ಉಪ್ಪಿನಂಗಡಿ: ಧರ್ಮ, ಶೃದ್ಧೆ ಇಲ್ಲದ ಬದುಕು ಬದುಕಾಗಲು ಸಾಧ್ಯವಿಲ್ಲ. ಉತ್ತಮ ಬದುಕು ನಮ್ಮದಾಗಬೇಕಿದ್ದರೆ ಶೃದ್ಧಾ ಕೇಂದ್ರಗಳ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
15 ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಮೂರನೇ ದಿನವಾದ ಮಂಗಳವಾರ ರಾತ್ರಿ ಅತ್ರಬೈಲು ಬೆಳ್ಳಿಪ್ಪಾಡಿ ರಾಮದಾಸ ರೈ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಸದಾಚಾರ, ಹೃದಯ ಶ್ರೀಮಂತಿಕೆಯ ಕ್ರೂಢೀಕರಣ, ಸಂಸ್ಕೃತಿ- ಸಂಸ್ಕಾರಗಳಲ್ಲಿ ಶೃದ್ಧಾ ಕೇಂದ್ರಗಳಲ್ಲಿ ಸಿಗುತ್ತಿದ್ದು, ಇದನ್ನು ಪಡೆದುಕೊಂಡವರು ಉತ್ತಮ ಸಮಾಜ ಕಟ್ಟಲು ಸಾಧ್ಯ. ಭಾರತದ ಸೌಂದರ್ಯತೆ ಇರುವುದು ಆಧ್ಯಾತ್ಮದಲ್ಲಿ. ಸನಾತನ ಧರ್ಮವೆನ್ನುವುದು ನಿರಂತರ ಚಲನಶೀಲತೆಯಿಂದ ಕೂಡಿರುವಂತಾಗಿದ್ದು, ಆಧ್ಯಾತ್ಮದ ವಿಷಯದಲ್ಲಿ ಭಾರತವು ವಿಶ್ವದ ದೇವರ ಕೋಣೆ ಇದ್ದಂತೆ ಎಂದ ಅವರು, ಗಳಿಕೆಯಲ್ಲಿ ಸ್ವಲ್ಪ ಸಂಪತ್ತನ್ನು ದಾನ- ಧರ್ಮಕ್ಕಾಗಿ ತೆಗೆದಿರಿಸಬೇಕು. ಅರ್ಪಣಾ ಮನೋಭಾವ ನಮ್ಮದಾದಾಗ ನೆಮ್ಮದಿಯ ಬದುಕು ಸಾಧ್ಯ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಮಾತನಾಡಿ, ಬದುಕಿನ ದಾರಿ ತೋರುವವಳು ತಾಯಿಯಾದರೆ, ಸಂಸ್ಕಾರ ಕೊಡುವ ಕೇಂದ್ರ ದೇವಾಲಯಗಳು. ನಾವು ಮಾಡುವ ವೃತ್ತಿಯಲ್ಲಿ ನಿಯತ್ತು ಇದ್ದರೆ, ಕೊನೆತನಕ ತಂದೆ- ತಾಯಿಯ ಸೇವೆ ಮಾಡುವ ಗುಣ ನಮ್ಮದಾದರೆ ಅದನ್ನು ಮೀರಿದ ಧರ್ಮವಿಲ್ಲ. ಹಣ ಗಳಿಕೆಯ ದಾಹದಲ್ಲಿ ಕೇವಲ ಬಾಹ್ಯ ಸಂಪತ್ತಿಗೆ ಮಾತ್ರ ಬದುಕನ್ನು ಮೀಸಲಾಗಿಡಬಾರದು. ಬಾಹ್ಯ ಸಂಪತ್ತಿನೊಂದಿಗೆ ಆಂತರಿಕ ಸಂಪತ್ತನ್ನೂ ನಮ್ಮದಾಗಿಸಿಕೊಳ್ಳಬೇಕು. ದೇವಾಲಯಕ್ಕೆ ಹೋಗುವುದರಿಂದ ಆಂತರಿಕ ಸಂಪತ್ತು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದರು.
ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ರೈ ತಿಪ್ಪೆಕೋಡಿ, ನ್ಯಾಯವಾದಿ ನಿರ್ಮಲ ಕುಮಾರ್ ಜೈನ್ ಬೆಳಂದೂರು ಗುತ್ತು, ವಿಟ್ಲ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಅವಿನಾಶ್ ಜೈನ್ ಪರಂಗಾಜೆ, ಅಧ್ಯಕ್ಷ ಶಂಭು ಭಟ್ ಬಡೆಕೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕೋಶಾಧಿಕಾರಿ ಅಶೋಕ ಕುಮಾರ್ ಮುಳಿಪಡ್ಪು, ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ ಸ್ವಾಗತಿಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರಮೇಶ್ ತೋಟ ವಂದಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ ಹಾಗೂ ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು.