ಪುತ್ತೂರು : ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಪುತ್ತೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ‘ಯುವ ಕ್ರೀಡಾ ಸಂಭ್ರಮ -2022’ ಡಿ.25ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಬೆಳಿಗ್ಗೆ ಕ್ರೀಡಾಕೂಟವನ್ನು ಊರ ಗೌಡರಾದ ಕೊಡಿಪ್ಪಾಡಿಯ ಪಕ್ರು ಗೌಡ ಅವರು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ತಂದ ಕ್ರೀಡಾಜ್ಯೋತಿಯ ಮೂಲಕ ದೀಪ ಪ್ರಜ್ವಲಿಸಲಾಯಿತು.
ಮಾನಸಿಕ, ದೈಹಿಕ ಬಲಾಢ್ಯ ಸತ್ಪ್ರಜೆಗೆ ಕ್ರೀಡೆ ಬಹಳ ಸಹಕಾರಿ:
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಕಳೆದ ಬಾರಿ ನೆಲ್ಯಾಡಿಯಲ್ಲಿ ಕ್ರೀಡೋತ್ಸವ ನಡೆಯಿತು. ಇವತ್ತು ಪುತ್ತೂರಿನಲ್ಲಿ ಕ್ರೀಡೋತ್ಸವ ನಡೆಯುತ್ತಿದೆ. ವರ್ಷಂಪ್ರತಿ ಕ್ರೀಡಾ ಪಟುಗಳನ್ನು ತಯಾರಿಸುವಲ್ಲಿ ಯಶಸ್ವಿಯನ್ನು ಕಾಣುತ್ತಿರುವುದು ಶ್ಲಾಘನೀಯ ವಿಚಾರ. ಮಾನಸಿಕ ಮತ್ತು ದೈಹಿಕವಾಗಿ ಬಲಾಢ್ಯಗೊಳಿಸಲು ಕ್ರೀಡೆ ಬಹಳ ಸಹಕಾರಿ. ಉತ್ತಮ ಸತ್ಪ್ರಜೆಗಳಾಗಿ ಬೆಳೆಯಲು ಕ್ರೀಡೆ ಬಹಳ ಆದರ್ಶಪೂರ್ಣ ಎಂದರು.
ಕ್ರೀಡೆಯ ಮೂಲಕ ಸಮಾಜ, ಊರಿನ ಕೀರ್ತಿಯನ್ನು ಬೆಳಗಿಸುವ ಕೆಲಸ:
ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಭಾರತವನ್ನು ಯುವ ಸಮಾಜ ಎಂದು ಗುರುತಿಸಲಾಗಿದೆ. ದೇಶದಲ್ಲಿ ಶೇ.60 ರಷ್ಟಿರುವ ಯುವಕರು ಮುಂದೆ ನಿಂತು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಗೌಡ ಸಮುದಾಯದಲ್ಲೂ ಕೂಡಾ ಯುವ ಸಮುದಾಯ ಇವತ್ತು ಸಮಾಜಕ್ಕೆ ನೇತೃತ್ವ ಕೊಡುವ ಕೆಲಸ ಮಾಡುತ್ತಿದೆ. ಶಾರೀರಿಕವಾಗಿ ಕ್ರೀಡೆಯಲ್ಲೂ ಸಾಮರ್ಥ್ಯ ತೋರಿಸಬಲ್ಲೆವು ಎಂದು ಹತ್ತಾರು ಯುವಕರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪುತ್ತೂರಿನಿಂದ ಆಯ್ಕೆಯಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ತೆಂಕಿಲದ ಅನಿಲ್ ಅವರ ಮಗಳು ಅಥ್ಲೆಟಿಕ್ಸ್‌ನಲ್ಲಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಅವರ ಮಗಳು ಸರ್ಫಿಂಗ್‌ನಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಸಂಗತಿ ಆಗಿದೆ. ಇದು ಪುತ್ತೂರಿನ ಯುವತಿಯರು ಮಾಡಿದ ಸಾಧನೆ. ಅದೇ ರೀತಿ ನಮ್ಮ ಯುವಕರು ಕೂಡಾ ಸಾಮರ್ಥ್ಯ ತೋರಿಸುವಲ್ಲಿ ಸಿದ್ಧರಿದ್ದಾರೆ. ಕ್ರೀಡೆಯ ಮೂಲಕ ಸಮಾಜ, ಊರಿನ ಕೀರ್ತಿಯನ್ನು ಬೆಳಗಿಸುವ ಕೆಲಸ ನಮ್ಮ ಸಮಾಜದಿಂದ ಆಗಲಿ ಎಂದು ಹಾರೈಸಿದರು.
ಗೌಡ ವಿದ್ಯಾ ಸಂಘದಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆ:
ಕ್ರೀಡಾಕೂಟದ ಧ್ವಜಾರೋಹಣ ಮಾಡಿದ ದ.ಕ.ಜಿಲ್ಲಾ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯರವರು ಮಾತನಾಡಿ, ಶಿಕ್ಷಣದಲ್ಲಿ ನಮ್ಮ ಸಮಾಜ ಮುಂದೆ ಬರಬೇಕೆಂದು ದ.ಕ ಗೌಡ ವಿದ್ಯಾವರ್ಧಕ ಸಂಘ ಸ್ಥಾಪನೆ ಆಗಿದೆ. ಇವತ್ತಿಗೆ ಅದು 101 ನೇ ವರ್ಷದಲ್ಲಿದೆ ಎಂದ ಅವರು 1980 ನೇ ಇಸವಿ ತನಕ ಪುತ್ತೂರು, ಸುಳ್ಯ, ಗುತ್ತಿಗಾರು, ವಿಟ್ಲದಲ್ಲಿ ಇದ್ದ ವಿದ್ಯಾರ್ಥಿ ನಿಲಯವನ್ನು ವಿದ್ಯಾ ಸಂಸ್ಥೆಯನ್ನಾಗಿ ಮಾಡಲಾಯಿತು. ಅದರಲ್ಲಿ ಪುತ್ತೂರು ಕೇಂದ್ರವಾಗಿಟ್ಟುಕೊಂಡು ಮಹಾಲಿಂಗೇಶ್ವರ ಐಟಿಐಯನ್ನು ಸ್ಥಾಪಿಸಲಾಯಿತು. ಇದು ಗೌಡ ವಿದ್ಯಾ ಸಂಘದ ಕೊಡುಗೆಯಾಗಿದೆ. ಅದೇ ರೀತಿ ರಾಜ್ಯಕ್ಕೆ ಮುಖ್ಯಮಂತ್ರಿ ಕೊಟ್ಟವರು ಪುತ್ತೂರಿನವರು ಎಂದು ಹೇಳಿಕೊಳ್ಳಲು ಸಂತೋಷ ಆಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಕ್ಕೂ ಮುಂದೆ ೧೮೩೭ರಲ್ಲಿ ನಮ್ಮ ಸಮಾಜ ಅಧಿಕಾರ ಚಲಾಯಿಸಿದ ಕೀರ್ತಿ ಇದೆ. ಅದೇ ರೀತಿ ನಮ್ಮ ಸಮಾಜ ಹಲವು ಕ್ಷೇತ್ರಗಳಲ್ಲಿ ಮುಂದಿದ್ದು, ಕ್ರೀಡಾಕೂಟದ ಮೂಲಕ ಮತ್ತಷ್ಟು ಸಮಾಜದ ಶಕ್ತಿಯನ್ನು ಹೆಚ್ಚಿಸುವ ಕೆಲಸ ಆಗಿದೆ ಎಂದರು.
ಯುವ ಶಕ್ತಿ ಮಾತೃ ಸಂಘಕ್ಕೆ ಪೂರಕವಾಗಿ ಕೀರ್ತಿಯನ್ನು ಬೆಳಗಿಸಲಿ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರುರವರು ಮಾತನಾಡಿ, ಯುವಕರನ್ನು ಸಂಘಟನಾತ್ಮಕವಾಗಿ ಒಟ್ಟುಸೇರಿಸುವ ಕೆಲಸ ಯುವ ಸಂಘದಿಂದ ಆಗುತ್ತಿದೆ. ಯುವ ಶಕ್ತಿ ಮುಂದಿನ ದಿನಗಳಲ್ಲಿ ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಪೂರಕವಾಗಿ ಸ್ಪಂದಿಸಿ ಇದರ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಸಮಾಜವನ್ನು ಶಕ್ತಿಯನ್ನಾಗಿಸಲು ಕ್ರೀಡೆಗೆ ಪ್ರೋತ್ಸಾಹ:
ಯುವ ಕ್ರೀಡಾ ಸಂಭ್ರಮದ ಸಂಚಾಲಕ ಎ.ವಿ.ನಾರಾಯಣ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ನಮ್ಮ ಉದ್ದೆಶ. ಸಮಾಜವನ್ನು ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಸನ್ಮಾನ: ಕ್ರೀಡಾ ಪಟುಗಳಿಗೆ ಜರ್ಸಿ ಪ್ರಾಯೋಜಕತ್ವ ಮಾಡಿದ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರರಾಗಿರುವ ಶಾಸಕ ಸಂಜೀವ ಮಠಂದೂರು ಮತ್ತು ಕ್ರೀಡಾ ಕೂಟದ ಸಂಯೋಜಕರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಗೌಡ ಪೆರಿಯತ್ತೋಡಿ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾ ಜರ್ಸಿ ಬಿಡುಗಡೆ:
ಶಾಸಕ ಸಂಜೀವ ಮಠಂದೂರು ಮತ್ತು ಪ್ರೇರಣಾ ಸಂಸ್ಥೆಯ ಪ್ರಾಯೋಜಕತ್ವದ ಕ್ರೀಡಾ ಜರ್ಸಿಗಳನ್ನು ಮತ್ತು ತೀರ್ಪುಗಾರರಿಗೆ ಜರ್ಸಿಗಳನ್ನು ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು. ಆರಂಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಾಂಕೇತಿಕವಾಗಿ ಕ್ರೀಡಾಪಟುಗಳಿಗೆ ಜರ್ಸಿಗಳನ್ನು ಹಸ್ತಾಂತರಿಸಿದ್ದರು .
ಜಯಂತ್ಯೋತ್ಸವದ ಸ್ಟಿಕ್ಕರ್ ಬಿಡುಗಡೆ:
2023 ನೇ ಜ.22 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಭೈರವೈಕ್ಯರಾದ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಚಾರಾರ್ಥವಾಗಿ ಮುದ್ರಣಗೊಂಡ ಸ್ಟಿಕ್ಕರ್ ಅನ್ನು ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು.
ಧ್ವಜ ಗೌರವ:
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವ್ಯಾಪ್ತಿಯ ಒಟ್ಟು 7 ವಲಯಗಳಾದ ಪುತ್ತೂರು, ಕಡಬ, ಕುಂಬ್ರ, ಸವಣೂರು, ನೆಲ್ಯಾಡಿ, ಉಪ್ಪಿನಂಗಡಿ, ಆಲಂಕಾರು ವಲಯದ ಕ್ರೀಡಾ ಪಟುಗಳು ತಮ್ಮ ತಮ್ಮ ವಲಯದ ಧ್ವಜವನ್ನು ಹಿಡಿದು ಕ್ರೀಡಾ ಜ್ಯೋತಿ ಬರುವ ಸಂದರ್ಭ ಧ್ವಜ ವಂದನೆ ಮಾಡಿದರು. ಬಳಿಕ ಕ್ರೀಡಾ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ದೀಪ್ತಿ ಬಲ್ನಾಡು ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿಯ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನಿರ್ದೇಶಕ ಪ್ರವೀಣ್ ಕುಂಟ್ಯಾನ, ಪಿಎಂಜಿಎಸ್‌ವೈ ಇಂಜಿನಿಯರ್ ಕೆ.ಜನಾರ್ದನ ಗೌಡ, ಮುಂಡತ್ತೋಡಿ ರಮೇಶ್ ಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗೌಡ ಏನೆಕಲ್ಲು, ಊರ ಗೌಡರಾದ ಪಕ್ರುಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ನಗರ ವಲಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ, ವಲಯ ಕಾರ್ಯದರ್ಶಿ ಆನಂದ ಗೌಡ ತೆಂಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ನಾಗೇಶ್ ಕಡೆಂಜಿ ಸ್ವಾಗತಿಸಿ, ಪುತ್ತೂರು ವಲಯ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾ ಸಮಿತಿ ಉಪಸಂಚಾಲಕ ಯುವರಾಜ್ ಪೆರಿಯತ್ತೋಡಿ, ಯುವ ಗೌಡ ಸೇವಾ ಸಂಘದ ವಲಯದ ಕಾರ್ಯದರ್ಶಿಯಾಗಿರುವ ಕ್ರೀಡಾಂಗಣ ಸಮಿತಿಯ ಮೋಹನ್ ಗೌಡ ಕಬಕ, ಲಿಖಿತ್ ಕುಂದ್ರುಕೋಟೆ, ವಸಂತ ಕಬಕ, ಕಿಶೋರ್ ಮರಿಕೆ, ದಿನೇಶ್ ಗೋಮುಖ, ಸೀತಾರಾಮ ಪೆರಿಯತ್ತೋಡಿ, ಗೋವರ್ಧನ ಗೌಡ ಕಲ್ಲೇಗ, ಸೀತಾರಾಮ ಪೆರಿಯತ್ತೋಡಿ, ರಮೇಶ್ ಪಜಿಮಣ್ಣು, ಶರತ್ ಗೌಡ, ಅಮಿತ್ ರಾಜ್ ಗೌಡ ಬಪ್ಪಳಿಗೆ, ಪ್ರಕಾಶ್ ಕೆಮ್ಮಾಯಿ, ನಮಿತಾ, ವಾರಿಜ ಬೆಳ್ಯಪ್ಪ ಗೌಡ, ವಲಯ ಉಸ್ತುವಾರಿ ಮಾಧವ ಗೌಡ ಕಾಂತಿಲ, ಪರಮೇಶ್ವರ ಕರ್ಮಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಹೆಚ್.ಡಿ.ಶಿವರಾಮ್, ನಾಗಪ್ಪ ಗೌಡ ಬೊಮ್ಮೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಶ್ರೀಧರ ಗೌಡ ಕಣಜಾಲು, ರಾಧಾಕೃಷ್ಣ ಗೌಡ ನಂದಿಲ, ಪುರುಷೋತ್ತಮ ಮುಂಗ್ಲಿಮನೆ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ತೆಂಕಿಲ, ಸುರೇಶ್ ಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ತಾ.ಪಂ ಮಾಜಿ ಸದಸ್ಯರಾದ ನೇತ್ರಾವತಿ ಕೆ.ಪಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಮುಕುಂದ ಗೌಡ ಬಜತ್ತೂರು, ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ಬೆಳ್ಳಾರೆ, ಕಡಬ ತಾಲೂಕು ಗೌಡ ಸಂಘದ ಅಧ್ಯಕ್ಷ ಸುರೇಶ್ ಬೈಲು, ಶ್ರೀ ಮಹಾಲಿಂಗೇಶ್ವರ ಐಟಿಐ ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ, ಉಮೇಶ್ ಗೌಡ, ಯತೀನ್ ಕೊಚ್ಚಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.