ಬೆಟ್ಟಂಪಾಡಿ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

0

ಪುತ್ತೂರು: ಭಾರತದ ಖ್ಯಾತ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ್ ರವರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು ಹಾಗೂ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ನೆನಪಿಗಾಗಿ , ಅವರ ಹುಟ್ಟಿದ ದಿನ ಡಿಸೆಂಬರ್ 22 ನ್ನು ದೇಶದಾದ್ಯಂತ ‘ರಾಷ್ಟ್ರೀಯ ಗಣಿತ ದಿನ’ ವೆಂದು ಆಚರಿಸಲಾಗುತ್ತದೆ.

ಆ ಪ್ರಯುಕ್ತ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವಿಜ್ಞಾನ ವಿಭಾಗ ಹಾಗೂ ಗಣಿತ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ.22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.

ಪ್ರಾಸ್ತಾವಿಕ ಮಾತುಗಳೊಂದಿಗೆ ಕಾಲೇಜಿನ ಗಣಿತ ಉಪನ್ಯಾಸಕ ಶಶಿಕುಮಾರ ಈ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ವಿಜ್ಞಾನದ ಪ್ರತಿಯೊಂದು ಭಾಗಗಳಲ್ಲಿಯೂ ಗಣಿತವು ಇದ್ದೇ ಇರುತ್ತದೆ, ಗಣಿತವಿಲ್ಲದೆ ವಿಜ್ಞಾನವಿಲ್ಲ ಎಂಬ ಮಾತನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಗಣಿತವೆಂಬುದು ಪರಿಪಕ್ವವಾದಂತ ವಿಷಯ, ಬುದ್ಧಿಶಕ್ತಿ ಚುರುಕು ಮಾಡಲು ಗಣಿತವು ಉಪಕಾರಿಯಾಗಿದೆ ಹಾಗೂ ಕೃತಕ ಬುದ್ಧಿವಂತಿಕೆ ಎಂಬ ಕ್ಷೇತ್ರವು ಗಣಿತದ ಮೇಲೆ ಬಹಳಷ್ಟು ಅವಲಂಬಿತವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಹಾಗೂ ನಿರ್ವಹಣಾ ಕಾಲೇಜಿನ ಸಹಪ್ರಾಧ್ಯಾಪಕರು ಹಾಗೂ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ವಿದ್ಯಾರ್ಥಿಗಳಿಗೆ ’20ನೇ ಶತಮಾನದ ಗಣಿತ ಹಾಗೂ ರಾಮಾನುಜನ್ ಅವರ ಕೊಡುಗೆಗಳು’ ಎಂಬ ವಿಷಯದ  ಬಗ್ಗೆ ಉಪನ್ಯಾಸ ನೀಡಿದರು. ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವ ಉದ್ದೇಶ ಹಾಗೂ ಕಾರಣವನ್ನು ವಿದ್ಯಾರ್ಥಿಗಳಿಗೆ ಅವರು ತಿಳಿಸಿಕೊಟ್ಟರು. ಶ್ರೀನಿವಾಸ ರಾಮಾನುಜನ್ ಅವರಂತಹ ಅಪ್ರತಿಮ ಗಣಿತಜ್ಞರು ನೀಡಿದಂತಹ ಕೊಡುಗೆಗಳನ್ನು, ಮಹತ್ವವನ್ನು ತಿಳಿಸಿದರು. ಗಣಿತವೆಂಬುದು ನೀರಸವಾದ ವಿಷಯವಲ್ಲ, ಈ ವಿಷಯದಲ್ಲಿ ಆಸಕ್ತಿ ಉಳ್ಳವರಿಗೆ ಅದು ಒಂದು ಉತ್ಸಾಹ ತರಿಸುವಂತಹುದು ಎಂದರು.

ವೇದಿಕೆಯಲ್ಲಿ ಆಂತರಿಕ ಗುಣ ಗುಣಮಟ್ಟ ಭರವಸಾ ಕೋಶದ ಸಹ ಸಂಚಾಲಕ ಅನಂತ್ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮ ವಿದ್ಯಾರ್ಥಿನಿ ದಿವ್ಯಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿನಿ ಭವ್ಯಾ ಅತಿಥಿಗಳ ಕಿರುಪರಿಚಯವನ್ನು ಮಾಡಿದರು. ಶೋಭಿತ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಗಣಿತ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here