತು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಹೊಸ ತಲೆಮಾರಿನಲ್ಲಿ ಯಾಕೆ ಈ ತರಹ ಆಗುತ್ತಿದೆ ಎಂಬುದು ಮೊದಲು ತಿಳಿದುಕೊಳ್ಳಬೇಕು. ಮಾನವ ಜನಾಂಗ ಉಳಿಯಬೇಕಾದರೆ ಮಣ್ಣು, ನೀರು, ಗಾಳಿ, ಅನ್ನ, ಪರಿಸರ ಮುಖ್ಯವಾಗಿ ಬೇಕಾಗಿದೆ ಆದರೆ ಇದರ ಬಗ್ಗೆ ಯಾರೂ ಅಲೋಚನೆ ಮಾಡದೆ ಮತೀಯ ವಿಘಟನೆ, ವಿಚಲಿತ ಭಾವನೆಯತ್ತ ಸಾಗುತ್ತಿರುವುದು ವಿಷಾಧದ ಸಂಗತಿ ಎಂದು ಅವರು ಹೇಳಿದರು.

ಸೌಹಾರ್ದತೆ, ಆರೋಗ್ಯಕರ ಬದುಕನ್ನು ಕಟ್ಟಲು ಶ್ರಮಿಸೋಣ-ಇಕ್ಬಾಲ್ ಬಾಳಿಲ:

ಎಸ್‌ಕೆಎಸ್‌ಎಸ್‌ಎಫ್ ಕಾರ್ಯದರ್ಶಿ ಕೆ.ಎಂ ಇಕ್ಬಾಲ್ ಬಾಳಿಲ ಮಾತನಾಡಿ, ಭಾರತದಲ್ಲಿ ವೈಜ್ಞಾನಿಕ ಪ್ರಗತಿ ಮುಂಚೂಣಿಯಲ್ಲಿದೆ ಆದರೆ ಮಾನವತೆ ಮರೆಯಾಗುತ್ತಿದೆ. ಮನುಷ್ಯ ಇಲ್ಲದ ಕಾಲಘಟ್ಟದಲ್ಲಿ ನಾವು ಸಂಚರಿಸುತ್ತಿದ್ದೇವೆ. ನೈಜ ಮನುಷ್ಯರಾದವರು ಅವರವರ ಧರ್ಮಗಳನ್ನು ಪಾಲನೆ ಮಾಡುತ್ತಾರೆ ಮತ್ತು ಇತರ ಧರ್ಮಗಳನ್ನು ಗೌರವಿಸುತ್ತಾರೆ. ಕೋಮುವಾದ ಅಲೆ ಹಾಗೂ ಮಾದಕ ವಸ್ತುಗಳ ಪ್ರಭಾವದಿಂದ ಸಮಾಜ ನಲುಗುತ್ತಿದೆ. ಮನುಷ್ಯನಾಗಿ ಬಾಳಬೇಕು, ಕೋಮು ಭಾವನೆ, ಮಾದಕ ವ್ಯಸನಗಳ ಕ್ರಿಮಿಯನ್ನು ನಾಶ ಮಾಡಬೇಕಾಗಿದೆ. ಸ್ವಾತಂತ್ರ್ಯ ಸಿಗಲು ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಜನರು ಭುಜಕ್ಕೆ ಭುಜ ನೀಡಿ ಒಗ್ಗಟ್ಟಾಗಿ ಹೋರಾಡಿದ್ದರು ಎಂದ ಅವರು ಹಿಂದುಗಳಲ್ಲಿ ದೀಪಾವಳಿ, ಕ್ರೈಸ್ತರ ಕ್ರಿಸ್ಮಸ್, ಮುಸ್ಲಿಂಮರ ರಮಜಾನ್ ಹಬ್ಬಗಳು ನಮ್ಮೊಳಗೆ ಪ್ರೀತಿಯ ಸಿಹಿಯ ಬಂಧುತ್ವ ನೆಲೆಸುವಂತೆ ಮಾಡುತ್ತಿತ್ತು. ಮನುಷ್ಯನಿಗೆ ಮರಣ ಎಂಬುದು ಶಾಶ್ವತ ಎಂದು ಗೊತ್ತಿದ್ದರೂ ನಾವು ನೈಜ ಮಾನವನಾಗಿ ಬದುಕುತ್ತಿಲ್ಲ. ಸೌಹಾರ್ದತೆ, ಆರೋಗ್ಯಕರ ಬದುಕನ್ನು ಕಟ್ಟಲು ಶ್ರಮಿಸುವ ಕಡೆಗೆ ಬಂಧುತ್ವ ಕ್ರಿಸ್ಮಸ್ ಆದರ್ಶವಾಗಲಿ ಎಂದು ಅವರು ಹೇಳಿದರು.

