ಶಿಸ್ತು, ಸಮಯ ಪಾಲನೆ, ಸ್ವಚ್ಛತೆ ಮೂಲಕ ಗಮನ ಸೆಳೆಯುತ್ತಿದೆ ಮಹಾವಿಷ್ಣು ದೇವರ ಸಾನಿಧ್ಯ
ಹಾರ, ತುರಾಯಿ, ಸನ್ಮಾನ ಇಲ್ಲ: ಕೊಂಬು, ಚೆಂಡೆ, ವಾದ್ಯದ ಸದ್ದೂ ಇಲ್ಲ
ಪುತ್ತೂರು: ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಗಳ ‘ತ್ರಿವೇಣಿ’ ಸಂಗಮ ಸ್ಥಳ ಎಂದೇ ಕರೆಯಲ್ಪಡುವ ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹತ್ತೂರಿಗೂ ಮಾದರಿಯಾಗಿ ನಡೆಯುತ್ತಿದೆ ಎಂಬ ಮೆಚ್ಚುಗೆಯ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ದ.20ರಿಂದ 25 ರವರೆಗೆ ನಡೆಯುವ ಶಾಂತಿನಗರ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಶಿಸ್ತು, ಅಚ್ಚುಕಟ್ಟುತನ, ಸ್ವಚ್ಛತೆ ಮತ್ತು ಸಮಯ ಪಾಲನೆಯ ಮೂಲಕ ಭಕ್ತರ ಶ್ಲಾಘನೆಗೆ ಪಾತ್ರವಾಗುತ್ತಿದೆ.
ಎಂಟುನೂರು ವರ್ಷಗಳ ಇತಿಹಾಸ ಇರುವ ಶಾಂತಿನಗರ ಶ್ರೀ ಮಹಾವಿಷ್ಣು ದೇವಾಲಯ ಎರಡನೇ ಬ್ರಹ್ಮಕಲಶೋತ್ಸವದ ಸಂಭ್ರಮ, ಸಡಗರದಲ್ಲಿದೆ. 1990ರಲ್ಲಿ ದೇಶಾದ್ಯಂತ ನಡೆದ ರಾಮ ಜಾನಕಿ ರಥಯಾತ್ರೆ ಶಾಂತಿನಗರದಲ್ಲಿ ಸಂಚರಿಸುವಾಗ ಇಲ್ಲಿ ದೇವರ ಸಾನಿಧ್ಯ ಇರುವುದು ಬೆಳಕಿಗೆ ಬಂದಿತ್ತು.
ಪಾಳು ಬಿದ್ದ ಜಾಗದಲ್ಲಿ ದೈವ ಸಾನಿಧ್ಯದ ಕುರುಹು ಕಂಡ ನಂತರ ಹಲವು ಪವಾಡ, ಕಾರಣಿಕದ ಮೂಲಕ ಹತ್ತೂರಿನಲ್ಲಿಯೂ ಪ್ರಚಾರಕ್ಕೆ ಬಂದಿದ್ದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 2009 ರ ವೇಳೆಗೆ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಉತ್ಸವ ಜರಗಿತ್ತು. ಇದೀಗ 13 ವರ್ಷಗಳ ಬಳಿಕ ಬ್ರಹ್ಮಕಲಶಾಭಿಷೇಕ ನಡೆಯುತ್ತಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ದೇವಳದ ಆಡಳಿತ ಮೊಕ್ತೇಸರ ಯು.ಜಿ.ರಾಧ ಮತ್ತು ಮೊಕ್ತೇಸರರು, 12 ಬೈಲುವಾರು ಸಮಿತಿಯವರು ಹಾಗೂ ಅರ್ಚಕರ ಮುಂದಾಳತ್ವದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಯಶಸ್ಸಿಗಾಗಿ ನೂರಾರು ಸ್ವಯಂಸೇವಕರು ರಾತ್ರಿ ಹಗಲೆನ್ನದೆ ಶ್ರಮ ಪಡುತ್ತಿದ್ದಾರೆ.
ಪ್ರತಿನಿತ್ಯ ಊರ, ಪರವೂರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಶಾಂತಿನಗರ ಪ್ರವೇಶಿಸುವಲ್ಲಿರುವ ಶ್ರೀ ಮಹಾವಿಷ್ಣು ದ್ವಾರ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ದಾರಿಯುದ್ದಕ್ಕೂ ಕೇಸರಿ ಧ್ವಜಗಳು, ಆಕರ್ಷಕ ಲೈಟಿಂಗ್ಸ್ ಆಸ್ತಿಕರನ್ನು ಸ್ವಾಗತಿಸುತ್ತಿದೆ. ಆರೋಗ್ಯ ಇಲಾಖೆಯ ತುರ್ತು ಚಿಕಿತ್ಸಾ ಘಟಕ, ಬ್ರಹ್ಮಕಲಶೋತ್ಸವದ ಮಾಹಿತಿ ಕೇಂದ್ರ, ‘ಅನ್ನಪೂರ್ಣ’ ಅನ್ನಛತ್ರ, ಪಾಕಶಾಲೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ‘ರಾಮ ಜಾನಕಿ’ ವೇದಿಕೆಯಲ್ಲಿ ನಡೆಯುತ್ತಿರುವ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ನಿಗದಿತ ಸಮಯಕ್ಕೆ ಸರಿಯಾಗಿ ನಡೆದು ಮೆಚ್ಚುಗೆ ಪಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾವುದೇ ಪಾಶ್ಚಾತ್ಯ ಶೈಲಿಗೆ ಮತ್ತು ಸಿನಿಮಾದ ಹಾಡುಗಳಿಗೆ ಅವಕಾಶ ಇಲ್ಲ. ಸಂತೆ ಮಾರುಕಟ್ಟೆಯವರಿಂದ ಯಾವುದೇ ಶುಲ್ಕ ಪಡೆಯದೇ ಇರುವುದೂ ಇಲ್ಲಿನ ವಿಶೇಷತೆಯಾಗಿದೆ.
ಶ್ರೀ ಮಹಾವಿಷ್ಣು ದೇವರ ಸಾನಿಧ್ಯ, ನಾಗನಕಟ್ಟೆ, ರಕ್ತೇಶ್ವರಿ ಸಹಿತ ಪರಿವಾರ ದೈವಗಳ ಕ್ಷೇತ್ರದಲ್ಲಿ ವೈದಿಕ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರಗುತ್ತಿದೆ. ವಿಶೇಷ ಎಂದರೆ ಈ ಎಲ್ಲಾ ಕಾರ್ಯಕ್ರಮಗಳು ಬ್ರಹ್ಮಕಲಶೋತ್ಸವ ಸಮಿತಿ ಇಲ್ಲದೆಯೇ ನಡೆಯುತ್ತಿದೆ.
ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಇರುವವರ ಹೆಸರೇ ಆಮಂತ್ರಣ ಪತ್ರದಲ್ಲಿ ಇಲ್ಲ. ಪ್ರತ್ಯೇಕ ಬ್ರಹ್ಮಕಲಶೋತ್ಸವ ಸಮಿತಿಯೂ ಇಲ್ಲ. ಅದರ ಉಪಸಮಿತಿಗಳ ಕುರಿತೂ ಆಮಂತ್ರಣ ಪತ್ರದಲ್ಲಿ ಉಲ್ಲೇಖ ಇಲ್ಲ. ಆದರೂ ಭಕ್ತರೆಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಸಭೆಯ ವೇದಿಕೆಯಲ್ಲಿ ಭಾಗವಹಿಸಲು ಸಂಸದ, ಶಾಸಕರ ಸಹಿತ ಜನಪ್ರತಿನಿಧಿಗಳಿಗೆ ಅವಕಾಶ ಇಲ್ಲ. ಇತರ ರಾಜಕೀಯ ವ್ಯಕ್ತಿಗಳಿಗೂ ಆಹ್ವಾನ ಇಲ್ಲ. ವಿಶೇಷ ಎಂದರೆ ಸ್ವಾಮೀಜಿಗಳ ಉಪನ್ಯಾಸ ಇಲ್ಲ. ಯಾರಿಗೂ ಹಾರ, ತುರಾಯಿ, ಸನ್ಮಾನವೂ ಇಲ್ಲ. ದೇವಳದ ಜೀರ್ಣೋದ್ಧಾರ, ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಕೈ ಜೋಡಿಸಿದವರು ಮಾತ್ರ ವೇದಿಕೆಯಲ್ಲಿರುತ್ತಾರೆ. ಕೊಂಬು, ಚೆಂಡೆ, ವಾದ್ಯದ ಗದ್ದಲವೂ ಇಲ್ಲ. ಶಾಂತಿ, ಸೌಹಾರ್ದತೆ ಮತ್ತು ಸಹೋದರತೆಗೆ ಸಾಕ್ಷಿಯಾಗಿರುವ ಶಾಂತಿನಗರದಲ್ಲಿ ಶಾಂತಿಯಿಂದ ಬ್ರಹ್ಮಕಲಶದ ಕಾರ್ಯಕ್ರಮಗಳು ನಡೆಯುತ್ತಿದೆ. ಇಲ್ಲಿಯ ಆಚರಣೆ, ವ್ಯವಸ್ಥೆಗಳ ಕುರಿತು ಕಾರ್ಯಕ್ರಮದಲ್ಲಿ ಭಕ್ತರಾಗಿ ಭಾಗವಹಿಸಿರುವ ಗಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ರಾಜಕೀಯ ನೇತಾರರು, ಬೇರೆಡೆಯ ಬ್ರಹ್ಮಕಲಶೋತ್ಸವ ಸಮಿತಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪುತ್ತೂರಿನ ಶಾಂತಿನಗರದ ಬ್ರಹ್ಮಕಲಶೋತ್ಸವ ಹತ್ತೂರಿಗೂ ಮಾದರಿಯಾಗಿ ನಡೆಯುತ್ತಿದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.
ದ.25: ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಸಂಭ್ರಮ
ದ.25 ರಂದು ಬೆಳಿಗ್ಗೆ ಗಂಟೆ 5 ರಿಂದ ಮಹಾಗಣಪತಿ ಹವನ ದಿವಾಗಂಟೆ 10.36ರಿಂದ 11.20ರವರೆಗೆ ನಡೆಯುವ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರಿಗೆ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ನಾಗತಂಬಿಲ, ಮಧ್ಯಾಹ್ನ ಗಂಟೆ 12.೦೦ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 5.೦೦ರಿಂದ ‘ಶೃತಿಲಯ ಕ್ಲಾಸಿಕಲ್ಸ್’ ಮಡಂತ್ಯಾರ್ ಇದರ ವಿದುಷಿ ಶ್ಯಾಮಲಾ ನಾಗರಾಜ್ ಕುಕ್ಕಿಲ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ಗಂಟೆ 7.೦೦ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ರಾತ್ರಿ 9.30ರಿಂದ ಯಕ್ಷನಾಟ್ಯ ಗುರು ಶ್ರೀ ಮಾಣಿ ಸತೀಶ್ ಆಚಾರ್ಯ ವಿರಚಿತ, ಶ್ರೀರಾಮ ಶಾಲೆ ಉಪ್ಪಿನಂಗಡಿ ಯಕ್ಷಗಾನ ತರಬೇತಿ ಕೇಂದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಯಕ್ಷಗಾನ ‘ಶ್ರೀ ವಿಷ್ಣು ಸಾನಿಧ್ಯ'(ಶಾಂತಿನಗರ ಶ್ರೀ ಮಹಾವಿಷ್ಣು ಕ್ಷೇತ್ರ ಮಹಾತ್ಮೆ) ನಡೆಯಲಿದೆ.