ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಕ್ರಮಕ್ಕೆ ಭರವಸೆ – ಪ್ರತಿಭಟನೆ ಹಿಂಪಡೆದ ಹಿಂದೂ ಸಂಘಟನೆ
ಪುತ್ತೂರು: ಭಜನೆ ಮತ್ತು ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾಡಿರುವ ಆರೋಪದಲ್ಲಿ ಕೊಯಿಲ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರ ವಿರುದ್ದ ವಿ.ಹಿಂ.ಪ, ಬಜರಂಗದಳದ ವತಿಯಿಂದ ಪುತ್ತೂರು ಅರಣ್ಯ ಇಲಾಖೆಯ ಕಛೇರಿಯ ಎದುರು ಡಿ.21ರಂದು ನಡೆದ ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರು ಆಗಮಿಸಿ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಸಂಜೀವ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ತಕ್ಷಣ ಅಮಾನತು ಮಾಡುವಂತೆ ಹಿಂದು ಸಂಘಟನೆ ಪಟ್ಟು ಹಿಡಿದಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಾನತಿನ ಭರಸವಸೆ ನೀಡಿದರು.
ಆರಂಭದಲ್ಲಿ ಸಂಜೀವ ಪೂಜಾರಿ ಅವರಿಗೆ ಕಾರಣ ಕೇಳಿ ನೋಟೀಸ್ ಮಾಡಿ ಅವರ ಉತ್ತರದ ಬಳಿಕ ಅಮಾನತು ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮೊದಲು ಪ್ರತಿಭಟನಾಕಾರರ ಆಗ್ರಹದಂತೆ ಇವತ್ತಿನಿಂದಲೇ ಅವರಿಗೆ ರಜೆ ನೀಡಲಾಗುವುದು ಎಂದರು. ಹಿಂದು ಸಂಘಟನೆ ಮುಖಂಡರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.