ಸಾವಿರಾರು ಹೃದಯಗಳು ಶಾಂತಿಯ ಸಾಧನವಾಗಬೇಕಿದೆ-ರೆ|ವಿಜಯ ಹಾರ್ವಿನ್:

ಮಂಜಲ್ಪಡ್ಪು ಸುದಾನ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್ ಮಾತನಾಡಿ, ಎಲ್ಲ ಧರ್ಮಗಳು ಮನುಷ್ಯನ ಒಳಿತಿಗಾಗಿ ಹುಟ್ಟಿಕೊಂಡದ್ದಾಗಿದೆ. ಆದರೆ ಧರ್ಮಗಳು ಸ್ವಾರ್ಥದಿಂದ ಕೆಟ್ಟು ಹೋಗಿದೆ. ಹಿಂದು ಧರ್ಮದಲ್ಲಿನ ‘ಓಂ ಶಾಂತಿ’, ‘ಸರ್ವೆ ಜನ ಸುಖಿನೋ ಭವಂತು’ ಎಂಬುದು, ಮುಸ್ಲಿಂ ಧರ್ಮದಲ್ಲಿ ಸಲಾಂ ಮಲೈಕುಂ’ ಎಂಬುದು, ಕ್ರೈಸ್ತ ಧರ್ಮದಲ್ಲಿ ‘ನೀನು ನಿನ್ನನ್ನು ಹೇಗೆ ಪ್ರೀತಿಸುತ್ತೀಯೋ ಹಾಗೆಯೇ ನಿನ್ನ ನೆರೆಹೊರೆಯವನನ್ನು ಪ್ರೀತಿಸು’ ಎಂಬುದು. ಆದ್ದರಿಂದ ಈ ಮೂರು ಧರ್ಮಗಳು ಶಾಂತಿ ಹಾಗೂ ಪ್ರೀತಿಯ ಸಹಬಾಳ್ವೆಯನ್ನು ಸೂಚಿಸುತ್ತದೆ. ದೇವರ ಅವತಾರವಾಗಿ ಯೇಸುಕ್ರಿಸ್ತರು ಮಾನವನಾಗಿ ಧರೆಗಿಳಿದದ್ದು ಭೂಮಿಯಲ್ಲಿ ಮನುಷ್ಯನು ಸಂತೋಷದಿಂದಿರಬೇಕು, ಸುಖ-ಸಂತೋಷ, ಶಾಂತಿ-ಪ್ರೀತಿಯಿಂದ ಜೀವಿಸಬೇಕೆನ್ನುವ ಉದ್ಧೇಶದಿಂದ. ಶಾಂತಿ, ಪ್ರೀತಿ, ಕ್ಷಮೆ ಎಂಬುದು ಯೇಸುಕ್ರಿಸ್ತರು ಬರಿಯ ಬಾಯಿ ಮಾತಿನಲ್ಲಿ ಹೇಳಿಲ್ಲ, ವೈಯಕ್ತಿಕ ಜೀವನದಲ್ಲಿ ಅವರು ಮಾಡಿ ತೋರಿಸಿದ್ದಾರೆ. ಆದ್ದರಿಂದ ಜಗತ್ತು ಸುಖ-ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಸಾವಿರಾರು ಹೃದಯಗಳು ಶಾಂತಿಯ ಸಾಧನವಾಗಬೇಕಿದೆ ಎಂದು ಅವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಅಂತರ್ ಧರ್ಮೀಯ ಸಂವಾದದ ಆಯೋಗದ ಸಂಚಾಲಕ ಆಂಬ್ರೋಸ್ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಯಿದೆ ದೇವುಸ್ ಚರ್ಚ್‌ನ ಗಾಯನ ಮಂಡಳಿ ಪ್ರಾರ್ಥಿಸಿದರು. ಕ್ರಿಶ್ಚಿಯನ್ ಒಕ್ಕೂಟದ ಆಯೋಗದ ಸಂಚಾಲಕಿ ಗ್ರೇಸಿ ಡಿ’ಸೋಜ ಸ್ವಾಗತಿಸಿ, ಸದಸ್ಯ ಜೆರಾಲ್ಡ್ ಡಿ’ಕೋಸ್ಟ ವಂದಿಸಿದರು. ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾಹಿತಿ ಪ್ರೊ|ವಿ.ಬಿ ಆರ್ತಿಕಜೆ, ಧನ್ವಂತರಿ ಆಸ್ಪತ್ರೆಯ ಡಾ.ರವಿಪ್ರಕಾಶ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಪ್ರಮುಖರಾದ ಉದ್ಯಮಿ ಶಿವರಾಂ ಆಳ್ವ, ಯಾಕೂಬ್ ಮುಲಾರ್, ಪುರಸಭಾ ಮಾಜಿ ಸದಸ್ಯ ಸೂತ್ರಬೆಟ್ಟು ಜಗನ್ನಾಥ್ ರೈ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನ್ಹಸ್, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಕಾಮತ್ ಕೋಲ್ಡ್ ಹೌಸ್‌ನ ರಾಜೇಶ್ ಕಾಮತ್, ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಧರ್ಮಭಗಿನಿಯರ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೃದಯವನ್ನು ಮಾನವೀಯ ಸಂಬಂಧಗಳ ನೆಲೆವೀಡಾಗಿಸೋಣ…

ಕ್ರಿಸ್ಮಸ್ ಹಬ್ಬ ದೇವರ ಪ್ರೀತಿಯ ಹಬ್ಬ. ದೇವರು ಹಾಗೂ ಮಾನವನ ನಡುವಿನ ಪ್ರೀತಿಯ ಕಥೆಯೇ ಬೈಬಲ್. ಯೇಸುಕ್ರಿಸ್ತರು ದೇವರ ಪ್ರತಿರೂಪ. ಯೇಸುಕ್ರಿಸ್ತರು ಯಾವುದೇ ಧರ್ಮವನ್ನು ಸ್ಥಾಪಿಸಿಲ್ಲ. ಆದರೆ ಅವರು ಶಾಂತಿಯ, ಪ್ರೀತಿಯ, ಕ್ಷಮೆಯ, ಕರುಣೆಯ, ಒಳಿತನ್ನು ಮಾಡುವ ಸಾಮ್ರಾಜ್ಯದ ಸ್ಥಾಪನೆ ಮಾಡಿದ ಅವತಾರ ಪುರುಷರಾಗಿದ್ದಾರೆ. ಹೊರ ಪ್ರಪಂಚ ಎಷ್ಟೇ ಸೌಂದರ್ಯವಿದ್ದರೂ ಅಂತರಂಗದಲ್ಲಿ ನೆಮ್ಮದಿ, ಸಂತೋಷವಿಲ್ಲದಿದ್ದರೆ ಅದು ವ್ಯರ್ಥ. ನಮ್ಮ ಮನಸ್ಸು ಹಾಗೂ ಹೃದಯಗಳಲ್ಲಿ ಪ್ರೀತಿಯ ಭಾವನೆ ತುಂಬಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಏನು ನೆರವು ನೀಡಿದ್ದಿರೋ ಅದುವೇ ನನಗೆ ನೀವು ಮಾಡಿದ್ದು ಎಂದು ಯೇಸುಕ್ರಿಸ್ತರು ಹೇಳುತ್ತಾರೆ. ಯಾವುದೇ ಧರ್ಮವಾಗಲಿ, ನಾವು ದೇವರ ವಾಕ್ಯದ ಮೇಲೆ ನೆಮ್ಮದಿಯ ಜೀವನ ನಡೆಸೋಣ. ಹೃದಯಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡದೆ ಹೃದಯವನ್ನು ಮಾನವೀಯ ಸಂಬಂಧಗಳ ನೆಲೆವೀಡಾಗಿ ಮಾಡಿದಾಗ ದೇಶ ಸುಭದ್ರವಾಗಿರುತ್ತದೆ.

-ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಧಾನ ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್, ಪುತ್ತೂರು

ಮಾಯಿದೆ ದೇವುಸ್ ಚರ್ಚ್‌ನ ಗಾಯನ ಮಂಡಳಿಯ ಸದಸ್ಯರು ಕನ್ನಡ ಹಾಗೂ ತುಳುವಿನಲ್ಲಿ ಸುಶ್ರಾವ್ಯವಾದ ಗೀತೆಗಳನ್ನಾಡಿದರು. ಎನ್.ವಿ ಡ್ಯಾನ್ಸ್ ಅಕಾಡೆಮಿಯಿಂದ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ನೃತ್ಯ ಸೇರಿದಂತೆ ವಿವಿಧ ನೃತ್ಯಗಳು ವೇದಿಕೆಯಲ್ಲಿ ಮನರಂಜಿಸಿದವು. ಕ್ರಿಸ್ಮಸ್ ಹಬ್ಬದ ಸಲುವಾಗಿ ಚರ್ಚ್ ವತಿಯಿಂದ ಸಿಹಿಯ ಪ್ರತೀಕವಾದ ಕೇಕ್ ಅನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here